ವಿಟ್ಲ: ಸ್ವಾತಂತ್ರ್ಯ ದೊರೆತು 77 ವರ್ಷ ತುಂಬುತ್ತಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಅನುದಾನ ಹಳ್ಳಿ ಹಳ್ಳಿಗೆ ತಲುಪಿದೆ ಎನ್ನುತ್ತಾರೆ. ಬಡವರಿಗೆ ಮನೆ ನಿರ್ಮಿಸಿಕೊಡುತ್ತೇವೆ ಅನ್ನುತ್ತಾರೆ. ಹೀಗಿದ್ದೂ ಇನ್ನೂ ಜೋಪಡಿಯಲ್ಲಿ ಕುಟುಂಬವೊಂದು ಸಂಕಟಪಡುತ್ತಿದೆ.
ಇದು ಅಳಿಕೆ ಗ್ರಾಮದ ಪಡಿಬಾಗಿಲು ಕುಟುಂಬದ ಶೋಚನೀಯ ಸ್ಥಿತಿ. ಮನೆ ಮಾಡು ಕುಸಿಯುತ್ತಿದೆ. ಸುತ್ತಲೂ ಗೋಡೆಯಿಲ್ಲ. ಪ್ಲಾಸ್ಟಿಕ್ ಟರ್ಪಾಲು ಇವರ ಮನೆಗೆ ಗೋಡೆಯಾಗಿದೆ. ಬಾಗಿಲು ಇಲ್ಲ. ಭದ್ರತೆಯಿಲ್ಲ. ಮನೆ ಸೋರುವುದು ಗ್ಯಾರಂಟಿ. ಇವರ ಹೆಸರಲ್ಲಿ ನಿವೇಶನವಿಲ್ಲ. ಸುಭದ್ರವಾದ ಮನೆಯಿಲ್ಲ. ಪಡಿತರ ಅಕ್ಕಿ ಈ ಕುಟುಂಬಕ್ಕೆ ಸಿಗುವುದಿಲ್ಲ. ಶೌಚಾಲಯವಿಲ್ಲ. ಈ ಮನೆಗೆ ತೆರಳಲು ಸರಿಯಾದ ದಾರಿಯಿಲ್ಲ. ಸೌಲಭ್ಯ ಪಡೆಯಬೇಕಾದ ಈ ಅರ್ಹ ಫಲಾನುಭವಿ ಕುಟುಂಬಕ್ಕೆ ಸರಕಾರ ದಾರಿ ತೋರಬೇಕಾಗಿದೆ.
ನಾರಾಯಣ ಪೂಜಾರಿ ಈ ಕುಟುಂಬದ ಯಜಮಾನ. ಅವರ ವಯಸ್ಸು 48ರ ಆಸುಪಾಸು. ಹಿಂದೆ ಕೂಲಿಕಾರ್ಮಿಕ. ಒಂದೂವರೆ ವರ್ಷದ ಹಿಂದೆ ಅವರು ಕೂಲಿ ಕೆಲಸ ಮಾಡುತ್ತಿದ್ದಾಗ ಮರದಿಂದ ಬಿದ್ದು ಅನಾರೋಗ್ಯ ಕಾಡಿದೆ. ಕಾಲುಗಳು ನಿಷ್ಕ್ರಿಯಗೊಂಡಿವೆ. ನಡೆದಾಡಲು ಸಾಧ್ಯವಾಗುತ್ತಿಲ್ಲ. ಮನೆಯೊಳಗೆ ಇರುವ ಇವರಿಂದ ಆದಾಯ ಬರುವುದಿಲ್ಲ. ಇವರ ಪತ್ನಿ ಅಡಿಕೆ ಗಾರ್ಬಲ್‌ಗೆ ತೆರಳಿ ದುಡಿಯುತ್ತಿದ್ದಾರೆ. ಇವರ ಆದಾಯದಲ್ಲಿ ಮನೆ ನಡೆಯಬೇಕು.
ಈ ದಂಪತಿಗೆ ಇಬ್ಬರು ಮಕ್ಕಳು. ಪುತ್ರಿ 9ನೇ ತರಗತಿ. ಪುತ್ರ 8ನೇ ತರಗತಿ. ಸರಕಾರಿ ಶಾಲೆಗೆ ತೆರಳುತ್ತಾರೆ. ಆದರೆ ಈ ಮಕ್ಕಳ ಆಗುಹೋಗುಗಳಿಗೆ ವ್ಯವಸ್ಥೆಯಿಲ್ಲ. ಬಟ್ಟೆ-ಬರೆ, ಪುಸ್ತಕ, ಬಸ್ ಪಾಸ್ ಕೂಡಾ ಪಡೆಯಲಾಗದ ಈ ಮಕ್ಕಳ ಭವಿಷ್ಯ ಕಟ್ಟುವುದು ಅಷ್ಟು ಸುಲಭವಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ. ನಿವೇಶನ, ಮನೆ, ಶೌಚಾಲಯ, ಪಡಿತರ ಒದಗಿಸಲು ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.
ಜೀವನೋಪಾಯಕ್ಕೆ ದಾರಿ ತೋರಬೇಕಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕ್ರಮಕೈಗೊಳ್ಳ ಬೇಕಾಗಿದೆ. ಸಾರ್ವಜನಿಕರು ಕೂಡಾ ಈ
ಕುಟುಂಬದ ಮನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಬಹುದಾಗಿದೆ. ಹಳ್ಳಿಯಲ್ಲಿರುವ ಈ ಕುಟುಂಬವನ್ನು ಉದ್ಧರಿಸಿ ಈ ಕುಟುಂಬಕ್ಕೆ ರಕ್ಷಣೆ ಕೊಡಬೇಕಾಗಿದೆ.