ಬೆಂಗಳೂರು: ಮನೆಗೊಂದು ಕಲಾಕೃತಿ ಎಂಬ ಆಶಯದೊಂದಿಗೆ ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಜ.7 ರಂದು 15ನೇ ಚಿತ್ರಸಂತೆ ನಡೆಯಲಿದೆ. ಚಿತ್ರಕಲಾ ಪರಿಷತ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಅಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಚಿತ್ರಸಂತೆ ನಡೆಯಲಿದ್ದು, ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರ ಮ ಉದ್ಘಾಟಿಸುವರು ಎಂದರು.
ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಅಂತಾರಾಷ್ಟ್ರೀಯ ಕಲಾವಿದ ಕಾನಾಯಿ ಕುನಿರಾಮನ್, ಮೇಯರ್ ಸಂಪತ್ ರಾಜ್, ಸಚಿವ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್,ಉಮಾಶ್ರೀ ಸೇರಿದಂತೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಚಿತ್ರಕಲಾ ಪರಿಷತ್ ಶಾಶ್ವತ ಸಂಗ್ರಹದಿಂದ ಆಯ್ದ ಸುಮಾರು ನೂರು ಕಲಾಕೃತಿಗಳ ಚಿತ್ರ ಪ್ರದರ್ಶನಕ್ಕೆ ಸಚಿವ ಆರ್.ರೋಷನ್ ಬೇಗ್,ಚಾಲನೆ ನೀಡುವರು. ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಉತ್ತರಪ್ರದೇಶ, ಒರಿಸ್ಸಾ ಸೇರಿ ದೇಶದ ನಾನಾ ಭಾಗಗಳ ಸುಮಾರು 1200 ಕಲಾವಿದರು ಚಿತ್ರ ಸಂತೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
15 ಲಕ್ಷ ರೂ.ವರೆಗಿನ ಕಲಾ ಕೃತಿಗಳು: ಚಿತ್ರಸಂತೆಯಲ್ಲಿ ಕಲಾಪ್ರೇಮಿಗಳಿಗೆ ನೂರು ರೂಪಾಯಿಯಿಂದ 15 ಲಕ್ಷ ರೂ.ವರೆಗಿನ ಕಲಾಕೃತಿಗಳು ದೊರೆಯಲಿವೆ. 4 ಲಕ್ಷ ಮಂದಿ ಚಿತ್ರ ಸಂತೆಗೆ ಭೇಟಿ ನೀಡುವ ನಿರೀಕ್ಷೆ ಇದ್ದು, ಮೈಸೂರಿನ ಸಾಂಪ್ರದಾಯಿಕ ಶೈಲಿ, ತಂಜಾವೂರು, ರಾಜಸ್ಥಾನ ಸೇರಿ ಹಲವು ಶೈಲಿಗಳ ತೈಲ ಮತ್ತು ಜಲವರ್ಣ ಕಲಾಕೃತಿಗಳು ಲಭ್ಯವಿರಲಿವೆ. ವಂಗ್ಯಚಿತ್ರಗಳಿಗೂ ಸಂತೆಯಲ್ಲಿ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಕಾಡ್ ಬಳಸಿ ಪಾವತಿಸಿ: ಗ್ರಾಹಕರ ಅನುಕೂಲಕ್ಕಾಗಿ ಈ ಬಾರಿಯ ಚಿತ್ರ ಸಂತೆಯಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿಸುವ ಮೂಲಕ ಕಲಾಕೃತಿಗಳನ್ನು ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಿಂದಿನ ವರ್ಷದಂತೆ ಶಿವಾನಂದ ಸರ್ಕಲ್‌ನಿಂದ ವಿಂಡ್ಸರ್ ಮ್ಯಾನರ್ ಹಾಗೂ ಕ್ರೆಸೆಂಟ್ ರಸ್ತೆಯವರೆಗೂ ಕಲಾಕೃತಿಗಳ ಪ್ರದರ್ಶನ ಇರಲಿದ್ದು, ಭದ್ರತೆಯ ದೃಷ್ಟಿಯಿಂದ ಸಂತೆ ನಡೆಯುವ ಎಲ್ಲ ಪ್ರದೇಶಗಳಲ್ಲೂ ಸಿಸಿಟಿವಿ ಆಳವಡಿಸುವುದಾಗಿ ಚಿತ್ರ ಸಂತೆಯ ಅಧ್ಯಕ್ಷ ಟಿ.ಪ್ರಭಾಕರ್ ಹೇಳಿದರು.
ಕಳೆದ ವರ್ಷದ ಸಂತೆಯಲ್ಲಿ 2 ಕೋಟಿ ಮೌಲ್ಯದ ಕಲಾಕೃತಿಗಳು ಮಾರಾಟವಾಗಿದ್ದವು. ಈ ವರ್ಷ ಇದಕ್ಕಿಂತಲೂ ಹೆಚ್ಚು ಮೌಲ್ಯದ ಕಲಾಕೃತಿಗಳು ಮಾರಾಟವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗಿದೆ.
-ಡಾ.ಬಿ.ಎಲ್ ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರು