ಟಾಪ್ ಟೆನ್ ಹೂಡಿಕೆ ಆಯ್ಕೆಗಳನ್ನು ಅವಲೋಕಿಸುವಲ್ಲಿ ಏಳನೇ ಕ್ರಮಾಂಕದಲ್ಲಿ ನಾವು ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು (ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ – SCSS ಯೋಜನೆ) ಗಮನಿಸಬಹುದು.
ಎಲ್ಲಕ್ಕಿಂತ ಮೊದಲು ನಾವು ಉಳಿತಾಯ ಮತ್ತು ಹೂಡಿಕೆ ಎಂಬೆರಡು ಪದಗಳ ಅರ್ಥ ವ್ಯತ್ಯಾಸವನ್ನು ಬಹಳ ಸೂಕ್ಷ್ಮವಾಗಿ ಕಾಣಬೇಕಾಗುತ್ತದೆ. ಉಳಿತಾಯ ಎಂದರೆ ಖರ್ಚಾಗಬಹುದಾದ ಹಣವನ್ನು ಖರ್ಚು ಮಾಡದೆ ಕಾಲಕಾಲಕ್ಕೆ ಜೋಪಾನವಾಗಿ ಶೇಖರಿಸಿಡುವುದು. ಇದರ ಅರ್ಥ ಉಳಿತಾಯದ ಹಣ “ಹನಿ ಕೂಡಿ ಹಳ್ಳ, ತೆನೆ ಕೂಡಿ ಕಣಜ’ ಎಂಬರ್ಥದಲ್ಲಿ ಹೆಚ್ಚಾಗುತ್ತಾ ಹೋಗುವುದು.
ಹೀಗೆ ಹೆಚ್ಚಾಗುತ್ತಾ ಹೋಗುವ ಹಣದಲ್ಲಿ ತನ್ನಿಂತಾನೇ ಯಾವುದೇ ರಿಸ್ಕ್ ಇರುವುದಿಲ್ಲ. ಏಕೆಂದರೆ ಅದು ನಮ್ಮ ವಶದಲ್ಲೇ ಭದ್ರವಾಗಿರುತ್ತದೆ; ಬೇಕೆಂದಾಗ, ಅಗತ್ಯಕ್ಕೆ ಅನುಗುಣವಾಗಿ, ಥಟ್ಟನೆ ನಮ್ಮ ಕೈಗೆ ಸಿಗುವಂತಿರುತ್ತದೆ. ಆದುದರಿಂದ ಉಳಿತಾಯದ ಹಣ ಕೇವಲ ಶೇಖರಣೆಯ ಉದ್ದೇಶ ಹೊಂದಿರುವುದರಿಂದ ಅದು ತನ್ನಿಂತಾನೇ ಯಾವುದೇ ಇಳುವರಿ, ಆದಾಯ, ಲಾಭ ವನ್ನು ತಂದುಕೊಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ನಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲಿರುವ ಹಣ. ಈ ಹಣಕ್ಕೆ ಸಿಗುವ ವಾರ್ಷಿಕ ಬಡ್ಡಿ ಕೇವಲ ಶೇ. 4 !
ಉಳಿತಾಯದ ಹಣವನ್ನು ಹೆಚ್ಚಿನ ಬಡ್ಡಿ, ಲಾಭದ ಉದ್ದೇಶಕ್ಕೆ ಬಳಸಿದಾಗ ಅದು ಹೂಡಿಕೆ ಎನಿಸಿಕೊಳ್ಳುತ್ತದೆ. ಹೂಡಿಕೆ ಎಂದಾಕ್ಷಣ ಅದರಲ್ಲಿ ರಿಸ್ಕ್ ಅಂತರ್ಗತವಾಗಿರುತ್ತದೆ. ಹೆಚ್ಚು ಲಾಭ, ಹೆಚ್ಚು ಬಡ್ಡಿ ಎಂದಾಕ್ಷಣ ಹೆಚ್ಚು ರಿಸ್ಕ್, ಹೆಚ್ಚು ಅಭದ್ರತೆ, ಹೆಚ್ಚು ಅನಿಶ್ಚಿತತೆ ಇರುವುದು ಸಹಜವೇ.
ರಾಷ್ಟ್ರೀಕೃತ ಬ್ಯಾಂಕ್ ಠೇವಣಿ ಹೆಚ್ಚು ಸುಭದ್ರ; ಆದರೆ ಅದಕ್ಕೆ ಸಿಗುವ ಬಡ್ಡಿ ಶೇ.7-8 ಮಾತ್ರ; ಅದೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಅಂದರೆ ಎನ್ ಬಿ ಎಫ್ ಸಿ ಗಳಲ್ಲಿ) ಠೇವಣಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತದೆ. ಆದರೆ ರಿಸ್ಕ್ ಕೂಡ ಇರುತ್ತದೆ. ಪೋಂಜಿ ಸ್ಕೀಮಿನಲ್ಲಿ ಹಣ ಹೂಡಿದರೆ ಅತ್ಯಧಿಕ ಲಾಭದ ಆಮಿಷ ಇರುತ್ತದೆ. ಆದರೆ ರಿಸ್ಕ್ ಅತ್ಯಂತ ಭಯಂಕರವಾಗಿರುತ್ತದೆ !
60 ವರ್ಷ ವಯಸ್ಸು ದಾಟಿರುವ ಹಿರಿಯ ನಾಗರಿಕರಿಗೆಂದೇ ಸರಕಾರ ರೂಪಿಸಿರುವ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಅಥವಾ ಎಸ್ ಸಿ ಎಸ್ ಎಸ್ ಯೋಜನೆ ಹೂಡಿಕೆ ಮತ್ತು ಉಳಿತಾಯದ ದೃಷ್ಟಿಯಿಂದ ಅತ್ಯಂತ ಸುಭದ್ರ, ಆಕರ್ಷಕ ಮತ್ತು ಅತ್ಯಧಿಕ ಇಳುವರಿ ತಂದು ಕೊಡುವ ಯೋಜನೆಯಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ – ಎಸ್ ಸಿ ಎಸ್ ಎಸ್ – ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಅಂಚೆ ಇಲಾಖೆ ! ನಿಜ ಅಂಚೆ ಇಲಾಖೆಯಲ್ಲಿ ಈ ಯೋಜನೆಯಡಿ ಹಣ ಹೂಡುವವರೇ ಅತ್ಯಧಿಕ. ಏಕೆಂದರೆ ಅಂಚೆ ಇಲಾಖೆ ದೇಶದ ಉದ್ದಗಲದಲ್ಲಿ ಸಾಮಾನ್ಯರ ನೇರ ಸೇವೆಗೆ ಉಪಲಬ್ಧವಿರುವ ಸರಕಾರಿ ಸಂಸ್ಥೆಯಾಗಿದೆ.
ಹಾಗಿದ್ದರೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೂಡ ಹಿರಿಯ ನಾಗರಿಕರ ಉಳಿತಾಯ ಸ್ಕೀಮ್ (SCSS
) ಇದೆ. ಆದರೆ ಅದನ್ನು ವಿಶೇಷವಾಗಿ ಪ್ರಚುರಪಡಿಸಲಾಗಿಲ್ಲ. ಹಾಗಾಗಿ ಎಲ್ಲರೂ ಅಂಚೆ ಇಲಾಖೆಯ ಕಡೆಗೇ ಮುಖಮಾಡುತ್ತಾರೆ. ಅಂತಿದ್ದರೂ ಈ ಖಾತೆಯನ್ನು ಅಂಚೆ ಕಚೇರಿಯಲ್ಲೂ ಬ್ಯಾಂಕಿನಲ್ಲೂ ತೆರೆಯುವುದಕ್ಕೆ ಹಿರಿಯ ನಾಗರಿಕರಿಗೆ ಅವಕಾಶ ಇರುತ್ತದೆ ಎನ್ನುವುದು ಮುಖ್ಯ.
ಈ ಸ್ಕೀಮ್ ನಲ್ಲಿ ಹಿರಿಯ ನಾಗರಿಕರು ಗರಿಷ್ಠ 15 ಲಕ್ಷ ರೂ. ಗಳನ್ನು ಇರಿಸಬಹುದಾಗಿದೆ. ಈ ಠೇವಣಿಯ ಕಾಲಾವಧಿ 15 ವರ್ಷಗಳದ್ದಾಗಿರುತ್ತದೆ; ಪ್ರಕೃತ ಈ ಠೇವಣಿ ಮೇಲೆ ವಾರ್ಷಿಕ ಶೇ.8.70 ಬಡ್ಡಿ ನೀಡಲಾಗುತ್ತಿದೆ. ಬಡ್ಡಿಯನ್ನು ತ್ರೈಮಾಸಿಕ ನೆಲೆಯಲ್ಲಿ ಪಾವತಿಸಲಾಗುತ್ತದೆ.
ಈ ಯೋಜನೆಯಲ್ಲಿ ವರ್ಷವೊಂದರಲ್ಲಿ ಹೂಡಲಾಗುವ 1.50 ಲಕ್ಷ ರೂ. ವರೆಗಿನ ಮೊತ್ತಕ್ಕೆ ಆದಾಯ ತೆರಿಗೆ ಕಾಯಿದೆಯ ಸೆ.80ಸಿ ಅಡಿ ತೆರಿಗೆ ವಿನಾಯಿತಿಯ ಲಾಭ ಇರುತ್ತದೆ. ಹಾಗಿದ್ದರೂ ಠೇವಣಿ ಮೇಲಿನ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. ಹಣ ಹಿಂಪಡೆದಾಗ ಅದಕ್ಕೆ ತೆರಿಗೆ ಲಗಾವಾಗುವುದಿಲ್ಲ. ಹಣಕಾಸು ವರ್ಷವೊಂದರಲ್ಲಿ ಪಾವತಿಯಾಗುವ ಬಡ್ಡಿಯು 10,000 ರೂ. ದಾಟಿದಲ್ಲಿ ಅದರ ಮೇಲಿನ ತೆರಿಗೆಯನ್ನು ಮೂಲದಲ್ಲೇ ಕಡಿತ ಮಾಡಲಾಗುತ್ತದೆ. ಹಣ ಠೇವಣಿ ಇರಿಸಿದ ಒಂದು ವರ್ಷದ ಬಳಿಕ ಅವಧಿಪೂರ್ವ ಹಿಂಪಡೆತಕ್ಕೆ ಅವಕಾಶ ಇರುತ್ತದೆ; ಆದರೆ ಅದಕ್ಕೆ ದಂಡವೂ ಅನ್ವಯಿಸುತ್ತದೆ.
ಆರ್ ಬಿ ಐ ಟ್ಯಾಕ್ಸೇಬಲ್ ಬಾಂಡ್ :
ಟಾಪ್ ಟೆನ್ ಹೂಡಿಕೆಯ 8ನೇ ಕ್ರಮಾಂಕದಲ್ಲಿ ನಾವು ಆರ್ ಬಿ ಐ ಟ್ಯಾಕೇಸಬಲ್ ಬಾಂಡ್ ಗಳನ್ನು ಪರಿಗಣಿಸಬಹುದಾಗಿದೆ.
ಈ ಹಿಂದೆ ಇದ್ದ 2003ರ ಶೇ.8.00 ಸೇವಿಂಗ್ಸ್ ಟ್ಯಾಕ್ಸೇಬಲ್ ಬಾಂಡ್ ಗಳ ಸ್ಥಾನದಲ್ಲಿ ಕೇಂದ್ರ ಸರಕಾರ ಈಚೆಗೆ ಶೇ.7.75ರ ಸೇವಿಂಗ್ಸ್ ಟ್ಯಾಕ್ಸೇಬಲ್ ಬಾಂಡ್ ಗಳನ್ನು ಹೊರತಂದಿದೆ. ಈ ಬಾಂಡ್ಗಳ ಅವಧಿ 7 ವರ್ಷ. ಇವುಗಳನ್ನು demat ರೂಪದಲ್ಲೂ ಪಡೆಯಬಹುದಾಗಿದೆ. ಡಿ ಮ್ಯಾಟ್ ರೂಪದಲ್ಲಿ ಇವುಗಳನ್ನು ಹೂಡಿಕೆದಾರರ ಬಾಂಡ್ ಲೆಜ್ಜರ್ ಅಕೌಂಟ್ಗೆ ಅಥವಾ ಬಿಎಲ್ಎ ಗೆ ಹಾಕಲಾಗುತ್ತದೆ. ಸರ್ಟಿಫಿಕೇಟ್ ರೂಪದಲ್ಲೂ ಇವುಗಳನ್ನು ಹೂಡಿಕೆದಾರರು ಪಡೆಯಲು ಅವಕಾಶ ಇರುತ್ತದೆ.
ರಿಯಲ್ ಎಸ್ಟೇಟ್ :
ಟಾಪ್ ಟೆನ್ ಹೂಡಿಕೆ ಆಯ್ಕೆಯಲ್ಲಿ 9ನೇ ಸ್ಥಾನದಲ್ಲಿರುವ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಬೇಕೆಂದಾಗ ಹಣ ನಗದೀಕರಿಸುವ ಅವಕಾಶ ಬಹಳ ಕ್ಷೀಣವಾಗಿರುತ್ತದೆ. ನಾವು ಸ್ವಂತಕ್ಕೆ ಕಟ್ಟಿಕೊಳ್ಳುವ ಮನೆಯು ನಮ್ಮ ಉಳಿತಾಯದ ಫಲ ಎಂದೇ ತಿಳಿಯಲಾಗುತ್ತದೆ. ಅದನ್ನು ಹೂಡಿಕೆ ಎಂದು ಪರಿಗಣಿಸುವಂತಿಲ್ಲ. ಒಂದೊಮ್ಮೆ ನಾವು ಸ್ವತಃ ವಾಸಿಸುವ ಉದ್ದೇಶ ಹೊಂದಿಲ್ಲವಾದರೆ ಅಂತಹ ವಾಸದ ಕಟ್ಟಡವು ಹೂಡಿಕೆಯ ರೂಪದ್ದಾಗಿರುತ್ತದೆ.
ಹೂಡಿಕೆ ರೂಪದ ರಿಯಲ್ ಎಸ್ಟೇಟ್ ಸೊತ್ತು ಅತ್ಯಧಿಕ ಬೆಲೆ ಪಡೆಯಬೇಕೆಂದರೆ ಅದು ಇರುವ ತಾಣ ಅಥವಾ ಸ್ಥಳ ಬಹಳ ಮುಖ್ಯವಾಗುತ್ತದೆ. ಆರ್ಥಿಕ ಚಟುವಟಿಕೆಗಳ ತಾಣಕ್ಕೆ ನಿಕಟವಾದಷ್ಟೂ ರಿಯಲ್ ಎಸ್ಟೇಟ್ ಸೊತ್ತಿಗೆ ಬೆಲೆ ಹೆಚ್ಚು. ರಿಯಲ್ ಎಸ್ಟೇಟ್ ಸೊತ್ತಿನ ರೂಪದ ಕಟ್ಟಡ, ಭೂಮಿ ಇತ್ಯಾದಿಗಳನ್ನು ಬಾಡಿಗೆ ಆದಾಯಕ್ಕೆ ಸುಲಭದಲ್ಲಿ ಒಳಗೊಳಿಸಬಹುದಾಗಿರುತ್ತದೆ.
ಆದುದರಿಂದ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಕ್ಯಾಪಿಟಲ್ ಅಪ್ರಿಸಿಯೇಶನ್ (ಬಂಡವಾಳ ವೃದ್ಧಿ) ಮತ್ತು ಬಾಡಿಗೆ ಆದಾಯ ಇರುವುದರಿಂದ ಇದು ಈ ಎರಡು ಬಗೆಯ ಇಳುವರಿಯನ್ನು ಖಾತರಿ ಪಡಿಸುತ್ತದೆ.
ಇತರ ಎಲ್ಲ ಬಗೆಯ ಹೂಡಿಕೆ ಆಯ್ಕೆಗಳನ್ನು ಹೋಲಿಸಿದಾಗ ರಿಯಲ್ ಎಸ್ಟೇಟ್ ಹೂಡಿಕೆಯು ಅತ್ಯಂತ ನಿಕೃಷ್ಟ ನಗದೀಕರಣವನ್ನು ಹೊಂದಿರುತ್ತದೆ. ಎಂದರೆ ಬೇಕೆಂದಾಗ ಹಣ ಹಿಂಪಡೆಯುವುದಕ್ಕೆ ಬಹುತೇಕ ಶೂನ್ಯ ಅವಕಾಶ ಇರುತ್ತದೆ. ರಿಯಲ್ ಎಸ್ಟೇಟ್ ಹೂಡಿಕೆಗೆ ಅನೇಕಾನೇಕ ಬಗೆಯ ಸರಕಾರಿ ಅನುಮೋದನೆ, ಅನುಮತಿ, ಪರವಾನಿಗೆ ಮುಂತಾದ ಆವಶ್ಯಕತೆಗಳು, ನಿರ್ಬಂಧಗಳು ಇರುವುದು ಬಹುಮಟ್ಟಿನ ರಿಸ್ಕ್ ಎಂದೇ ಪರಿಗಣಿಸಲ್ಪಡುತ್ತದೆ.