Advertisement

ಈ ಬಾರಿ ಪಂಜ ಕುಸ್ತಿಪಟುಗಳ ತೋಳ್ಬಲ ಪ್ರದರ್ಶನ

05:35 PM Sep 03, 2017 | |

ಮೈಸೂರು: ನಾಡಹಬ್ಬ ದಸರೆಯಲ್ಲಿ ಪ್ರೇಕ್ಷಕರ ಕುತೂಹಲ ಮೂಡಿಸುವ ಕುಸ್ತಿ
ಅಖಾಡದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ
ಆರ್ಮ್ ರಸ್ಲರ್ (ಪಂಜ ಕುಸ್ತಿ)ಗಳು ಕ್ರೀಡಾಸಕ್ತರಿಗೆ ರಸದೌತಣ ನೀಡಲಿದ್ದಾರೆ.

Advertisement

ಇತ್ತೀಚಿನ ದಿನಗಳಲ್ಲಿ ತೆರೆಮರೆಗೆ ಸರಿದಿದ್ದ ಪಂಜ ಕುಸ್ತಿ(ಆರ್ಮ್ ರಸ್ಲಿಂಗ್‌)
ಗೆ ಉತ್ತೇಜನ ನೀಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ದಸರಾ
ಕುಸ್ತಿ ಪಂದ್ಯಾವಳಿಯೊಂದಿಗೆ ಪಂಜ ಕುಸ್ತಿ(ಆರ್ಮ್ ರಸ್ಲಿಂಗ್‌) ಆಟಕ್ಕೆ ಅವಕಾಶ
ಕಲ್ಪಿಸಲಾಗಿದೆ. ಸೆ.21ರಿಂದ 26ರವರೆಗೆ ಆರು ದಿನಗಳ ಕಾಲ ನಗರದ ದೇವರಾಜ
ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗಳ ಜತೆಗೆ
ಪಂಜ ಕುಸ್ತಿಪಟುಗಳು ತಮ್ಮ ತೋಳ್ಬಲ ಪ್ರದರ್ಶಿಸುವ ಮೂಲಕ ಕ್ರೀಡಾಸಕ್ತರಿಗೆ
ಮತ್ತಷ್ಟು ಮನರಂಜನೆ ನೀಡಲಿದೆ.

200 ಆಟಗಾರರು ಭಾಗಿ: ಪಂಜ ಕುಸ್ತಿಯಲ್ಲಿ ಭಾಗವಹಿಸಲು ದೈಹಿಕವಾಗಿ
ಸದೃಢವಾಗಿದ್ದರೆ ಸಾಕು.ಆದರೆ, ರಾಜ್ಯದಲ್ಲಿ ಈವರೆಗೂ ಆರ್ಮ್ ರಸ್ಲಿಂಗ್‌ನಲ್ಲಿ ಹೆಸರು ಪಡೆದವರು ಬೆರಳೆಣಿಕೆಯಷ್ಟು ಮಾತ್ರ. ಹೀಗಿದ್ದರೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆರ್ಮ್ ರಸ್ಲರ್ಗಳಿದ್ದರೂ, ಕರ್ನಾಟಕದ ಬೆಂಗಳೂರು, ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿನ ಆಟಗಾರರಿದ್ದಾರೆ. ಇನ್ನೂ ಕಳೆದ ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಪಂಜ ಕುಸ್ತಿ ಪಂದ್ಯಾವಳಿ ಹಾಗೂ ದಾವಣಗೆರೆಯ ಹರಿಹರದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಮೈಸೂರಿನ ರಾಜು ಎಂಬುವವರು ದಸರಾ ಸಂದರ್ಭದಲ್ಲಿ ನಡೆಯುವ ಪಂಜ ಕುಸ್ತಿಯಲ್ಲಿ ಭಾಗ ವಹಿಸಲಿದ್ದಾರೆ. ಇವರೊಂದಿಗೆ ಅಂದಾಜು 200 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಹೊಂದಿದ್ದು, ಪಂದ್ಯಾವಳಿಯು 11 ತೂಕ ವಿಭಾಗಗಳಲ್ಲಿ ನಡೆಯಲಿದೆ.

ಏನಿದು ಪಂಜ ಕುಸ್ತಿ: ಸಾಮಾನ್ಯವಾಗಿ ಬಹುತೇಕ ಮಂದಿ ಪಂಜ ಕುಸ್ತಿಯನ್ನು ಸಿನಿಮಾ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಮಾತ್ರ ನೋಡಿರುತ್ತಾರೆ. ಕುಸ್ತಿಯಷ್ಟೇ ಆಕರ್ಷಿತವಾಗಿರುವ ಪಂಜ ಕುಸ್ತಿಯಲ್ಲಿ ಇಬ್ಬರು ಸ್ಪರ್ಧಿಗಳು ಎದುರುಬದುರಾಗಿ ಕುಳಿತು ಪರಸ್ಪರರು ಒಂದು ಕೈ ಬಳಸಿ ಬಲಪ್ರಯೋಗಕ್ಕೆ ಇಳಿಯಲಿದ್ದು, ಇದರಲ್ಲಿ ಯಾರು ಮೊದಲಿಗೆ ಎದುರಾಳಿಯ ಕೈ ಭಾಗಿಸುತ್ತಾರೆ ಅವರು, ಪಂದ್ಯದ ವಿಜೇತರು.

ಪಂದ್ಯದಲ್ಲಿ ಒಬ್ಬರಿಗೆ ಎರಡು ಅವಕಾಶ ನೀಡಲಿದ್ದು, ಒಂದು ಅವಕಾಶದಲ್ಲಿ ಗೆದ್ದು
ಮತ್ತೂಂದರಲ್ಲಿ ಸೋತರೆ ಆತ ಆಟದಲ್ಲಿ ಮುಂದುವರಿಯಲು ಸಾಧ್ಯವಿದೆ. ಹೀಗಾಗಿ
ಆರ್ಮ್ ರಸ್ಲಿಂಗ್‌ ಸ್ಪರ್ಧಿಗಳು ತಮಗೆ ನೀಡಲಾಗುವ ಎರಡೂ ಅವಕಾಶಗಳಲ್ಲಿ
ಗೆಲ್ಲಬೇಕೆಂಬ ನಿಯಮವಿದೆ. 

Advertisement

ನಗರದಲ್ಲೂ ತರಬೇತಿ: ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿರುವ ಪಂಜ
ಕುಸ್ತಿಯಲ್ಲಿ ಪಾಲ್ಗೊಳ್ಳುವವರಿಗೆ ಮೈಸೂರಿ ನಲ್ಲೂ ತರಬೇತಿ ನೀಡಲಾಗುತ್ತದೆ.
ನಗರದ ಸಿದ್ದಾರ್ಥ ಬಡಾವಣೆಯಲ್ಲಿರುವ ಜಿಮ್‌ನಲ್ಲಿ ಆರ್ಮ್ ರಸ್ಲಿಂಗ್‌ ತರಬೇತಿ
ನೀಡಲಾಗುತ್ತಿದ್ದು, ಆಸಕ್ತಿ ಇರುವ ಅನೇಕರು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಹೆಚ್ಚಾಗಿ
ಭಾಗವಹಿಸುತ್ತಿದ್ದು, ಇವರುಗಳಿಗೆ ಪಂಜ ಕುಸ್ತಿ ಆಡುವ ವಿಧಾನ, ಆಟದಲ್ಲಿ
ಅನುಸರಿಸಬೇಕಾದ ತಂತ್ರಗಾರಿಕೆಗಳ ಬಗ್ಗೆ ತಿಳುವಳಿಕೆ ಮೂಡಲಾಗುತ್ತದೆ ಎನ್ನುವ
ಕರ್ನಾಟಕ ಪಂಜ ಕುಸ್ತಿ ಸಂಘದ ಅಧ್ಯಕ್ಷ ಎನ್‌.ಎಲ್‌. ಮೋಹನ್‌, ಮೈಸೂರಿನಲ್ಲಿ
ಕಳೆದ 6 ವರ್ಷಗಳಿಂದ ಸಂಘ ಕಾರ್ಯನಿರ್ವಹಿಸುತ್ತಿದ್ದು, ನಗರದಲ್ಲಿ ಈವರೆಗೂ ಅನೇಕರು ಪಂದ್ಯಾವಳಿ ಗಳನ್ನು ಸಹ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

„ ಸಿ. ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next