Advertisement

ಎಣಿಸಿದ್ದುಒಂದು, ಆಗಿದ್ದು ಮತ್ತೊಂದು..; ಹಲವು ಅಚ್ಚರಿಗಳ ಕೂಟ ಈ ಬಾರಿ ಟಿ20 ವಿಶ್ವಕಪ್

04:58 PM Nov 03, 2022 | ಕೀರ್ತನ್ ಶೆಟ್ಟಿ ಬೋಳ |

ಸುಮಾರು ಐದು ವರ್ಷಗಳ ಗ್ಯಾಪ್ ನ ನಂತರ 2021ರಲ್ಲಿ ಟಿ20 ವಿಶ್ವಕಪ್ ಆರಂಭವಾದಾಗ ಎಲ್ಲರೂ ಸಂತಸಗೊಂಡಿದ್ದರು. ಮತ್ತೆ ಚುಟುಕು ಮಹಾಯುದ್ದಕ್ಕೆ ಎಲ್ಲರೂ ಉತ್ಸುಕರಾಗಿದ್ದದರು. ಸೂಪರ್ 12 ಹಂತದ ಮೊದಲ ಮ್ಯಾಚ್ ಭಾರತ ಮತ್ತು ಪಾಕಿಸ್ಥಾನ ನಡುವೆ ಆಯೋಜನೆಯಾಗಿತ್ತು. ಮೊದಲೇ ಸಾಂಪ್ರದಾಯಿಕ ಎದುರಾಳಿಗಳು, ಅದರಲ್ಲೂ ವಿಶ್ವಕಪ್ ಎಂದರೇ ಕೇಳಬೇಕೆ, ತುಸು ಹೆಚ್ಚೆ ಆ ಪಂದ್ಯ ಮಹತ್ವ ಪಡೆದಿತ್ತು. ಎಷ್ಟರ ಮಟ್ಟಿಗೆ ಎಂದರೆ 167 ಮಿಲಿಯನ್ ಜನರು ಆ ಪಂದ್ಯದ ನೇರಪ್ರಸಾರವನ್ನು ನೋಡಿದ್ದರು. ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಧಿಕ. ಆದರೆ ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿತು. ಅಲ್ಲದೆ ಸೂಪರ್ 12 ಹಂತದಲ್ಲೇ ಮುಗ್ಗರಿಸಿ ಮನೆಗೆ ನಡೆಯಿತು.  ಇದೇ ಕಾರಣದಿಂದ ಭರ್ಜರಿಯಾಗಿ ಆರಂಭವಾಗಿದ್ದ ಟಿ20 ವಿಶ್ವಕಪ್ ಕೂಟವು ನಂತರ ಸಪ್ಪೆಯಾಗಿ ಮುಂದುವರಿಯಿತು.

Advertisement

ಕಳೆದ ವರ್ಷದ ವಿಶ್ವಕಪ್ ನ ಈ ಹ್ಯಾಂಗೋವರ್ ಮುಗಿಯದ ಕಾರಣವೋ ಏನೋ ಈ 2022ರ ವಿಶ್ವಕಪ್ ದೊಡ್ಡ ನಿರೀಕ್ಷೆ ಹುಟ್ಟು ಹಾಕಿರಲಿಲ್ಲ. ಸದ್ಯ ವಿಶ್ವ ಕ್ರಿಕೆಟ್ ನ ಪ್ರಮುಖ ಆಕರ್ಷಣೆಯಾದ ಟೀಂ ಇಂಡಿಯಾದ ಪ್ರದರ್ಶನವೂ ಸೇರಿ ಈ ಬಾರಿ ವರ್ಲ್ಡ್ ಕಪ್ ದೊಡ್ಡ ಆಕರ್ಷಣೆಯೊಂದಿಗೆ ಆರಂಭವಾಗಲಿಲ್ಲ. ಆದರೆ ಶುರುವಾಗಿ ಎರಡು ವಾರಗಳ ಬಳಿಕ ಕಾಂಗರೂ ನೆಲದಲ್ಲಿ ನಡೆಯುತ್ತಿರುವ ಈ ಚುಟುಕು ಕದನವು ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ವಿಭಿನ್ನಕೂಟವಾಗಿ ಮಾರ್ಪಟ್ಟಿದೆ. ಮಳೆಯ ನಡುವೆಯೂ ಈ ಬಾರಿಯ ವಿಶ್ವಕಪ್ ಹಿಟ್ ಆಗಿದೆ ಎಂದರೆ ಅದಕ್ಕೆ ಕಾರಣ ಹಲವು ..

ಲಂಕಾಗೆ ಮಂಕುಬಡಿಸಿದ ನಮೀಬಿಯಾ

ಇದು 2022ರ ಟಿ20 ವಿಶ್ವಕಪ್ ನ ಮೊದಲ ಪಂದ್ಯ. ತಿಂಗಳ ಹಿಂದಷ್ಟೇ ಏಷ್ಯಾ ಕಪ್ ಚಾಂಪಿಯನ್ ಆಗಿದ್ದ ಶ್ರೀಲಂಕಾಗೆ ಎದುರಾಳಿ ಕ್ರಿಕೆಟ್ ಶಿಶು ನಮೀಬಿಯಾ. ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದ ನಮೀಬಿಯಾ ಚಾಂಪಿಯನ್ನರಿಗೆ ಕ್ರಿಕೆಟ್ ಪಾಠ ಮಾಡಿದರು. ಶನಕಾ ಪಡೆಯನ್ನು ಕೇವಲ 108 ರನ್ ಗಳಿಗೆ ಆಲೌಟ್ ಮಾಡಿದ ನಮೀಬಿಯಾ 55 ರನ್ ಅಂತರದಲ್ಲಿ ಗೆಲುವು ಸಾಧಿಸಿತು. ಇಂದು ಈ ವಿಶ್ವಕಪ್ ನ ಮೊದಲ ಅಪ್ ಸೆಟ್. ಆದರೆ ವಿಚಿತ್ರವೆಂದರೆ ಇಷ್ಟು ದೊಡ್ಡ ಅಂತರದಿಂದ ಗೆದ್ದ ನಮೀಬಿಯಾ ಸೂಪರ್ 12 ಹಂತಕ್ಕೆ ತೇರ್ಗಡೆಯಾಗಲು ವಿಫಲವಾಯಿತು. ಮೊದಲ ಪಂದ್ಯದಲ್ಲೇ ಭಾರೀ ರನ್ ರೇಟ್ ಕಳೆದುಕೊಂಡು ಸೋತರೂ ಶ್ರೀಲಂಕಾ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್ 12 ಹಂತಕ್ಕೆ ಪ್ರವೇಶಿಸಿತು. ಕ್ರಿಕೆಟ್ ನಲ್ಲಿ ಏನೂ ಆಗಬಹುದು!

ಎರಡು ಬಾರಿಯ ಚಾಂಪಿಯನ್ನರು ಮನೆಗೆ

Advertisement

ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಚಾಂಪಿಯನ್ ಆದ ಏಕೈಕ ತಂಡ ವೆಸ್ಟ್ ಇಂಡೀಸ್ ಈ ಬಾರಿಯ ಕೂಟ ಆರಂಭವಾಗುವ ಮೊದಲೇ ವಿವಾದಗಳಿಂದ ಸದ್ದು ಮಾಡಿತ್ತು. ತಂಡದ ಆಯ್ಕೆ ನಡೆದಾಗ ಟಿ20 ದಿಗ್ಗಜರಾದ ಸುನೀಲ್ ನರೈನ್, ಆಂದ್ರೆ ರೆಸ್ಸೆಲ್ ಮುಂತಾದವರ ಹೆಸರು ಇರಲಿಲ್ಲ. ಇದಕ್ಕೆಲ್ಲಾ ಮಂಡಳಿ ಹಲವು ಕಾರಣ ನೀಡಿತ್ತು. ಇರಲಿ, ನಂತರ ತಂಡ ವಿಶ್ವಕಪ್ ನಡೆಯುವ ಆಸ್ಟ್ರೇಲಿಯಾಗೆ ಹೊರಟು ನಿಂತಾಗ ಮತ್ತೊಂದು ಘಟನೆ ನಡೆದಿತ್ತು. ತಂಡದ ಪ್ರಮುಖ ಬ್ಯಾಟರ್ ಶೆಮ್ರಾನ್ ಹೆಟ್ಮೈರ್ ಅವರನ್ನು ಬಿಟ್ಟು ಉಳಿದ ತಂಡ ಆಸೀಸ್ ಗೆ ಪ್ರಯಾಣಿಸಿತ್ತು. ಹೆಟ್ಮೈರ್ ಅವರು ಸರಿಯಾದ ಸಮಯಕ್ಕೆ ಏರ್ ಪೋರ್ಟ್ ಗೆ ಬರಲಿಲ್ಲ ಎಂದು ಅವರನ್ನು ವಿಶ್ವಕಪ್ ತಂಡದಿಂದಲೇ ಕೈಬಿಡಲಾಗಿತ್ತು. ವಿಚಿತ್ರ ಅಲ್ವಾ?

ಎರಡು ಬಾರಿಯ ಚಾಂಪಿಯನ್ ತಂಡಕ್ಕೆ ಅರ್ಹತಾ ಸುತ್ತು ಆಡಬೇಕಾದ ಪರಿಸ್ಥಿತಿ ಬಂದಿದ್ದೆ ವಿಪರ್ಯಾಸ. ಆದರೆ ಅರ್ಹತಾ ಸುತ್ತಿನಲ್ಲೂ ವೆಸ್ಟ್ ಇಂಡೀಸ್ ಅಸೋಸಿಯೇಟ್ ದೇಶಗಳ ಎದುರು ಮುಖಭಂಗ ಅನುಭವಿಸಿತು. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಹೀನಾಯವಾಗಿ ಆಡಿ 42 ರನ್ ಗಳ ಸೋಲು ಕಂಡಿತ್ತು. ಮತ್ತೊಂದು ಪಂದ್ಯದಲ್ಲಿ ಐರ್ಲೆಂಡ್ ವಿರುದ್ದ ಸೋತು ಮೊದಲ ಸುತ್ತಿನಲ್ಲೇ ದೈತ್ಯ ವೆಸ್ಟ್ ಇಂಡೀಸ್ ಮನೆಗೆ ನಡೆಯಿತು. ಈ ಪಂದ್ಯ ಹೇಗಿತ್ತೆಂದರೆ ವಿಂಡೀಸ್ ಗಳಿಸಿದ್ದ 146 ರನ್ನನ್ನು ಐರ್ಲೆಂಡ್ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಮಾಡಿ ಮುಗಿಸಿತ್ತು. ಮಂಕು ಬಡಿದವರಂತೆ ಆಡಿದ ಕೆರಿಬಿಯನ್ನರು ಪೆಚ್ಚು ಮೋರೆ ಹಾಕಬೇಕಾಯಿತು.

ರೋಚಕ ಒಂದು ಓವರ್

ಅಂದು ಅಕ್ಟೋಬರ್ 21. ಭಾರತ ಮತ್ತು ಪಾಕಿಸ್ಥಾನ ಪಂದ್ಯ. ಕಳೆದ ವರ್ಷದ ಅವಮಾನಕ್ಕೆ ಪ್ರತೀಕಾರ ತೀರಿಸಲು ರೋಹಿತ್ ಬಳಗ ಸಿದ್ದವಾಗಿದ್ದರೆ, ವಿಜಯ ಯಾತ್ರೆ ಮುಂದುವರಿಸಲು ಬಾಬರ್ ಪಡೆ ಸಜ್ಜಾಗಿತ್ತು. ಮೆಲ್ಬರ್ನ್ ನ ಫುಲ್ ಪ್ಯಾಕ್ ಸ್ಟೇಡಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ 159 ರನ್ ಗಳಿಸಿದರೆ ಭಾರತ ತಂಡವು 19 ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ಕ್ರೀಸ್ ನಲ್ಲಿ ಇದ್ದವರು ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ. 16 ರನ್ ಅಗತ್ಯವಿತ್ತು. ಮೊಹಮ್ಮದ್ ನವಾಜ್ ಎಸೆದ ಈ ಓವರ್ ಕ್ರಿಕೆಟ್ ನ ವಿಶ್ವರೂಪ ದರ್ಶನ ಎಂದೇ ಹೇಳಬಹುದು. ಯಾಕೆಂದರೆ ಆ ಓವರ್ ನಲ್ಲಿ ವಿಕೆಟ್, ಸಿಂಗಲ್, ಡಬಲ್, ನೋ ಬಾಲ್, ಸಿಕ್ಸ್, ಫ್ರೀ ಹಿಟ್, ವೈಡ್, ಬೌಲ್ಡ್, ಬೈಸ್, ಸ್ಟಂಪೌಟ್.. ಹೀಗೆ ಎಲ್ಲವೂ ಒಂದೇ ಓವರ್ ನಲ್ಲಿ ನಡೆದಿತ್ತು. ಅಂತಿಮವಾಗಿ ಭಾರತ ತಂಡ ಈ ಪಂದ್ಯವನ್ನು ಗೆದ್ದು ಪಾಕ್ ವಿರುದ್ದ ಪ್ರತಿಕಾರ ತೀರಿಸಿಕೊಂಡಿತು.

ಜಿಂಬಾಬ್ವೆ ಎಂಬ ಅಚ್ಚರಿ

ಕ್ರಿಕೆಟ್ ನಕ್ಷೆಯಿಂದ ಬಹುತೇಕ ಮರೆಯಾಗಿದ್ದ ಜಿಂಬಾಬ್ವೆ ತಂಡವು ಇದೀಗ ಮತ್ತೆ ತನ್ನ ಹೆಜ್ಜೆ ಗುರುತು ಮೂಡಿಸುತ್ತಿದೆ. ವಿಶ್ವಕಪ್ ಗೂ ಮೊದಲೇ ಕಾಂಗರೂ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ತಮ್ಮ ಆಗಮನವನ್ನು ಸಾರಿತ್ತು. ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರೂ ಮಳೆಯ ಕಾರಣದಿಂದ ಪಂದ್ಯ ರದ್ದಾಗಿ ಅದೃಷ್ಟದ ಬಲದಿಂದ ಒಂದಂಕ ಪಡೆದಿತ್ತು. ಮುಂದಿನ ಪಂದ್ಯದಲ್ಲಿ ಅಚ್ಚರಿ ಎಂಬಂತೆ ಪಾಕಿಸ್ಥಾನ ವಿರುದ್ಧ ರೋಚಕ ಒಂದು ರನ್ ನಿಂದ ಗೆದ್ದು ಕುಣಿದಾಡಿತ್ತು. ಮೊದಲೇ ಭಾರತದ ವಿರುದ್ಧ ಸೋತಿದ್ದ ಪಾಕಿಸ್ಥಾನಕ್ಕೆ ಮತ್ತೆ ಸೋಲಿನ ರುಚಿ ತೋರಿಸಿತ್ತು. ನಂತರ ಬಾಂಗ್ಲಾ ಮತ್ತು ನೆದರ್ಲ್ಯಾಂಡ್ ವಿರುದ್ಧ ಸ್ವಲ್ಪ ಗಂಭೀರ ಪ್ರದರ್ಶನ ನೀಡಿದ್ದರೆ ಖಂಡಿತವಾಗಿಯೂ ಜಿಂಬಾಬ್ವೆ ಈ ಬಾರಿಯ ವಿಶ್ವಕಪ್ ನ ಅತೀ ದೊಡ್ಡ ಅಚ್ಚರಿಯಾಗುತ್ತಿತ್ತು.

ಕೀರ್ತನ್ ಶೆಟ್ಟಿ ಬೋಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next