ಯಾದಗಿರಿ: ಸಿನಿಮಾದಲ್ಲಿ ಒಂದು ದಿನದ ಸಿಎಂ ಆಗಿದ್ದನ್ನು ನೋಡಿದ್ದೇವೆ, ಮಾಧ್ಯಮಗಳ ಸುದ್ದಿಗಳಲ್ಲಿ ಕೇಳಿದ್ದೇವೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಐಎಎಸ್ ಅಧಿಕಾರಿಗಳನ್ನು ಭೇಟಿಯಾಗಬೇಕು ಎಂದರೆ ತಾಸುಗಟ್ಟಲೆ ಕಾಯಬೇಕು.. ಆದರೆ, ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಅತಿಥಿ ಸಿಇಓ ಆಗುವ ಅವಕಾಶ ಒದಗಿಬಂದಿದೆ.ಇಲ್ಲಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಇಂತಹ ಅವಕಾಶವನ್ನು ಒದಗಿಸಿಕೊಡುವ ಮೂಲಕ ವಿದ್ಯಾರ್ಥಿನಿಯ ಐಎಎಸ್ ಕನಸನ್ನು ಬಡಿದೆಬ್ಬಿಸಿದ್ದಾರೆ.
ಇಂತಹ ಅವಕಾಶವನ್ನು ಪಡೆದುಕೊಂಡವಳು ಗುರುಮಠಕಲ್ ತಾಲೂಕಿನ ಕಂದಕೂರ ಸರ್ಕಾರಿ ಪ್ರೌಢ ಶಾಲೆಯ ಪ್ರಗತಿ. ತನಗೆ ದೊರೆತಿರುವ ಈ ಸದಾವಕಾಶದ ಕುರಿತು ಮಾತನಾಡಿ, ಈ ಕುರ್ಚಿಯಲ್ಲಿ ಕುಳಿತಿದ್ದು ನನಗೆ ತುಂಬಾ ಸಂತೋಷ ತಂದಿದೆ. ಅಲ್ಲದೆ ನನ್ನ ಗುರಿಯನ್ನು ತಲುಪುವುದಕ್ಕೆ ಪ್ರೇರಣೆ ನೀಡಿದೆ. ಐಎಎಸ್ ಅಧಿಕಾರಿಯಾಗುವ ಆಸೆಯನ್ನು ಬಡಿದೆಬ್ಬಿಸಿದೆ ಎಂದಳು.
ಇದನ್ನೂ ಓದಿ:ಹರಿಯಾಣದ 3 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಬಂದ್; ರೈತರ ತೆರವಿಗೆ ಉಭಯ ಸರಕಾರಗಳ ಹರಸಾಹಸ
ಮುಂದೆ ಸಿಇಓ ಆದರೆ, ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ವಿದ್ಯಾರ್ಥಿನಿ ಹೇಳಿದಳು. ಒಟ್ಟಿನಲ್ಲಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯನ್ನು ಐಎಎಸ್ ಅಧಿಕಾರಿ ತನ್ನ ಕುರ್ಚಿಗೆ ಕೂರಿಸಿ, ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕೆ ಪ್ರೇರಣೆ ನೀಡಿದ್ದು ಕಂಡು ಬಂತು.
ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ಹೆಣ್ಣು ಮಕ್ಕಳೂ ಸಾಕಷ್ಟು ರಂಗಗಳಲ್ಲಿ ಮುಂದುವರೆದಿದ್ದು, ಪುರುಷರಷ್ಟೇ ಸಾಧನೆಯನ್ನು ಮಾಡುತ್ತಿದ್ದಾರೆ. ಉತ್ತಮ ಸಮಾಜದ ನಿರ್ಮಾಣದಲ್ಲಿ ಹೆಣ್ಣು ಮಕ್ಕಳ ಪಾತ್ರವೂ ಸಾಕಷ್ಟಿದೆ ಎಂದು ಸಿಇಓ ಶಿಲ್ಪಾ ಶರ್ಮಾ ಹೇಳಿದರು.