Advertisement

ಈ ವೃದ್ಧ ಮಾತೆ ಎಂಟು ಮಕ್ಕಳಿದ್ದರೂ ಅನಾಥೆ!

03:12 PM Dec 10, 2017 | |

ಉಪ್ಪಿನಂಗಡಿ(ದಕ್ಷಿಣ ಕನ್ನಡ): 8 ಮಕ್ಕಳಿದ್ದರೂ ಮಾತೆ ಯೊಬ್ಬರು ತನ್ನ 85ರ ಇಳಿ ವಯಸ್ಸಿನಲ್ಲಿ ಬೀದಿ ಪಾಲಾಗಿ, ತುತ್ತು ಅನ್ನಕ್ಕಾಗಿ ಅಂಗಲಾಚಬೇಕಾದ ದುಃಸ್ಥಿತಿಯ ಪ್ರಕರಣ ಉಪ್ಪಿನಂಗಡಿ ಠಾಣೆಯ ಮೆಟ್ಟಿಲೇರಿದೆ.

Advertisement

ಮೂಲತಃ ಉಪ್ಪಿನಂಗಡಿಯ ಮುಳಿಯ ನಿವಾಸಿಯಾಗಿದ್ದ, ಪ್ರಸಕ್ತ ಇಳಂತಿಲದ ಕುಂಟಾಲಕಟ್ಟೆ ಎಂಬಲ್ಲಿ ವಾಸ್ತವ್ಯವಿರುವ ಲಕ್ಷ್ಮೀ ಹೆಗ್ಡೆ ಎಂಬ ವೃದ್ಧೆಯ ಕರುಣಾಜನಕ ಕತೆ ಇದು. ಎರಡು ಹೆಣ್ಣು ಮತ್ತು ಆರು ಗಂಡುಮಕ್ಕಳ ತಾಯಿ ಈಕೆ. ಮಕ್ಕಳಲ್ಲಿ ಹಲವರು ಸರ್ಕಾರಿ ನೌಕರಿಯಲ್ಲಿದ್ದಾರೆ. ತನ್ನದಾಗಿದ್ದ 5.30 ಎಕ್ರೆ ಕೃಷಿಭೂಮಿಯನ್ನು ಅಳಿಯನ ಸಂಕಷ್ಟದ ಕಾರಣ ಹಾಗೂ ಮಕ್ಕಳ ನಿರ್ಧಾರಗಳಿಂದಾಗಿ ಮಾರಾಟ ಮಾಡಿದ್ದು, ಪ್ರಸಕ್ತ ಇಳಂತಿಲದ 5 ಸೆಂಟ್ಸ್‌ ಭೂಮಿ ಮಾತ್ರ ಇವರದ್ದಾಗಿದೆ.

ಅಲ್ಲಿರುವ ಛಾವಣಿ ಕುಸಿದ ಮನೆ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಆಸರೆಗಾಗಿ ಮಕ್ಕಳ ಮನೆ ಬಾಗಿಲಿಗೆ ಹೋದರೆ ಅಲ್ಲಿಂದಲೂ ಹೊರಹಾಕಿದ್ದಾರೆ. ದಿಕ್ಕೆಟ್ಟವೃದ್ಧೆಗೆ ಉಪ್ಪಿನಂಗಡಿ ಅಂಜೆಲ್‌ ಪ್ರಿಂಟರ್ಸ್‌ ಮಾಲೀಕ ಓಸ್ವಾಲ್ಡ್‌ ಪಿಂಟೋ ಕಳೆದ 75 ದಿನಗಳಿಂದ ಆಸರೆ ನೀಡಿದ್ದಾರೆ. ಇಷ್ಟು ದಿನಗಳಾದರೂ ವೃದ್ಧೆಯ ಮಕ್ಕಳು ಪಿಂಟೋ ಅವರ ಸತತ ಮನವಿಯನ್ನು ತಳ್ಳಿಹಾಕಿದ್ದಾರೆ. ತಾಯಿಯನ್ನು ನೋಡುವುದಕ್ಕೂ ಬಾರದೆ, ಕೊನೆಗೆ ಫೋನಿಗೂ ಸ್ಪಂದಿಸದಿದ್ದಾಗ ಪಿಂಟೋ ಪ್ರಕರಣವನ್ನು ಪೊಲೀಸ್‌ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ಸಂಕಷ್ಟ: ಸರಕಾರಿ ಉದ್ಯೋಗದಲ್ಲಿದ್ದು, ಅಧಿಕಾರಿ ಸ್ಥಾನದಲ್ಲಿರುವ ಲಕ್ಷ್ಮೀ ಹೆಗ್ಡೆ ಅವರ ಮಕ್ಕಳನ್ನು ಸಂಪರ್ಕಿಸಿ “ತಾಯಿಯನ್ನು ಕರೆದು ಕೊಯ್ಯಿರಿ’ ಎಂದು ವಿನಂತಿಸಿದರೆ, ಯಾರೂ ಸಿದ್ಧರಿಲ್ಲ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಕಿರಿಯ ಮಗ, ತಾಯಿಯನ್ನು ತನ್ನ ಮನೆಗೆ ಕರೆದೊಯ್ಯುತ್ತೇನೆ ಎಂದರೆ ಸೊಸೆ ತಾನು ಮನೆ ತೊರೆಯುತ್ತೇನೆ ಎಂದು ಬೆದರಿಕೆ ಹಾಕುತ್ತಿರುವುದರಿಂದ ಕಿರಿಯ ಮಗ ಅಡಕತ್ತರಿಯಲ್ಲಿ ಸಿಲುಕಿದಂತಹ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಪೊಲೀಸರ ಶ್ರಮ ವ್ಯರ್ಥ 

Advertisement

“ನಾನು ನಿಮಗೆಲ್ಲ ಭಾರವಾಗಿದ್ದೇನೆ ಎಂದಾದರೆ ದಯವಿಟ್ಟು ಮನೆಯನ್ನು ರಿಪೇರಿ ಮಾಡಿಕೊಡಿ, ನಾನು ಅಲ್ಲೇ ಇರುತ್ತೇನೆ’ ಎಂದು ವೃದ್ಧೆ ಅಂಗಲಾಚಿದರೆ ಮನೆ ದುರಸ್ತಿಗೂ ಯಾರೂ ಮುಂದಾಗುತ್ತಿಲ್ಲ. ವೃದ್ಧೆಯ ಸಂಕಷ್ಟಕ್ಕೆ ರಾಜಿ ಪರಿಹಾರಕ್ಕೆ ಪೊಲೀಸರು ಪಟ್ಟ ಶ್ರಮವೆಲ್ಲ ವ್ಯರ್ಥವಾಗಿದೆ.

ವೃದ್ಧಾಪ್ಯ ವೇತನವಿಲ್ಲ

 ಮಕ್ಕಳ ಆಸರೆಯಿಲ್ಲದ 85ರ ವೃದ್ಧೆಗೆ ಸರ್ಕಾರದ ವೃದ್ಧಾಪ್ಯ ವೇತನವಾಗಲಿ, ವಿಧವಾ ವೇತನವಾಗಲಿ ಸಿಗುತ್ತಿಲ್ಲ. ಅರ್ಜಿ ಸಲ್ಲಿಸಿದಾಗಲೆಲ್ಲ, “ಮಕ್ಕಳು ಸರಕಾರಿ ಅಧಿಕಾರಿಗಳಾಗಿದ್ದು, ನಿಮಗೆ ಸರಕಾರಿ ಸೌಲಭ್ಯ ನೀಡಲು ಸಾಧ್ಯವಿಲ್ಲ’ ಎಂಬ ಉತ್ತರವೇ ಲಭಿಸಿದೆ. ಮಕ್ಕಳ ಆಶ್ರಯದಲ್ಲಿಲ್ಲವೆಂದರೆ, ಇಲಾಖಾ ಸಿಬ್ಬಂದಿ ಕೇಳುತ್ತಿಲ್ಲ ಎನ್ನುತ್ತಾರೆ ವೃದ್ಧೆ ಲಕ್ಷ್ಮೀ ಹೆಗ್ಡೆ. 

ಕರಗಿದ ಠಾಣಾಧಿಕಾರಿ
ಲಕ್ಷ್ಮೀ ಹೆಗ್ಡೆ ಅವರ ಕರುಣಾಜನಕ ವೃತ್ತಾಂತ ಆಲಿಸಿದ ಉಪ್ಪಿನಂಗಡಿ ಠಾಣಾಧಿಕಾರಿ ನಂದಕುಮಾರ್‌ ಅವರ ಮನ ಕರಗಿತು. ಅವರು ತನ್ನ ಮನೆಯಲ್ಲೇ ಆಶ್ರಯ ನೀಡುವ ಪ್ರಸ್ತಾವ ಮುಂದಿರಿಸಿದರು. ಇದನ್ನು ಕೇಳಿದ ವೃದ್ಧೆ
ಕಚೇರಿಯಲ್ಲಿ ಕಂಬನಿಗರೆದು, “ಹುಟ್ಟಿದರೆ ನಿಮ್ಮಂಥ ಸ್ವಭಾವದ ಮಕ್ಕಳು ಹುಟ್ಟಬೇಕು’ ಎಂದರು. ವಾಸಿಸಲು
ಇರುವ ಸ್ವಂತ ಮನೆಯನ್ನು ಸರಿಪಡಿಸಿಕೊಡಿ’ ಅಷ್ಟೇ ಸಾಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next