ಅಪ್ಪಾ ಅಮ್ಮ ವಾಪಾಸ್ ಬರೋದ್ರೊಳಗಾಗಿ ನಾನು ಟ್ರ್ಯಾಕ್ಟರ್ ಓಡಿಸುವುದನ್ನು ಕಲಿಯಲೇ ಬೇಕು ಅಂದುಕೊಂಡು, ಹಗಲೂ-ರಾತ್ರಿ ಕಲ್ಲು-ಮಣ್ಣು-ಮರಳೂ ಹೊತ್ತೆ. ವಾರಕ್ಕೆರಡು ಬಾರಿ ಮಿರ ಮಿರ ಮಿಂಚುವ ಹಾಗೆ ಟ್ರ್ಯಾಕ್ಟರ್ ತೊಳೆಯುವುದನ್ನು ಕಲಿತೆ. ಆದರೆ ಆ ಪುಣ್ಯಾತ್ಮ ಮೂರು ತಿಂಗಳು ಕಳೆದರೂ ನನಗೆ ಸ್ಟೇರಿಂಗ್ ಮಾತ್ರ ಮುಟ್ಟಿಸಲಿಲ್ಲ.
ತನಗಿಷ್ಟವಾದ ವ್ಯಕ್ತಿಯನ್ನು ಆರಾಧಿಸುವ, ಹೀರೋ ಅಂತ ತಿಳಿಯುವ, ಮುಂದೆ ಏನಾದರೂ ಆಗೋದಾದ್ರೆ ಅವರಂತೆ ಆಗಬೇಕು ಅನ್ನುವಂಥ ಕನಸು ಕಾಣುವುದು ನನಗೆ ಚಿಕ್ಕವಯಸ್ಸಿನಿಂದಲೂ ಇರುವ ರೂಢಿ. ನಾನಾಗ ಓದುತ್ತಿದ್ದದ್ದು ಪ್ರಥಮ ಪಿಯುಸಿ. ನಾನು ಇಷ್ಟ ಪಡುತ್ತಿದ್ದ ವ್ಯಕ್ತಿಗಳೆಂದರೆ, ನಮ್ಮೂರಿನ ಟ್ರ್ಯಾಕ್ಟರ್ ಡ್ರೈವರ್‌ಗಳು. ಅವರೊಂಥರ ನನ್ನ ಬದುಕಿನ ರೋಲ್ ಮಾಡೆಲ್‌ಗಳೇ ಆಗಿ ಹೋಗಿದ್ದರು.
ಇದಕ್ಕೆ ಕಾರಣವೂ ಉಂಟು. ಯಾವುದೇ ಶುಭ-ಸಮಾರಂಭಗಳಿಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋದರೆ. ಅವರಿಗೆ ಮೊದಲ ಪಂಕ್ತಿಯ ಭೋಜನ ಹಾಕುತ್ತಿದ್ದರು. ಬೇಡ ಬೇಡವೆಂದರೂ ಅವರಿಗೊಂದು ಚಾಪೆ ಹಾಕಿ, ಕೂತ್ಕೊಳೀ, ಕೂತ್ಕೊಳೀ ಅಂತ ಅಪರೂಪದ ಅತಿಥಿಗಳಿಗೆ ತೋರುವ ಗೌರವವನ್ನು ನಮಗೂ ನೀಡುತ್ತಿದ್ದರು. ಹಾಗಾಗಿ, ಎಂಥ ಒಳ್ಳೆ ಪ್ರೊಫೆಷನ್ ಇದು ಅಂತ ನಂಬಿ, ಡ್ರೈವರ್‌ಗಳೆಲ್ಲ ನನ್ನ ಪಾಲಿನ ಹೀರೋಗಳೇ ಆಗಿಬಿಟ್ಟಿದ್ದರು! ಈ ರೀತಿ ಸಮಾಜದಲ್ಲಿ ಅವರಿಗೆ ಸಿಗುವ ಗೌರವ ಕಂಡು ನಾನು ಡ್ರೈವರ್ ಆಗಲೇಬೇಕೆಂದು ನಿರ್ಧರಿಸಿಬಿಟ್ಟಿದ್ದೆ. ಆದರೆ, ಮನೆಯಲ್ಲಿ ಇದಕ್ಕೆ ಇಷ್ಟವಿರಲಿಲ್ಲ. ಆದರೂ, ನಾನೂ ಮುಂದೆ ಡ್ರೈವರ್ ಆಗುವುದು ಹೇಗೆ? ಅನ್ನೋ ಮಾರ್ಗವನ್ನು ಹುಡುಕುತ್ತಿರುವಾಗಲೇ… ನನ್ನ ತಂದೆ-ತಾಯಿ, ನನ್ನನ್ನ ಅಜ್ಜನ ಮನೆಯಲ್ಲಿ ಬಿಟ್ಟು, ಅವರು ಅನ್ಯ ಕೆಲಸದ ನಿಮಿತ್ತ ಸುಮಾರು ಆರು ತಿಂಗಳುಗಳ ಕಾಲ ಬೇರೆ ಊರಿಗೆ ಹೋಗಿದ್ದರು. ಅವರು ಅತ್ತ ಹೋದ ಎರಡೇ ದಿನಗಳಲ್ಲಿ ಕಾಲೇಜಿಗೆ ಗುಡ್ ಬೈ ಹೇಳಿ, ಗೊತ್ತಿರುವ ಟ್ರ್ಯಾಕ್ಟರ್ ಡ್ರೈವರ್‌ರೊಬ್ಬರ ಬಳಿ ಹೋಗಿ ನನ್ನ ಆಸೆ ತಿಳಿಸಿದೆ. ಅವನು, “ನನ್ನ ಜೊತೆ ಒಂದು ವರ್ಷ ಇರು, ನೀನು ಪಕ್ಕಾ ಡ್ರೈವರ್ ಆಗಿ ಬಿಡ್ತೀಯಾ’ ಎಂದ. ಅಪ್ಪಾ ಅಮ್ಮ ವಾಪಾಸ್ ಬರೋದ್ರೋಳಗಾಗಿ ನಾನು ಟ್ರ್ಯಾಕ್ಟರ್ ಓಡಿಸುವುದನ್ನು ಕಲಿಯಲೇಬೇಕು ಅಂದುಕೊಂಡು, ಹಗಲೂ-ರಾತ್ರಿ ಕಲ್ಲು-ಮಣ್ಣು-ಮರಳೂ ಹೊತ್ತೆ. ವಾರಕ್ಕೆರಡು ಬಾರಿ ಮಿರ ಮಿರ ಮಿಂಚುವ ಹಾಗೆ ಟ್ರ್ಯಾಕ್ಟರ್ ತೊಳೆಯುವುದನ್ನು ಕಲಿತೆ. ಆದರೆ ಆ ಪುಣ್ಯಾತ್ಮ ಮೂರು ತಿಂಗಳು ಕಳೆದರೂ ನನಗೆ ಸ್ಟೇರಿಂಗ್ ಮಾತ್ರ ಮುಟ್ಟಿಸಲಿಲ್ಲ. ಅದನ್ನು ಹೊರತಾಗಿ, ನಿನ್ನ ಡ್ರೈವರ್ ಮಾಡ್ತೀನಿ ಅಂತ ಹೇಳಿ, ಹೇಳಿ ಮಿಕ್ಕ ಕೆಲಸಗಳನ್ನೆಲ್ಲಾ ಮಾಡಿಸಿಕೊಳ್ಳುತ್ತಿದ್ದ.
ಈ ಟ್ರ್ಯಾಕ್ಟರ್‌ಗೆ ಡ್ರೈವರ್ ಆಗುವ ಹುಚ್ಚು ತಲೆ ತುಂಬಾ ತುಂಬಿಕೊಂಡಿದ್ದರಿಂದ, ನಾನು ಕಾಲೇಜಿಗೂ ಹೋಗುತ್ತಿರಲಿಲ್ಲ. ಹೀಗೆ, ನಾನು ಕಾಲೇಜ್ ತಪ್ಪಿಸಿಕೊಂಡು ಅಲೆಯುವುದು ನನ್ನ ಅಪ್ಪನಿಗೆ ಅದು ಹೇಗೋ ಗೊತ್ತಾಗಿತ್ತು. ವಿಷಯ ತಿಳಿದು ಊರಿಂದ ಬಂದವರೇ, ಬಾರುಕೋಲಿನಿಂದ ನನ್ನನ್ನು ದನಕ್ಕೆ ಬಡಿದ ಹಾಗೆ ಬಡಿದರು. ನಾನು ಅಂದುಕೊಂಡಿದ್ದು ನೆರವೇರದಿದ್ದಕ್ಕೋ ಅಥವಾ ಬಾರಿಕೋಲಿನ ಏಟಿಗೋ ಅವತ್ತು ಊಟ ಮಾಡಬೇಕು ಅನ್ನಿಸಲೇ ಇಲ್ಲ. ತುಂಬಾ ಅತ್ತೆ. ಅಮ್ಮ ಸಹ ತಮ್ಮ ಕಷ್ಟಗಳನ್ನ ಹೇಳುತ್ತಾ ಕಣ್ಣೀರು ಹಾಕಿದರು. ಅವತ್ತೇ ನಾನು ಡ್ರೈವರ್ ಆಗುವ ಕನಸು ಕರಗಿಹೋಯಿತು.
ಮಾರನೇ ದಿನ ಬ್ಯಾಗ್ ಹೆಗಲಿಗೇರಿಸಿ ಅಳತೊಡಗಿದೆ. ಅಮ್ಮ, “ನೂರು ರೂಪಾಯಿ ಬೇಕಾ ?’ಎಂದರು. ಬೇಡ ಅಂದೆ. “ಮತ್ತೆ ಏಕೆ ಅಳ್ತಾ ಇದ್ದೀಯ?’ ಅಂದರು. “ಇಷ್ಟು ದಿನ ಕಾಲೇಜಿಗೆ ಹೋಗದೇ ಇರೋದಕ್ಕೆ ಪ್ರಿನ್ಸಿಪಾಲರು ಬೈತಾರೆ’ ಎಂದೆ. ನನ್ನನ್ನು ಬಿಡಲು ಅಪ್ಪನ ಜೊತೆಗೆ ಬಂದರು. ಪ್ರಿನ್ಸಿಪಾಲರು ಅಪ್ಪಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು. ಬೈಸಿಕೊಂಡು ಅವರು ಕಣ್ಣೀರಾಕುತ್ತಾ ಹೋದರು. ಬಾರುಕೋಲಿನ ಏಟು ಮತ್ತು ಕಾಲೇಜಿನಲ್ಲಿ ಅಪ್ಪನಿಗಾದ ಅವಮಾನ ನೆನಸಿಕೊಂಡು ನಾನು ಬೆಂದು ಹೋದೆ.
ಇನ್ನು ಮುಂದೆ ಎಂದಿಗೂ ಕಾಲೇಜ್ ತಪ್ಪಿಸಬಾರದು ಅಂದುಕೊಂಡು ಕಷ್ಟಪಟ್ಟು ಓದಿದೆ. ಆವತ್ತು ಬಿಸಿಲಲ್ಲಿ ಬೇಯಬೇಕಿದ್ದ ನಾನು, ಅಪ್ಪನ ಸಮಯಪ್ರಜ್ಞೆ ಮತ್ತು ನನ್ನ ಕಠಿಣ ಪರಿಶ್ರಮದಿಂದಾಗಿ ಇಂದು ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
ಪರ್‌ಫೆಕ್ಟ್ ಪ್ರೊಫೆಷನ್‌ಗೆ ಸೇರಿಸಿದ ನನ್ನ ಹೆತ್ತವರಿಗೆ ಧನ್ಯವಾದಗಳು.
ವೀರೇಶ್ ಮಾಡ್ಲಾಕನಹಳ್ಳಿ