Advertisement

SSLC ಪರೀಕ್ಷೆಗೆ ಈ ಬಾರಿಯೂ 50:30:20 ಸೂತ್ರ

12:39 AM Feb 05, 2024 | Team Udayavani |

ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಕಾಠಿನ್ಯ ಮಟ್ಟವನ್ನು 50:30:20 ಮಾದರಿಯಲ್ಲಿ ಮುಂದುವರಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ತೀರ್ಮಾನಿಸಿದೆ. ಈ ವರ್ಷ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳ ಅವಕಾಶವಿದ್ದು, ಈ ಮೂರು ಪರೀಕ್ಷೆಗಳಲ್ಲಿಯೂ ಇದೇ ಮಾದರಿ ಅನುಸರಣೆಯಾಗಲಿದೆ.
ಶೇ. 50ರಷ್ಟು ಸುಲಭ, ಶೇ. 30ರಷ್ಟು ಸಾಧಾರಣ ಮತ್ತು ಶೇ. 20ರಷ್ಟು ಕಠಿನ ಅಥವಾ ಅನ್ವಯಿಕ ಪ್ರಶ್ನೆಗಳು 2023-24ರ ಸಾಲಿನ ಎಸೆಸೆಲ್ಸಿ ಪ್ರಶ್ನೆಪತ್ರಿಕೆಗಳಲ್ಲಿ ಇರಲಿವೆ.

Advertisement

ಈ ಪೈಕಿ ಶೇ. 30 ಅಂಕಗಳು ಸಾಧಾರಣ ಕಠಿನ ಮತ್ತು ಸಾಧಾರಣ ಸುಲಭ ಎಂದು ಮತ್ತೆ ವಿಭಜನೆಗೊಳ್ಳುವುದರಿಂದ ಪರೀಕ್ಷೆಯ ಕಾಠಿನ್ಯ ವ್ಯತ್ಯಾಸಗೊಳ್ಳುತ್ತದೆ ಎಂದು ಮಂಡಳಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಕೋವಿಡ್‌ ಅವಧಿಯಲ್ಲಿ ಇದ್ದಷ್ಟು ಸುಲಭವಾಗಿ ಈ ಬಾರಿ ಪರೀಕ್ಷೆ ಇರಲಾರದು.

ಕೋವಿಡ್‌ ಅವಧಿಯಲ್ಲಿ ಹೇಗಿತ್ತು?
ಕೋವಿಡ್‌ ಅವಧಿಯ 2020-21 ಮತ್ತು 2021-22ರ ಸಾಲಿನಲ್ಲಿ ಕಠಿನ ಪ್ರಶ್ನೆ ಅಥವಾ ಅನ್ವಯಿಕ ಉತ್ತರ ಬಯಸುವ ಪ್ರಶ್ನೆಗಳನ್ನು ಕಡಿಮೆಗೊಳಿಸಿ 60:30:10 ಕಾಠಿನ್ಯದ ಮಾದರಿ ಅನುಸರಿಸಲಾಗಿತ್ತು. 2022-23ರ ಸಾಲಿನಲ್ಲಿ 50:30:20ರ ಮಾದರಿಯನ್ನು ಪ್ರಸ್ತಾವಿಸಿದ್ದರೂ ಪೂರ್ಣ ರೂಪದಲ್ಲಿ ಜಾರಿಗೆ ಬಂದಿರಲಿಲ್ಲ.

ಭಾಷೆಗಳು, ಮುಖ್ಯ ವಿಷಯ ಪರೀಕ್ಷೆಗಳಲ್ಲಿ ಇದೇ ಮಾದರಿಯನ್ನು ಅನುಸರಿಸಲು ಮಂಡಳಿ ತೀರ್ಮಾನಿಸಿದೆ.

ಸಾಧಕಗಳೇನು?
- ಈ ವರ್ಷ 3 ಪರೀಕ್ಷೆಗೆ ಅವಕಾಶ ಇರುವುದ ರಿಂದ ವಿದ್ಯಾರ್ಥಿಗಳು ಪರೀಕ್ಷೆಯನ್ನು ನಿರ್ಲಕ್ಷಿಸುವ ಸಾಧ್ಯತೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯ ಕಾಠಿನ್ಯ ಹೆಚ್ಚಿಸುವುದರಿಂದ ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನ ಶೀಲರಾಗಬಹುದು.
- ಉನ್ನತ ಶಿಕ್ಷಣದಲ್ಲಿ ಅನ್ವಯಕ್ಕೆ ಹೆಚ್ಚು ಮನ್ನಣೆ ಸಿಗುವುದರಿಂದ ಅನ್ವಯ ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಅನ್ವಯಿಕ ಮನೋಭಾವಕ್ಕೆ ಕಾರಣವಾಗಬಲ್ಲವು.
- ಮೂರು ಪರೀಕ್ಷೆಗಳಲ್ಲಿಯೂ ಏಕರೂಪದ ಮಾದರಿ ಅನುಸರಿಸುವುದರಿಂದ ವಿದ್ಯಾರ್ಥಿಗಳು ಪ್ರತಿ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅನಿವಾರ್ಯ.

Advertisement

ಬಾಧಕ?
– ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆ ಬರೆಯುವ ಅವಕಾಶ ಇರುವುದರಿಂದ ಮೊದಲ ಪರೀಕ್ಷೆಯತ್ತ ನಿರ್ಲಕ್ಷ್ಯ
– ಮೊದಲ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದ ವಿದ್ಯಾರ್ಥಿಗೆ ಹೆಚ್ಚುವ ಒತ್ತಡ
– 50:30:20 ಮಾದರಿ ಅನುಸರಿಸಿದಾಗ ಕಡಿಮೆಯಾಗುವ ಒಟ್ಟು ಫ‌ಲಿತಾಂಶ

Advertisement

Udayavani is now on Telegram. Click here to join our channel and stay updated with the latest news.

Next