Advertisement
ಫ್ರಾನ್ಸ್‌ನಲ್ಲಿ ನಡೆಯುವ ಕಾನ್ ಚಲನಚಿತ್ರೋತ್ಸವಕ್ಕೆ ಹೋಗಿ ಪ್ರಪಂಚದ ಶ್ರೇಷ್ಠ ಸಿನಿಮಾಗಳನ್ನು ಕಣ್ತುಂಬಿಕೊಂಡು, ಜಗತ್ತಿನ ಶ್ರೇಷ್ಠ ಕಲಾವಿದರನ್ನು ಭೇಟಿಯಾಗಿ ಬರಬೇಕೆಂದು ನಾನು ನನ್ನ ಪಯಣದ ಪ್ಲಾನ್ ಅನ್ನು ಮುಂದಿಟ್ಟೆ. “ಅಪ್ಪಾ, ಆಸ್ಟ್ರೇಲಿಯಾಗೆ ಹೋಗಬೇಕಪ್ಪ, ಅಲ್ಲಿ ಡಾಲ್ಫಿನ್ ಮೀನುಗಳು ಇರುತ್ತಂತೆ. ಮಕ್ಕಳ ಜೊತೆ ಆಟವಾಡುತ್ತಂತೆ, ಮಾತಾಡುತ್ತಂತೆ. ಅಲ್ಲಿಗೆ ಹೋಗಿ ಬಂದ ನನ್ನ ಗೆಳತಿ ಹೇಳಿದಳು. ಈ ಸಲ ರಜೆಗೆ ನನ್ನ ಅಲ್ಲಿಗೆ ಕರಕೊಂಡು ಹೋಗಪ್ಪಾ’ ಎಂದು ಮಗಳು ಅವಳ ಪಯಣದ ಪ್ಲಾನ್ ಬಿಚ್ಚಿಟ್ಟಳು.
Related Articles
Advertisement
ಆ ಹೆಣ್ಣು ಮಗು ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಗುಡಿಸಲುಗಳು ಇರುವ ಬಡಾವಣೆ ಇತ್ತು. ಅಲ್ಲಿನ ಗುಡಿಸಲೊಂದರ ಹತ್ತು ವರ್ಷದ ಪುಟ್ಟ ಹುಡುಗನೊಂದಿಗೆ ಆಕೆಯ ಸ್ನೇಹ ಬೆಳೆಯಿತು. ಒಂದು ಸಂಜೆ ಆ ಹುಡುಗನನ್ನು ಮನೆಗೆ ಕರೆ ತಂದಳು ಆ ಹುಡುಗಿ. ಆ ಮನೆಯ ಹೊಸ್ತಿಲೊಳಗೆ ಕಾಲಿಟ್ಟ ಕ್ಷಣದಿಂದ ಆ ಪುಟ್ಟ ಮುಖದಲ್ಲಿ ಮೂಡತೊಡಗಿದ ಅಚ್ಚರಿ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗ್ತಾ ಹೋಯಿತು. ಮನೆಯ ಪ್ರತಿಯೊಂದು ವಸ್ತುವನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದವನಿಗೆ ರಾತ್ರಿ ಗಂಟೆ ಎಂಟಾಯಿತು ಅನ್ನೋ ಹೊತ್ತಿಗೆ “ಅಯ್ಯಯ್ಯೋ, ಇಷ್ಟೊತ್ತಿಗೆ ಅಪ್ಪ ಮನೆಗೆ ಬಂದಿರ್ತಾರೆ. ಇವತ್ತು ಕೈತುತ್ತು ತಿನ್ನೋ ದಿನ. ನಾನು ಇನ್ನೊಂದು ದಿನ ಬರ್ತೀನಿ ಕಣೇ ಎಂದು ಹೊರಟ. ಅವನನ್ನು ತಡೆದ ಆ ಹುಡುಗಿ “ಕೈ ತುತ್ತಾ? ಹಾಗಂದ್ರೇನೋ?’ ಅಂತ ಕೇಳಿದಳು. “ಅದು ಗೊತ್ತಿಲ್ವಾ ನಿನಗೇ? ನಾನು, ಅಪ್ಪ, ಅಮ್ಮ, ತಮ್ಮ ಎಲ್ಲರೂ ಒಟ್ಟಿಗೆ ಕೂತ ಊಟ ಮಾಡ್ತೀವಿ. ಅಮ್ಮ ಎಲಿÅಗೂ ಒಂದೇ ತಟ್ಟೆಯಲ್ಲಿ ಊಟ ಬಡಿಸಿ, ಒಂದೊಂದು ಮುದ್ದೇನ ಕೈಯಲ್ಲಿ ಉಂಡೇ ಮಾಡಿ, ಕತೆ ಹೇಳ್ತಾ ತಿನ್ನಸ್ತಾಳೆ. ನಾವು ತಿಂತೀವಿ. ಅದಕ್ಕೆ ಕೈ ತುತ್ತು ಅಂತಾರೆ. ಸೂಪರಾಗಿರುತ್ತೆ. ಏಕೆ ನೀನು ನಿಮ್ಮಮ್ಮನ ಜೊತೆ ಊಟಾನೇ ಮಾಡಿಲ್ವಾ?’ ಎಂದು ಹೇಳಿ ಓಡಿ ಹೋಗ್ತಾನೆ. ಏನೂ ತೋಚದ ಪುಟ್ಟ. ಹೆಣ್ಣು ಮಗಳು ಇವನ ಮಾತು ಕೇಳಿ ಹತಾಶಳಾಗಿ ನಿಂತುಬಿಟ್ಟಳು.
ಆಗ ಮನೆಯ ಫೋನ್ ರಿಂಗ್ ಆಗುತ್ತದೆ. ಆ ಕಡೆಯಿಂದ ಅಮ್ಮ “ಸಾರಿ ಚಿನ್ನ, ಇವತ್ತು ಕೆಲ್ಸ ಜಾಸ್ತಿ ಇದೆ. ಮಮ್ಮಿ ಬರೋದು ಚೂರು ಲೇಟಾಗ್ತದೆ. ನೀನು ಫ್ರಿಜ್‌ನಲ್ಲಿ ಇಟ್ಟಿರೋ ಊಟ ಮಾಡಿ ಮಲಗಿಕೊಂಡು ಬಿಡೇ..’ ಅಂತಾಳೆ. ಆಕೆಯ ಹತಾಶೆ ಮುಖದಲ್ಲಿ ಮತ್ತೆ ಬೇಸರದ ಮೋಡಗಳು. ಹೇಗೆ ಬದುಕಬೇಕೆಂಬುದರ ಬಗ್ಗೆ ತಿಳಿಹೇಳುವ ಅದ್ಭುತವಾದ ಕಥೆ ಇದು. ನಮ್ಮ ಇಂದಿನ ಯಾಂತ್ರಿಕ, ನಗರೀಕೃತ ಬದುಕಿನಲ್ಲಿ ಎಷ್ಟೋ ಕುಟುಂಬಗಳ ಅರ್ಥಹೀನ ಬದುಕನ್ನು ಸೂಕ್ಷ್ಮವಾಗಿ ಬಿಂಬಿಸುತ್ತದೆ. ಇಂದು ಮನೆ ತುಂಬಾ ವಸ್ತುಗಳನ್ನು ತುಂಬಿಕೊಳ್ಳುತ್ತಾ ಮನುಷ್ಯರೇ ಕಾಣೆಯಾಗಿಬಿಡುತ್ತಿದ್ದಾರೆ. ಜೀವನದ ಅಂಚಿನಲ್ಲಿ ನಿಂತಾಗ ಕಳೆದುಕೊಂಡ ಬದುಕಿಗಾಗಿ ತವಕಿಸುತ್ತಾ ಜೀವಿಸಬೇಕಾಗಿದೆ. ನನ್ನ ತಾಯಿಗೆ ನಾವು ಮೂವರು ಮಕ್ಕಳು. ನಮ್ಮನ್ನು ಬೆಳೆಸಲು ಆಕೆ ಪಟ್ಟ ಕಷ್ಟಗಳನ್ನಾಗಲಿ, ಹೋರಾಟಗಳನ್ನಾಗಲಿ ಎಂದೂ ಅವಳು ನಮ್ಮ ಮುಂದೆ ತೋಡಿಕೊಂಡವಳಲ್ಲ. ಅವಳು ಕೈತುತ್ತು ಮಾಡಿ ತಿನಿಸುತಿದ್ದ ಆ ಮಮತೆಯ ಕ್ಷಣಗಳನ್ನು ನೆನಪು ಮಾಡಿಕೊಂಡಾಗೆಲ್ಲಾ ಈಗಲೂ ಕಣ್ಣು ತೇವವಾಗುತ್ತದೆ, ಕಂಠ ಗದ್ಗದಿತವಾಗುತ್ತದೆ. ಹೇಗೆ ಊಟ ಮಾಡಬೇಕು ಅಂತ ಕಲಿಸಿಕೊಟ್ಟಳು. ಎಷ್ಟೇ ಕಷ್ಟಗಳಿದ್ದರೂ ಊಟ ಮಾಡುವಾಗ ಅದನ್ನು ತಲೆಗೆ ತಂದುಕೊಳ್ಳದೇ, ಊಟದ ಕಡೆ ಮಾತ್ರ ಗಮನ ಕೊಡಬೇಕು. ರುಚಿಯನ್ನು ಅನುಭವಿಸುತ್ತಾ ರಸಿಕನಂತೆ ಊಟ ಮಾಡಬೇಕು ಅಂತ ಹೇಳುತ್ತಿದ್ದಳು. ಆಕೆ ನರ್ಸ್ ಆದ್ದರಿಂದ ಊಟದ ಬಗ್ಗೆ ವಿಶಿಷ್ಟವಾದ ಗಮನವಿರುತ್ತಿತ್ತು. ಪ್ರೋಟಿನ್, ವಿಟಮಿನ್, ಕ್ಯಾಲಿÒಯಂ ಅಂತ ಪ್ರತಿಯೊಂದು ಸೊಪ್ಪು, ತರಕಾರಿ, ಬೇಳೆಗಳ ಪ್ರಾಮುಖ್ಯತೆಯನ್ನು ಹೇಳುತ್ತಾ ತಿನಿಸುತ್ತಿದ್ದಳು. ಊಟ ಬಡಿಸುವುದು, ಉಣಿಸುವುದು ಕಲೆ ಅನ್ನೋದನ್ನು ಚಿಕ್ಕವಯಸ್ಸಲ್ಲೇ ಅರ್ಥ ಮಾಡಿಕೊಂಡದ್ದು ಅಮ್ಮನಿಂದಲೇ. ಈಗಲೂ ನನಗೆ ಸಾಧ್ಯವಾದಾಗಲೆಲ್ಲ ನನ್ನ ಮಕ್ಕಳಿಗೂ ಕೈತುತ್ತು ಮಾಡಿ ತಿನ್ನಿಸುತ್ತೇನೆ. ಹಾಗೇ ಅವರಿಗೆ ಕಥೆ ಹೇಳ್ಳೋ ಅವಕಾಶವೂ ಸಿಗುತ್ತದೆ.
ನನ್ನ ಮಗ ಸಿದ್ಧಾರ್ಥನಿಗೆ (ಈಗ ಅವನಿಲ್ಲ) ಕೈತುತ್ತು ಹಾಕುತ್ತಾ ಕಥೆ ಹೇಳುವುದು ದೊಡ್ಡ ಸಾಹಸವೇ ಆಗಿರುತ್ತಿತ್ತು. ನಾನು ಯಾವ ಕಥೆಯನ್ನು ಆರಂಭಿಸಿದರೂ ಅವನು ಅದನ್ನು ಪೂರ್ತಿ ಗೊಳಿಸುತ್ತಿದ್ದ. ಒಂದಾನೊಂದು ಊರಿನಲ್ಲಿ ಡಾಲ್ಫಿನ್ ಮೀನಿತ್ತು ಅಂತ ಆರಂಭಿಸಿದರೆ ಅವನು, ಆ ಡಾಲ್ಫಿನ್ ಮೀನಿಗೆ ತನ್ನ ಪ್ರೀತಿಯ ಹೆಸರಿಟ್ಟು, ಹಲವು ಬಣ್ಣಗಳನ್ನು ಹಚ್ಚಿ, ಅದನ್ನು ಮನೆಯ ಅಂಗಳಕ್ಕೆ ಕರೆತಂದು, ಅದರೊಡನೆ ಆಟವಾಡಿ, ಅದಕ್ಕೆ ಊಟ ತಿನ್ನಿಸಿ, ಮತ್ತೆ ಸಮುದ್ರದ ಆಳದಲ್ಲಿದ್ದ ಅದರ ಮನೆಗೆ ಬೀಳ್ಕೊಡವವರೆಗೆ ಕಥೆಯನ್ನು ಪೂರ್ತಿ ಮಾಡಿ ಮುಗಿಸುತ್ತಿದ್ದ.
ನಾವು ನಮ್ಮ ಮಕ್ಕಳಿಗಾಗಿ ಪ್ರತಿಕ್ಷಣ ತೆಗೆದುಕೊಳ್ಳುವ ಅಕ್ಕರೆ ಅವರ ಬುದುಕಿನಲ್ಲಿ ನಾವು ಮಾಡುವ ಒಳಿತಿಗಿಂತ, ಅವರು ನಮ್ಮ ಬದುಕನ್ನು ಹೆಚ್ಚು ಅರ್ಥಪೂರ್ಣಗೊಳಿಸುತ್ತಾರೆ. ಹೇಗೆ ಸಂಪಾದಿಸಬೇಕು ಅಂತ ನನ್ನ ಅಮ್ಮ ಹೇಳಿಕೊಡಲೇ ಇಲ್ಲ. ಬದಲಾಗಿ ಹೇಗೆ ನಾವು ಬದುಕುವ ಪ್ರತಿಕ್ಷಣವನ್ನೂ ಅರ್ಥಪೂರ್ಣವಾಗಿ, ಸಂತೋಷವಾಗಿ ಜೀವಿಸಬೇಕು ಅನ್ನೋದನ್ನು ಹೇಳಿಕೊಟ್ಟಳು. ನಮ್ಮ ಜೀವನದ ಪಯಣದಲ್ಲಿ ನಮಗೆ ಅಮ್ಮನೋ, ಅಪ್ಪನೋ, ಪ್ರಿಯಕರನೋ, ಪ್ರಿಯತಮೆಯೋ, ಗೆಳೆಯರೋ, ಅಪರಿಚಿತರೋ ಹೀಗೆ ಯಾರೋ ಒಬ್ಬರು ಹೇಗೆ ಬದುಕಬೇಕೆಂದು ಅವರು ತಮ್ಮ ಬದುಕಿನ ಮೂಲಕ ಹೇಳಿಕೊಟ್ಟರೆ ಆ ಜೀವನ ನಿಜಕ್ಕೂ ನಮಗೆ ಸಿಕ್ಕ ಒಂದು ವರವೇ ಅಲ್ಲವೇ?
ನಾವು ಜೀವಿಸುವ ಇಂದಿನ ಕ್ಷಣವನ್ನು ಕಳೆದುಕೊಳ್ಳಬಾರದು ಅನ್ನೋ ಮನಃಸ್ಥಿತಿ ಇರುವವರೆಲ್ಲಾ ಜ್ಞಾನಿಗಳೇ. ಸಾವಿನ ಹೊಸ್ತಿಲಲ್ಲಿ ನಿಂತಾಗ ಅಯ್ಯೋ, ನಾವು ನಮ್ಮಬದುಕನ್ನು ಬದುಕಲೇ ಇಲ್ಲ ಎಂದು ಅಳುವುದಕ್ಕಿಂತ ಯಾವ ಕ್ಷಣದಲ್ಲೂ ಯಮ ನಮ್ಮನ್ನು ಅರಸಿ ಬಂದರೆ – ಬಹಳ ದೂರದಿಂದ ಬಂದಿದ್ದೀರಿ. ತಂಪಾಗಿ ಏನಾದ್ರೂ ಕುಡೀತೀರ ಎಂದು ಕೇಳುವ ಪಕ್ವತೆಯನ್ನು ಬೆಳೆಸಿಕೊಂಡಿರಬೇಕು. ಈ ಪ್ರಂಚದಲ್ಲಿ ಬದುಕದ ಮನುಷ್ಯರು ಬಹಳಷ್ಟು ಜನ ಇದ್ದಾರೆ. ಒಂದು ಸ್ವಲ್ಪ ಆಲಸ್ಯವಾದರೂ, ಮೋಸ ಹೋದರೂ ಆ ಪಟ್ಟಿಯಲ್ಲಿ ನಾನು, ನೀವು ಯಾರು ಬೇಕಾದರೂ ಸೇರಿಬಿಡಬಹುದು. ಅದಕ್ಕೆ ಹೇಳ್ತಿದ್ದೀನಿ. ಈ ನಿಮಿಷ ನಮ್ಮದು ಬದುಕಿ ಬಿಡೋಣ… ಏನಂತೀರಿ? ಪ್ರಕಾಶ್ ರೈ