Advertisement
ಬ್ರುಸೇಲ್ಸ್‌ನಲ್ಲಿ ನಡೆಯುತ್ತಿರುವ ನ್ಯಾಟೋ ಒಕ್ಕೂಟದ ಸಭೆಯಲ್ಲಿ ವರ್ಚುವಲ್ ವ್ಯವಸ್ಥೆಯ ಮೂಲಕ ಭಾಗಿಯಾಗಿ ಮಾತನಾಡಿದ ಅವರು, “”ರಷ್ಯಾವು ಉಕ್ರೇನ್‌ನ ಮೇಲೆ ರಂಜಕದ ಬಾಂಬ್‌ಗಳನ್ನು ಹಾಕಲಾರಂಭಿಸಿದೆ. ಗುರುವಾರ ಬೆಳಗ್ಗೆ ಉಕ್ರೇನ್‌ನ ಲುಹಾನ್‌ಸ್ಕ್ ಪ್ರಾಂತ್ಯದ ಪೂರ್ವ ಭಾಗದಲ್ಲಿ ಇಂಥ ಹಲವಾರು ಬಾಂಬ್‌ಗಳನ್ನು ಎಸೆಯಲಾಗಿದ್ದು, ಇದರಿಂದಾಗಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಸಾವಿಗೀಡಾಗಿದ್ದಾರೆ” ಎಂದು ಝೆಲೆನ್‌ಸ್ಕಿ ಆರೋಪಿಸಿದ್ದಾರೆ.
Related Articles
Advertisement
ಮಿತ್ರ ರಾಷ್ಟ್ರಗಳ ಮೇಲೆ ದಾಳಿ ಸಂಭವ: “”ಉಕ್ರೇನ್ ಬೆಂಬಲಕ್ಕೆ ನಿಂತಿರುವ ಯೂರೋಪ್‌ನ ಇನ್ನಿತರ ದೇಶಗಳ ಮೇಲೆ, ಅದರಲ್ಲೂ ವಿಶೇಷವಾಗಿ ಪೋಲೆಂಡ್ ಮೇಲೆ ರಷ್ಯಾ ದಾಳಿ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ” ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ಶೇ. 50ರಷ್ಟು ಮಕ್ಕಳು ನಿರಾಶ್ರಿತರು: ಉಕ್ರೇನ್‌ನಲ್ಲಿ ಯುದ್ಧ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 43 ಲಕ್ಷ ಮಕ್ಕಳು ಆ ದೇಶವನ್ನು ತೊರೆಯುವಂತಾಗಿದೆ. ಆ ದೇಶದಲ್ಲಿ ಒಟ್ಟು 86 ಲಕ್ಷ ಮಕ್ಕಳಿದ್ದರು.
ಯುದ್ಧ ಶುರುವಾದ ಅನಂತರ ಶೇ. 50ರಷ್ಟು ಮಕ್ಕಳು ತಮ್ಮ ಹೆತ್ತವರೊಡನೆ, ಸಂಬಂಧಿಕರೊಡನೆ ನೆರೆ ದೇಶಗಳಿಗೆ ತೆರಳಿದ್ದಾರೆ ಎಂದು ವಿಶ್ವಸಂಸ್ಥೆಯ ಅಧೀನ ಸಂಸ್ಥೆಯಾದ ಯೂನಿ ಸೆಫ್ ತಿಳಿಸಿದೆ. ಈ ಕುರಿತಂತೆ ಯೂನಿಸೆಫ್ನ ಕಾರ್ಯಕಾರಿ ನಿರ್ದೇಶಕಿ ಕ್ಯಾಥೆರಿನ್ ರಸೆಲ್ ಮಾತನಾಡಿ, “”ಇದು 2ನೇ ಮಹಾಯುದ್ಧದ ನಂತರ ನಡೆದಿರುವ ಅತೀ ದೊಡ್ಡ ಮಕ್ಕಳ ವಲಸೆ” ಎಂದಿದ್ದಾರೆ.
ಯುದ್ಧ ನೌಕೆ ಧ್ವಂಸ :
ರಷ್ಯಾದ ಯುದ್ಧ ನೌಕೆಯೊಂದನ್ನು ಉಕ್ರೇನ್‌ನ ಸೇನೆ ಧ್ವಂಸಗೊಳಿಸಿದೆೆ. ಈ ಘಟನೆ ಉಕ್ರೇನ್‌ನ ಬೆರ್ಡಿಯಾಂನ್‌ಸ್ಕ್ ಬಂದರಿನಲ್ಲಿ ನಡೆದಿದೆ. ಈ ನೌಕೆಯ ಜತೆಗಿದ್ದ ರಷ್ಯಾಕ್ಕೆ ಸೇರಿದ ಇನ್ನೆರಡು ಲಘು ಹಡಗುಗಳನ್ನೂ ಧ್ವಂಸಗೊಳಿಸಿರುವುದಾಗಿ ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಬರ್ಡಿಯಾಂನ್‌ಸ್ಕ್ ಬಂದರು ಮರಿಯುಪೋಲ್ ಬಂದರಿನ ಪಕ್ಕದಲ್ಲೇ ಇದ್ದು, ಉಕ್ರೇನ್ ಮೇಲೆ ದಾಳಿ ಆರಂಭವಾದ ನಾಲ್ಕನೇ ದಿನ ರಷ್ಯಾ ಪಡೆಗಳು ಈ ಬಂದರನ್ನು ವಶಕ್ಕೆ ಪಡೆದುಕೊಂಡಿದ್ದವು.
ರಾಸಾಯನಿಕ ಅಸ್ತ್ರಗಳೆಂದರೇನು? :
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧಕ್ಕೊಳಪಟ್ಟಿರುವ ಶಸ್ತ್ರಾಸ್ತ್ರಗಳನ್ನು ರಷ್ಯಾವು ಉಕ್ರೇನ್ ಮೇಲೆ ಮುಲಾಜಿಲ್ಲದೆ ಬಳಸಲಾರಂಭಿಸಿದೆ. ಗುರುವಾರದಿಂದ ರಾಸಾಯನಿಕ ಅಸ್ತ್ರಗಳಲ್ಲೊಂದಾದ ರಂಜಕದ ಬಾಂಬ್‌ಗಳನ್ನು ಪ್ರಯೋಗಿಸಲಾಗಿದೆ. ರಾಸಾಯನಿಕ ಅಸ್ತ್ರಗಳು ಎಂದರೇನು, ಅವುಗಳ ಪರಿಣಾಮವೇನು ಎಂಬ ಮಾಹಿತಿ ಇಲ್ಲಿದೆ.
ರಾಸಾಯನಿಕ ಅಸ್ತ್ರಗಳೆಂದರೆ… :
ಸೇನೆಗಳು ಬಳಸುವ ಎಲ್ಲ ಶಸ್ತ್ರಗಳಲ್ಲಿ ರಾಸಾಯನಿಕಗಳು ಇದ್ದೇ ಇರುತ್ತವೆ. ಆದರೆ ಪಕ್ಕಾ ರಾಸಾಯನಿಕ ಅಸ್ತ್ರಗಳಲ್ಲಿ ಪೂರ್ಣವಾಗಿ ರಾಸಾಯನಿಕಗಳೇ ತುಂಬಿರುತ್ತವೆ. ಇವುಗಳಲ್ಲಿ ವಿಷಯುಕ್ತ ಅನಿಲ ಅಥವಾ ದ್ರವೀಯ ಪದಾರ್ಥಗಳನ್ನು ಮಿಶ್ರ ಮಾಡಿಲಾಗಿರುತ್ತದೆ. ಇದರಿಂದ ಮನುಷ್ಯರು, ಪ್ರಾಣಿಗಳು, ಸಸ್ಯಗಳೂ ಸಾವನ್ನಪ್ಪುತ್ತವೆ.
ರಂಜಕದ ಬಾಂಬ್‌ನ ದುಷ್ಪರಿಣಾಮ :
ರಂಜಕದ ಬಾಂಬ್‌ಗಳಲ್ಲಿ ಬಿಳಿ ರಂಜಕ ಬಳಸಲಾಗುತ್ತದೆ. ಗಾಳಿ ಸೋಕಿದ ಕೂಡಲೇ ಗಾಳಿಯಲ್ಲಿನ ಆಮ್ಲಜನಕವನ್ನು ತತ್‌ಕ್ಷಣಕ್ಕೆ ಹೀರಿಕೊಂಡು ದಹಿಸಿಹೋಗುವ ಗುಣ ಬಿಳಿ ರಂಜಕದ್ದು. ಈ ಬಾಂಬ್‌ಗಳು ಸಿಡಿದಾಗ ಅದರಿಂದ ಬಿಳಿ ರಂಜಕದ ಕಣಗಳು ವಾತಾವರಣದಲ್ಲಿ ಕ್ಷಣದಲ್ಲಿ ಹರಡುವ ಜತೆಗೆ ಗಾಳಿಯ ಆಮ್ಲಜನಕದಿಂದ ಬೆಂಕಿ ಸೃಷ್ಟಿಸುತ್ತವೆ. ಆಗ 800 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿ ಮನುಷ್ಯರು ಸಾವನ್ನಪ್ಪುತ್ತಾರೆ.
ರಷ್ಯಾ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥೆ ರಾಜೀನಾಮೆ? :
ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಯುದ್ಧವನ್ನು ತೀವ್ರಗೊಳಿಸಿರುವಂತೆಯೇ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಆಂತರಿಕವಾಗಿ ಎದುರಿಸುತ್ತಿರುವ ಒತ್ತಡ ತೀವ್ರಗೊಂಡಿದೆ. ರಷ್ಯಾದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥೆ, ಪುತಿನ್ ಆತ್ಮೀಯರಲ್ಲೊಬ್ಬರೆ ನ್ನಲಾದ ಎಲ್ವಿರಾ ನಬಿಯುಲಿನಾ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ಇದನ್ನು ಪುತಿನ್ ನಿರಾಕರಿಸಿದ್ದಾರೆ ಎನ್ನಲಾಗಿದೆ. ಕಳೆದ ವಾರವಷ್ಟೇ ಹೆಚ್ಚುವರಿ ಐದು ವರ್ಷಗಳ ಅವಧಿಗೆ ಎಲ್ವಿರಾರನ್ನು ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥೆಯಾಗಿ ನೇಮಿಸಲಾಗಿತ್ತು.