ಬೀದರ: ಪ್ರತಿವರ್ಷ ಎಸ್‌ಎಸ್‌ಎಲ್‌ಸಿ, ಪಿಯು ಫಲಿತಾಂಶದಲ್ಲಿ ಹಿಂದುಳಿಯುವ ಗಡಿ ಜಿಲ್ಲೆ ಬೀದರ್ ಈ ಬಾರಿಯೂ ಶೈಕ್ಷಣಿಕ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ಕಾಡುತ್ತಿದೆ. ಸರ್ಕಾರ ಶೈಕ್ಷಣಿಕ ಸುಧಾರಣೆಗೆ ವಿವಿಧ ಯೋಜನೆ ರೂಪಿಸುತ್ತಿದೆ. ಆದರೆ, ಅನುಷ್ಠಾನಗೊಳಿಸಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಹುದ್ದೆ ಮಾತ್ರ ಪ್ರಭಾರಿಯಾಗಿಯೇ ಉಳಿದಿದ್ದು, ಯಾವೊಬ್ಬ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಚಕಾರ ಎತ್ತಿಲ್ಲ. ಪೂರ್ಣಾವಧಿಯ ಅಧಿಕಾರಿ ಇಲ್ಲದ ಕಾರಣ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆ ಆಗುತ್ತಿಲ್ಲ ಎಂಬ ಮಾತುಗಳು ಮೇಲಿಂದ ಮೇಲೆ ಕೇಳಿಬರುತ್ತಿವೆ. ಫಲಿತಾಂಶ ಬಂದ ಕೆಲ ದಿನಗಳ ಮಟ್ಟಿಗೆ ಈ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡುವ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಆ ನಂತರ ಮೌನಕ್ಕೆ ಶರಣಾಗುವುದು ಜಿಲ್ಲೆಯಲ್ಲಿ ಅನುಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ.
ಪ್ರಸಕ್ತ ವರ್ಷದಲ್ಲಿ ಹೆಚ್ಚಾಗಿ ಪ್ರಭಾರಿ ಉಪ ನಿರ್ದೇಶಕರಿಂದ ಶಿಕ್ಷಣ ಇಲಾಖೆಯ ಕೆಲಸಗಳು ನಡೆಯುತ್ತಿವೆ. ಈ ಮಧ್ಯದಲ್ಲಿ ಕೆಲ ದಿನಗಳ ಕಾಲ ಉಮೇಶ ಶಿರಹಟ್ಟಿ ಮಠ ಅವರು ಪೂರ್ಣ ಅವಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನಂತರ ಸರ್ಕಾರ ಅವರನ್ನು ವರ್ಗಾವಣೆ ಮಾಡಿ, ಚಾಮರಾಜನಗರದಿಂದ ಎಚ್.ಸಿ. ಚಂದ್ರಶೇಖರ ಅವರನ್ನು ಬೀದರ್ ಉಪನಿರ್ದೇಶಕರಾಗಿ ಅ.10ರಂದು ಆದೇಶ ಹೊರಡಿಸಿತ್ತು. ಆದರೆ, ಆ ಅಧಿಕಾರಿ ಇಂದಿಗೂ ಕೂಡ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಸದ್ಯ ಪ್ರಭಾರಿ ಉಪನಿರ್ದೇಶಕರಿಂದಲೆ ಇಲಾಖೆ ಕಾರ್ಯಗಳು ನಡೆಯುತ್ತಿವೆ
ಎಂದು ಶಿಕ್ಷಣ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.
ಶಾಲೆಯಿಂದ ದೂರ ಉಳಿದ ಮಕ್ಕಳು: 2018-19ನೇ ಸಾಲಿನ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆದಿದ್ದು, ಶಿಕ್ಷಣ ಇಲಾಖೆ ಪ್ರಕಾರ ಗಡಿ ಜಿಲ್ಲೆಯಲ್ಲಿ 147 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಈ ಪೈಕಿ 58 ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸ ಮಾಡಿರುವುದಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಸಮೀಕ್ಷೆ ಪ್ರಕಾರ 147 ಮಕ್ಕಳು ಶಾಲೆ ಕಡೆಗೆ ಹೋಗೇ ಇಲ್ಲ. ಈ ಪೈಕಿ 58 ಮಕ್ಕಳನ್ನು ಈಗಾಗಲೆ ಶಿಕ್ಷಣ ಇಲಾಖೆ ಆಯಾ ತಾಲೂಕಿನ ಶಾಲೆಗಳಲ್ಲಿ ದಾಖಲಿಸುವ ಕೆಲಸ ಮಾಡಿದೆ. ಇನ್ನು 89 ಮಕ್ಕಳನ್ನು ಶಾಲೆಗೆ ದಾಖಲಿಸುವ ಕೆಲಸ ಮಾಡುವುದಾಗಿ ಪ್ರಭಾರಿ ಡಿಡಿಪಿಐ ಇನಾಯತ್ ಅಲಿ ಶಿಂಧೆ ತಿಳಿಸಿದ್ದಾರೆ.
ಈ ಹಿಂದೆ 5,766 ಮಕ್ಕಳು ಶಾಲೆಯಿಂದ ಹೊರಗುಳಿದ ಮಕ್ಕಳು ಎಂದು ಗುರುತಿಸಲಾಗಿತ್ತು. ನಂತರ ಶಾಲಾವಾರು ಶಾಲೆ ಬಿಟ್ಟ ಮಕ್ಕಳ ಪಟ್ಟಿಯ ಅನುಸಾರ 10-04-2018 ರಿಂದ ನವೆಂಬರ್ 30ರ ವರೆಗೆ ಸರ್ವೇ ಕಾರ್ಯ ನಡೆಸಿ ಮಕ್ಕಳ ದಾಖಲಾತಿಗೂ ಹಾಗೂ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಸಂಖ್ಯೆ ಕುರಿತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.
ಈ ಪ್ರಕ್ರಿಯೆಯಲ್ಲಿ ಮರಣ, ವಲಸೆ, ನಕಲಿ ದಾಖಲಾತಿ ಇತ್ಯಾದಿ ಕಾರಣಗಳಿಂದ ದೂರ ಉಳಿದುಕೊಂಡಿರುವ ಬಗ್ಗೆ ಖಚಿತಪಡಿಸಿಕೊಂಡು ಸಿಆರ್‌ಪಿಗಳು ಪರಿಶೀಲನೆ ನಡೆಸಿ ದೃಢೀಕರಣಪಡಿಸಿದ್ದಾರೆ. ಅಲ್ಲದೆ, ಪರಿಷ್ಕೃತ ಪಟ್ಟಿ ಸಿದ್ಧಪಡಿಸಿ ಇಲಾಖೆಯ ತಂತ್ರಾಂಶದಲ್ಲಿ ದಾಖಲಾತಿ ಸಲ್ಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
12 ಶಾಲೆಗಳು ಬಂದ್
ಗಡಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 12 ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿದ್ದು, ಸರ್ಕಾರಕ್ಕೆ ಇಲ್ಲಿನ ಶಿಕ್ಷಣ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಗಡಿಯಲ್ಲಿನ 7 ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಶೂನ್ಯ ಇರುವ ಕಾರಣ ಮುಚ್ಚುವ ಸ್ಥಿತಿಗೆ ಬಂದಿವೆ. ಅದೇ ರೀತಿ
ಮಹಾರಾಷ್ಟ್ರ ಗಡಿಯಲ್ಲಿರುವ ಔರಾದ್, ಭಾಲ್ಕಿ ಹಾಗೂ ಬಸವಕಲ್ಯಾಣ ತಾಲೂಕಿನಲ್ಲಿ ಒಟ್ಟಾರೆ 12 ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಈ ಪೈಕಿ ಮೂರು ಮರಾಠಿ ಶಾಲೆಗಳು, ಎರಡು ಉರ್ದು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೊರತೆ ಹಿನ್ನೆಲೆಯಲ್ಲಿ ಮುಚ್ಚುವ ಹಂತಕ್ಕೆ ಬಂದಿವೆ ಎಂದು ಪ್ರಭಾರಿ ಡಿಡಿಪಿಐ ಶಿಂಧೆ ಮಾಹಿತಿ ನೀಡಿದ್ದಾರೆ.
ದುರ್ಯೋಧನ ಹೂಗಾರ