Advertisement
ಬಡಬಾಳು, ಜಡ್ಡಿನಮೂಲೆ, ಯಡೂರು, ಕೇವರ್ಜಿ, ಕ್ಯಾಕೋಡು ಭಾಗದ ಜನರು ಸೇತುವೆಯಿಲ್ಲದೆ ಪ್ರತಿ ಮಳೆಗಾಲದಲ್ಲಿ ಕಾಲುಸಂಕದಲ್ಲಿ ಆತಂಕದಲ್ಲೇ ಸಂಚರಿಸುವುದು ಅನಿವಾರ್ಯವಾಗಿದೆ. ಮಳೆಗಾಲ ಬಂತೆಂದರೆ ಸಾಕು ಈ ಊರುಗಳಿಗೆ ಮುಖ್ಯ ಪೇಟೆ ಇರುವ ಆಜ್ರಿಯ ಸಂಪರ್ಕವೇ ಕಡಿತಗೊಳ್ಳುತ್ತದೆ. ಇಲ್ಲಿನ ಜನರು ಕೇವಲ 1 ಕಿ.ಮೀ. ದೂರಕ್ಕೆ ಸೇತುವೆಯಿಲ್ಲದ ಕಾರಣ 5 ಕಿ.ಮೀ. ಹೆಚ್ಚುವರಿ ದೂರ ಸಂಚರಿಸಬೇಕಾಗಿದೆ.
ಮಳೆಗಾಲದಲ್ಲಿ ಇಲ್ಲಿ ಊರವರೇ ಪ್ರತಿ ವರ್ಷ ನಿರ್ಮಿಸುವ ತಾತ್ಕಾಲಿಕ ಕಾಲುಸಂಕವೇ ನದಿ ದಾಟಲು ಆಸರೆಯಾಗಿದೆ. ಬೇಸಗೆಯಲ್ಲಿ ಕುಬ್ಜಾ ನದಿಯಲ್ಲಿ ನೀರು ಕಡಿಮೆಯಾದ ಅನಂತರ ನದಿಯಲ್ಲೇ ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. 3 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಕಾಲು ಸಂಕ ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಆ ವರ್ಷವಿಡೀ ಈ ಮಾರ್ಗದಲ್ಲಿ ಸಂಪರ್ಕವೇ ಕಡಿತಗೊಂಡಿತ್ತು. ಜಡ್ಡಿನಮೂಲೆಯಲ್ಲಿ ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಸೇತುವೆಯ ಬೇಡಿಕೆಯನ್ನು ಇಲ್ಲಿನ ಜನ ಇಡುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ಸೇತುವೆ ಘೋಷಣೆ ಯಾಗಿದ್ದರೂ ಲಾಕ್‌ಡೌನ್‌ನಿಂದಾಗಿ ಅಡ್ಡಿಯಾಗಿದೆ. ಇದರಿಂದ ಈ ಭಾಗದ ಜನರಿಗೆ ಈ ಮಳೆಗಾಲ ಕೂಡ ಕಾಲು ಸಂಕದಲ್ಲೇ ಹೊಳೆ ದಾಟಬೇಕಾದ ಪರಿಸ್ಥಿತಿಯಿದೆ. ಈ ವರ್ಷ ಶಾಲಾ – ಕಾಲೇಜು ಇನ್ನೂ ಆರಂಭವಾಗದ ಕಾರಣ ಮಕ್ಕಳು ಈ ಹೊಳೆ ದಾಟುವ ಸಂಭವ ಕಡಿಮೆ. ಆದರೆ ಆಗಸ್ಟ್- ಸೆಪ್ಟಂಬರ್‌ನಲ್ಲಿ ಶಾಲಾರಂಭವಾದರೆ ಮಕ್ಕಳಿಗೆ ಮತ್ತದೇ ಕಾಲುಸಂಕದ ನಡಿಗೆ ಅನಿವಾರ್ಯವಾಗುತ್ತದೆ.
Related Articles
ಜಡ್ಡಿನಮೂಲೆಯಲ್ಲಿ ಕುಬ್ಜಾ ನದಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 3.5 ಕೋ.ರೂ. ಅನುದಾನ ಮಂಜೂರಾಗಿದೆ. ಆದರೆ ಕೋವಿಡ್ ದಿಂದಾಗಿ ಲಾಕ್‌ಡೌನ್ ಘೋಷಣೆಯಾಗಿದ್ದುದರಿಂದ ಈ ಬಾರಿಯ ಬೇಸಗೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ಇನ್ನೇನಿದರೂ ಮಳೆಗಾಲ ಮುಗಿದ ಬಳಿಕವಷ್ಟೇ ಇದು ಚಾಲನೆ ಪಡೆಯುವ ಸಾಧ್ಯತೆಗಳಿವೆ.
Advertisement
ಅನುಮತಿ ಸಿಗಬೇಕಷ್ಟೆಶಾಸಕರ ಬೇಡಿಕೆಗೆ ಸರಕಾರ ಸ್ಪಂದಿಸಿ ಸೇತುವೆ ಹಾಗೂ ಕಿಂಡಿ ಅಣೆಕಟ್ಟನ್ನು ಘೋಷಿಸಿದ್ದು, ಅನುಮೋದನೆ ಕೂಡ ಸಿಕ್ಕಿದೆ. ಆದರೆ ಇನ್ನೂ ಕೂಡ ಕಾಮಗಾರಿಯ ಕಾರ್ಯಗತಕ್ಕೆ ಅನುಮತಿ ಸಿಕ್ಕಿಲ್ಲ. ಅದು ಸಿಕ್ಕ ಅನಂತರ ಕಾಮಗಾರಿ ಆರಂಭಿಸಲಾಗುವುದು.
– ಶೇಷಕೃಷ್ಣ, ಕಿರಿಯ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ, ಕುಂದಾಪುರ