Advertisement
ವ್ಹಾ..! ಎಷ್ಟೊಂದು ಸುಂದರ. ಆವರಣಕ್ಕೆ ಕಾಲಿಟ್ಟರೆ ಸಾಕು, ಕೈ ಬಿಸಿ ಕರೆಯುವ ಪ್ರಕೃತಿ ಮಾತೆ. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಿನ ತೋರಣ. ಮಕ್ಕಳಿಗೆ ನೆರಳಿನ ಆಸರೆ ನೀಡುವ ಮರ, ಜೊತೆಗೆ ಪಕ್ಷಿಗಳ ಕಲರವ. ಇದು, ಬಿಸಿಲ ನಾಡಿನಲ್ಲೊಂದು ಹಸಿರಿನಿಂದ ಕಂಗೊಳಿಸುವ ಸರಕಾರಿ ಶಾಲೆಯ ನೋಟ.
Related Articles
Advertisement
ಸುವ್ಯವಸ್ಥೆ: ಶಾಲೆಯಲ್ಲಿ ಕಂಪ್ಯೂಟರ್ ಕಲಿಕೆಗೂ ಒತ್ತು ನೀಡುತ್ತಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ. ಪ್ರತ್ಯೇಕ ಶೌಚಾಲಯ, ಕುಡಿವ ನೀರು, ಫ್ಯಾನ್ ಸೇರಿದಂತೆ ಹೈಟೆಕ್ ಸೌಲಭ್ಯ ಈ ಶಾಲೆಯಲ್ಲಿ ಇರುವುದು ಮತ್ತೂಂದು ಹೆಚ್ಚುಗಾರಿಕೆ. ಈಗಾಗಲೇ ಈ ಶಾಲೆ ಹಸಿರು ಮಿತ್ರಶಾಲೆ ಪ್ರಶಸ್ತಿ ಪಡೆದಿದೆ. ಫಲಿತಾಂಶ, ಕ್ರೀಡೆಯಲ್ಲಿಯೂ ಮುಂದೆ ಇದೆ. ನವಿಲು, ಪಾರಿವಾಳಗಳು ಶಾಲೆಯ ಅಂದ ಮತ್ತು ಖ್ಯಾತಿ ಹೆಚ್ಚಿಸಿವೆ.
ಕಣ್ಣ ಹಾಯಿಸಿದ್ದಷ್ಟೂ ಹಚ್ಚ ಹಸಿರು ಅಂಗಳವನ್ನು ತುಂಬಿ ಕೊಂಡಿದೆ. ಶಿಕ್ಷಕರು, ವಿದ್ಯಾರ್ಥಿಗಳು ಸದ್ದಿಲ್ಲದೇ ಹಸಿರು ಕ್ರಾಂತಿ ಆರಂಭಿಸಿದ್ದಾರೆ. ಅಶೋಕ, ಗುಲ್ ಮಹರ್, ಸಿಲ್ವರ್, ಕ್ರಿಸ್‌ಮಸ್, ತೇಗ, ನೇರಳ, ಹೊಂಗೆ, ಹುಲಗಲಿ, ರಬ್ಬರ್ ಸೇರಿದಂತೆ 100ಕ್ಕೂ ಅಧಿ ಕ ಬಗೆಯ ಮರಗಳಿವೆ. ಇದರ ಜೊತೆಗೆ ತರಕಾರಿ ಹೂ-ಹಣ್ಣು ಬೆಳೆಯಲಾಗುತ್ತಿದೆ. ವಿದ್ಯಾರ್ಥಿಗಳು ಬೆಳೆದ ತರಕಾರಿಯಿಂದಲೇ ಬಿಸಿಯೂಟದ ಸಾಂಬಾರ್ ತಯಾರಾಗುವುದು.
ಮಳೆಯ ನೀರು ಶಾಲೆಯಿಂದ ಹೊರಗೆ ಹೋಗಲು ಬಿಡುವುದಿಲ್ಲ. ಅದಕ್ಕಾಗಿ ಗುಂಡಿ ತೋಡಿದ್ದಾರೆ. ಅಲ್ಲಿ ಸಂಗ್ರಹವಾಗುವ ನೀರನ್ನು ಗಿಡಗಳ ಆರೈಕೆಗೆ ಬಳಸುತ್ತಾರೆ. ಅದಕ್ಕೆ ಬೇಕಾದ ಸಾವಯವ ಗೊಬ್ಬರವನ್ನು ಕೂಡ ಶಾಲೆಯಲ್ಲೇ, ಮಕ್ಕಳೇ ತಯಾರಿಸುತ್ತಾರೆ. “ಇಷ್ಟು ದೊಡ್ಡ ಹಸಿರೀಕರಣ ಮಾಡುವುದು ಸುಲಭವಲ್ಲ. ಇದರ ಹಿಂದೆ ನಮ್ಮ ಶ್ರಮದ ಜೊತೆಗೆ ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ಹುಮ್ಮಸ್ಸು ಇದೆ. ಔಷಧ ಸಸ್ಯಗಳನ್ನು ಬೆಳೆಸುವ ಉದ್ದೇಶವಿದ್ದು, ಇದಕ್ಕೆ ಗ್ರಾಮಸ್ಥರು ಸಹಕಾರಕ್ಕೆ ನಿಂತಿದ್ದಾರೆ ‘ ಎನ್ನುತ್ತಾರೆ ಮುಖ್ಯ ಶಿಕ್ಷಕ ವಿ.ಎಂ. ಕಂದಕೂರು.
* ಮಲ್ಲಪ್ಪ ಮಾಟರಂಗಿ