Advertisement

ಕುಡಿತ ಬಿಡಲು ಇದಕ್ಕಿಂತ ಒಳ್ಳೆಯ ಟೈಮುಂಟೇ?

12:54 PM Apr 14, 2020 | mahesh |

ಹೆಸರು ಬೇಡ, ಕನಕಪುರ
ನಾನು ಮದ್ಯವ್ಯಸನಿ. 40 ವರ್ಷ. ಲಾಕ್‌ಡೌನ್‌ನಿಂದಾಗಿ, ಮದ್ಯ ಸಿಗದ ಕಾರಣ ತುಂಬಾ ತಳಮಳ ಅನುಭವಿಸುತ್ತಿದ್ದೇನೆ. ಯಾರೇ ಮಾತನಾಡಿಸಿದರೂ ಸಿಟ್ಟು ಬರುತ್ತೆ. ಕೈ ನಡುಕ, ತಲೆನೋವಿದೆ. ಏನೋ ಖನ್ನತೆ. ಊಟ ಸೇರದಂತಾಗಿದೆ. ಈ ಸಮಸ್ಯೆಗಳಿಂದ ಮುಕ್ತನಾಗಿ, ಅಲ್ಕೋಹಾಲ್‌ ಅನ್ನೂ ಬಿಡುವಂತಾಗಬೇಕು. ದಾರಿ ಏನು?

Advertisement

ವೆರಿಗುಡ್‌, ಕುಡಿತ ಬಿಡುವ ನಿಮ್ಮ ನಿರ್ಧಾರ ಬಹಳ ಒಳ್ಳೇದು. ಆದರೆ, ತತ್‌ಕ್ಷಣ ಕುಡಿತ ನಿಲ್ಲಿಸಿದಾಗ ಇಂಥ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಸಹಜ. ಎದೆಬಡಿತ ಹೆಚ್ಚಾಗೋದು, ಕೈ ನಡುಕ, ನಿದ್ರಾಹೀನತೆ, ಬೆವರೋದು, ಕೆಟ್ಟ ಕನಸು ಬರೋದು, ತಲೆ ಸುತ್ತುವುದು… ಇಂಥ ಹತ್ತು ಹಲವು ಸಮಸ್ಯೆಗಳು ವ್ಯಸನಿಗಳನ್ನು ಕಾಡಬಹುದು. ಅಷ್ಟೇ ಭಯ, ಖನ್ನತೆ, ನಡುಕ ಸನ್ನಿ, ಭ್ರಮೆ… ಎಲ್ಲವೂ ಇದರಿಂದಲೇ ಹುಟ್ಟಿಕೊಳ್ಳುವ ಸಮಸ್ಯೆಗಳು. ಹೆದರಬೇಡಿ. ಸಮೀಪದ ವೈದ್ಯರನ್ನು ಭೇಟಿಯಾಗಿ. ಕುಡಿವ ಚಟವಿರುವ ಬಗ್ಗೆ ವಿವರಿಸಿ, ಅಗತ್ಯ ಔಷಧಿ, ಮಾತ್ರೆಗಳನ್ನು ನೀಡುತ್ತಾರೆ. ತಲೆಸುತ್ತುತ್ತಿದೆ ಎಂದಾಗ ವ್ಯಕ್ತಿಯ ರಕ್ತದೊತ್ತಡದ ಹಿಸ್ಟರಿ ಆಧರಿಸಿ, ಉಪ್ಪು ಅಥವಾ ಸಕ್ಕರೆ ಮಿಶ್ರಿತ ನೀರು ಕೊಡಬೇಕಾಗುತ್ತದೆ. ಇಂಥವರು ನೀರು ಹೆಚ್ಚು ಕುಡಿಯುತ್ತಿರಬೇಕು. ಅಗತ್ಯ ಬಿದ್ದರೆ ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್‌ ಪಡೆಯಬೇಕು. ಆದರೆ, ಕುಡಿತದ ಉದ್ದೇಶ ಇಟ್ಟುಕೊಂಡು ಮನೆಯಿಂದ ಆಚೆಗೆ ಬರಬೇಡಿ.
●ಡಾ. ಸದಾನಂದ್‌ ರಾವ್‌, ಕ್ಲಿನಿಕಲ್‌ ಸೈಕಾಲಜಿಸ್ಟ್

ಕಾವೇರಿ ಟಿ.ಎಸ್‌., ಹುಣಸೂರು
ಅಸ್ತಮಾದ ಕೆಮ್ಮಿಗೂ, ಕೊರೊನಾದ ಕೆಮ್ಮಿಗೂ ಇರುವ ವ್ಯತ್ಯಾಸವೇನು?
ಇದನ್ನು ರೋಗಿಯ ರೋಗದ ಹಿಸ್ಟರಿಯಿಂದಲೇ ಪತ್ತೆ ಹಚ್ಚಬಹುದು. ಅಸ್ತಮಾದವರಿಗೆ ಕೆಮ್ಮು ಎನ್ನುವಂಥದ್ದು, ಸುದೀರ್ಘ‌ ವರ್ಷಗಳಿಂದ ಜತೆಯಾಗಿರುತ್ತದೆ. ತಂಪು ಹವೆ ಇದ್ದಾಗ ಉಸಿರಾಟದ ಸಮಸ್ಯೆಯೂ ಇರುತ್ತದೆ. ಆದರೆ, ಅಸ್ತಮಾದ ಕೆಮ್ಮಿನ ಜೊತೆಗೆ ಜ್ವರ ಇರುವುದಿಲ್ಲ. ಅದೇ ಕೊರೊನಾದಲ್ಲಿ ಕೆಮ್ಮು, ಜ್ವರ ಅಣ್ಣ- ತಮ್ಮಂದಿರು ಇದ್ದಂತೆ. ಜೊತೆಜೊತೆಯಲ್ಲಿ ಉಲ್ಬಣಗೊಳ್ಳುತ್ತವೆ. ಉಸಿರಾಟದ ಸಮಸ್ಯೆಯೂ ಇರುತ್ತದೆ. ಅಸ್ತಮಾಪೀಡಿತರು ಕೆಮ್ಮುವಾಗ, ಅದರ ಬೆನ್ನಲ್ಲೇ ಸೀನುವುದಿಲ್ಲ. ಕೊರೊನಾದಲ್ಲಿ ಕೆಮ್ಮು- ಸೀನು, ಒಂದಾದ ಮೇಲೆ ಒಂದರಂತೆ ಇರುತ್ತದೆ. ಮೂಗಿನಿಂದ ದ್ರವ ಸೋರುವಿಕೆ ಇರುತ್ತದೆ. ಹೀಗಾಗಿ, ಈ ವೇಳೆ ಅಸ್ತಮಾ ರೋಗಿಗಳು ಅನಗತ್ಯ ಭಯ ಪಡುವುದು ಬೇಡ. ಹೊರಗೆ ಓಡಾಡದೆ, ಮನೆಯಲ್ಲಿರುವುದೇ ಕ್ಷೇಮ.
●ಡಾ. ಗಿರಿಧರ ಕಜೆ, ಆಯುರ್ವೇದ ತಜ್ಞ

ಸುಭಾಷ್‌ಚಂದ್ರ, ಬೆಂಗಳೂರು
ಶಿಗ್ಗಾಂವ್‌ನಲ್ಲಿರುವ ನನ್ನ ತಂದೆಗೆ ಹೃದಯ ಶಸ್ತ್ರಚಿಕಿತ್ಸೆ ಆಗಬೇಕಿದೆ. ಏ.17ರಂದು ನಾನು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆತರಬೇಕಿದೆ. ಸದ್ಯ ನಾನು ಬೆಂಗಳೂರಿನಲ್ಲಿದ್ದೇನೆ. ನನಗೆ ಈಗ ದಾರಿಗಳು ಹೊಳೆಯುತ್ತಿಲ್ಲ. ಏನುಮಾಡಲಿ?

ನೀವು ಕೂಡಲೇ ಸಂಬಂಧಿಸಿದ ವೈದ್ಯರನ್ನು ಸಂಪರ್ಕಿಸಿ, ಏ.17ರಂದೇ ಶಸ್ತ್ರಚಿಕಿತ್ಸೆ ಮಾಡುತ್ತಾರೆಯೋ ಇಲ್ಲವೇ ಅದನ್ನು ಮುಂದೂಡಬಹುದೋ ಎಂದು ವಿಚಾರಿಸಿ. ಒಂದು ವೇಳೆ ಮುಂದೂಡಲು ಸಾಧ್ಯವಾಗದೇ ಹೋದರೆ ನಿಮ್ಮ ತಂದೆಯವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲು ಹಾವೇರಿ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ಸಂಬಂಧಪಟ್ಟ ವೈದ್ಯಕೀಯ ದಾಖಲೆಗಳನ್ನು ತೋರಿಸಿ, ಆಂಬುಲೆನ್ಸ್‌ನಲ್ಲಿ ಶಿಗ್ಗಾಂವ್‌ನಿಂದ ಬೆಂಗಳೂರಿಗೆ ಕರೆದುಕೊಂಡು ಬರಬಹುದಾಗಿದೆ.
ಡಾ. ಡಿ.ವಿ. ಗುರುಪ್ರಸಾದ್‌, ನಿವೃತ್ತ ಡಿಜಿಪಿ

Advertisement

ಸಿದ್ದಪ್ಪ ಹಲವಾರ್‌, ಮುಧೋಳ
ನನ್ನದು ಬಜಾಜ್‌ ಫೈನಾನ್ಸ್‌ನಲ್ಲಿ ಲೋನ್‌ ಇದೆ. ಪ್ರತಿ ತಿಂಗಳು 2ನೇ ಮತ್ತು 5ನೇ ತಾರೀಖೀನಂದು ಇಎಂಐ ಕಟ್ಟಲು ಬರುತ್ತಿತ್ತು. ಫೈನಾನ್ಸ್‌ ಬಜಾಜ್‌ನವರಿಂದ ಪ್ರತಿದಿನ ಮೆಸೇಜ್‌ ಮತ್ತು ಫೋನು ಬರುತ್ತಿದೆ. “ನೀವು ಪೆನಾಲ್ಟಿ ಇಂಟೆರೆಸ್ಟ್ ಕಟ್ಟಬೇಕಾಗುತ್ತೆ. ಚೆಕ್‌ ಬೌನ್ಸ್ ಆಗಿದೆ’ ಅಂತ ದಿನಾ ಫೋನ್‌ ಮಾಡ್ತಿದ್ದಾರೆ. ಇಎಂಐ ವಿನಾಯ್ತಿ ಆದೇಶ ಇದ್ದಾಗ್ಯೂ ಈ ರೀತಿಯ ಒತ್ತಡ ತರುವುದು ಸರಿಯೇ?

ಭಾರತೀಯ ರಿಸರ್ವ್‌ ಬ್ಯಾಂಕ್‌ ಎಲ್ಲಾ ಹಣಕಾಸು ಸಂಸ್ಥೆಗಳೂ ಮಾರ್ಚ್‌ 1, 2020ರಿಂದ ಮೇ 31, 2020ರ ವರೆಗೆ ಯಾವುದೇ ರೀತಿಯ ಕಂತುಗಳನ್ನು ಕಟ್ಟುವಂತೆ ಯಾವುದೇ ಗ್ರಾಹಕನನ್ನು ಒತ್ತಾಯ ಮಾಡುವಂತಿಲ್ಲ ಎಂದು ಆದೇಶ ನೀಡಿದೆ. ಇದು ಕೇಂದ್ರ ಸರ್ಕಾರದ ಫೈನಾನ್ಸ್ ಮಿನಿಸ್ಟ್ರಿಯಿಂದ ಒಪ್ಪಿಗೆ ಪಡೆದು ಹೊರಡಿಸಿದ ಆದೇಶ. ಇದು ರಾಷ್ಟ್ರೀಕೃತ ಬ್ಯಾಂಕ್‌ಗಳ ಜೊತೆಗೆ ಎಲ್ಲಾ ಬ್ಯಾಂಕುಗಳಿಗೂ ಮತ್ತು ಯಾವುದೇ ರೀತಿಯ ಸಾಲ ಕೊಟ್ಟ ಸಂಸ್ಥೆಗಳಿಗೂ
ಅನ್ವಯಿಸುತ್ತದೆ. ಹೀಗಾಗಿ, ಬಜಾಜ್‌ ಫೈನಾನ್ಸಿಂಗ್‌ನವರು ಚೆಕ್‌ಬೌನ್ಸ್ ಆಗಿದೆ, ಕಂತು ಕಟ್ಟಿ ಎಂದು ದೂರವಾಣಿ ಕರೆಮಾಡಿ ಹಿಂಸೆ ಮಾಡುವಂತಿಲ್ಲ. ಮತ್ತೂಮ್ಮೆ ಕರೆ ಬಂದಾಗ ಈ ವಿವರಣೆಯನ್ನು ಹೇಳಿ, ಕರೆ ಮಾಡದಂತೆ ವಿನಂತಿಸಿಕೊಳ್ಳಿ. ಕರೆ ಪುನರಾವರ್ತನೆ ಆದರೆ ಈ ಕುರಿತು ನೀವು ಗ್ರಾಹಕರ ವೇದಿಕೆಯಲ್ಲಿ ಕೇಸ್‌ ದಾಖಲಿಸಬಹುದು. ಉಳಿದಂತೆ ಬಡ್ಡಿ ನಿಮ್ಮ ಅಸಲಿಗೆ ಸೇರಿಸುತ್ತಾರೆ ಮತ್ತು ಅದರ ಮೇಲೂ ಬಡ್ಡಿ ಹಾಕಲಾಗುತ್ತದೆ. ಅದು ನಿಜ. ಕೇಂದ್ರ ಸರ್ಕಾರ ಕೇವಲ ಸಮಯಾವಕಾಶ ಮಾಡಿಕೊಟ್ಟಿದೆ ಹೊರತು ಬಡ್ಡಿ ಅಥವಾ ಅಸಲನ್ನು ಮನ್ನಾ ಮಾಡಿಲ್ಲ.
ರಂಗಸ್ವಾಮಿ ಮೂಕನಹಳ್ಳಿ, ಆರ್ಥಿಕ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next