Advertisement

ಇದು ಮೂರು ಕಳ್ಳರ ಕಥೆ: ಮೂರನೇ ಕಳ್ಳ ಯಾರು?

01:52 AM Jul 11, 2019 | mahesh |

ನಾನೀಗ ನಿಮಗೆ ಮೂವರು ಕಳ್ಳರ ಕಥೆಯನ್ನು ಹೇಳುತ್ತೇನೆ. ಮೊದಲ ಕಳ್ಳನ ಹೆಸರು ಇಮ್ಯಾನುವೆಲ್ ನಿಂಜರ್‌. ಈತನನ್ನು ‘ಜಿಮ್‌, ದಿ ಪೆನ್‌ ಮ್ಯಾನ್‌’ ಎಂದೂ ಕರೆಯಲಾಗುತ್ತಿತ್ತು.

Advertisement

ಅದು 1892. ಸುಮಾರು 70ರ ವಯೋಮಾನದ ವೃದ್ಧರೊಬ್ಬರು ತಮ್ಮ ಮಗಳ ಜತೆಯಲ್ಲಿ ನ್ಯೂಜೆರ್ಸಿಯ ಚಿಕ್ಕ ಅಂಗಡಿಯೊಂದಕ್ಕೆ ಬರುತ್ತಾರೆ. ಹಣ್ಣು, ತರಕಾರಿ ಖರೀದಿಸಿದ ನಂತರ ಕೌಂಟರ್‌ನಲ್ಲಿದ್ದ ಮಹಿಳೆಗೆ ಈ ಹಿರಿಯರು 20 ಡಾಲರ್‌ನ ನೋಟು ತೆಗೆದುಕೊಡುತ್ತಾರೆ. ಆ ಮಹಿಳೆ ಆಗಷ್ಟೇ ಕೈ ತೊಳೆದುಕೊಂಡಿರುತ್ತಾಳೆ, ಹೀಗಾಗಿ ಆಕೆಯ ಕೈ ಒದ್ದೆಯಾಗಿರುತ್ತದೆ. ಆ ಒದ್ದೆ ಕೈಯಲ್ಲೇ ಆಕೆ ಈ 20 ಡಾಲರ್‌ ನೋಟನ್ನು ತೆಗೆದುಕೊಂಡಾಗ, ಆ ನೋಟಿನ ಮೇಲಿನ ಪೇಂಟು ಅಳಿಸಿ ಆಕೆಯ ಕೈಗಂಟಿಬಿಡುತ್ತದೆ. ಅವಳಿಗೆ ಅಚ್ಚರಿ ಮತ್ತು ಆಘಾತ. ‘ಇದು ನಕಲಿ ನೋಟಾ? ಆದರೆ, ಈ ವ್ಯಕ್ತಿ ತುಂಬಾ ಗೌರವಾನ್ವಿತರು, ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮ ಅಂಗಡಿಯ ಖಾಯಂ ಗ್ರಾಹಕರು, ಅವರ ಮೇಲೆ ಅನುಮಾನ ಪಡುವುದು ಸರಿಯಲ್ಲ’ ಎಂದಾಕೆಗೆ ಅನಿಸಿತು. ‘ಸರ್‌ ಇದು ನಕಲಿ ನೋಟು’ ಅಂದಳು. ಆ ಮುದುಕ ಕೂಡಲೇ ಹತ್ತಿರವೇ ಇದ್ದ ಪೊಲೀಸ್‌ ಸ್ಟೇಷನ್‌ಗೆ ನೋಟನ್ನು ತೆಗೆದುಕೊಂಡು ಹೋದ.

ಪೊಲೀಸರಿಗೆ ಈ ನೋಟು ನೋಡಿದ್ದೇ ಅಚ್ಚರಿಯಾಯಿತು. ಇಷ್ಟು ನಿಖರವಾಗಿ ನೋಟನ್ನು ಚಿತ್ರಿಸಿರುವ ವ್ಯಕ್ತಿ ಅಸಾಮಾನ್ಯ ಕಲಾವಿದ ಇರಬೇಕು ಎಂದವರಿಗೆ ಅರಿವಾಯಿತು. ಅವರು ನಕಲಿ ನೋಟಿನ ಜಾಲದ ಬೆನ್ನತ್ತಿದರು. ಕಾಲಕಾಲಕ್ಕೆ ಒಬ್ಬಿಬ್ಬರು ಈ ರೀತಿಯ ನಕಲಿ ನೋಟುಗಳನ್ನು ತಂದು ಪೊಲೀಸರಿಗೆ ಒಪ್ಪಿಸುತ್ತಿದ್ದರಷ್ಟೆ. ಆದರೆ ಅಪರಾಧಿಯನ್ನು ಹಿಡಿಯುವುದಿರಲಿ, ಆತ ಯಾರು ಎನ್ನುವ ಸುಳಿವೂ ಸಿಕ್ಕಿರಲಿಲ್ಲ. ಹೀಗಾಗಿ ತಾವಾಗಿಯೇ ಆ ಕಳ್ಳನಿಗೆ ‘ಜಿಮ್‌, ದಿ ಪೆನ್‌ ಮ್ಯಾನ್‌’ ಎಂದು ನಾಮಕರಣ ಮಾಡಿದ್ದರು.

ಕೊನೆಗೂ 1896ರಲ್ಲಿ ಇಮ್ಯಾನುವೆಲ್ ನಿಂಜರ್‌, ಅಲಿಯಾಸ್‌ ‘ಜಿಮ್‌, ದಿ ಪೆನ್‌ ಮ್ಯಾನ್‌’ ಪೊಲೀಸರಿಗೆ ಸಿಕ್ಕಿಬಿದ್ದ. ಅವನು ಬಾರ್‌ಟೆಂಡರ್‌ ಒಬ್ಬನಿಗೆ 50 ಡಾಲರ್‌ನ ನೋಟು ಕೊಟ್ಟಾಗ, ಆ ನೋಟು ಕೌಂಟರ್‌ ಮೇಲಿದ್ದ ನೀರಿಗೆ ತಾಕಿ ಬಣ್ಣ ಬಿಟ್ಟಿತಂತೆ. ಕೂಡಲೇ ಬಾರ್‌ನವರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿಬಿಟ್ಟರು. ನ್ಯಾಯಾಲಯ ಜಿಮ್‌ಗೆ ಆರು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿಬಿಟ್ಟಿತು.

ಇಮ್ಯಾನುವೆಲ್ ನಿಂಜರ್‌ ಅಷ್ಟು ನಿಖರವಾಗಿ ಹೇಗೆ ನೋಟುಗಳನ್ನು ಚಿತ್ರಿಸುತ್ತಿದ್ದ ಎನ್ನುವುದೇ ಕುತೂಹಲ ಸಂಗತಿ. ಆತ ಮಸಾಚುಸೆಟ್ಸ್‌ನ ಡಲ್ಟನ್‌ ನಗರಿಯಿಂದ ಸರ್ಕಾರಿ ಬಾಂಡ್‌ ಪೇಪರ್‌ಗಳನ್ನು ಖರೀದಿಸುತ್ತಿದ್ದ. ಅವುಗಳನ್ನು 10-20-50 ಡಾಲರ್‌ ನೋಟುಗಳ ಸೈಜಿಗೆ ತಕ್ಕಂತೆ ಕತ್ತರಿಸಿ, ನಂತರ ಆ ಹಾಳೆಗಳನ್ನು ಕಾಫಿಯಲ್ಲಿ ಮುಳುಗಿಸಿ ಪಾರದರ್ಶಕವಾಗಿಸುತ್ತಿದ್ದ. ತದನಂತರ ಅಸಲಿ ನೋಟಿನ ಮೇಲೆ ಗಾಜನ್ನಿಟ್ಟು ಅದರ ಮೇಲೆ ಈ ಪಾರದರ್ಶಕ ಬಾಂಡ್‌ ಪೇಪರ್‌ ಇಟ್ಟು ಚಿತ್ರಿಸಲು ಆರಂಭಿಸುತ್ತಿದ್ದ. ಬಣ್ಣ ಬಳಿಯಲು ಕ್ಯಾಮಲ್ ಹೇರ್‌ ಬ್ರಶನ್ನು ಬಳಸುತ್ತಿದ್ದ ಇಮ್ಯಾನುವೆಲ್, ಅಸಲಿ ನೋಟಿನಲ್ಲಿದ್ದ ರೇಶ್ಮೆಯ ಎಳೆಯ ತದ್ರೂಪು ಸೃಷ್ಟಿಸಲು ಕೇವಲ ಕೆಂಪು ಮತ್ತು ನೀಲಿ ಇಂಕು ಬಳಸುತ್ತಿದ್ದನಂತೆ. ಒಂದು ನೋಟನ್ನು ರಚಿಸಲು ಆತ ವಾರಗಟ್ಟಲೇ ಸಮಯ ತೆಗೆದುಕೊಳ್ಳುತ್ತಿದ್ದ. ಈ ನಕಲಿ ನೋಟುಗಳ ಜನಪ್ರಿಯತೆ ಎಷ್ಟು ಹೆಚ್ಚಾಯಿತೆಂದರೆ ಆರ್ಟ್‌ ಡೀಲರ್‌ಗಳು ಆ ಕಾಲದಲ್ಲೇ ಒಂದೊಂದು ನೋಟಿಗೆ ಸಾವಿರಾರು ಡಾಲರ್‌ ಕೊಟ್ಟು ಜನರಿಂದ ಖರೀದಿಸುತ್ತಿದ್ದರಂತೆ. ಈ ಕಾರಣಕ್ಕಾಗಿಯೇ ಇಮ್ಯಾನುವೆಲ್ಗೆ ‘ರಾಬಿನ್‌ಹುಡ್‌ ಕಳ್ಳ’ ಎಂಬ ಮತ್ತೂಂದು ಹೆಸರೂ ಬಂದಿತ್ತು. ಏಕೆಂದರೆ, ಆತನ ನಕಲಿ ನೋಟು ಸಾಮಾನ್ಯ ಜನರಿಗೆ ಹಾನಿ ಮಾಡುವುದಕ್ಕಿಂತಲೂ ಹೆಚ್ಚಾಗಿ ಲಾಭ ಮಾಡಿಕೊಡುತ್ತಿತ್ತು. ನಕಲಿ ನೋಟು ಸಿಕ್ಕವನು ಆರ್ಟ್‌ ಡೀಲರ್‌ಗಳ ಬಳಿ ಹೋಗಿ ಕೈ ತುಂಬಾ ಹಣ ತೆಗೆದುಕೊಂಡು ಬರುತ್ತಿದ್ದ!

Advertisement

ಈಗ ನಿಮಗೊಂದು ಪ್ರಶ್ನೆ- ಇಮ್ಯಾನುವೆಲ್ ಯಾರಿಂದ ಹೆಚ್ಚಾಗಿ ಕದ್ದ, ಆತನ ಕುಕೃತ್ಯಗಳಿಂದ ಯಾರಿಗೆ ಹೆಚ್ಚು ಲುಕ್ಸಾನಾಯಿತು? ನನ್ನ ಪ್ರಕಾರ, ಇಮ್ಯಾನುವೆಲ್ ತನ್ನಿಂದ ತಾನೇ ಕದಿಯುತ್ತಿದ್ದ, ಹೆಚ್ಚು ಲುಕ್ಸಾನಾದದ್ದೂ ಅವನಿಗೇ! ಭಗವಂತ ಅವನಿಗೆ ಅದ್ಭುತ ಪ್ರತಿಭೆ ಮತ್ತು ಸಾಮರ್ಥ್ಯವನ್ನು ದಯಪಾಲಿಸಿದ್ದ. ಆದರೆ, ಆ ಪ್ರತಿಭೆಯನ್ನೆಲ್ಲ ಆತ 20-50-100 ಡಾಲರ್‌ ನೋಟುಗಳನ್ನು ಚಿತ್ರಿಸುವುದರಲ್ಲೇ ವ್ಯರ್ಥ ಮಾಡಿಕೊಂಡ. ಅಷ್ಟೇ ಸಮಯವನ್ನು, ಅಷ್ಟು ಪರಿಶ್ರಮವನ್ನು ಆತ ವರ್ಣಚಿತ್ರ ರಚನೆಗೆ ಮೀಸಲಿಟ್ಟಿದ್ದನೆಂದರೆ, ಎಷ್ಟೋ ಪಟ್ಟು ಅಧಿಕ ಹಣ ಗಳಿಸಿರುತ್ತಿದ್ದ, ತನ್ನ ಜೀವನದ ಅಮೂಲ್ಯ ಆರು ವರ್ಷಗಳನ್ನು ಜೈಲಿನಲ್ಲಿ ವ್ಯರ್ಥ ಮಾಡುತ್ತಿರಲಿಲ್ಲ.

ಪ್ರತಿಷ್ಠೆಯ ಪ್ರತೀಕವಾಗಿದ್ದ ಕಳ್ಳ: ಎರಡನೇ ಕಥೆ, ಆರ್ಥರ್‌ ಬ್ಯಾರಿ ಎಂಬ ಕಳ್ಳನದ್ದು. ಇವನು 1920ರ ಅವಧಿಯಲ್ಲಿ ನ್ಯೂಯಾರ್ಕ್‌ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ. ಆರ್ಥರ್‌ ಬ್ಯಾರಿಯನ್ನು Gentleman thief ಎಂದೂ ಕರೆಯಲಾಗುತ್ತಿತ್ತು! ಆರ್ಥರ್‌ನ ವಿಶೇಷತೆಯೆಂದರೆ, ಆತ, ನ್ಯೂಯಾರ್ಕ್‌ನ ಅತಿ ಶ್ರೀಮಂತ ವ್ಯಕ್ತಿಗಳು, ರಾಜಮನೆತನಗಳ ಮನೆಗಳಲ್ಲಷ್ಟೇ ಕಳ್ಳತನ ಮಾಡುತ್ತಿದ್ದ. ಆತ ಯಾರ ಮನೆಯಲ್ಲಿ ಕಳ್ಳತನ ಮಾಡುತ್ತಾನೋ ಆ ಮನೆಯವರು ಬಹಳ ಸಿರಿವಂತರು ಎಂದೇ ಅರ್ಥ. ಹೀಗಾಗಿ, ಸಿರಿವಂತರಿಗೆ, ತಮ್ಮ ಮನೆಯಲ್ಲಿ ಆರ್ಥರ್‌ ಬ್ಯಾರಿ ಕಳ್ಳತನ ಮಾಡಿದ್ದಾನೆ ಎಂದು ಹೇಳಿಕೊಳ್ಳುವುದೇ ಪ್ರತಿಷ್ಠೆಯ ವಿಷಯವಾಗಿ ಬದಲಾಯಿತು. ಬಹಳಷ್ಟು ಜನ ಸುಳ್ಳು ಸುಳ್ಳೇ, ‘ನಮ್ಮ ಮನೆಯಲ್ಲಿ ಆರ್ಥರ್‌ ಕಳ್ಳತನ ಮಾಡಿದ್ದಾನೆ’ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು!

ಆರ್ಥರ್‌ ಬ್ಯಾರಿ ಕಳ್ಳತನ ಮಾಡುತ್ತಿದ್ದ ರೀತಿ ಬಹಳ ಭಿನ್ನವಾಗಿತ್ತು. ಸಿರಿವಂತರ ಮನೆಯಲ್ಲಿ ಅದ್ಧೂರಿ ಪಾರ್ಟಿಗಳು ನಡೆಯುವಾಗ ಅವರ ಮನೆ ಹೊಕ್ಕುಬಿಡುತ್ತಿದ್ದ. ಆ ಗದ್ದಲದಲ್ಲಿ ಯಾರ್ಯಾರು ಬಂದಿದ್ದಾರೆ ಎನ್ನುವುದೂ ಮನೆಯವರಿಗೆ ಗೊತ್ತಾಗುತ್ತಿರಲಿಲ್ಲ. ಪಾರ್ಟಿಯ ನಡುವೆಯೇ ಅದ್ಹೇಗೋ ಸಮಯ ನೋಡಿಕೊಂಡು ಮಹಡಿಗೆ ಹೋಗಿ, ಎಲ್ಲೆಲ್ಲ್ಲಿ ಅಲ್ಮೇರಾಗಳಿವೆ, ರೂಮುಗಳಿವೆ ಎನ್ನುವುದರ ನಕ್ಷೆ ಬರೆದುಕೊಳ್ಳುತ್ತಿದ್ದ. ನಂತರ ಮಹಡಿಯಲ್ಲಿನ ಕಿಟಕಿಯೊಂದನ್ನು ತೆರೆದಿಟ್ಟು, ಕೆಳಕ್ಕಿಳಿದು ಎಲ್ಲರೊಂದಿಗೂ ಬೆರೆತು, ನಗೆ ಚಟಾಕಿ ಹಾರಿಸಿ, ಕುಣಿದುಕುಪ್ಪಳಿಸಿ, ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ. ನಡುರಾತ್ರಿ ವಾಪಸ್‌ ಬಂದು ಆ ಕಿಟಕಿ ಮೂಲಕ ನುಗ್ಗಿ ಹಣ, ಆಭರಣ ಲಪಟಾಯಿಸುತ್ತಿದ್ದ. ಒಂದು ಸಮಯದಲ್ಲಂತೂ ಆರ್ಥರ್‌ ವರ್ಷಕ್ಕೆ 7 ಲಕ್ಷ 50 ಸಾವಿರ ಡಾಲರ್‌ಗಳಷ್ಟು ಹಣವನ್ನು ಕದಿಯಲಾರಂಭಿಸಿದ್ದ, ಹತ್ತು ವರ್ಷದವರೆಗೆ ಆರ್ಥರ್‌ನ ಕಳ್ಳತನದ ಕಥನ ಮುಂದುವರಿಯಿತು. ಕೊನೆಗೊಂದು ದಿನ ಕಳ್ಳತನ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದ. ಮನೆಯವರು ಇವನತ್ತ ಗುಂಡು ಹಾರಿಸಿದರು. ಮೂರು ಗುಂಡುಗಳು ಇವನ ಕೈಗೆ ಹೊಕ್ಕವು. ಆರ್ಥರ್‌ ಜೈಲು ಸೇರಿದ.

ಅವನೆಷ್ಟು ಚಾಲಾಕಿ ವ್ಯಕ್ತಿಯಾಗಿದ್ದ ಎಂದರೆ, ಕೆಲವೇ ದಿನಗಳಲ್ಲಿ ಜೈಲಿನಿಂದ ಪರಾರಿಯಾಗಿ, ದೂರದ ಊರು ಸೇರಿಬಿಟ್ಟ. ಆದರೆ ಅವನ ಜೈತ್ರಯಾತ್ರೆ ಕೆಲವೇ ದಿನ ಮುಂದುವರಿಯಿತು. ಅಷ್ಟರಲ್ಲಾಗಲೇ ಈ ಜಂಟಲ್ಮ್ಯಾನ್‌ ಕಳ್ಳನ ಫೋಟೋಗಳು, ಹೆಸರು ಮನೆಮಾತಾಗಿಬಿಟ್ಟಿತ್ತು. ಮಹಿಳೆಯೊಬ್ಬಳು ಇವನ ಗುರುತು ಹಿಡಿದು ಪೊಲೀಸರಿಗೆ ಸುದ್ದಿ ಮುಟ್ಟಿಸಿದಳು. ಈ ಬಾರಿ ಪೊಲೀಸರು ಆರ್ಥರ್‌ ತಪ್ಪಿಸಿಕೊಳ್ಳಲಾಗದಂತೆ ಬಂದೋಬಸ್ತ್ ಮಾಡಿದ್ದರು. ನ್ಯಾಯಾಲಯ 18 ವರ್ಷಗಳ ಕಠಿಣ ಶಿಕ್ಷೆ ವಿಧಿಸಿಬಿಟ್ಟಿತು.

ಕೊನೆಗೂ ಆರ್ಥರ್‌ 18 ವರ್ಷಗಳ ಜೈಲುವಾಸ ಅನುಭವಿಸಿ ಹೊರಬಿದ್ದ. ಬೋಸ್ಟನ್‌ ಹತ್ತಿರದ ನ್ಯೂ ಇಂಗ್ಲೆಂಡ್‌ ಭಾಗದಲ್ಲಿ ವಾಸಿಸಲಾರಂಭಿಸಿದ. ತನ್ನ ಗುರುತನ್ನು ಆತ ಎಷ್ಟೇ ಮುಚ್ಚಿಡಲು ಪ್ರಯತ್ನಿಸಿದನಾದರೂ, ಅಲ್ಲಿನ ಜನರಿಗೆ ಕೆಲವೇ ದಿನಗಳಲ್ಲಿ ‘ದಿ ಗ್ರೇಟ್ ಜಂಟಲ್ಮ್ಯಾನ್‌ ಥೀಫ್, ಆರ್ಥರ್‌’ ತಮ್ಮ ನಡುವಿದ್ದಾನೆ ಎನ್ನುವುದು ತಿಳಿದುಹೋಯಿತು. ನಿತ್ಯ ಒಬ್ಬಲ್ಲ ಒಬ್ಬ ಪತ್ರಕರ್ತರು ಅವನ ಸಂದರ್ಶನಕ್ಕೆ ಬರುತ್ತಲೇ ಇದ್ದರು. ಎಲ್ಲರೂ ತಪ್ಪದೇ ಒಂದು ಪ್ರಶ್ನೆಯನ್ನು ಮಾತ್ರ ಕೇಳುತ್ತಿದ್ದರು- ‘ನೀವು ಅತಿ ಹೆಚ್ಚು ಕದ್ದಿದ್ದು ಯಾರಿಂದ?’

ಅದಕ್ಕೆ ಆರ್ಥರ್‌ ಹೇಳುತ್ತಿದ್ದ- ‘ನೋಡಿ ನಾನು ಯಾರಿಂದ ಕದಿಯುತ್ತಿದ್ದೆನೋ ಅವರೂ ಮಹಾನ್‌ ಕಳ್ಳರೇ ಆಗಿದ್ದರು. ನಾನು 3 ಲಕ್ಷ ಡಾಲರ್‌ ಕದ್ದರೆ, ಅವರು 8 ಲಕ್ಷ ಡಾಲರ್‌ ಕಳುವಾಗಿದೆ ಎಂದು ವಿಮೆ ಕಂಪನಿಗೆ ಹೇಳುತ್ತಿದ್ದರು! ಅವರ ಕಥೆ ಹಾಗಿರಲಿ, ನಿಜಕ್ಕೂ ನಾನು ಅತಿಹೆಚ್ಚು ಕದ್ದದ್ದು ನನ್ನಿಂದಲೇ. ದೇವರು ನನಗೆ ಇಷ್ಟು ಅದ್ಭುತ ಬುದ್ಧಿಮತ್ತೆಯನ್ನು ಸದೃಢ ದೇಹವನ್ನು ಕೊಟ್ಟ. ಈ ಸಾಮರ್ಥ್ಯಗಳನ್ನು ಬಳಸಿಕೊಂಡು ನಾನು ಎಲ್ಲೋ ತಲುಪಬಹುದಿತ್ತು. ಆದರೆ ತಲುಪಿದ್ದು ಜೈಲಿಗೆ. 18 ವರ್ಷಗಳ ಸೆರೆವಾಸ! ದೇವರು ಕೊಟ್ಟ ಶಕ್ತಿಯನ್ನು ನಾನು ದುರ್ಬಳಕೆ ಮಾಡಿಕೊಂಡೆ.’ ಆರ್ಥರ್‌ನ ಕಳ್ಳತನದ ತನಿಖೆ ಮಾಡಿದ ಪೊಲೀಸರು ಮತ್ತು ಗುಪ್ತಚರರು ಒಕ್ಕೊರಲಿನಿಂದ ಹೇಳುತ್ತಿದ್ದದ್ದು ಒಂದೇ ಮಾತು- ‘ಅವನು ಒಬ್ಬ ಅದ್ಭುತ ಉದ್ಯಮಿಯಾಗಬಹುದಿತ್ತು. ವಾಲ್ಸ್ಟ್ರೀಟ್‌ನ ಅತಿದೊಡ್ಡ ಉದ್ಯಮಿಯಾಗಬಹುದಿತ್ತು…ಆದರೆ ಕಳ್ಳನಾಗಿ, ಬದುಕು ಹಾಳುಮಾಡಿಕೊಂಡ ‘

ಮೂರನೇ ಕಳ್ಳ ಯಾರು?
ಮೂರನೇ ಕಳ್ಳ ಬೇರಾರೂ ಅಲ್ಲ, ಅದು ನೀವು ಮತ್ತು ನಾನು! ನಾವು ನಮ್ಮಿಂದಲೇ ಕದಿಯುತ್ತಿದ್ದೇವೆ. ದೇವರು ನಮಗೆಲ್ಲರಿಗೂ ಅಗಣಿತ ಸಾಮರ್ಥ್ಯವನ್ನು ದಯಪಾಲಿಸಿದ್ದಾನೆ. ನಾವೂ ಈ ಸಾಮರ್ಥ್ಯವನ್ನು ರಚನಾತ್ಮಕವಾಗಿ ಮತ್ತು ಅರ್ಥವತ್ತಾಗಿ ಬಳಸಿಕೊಂಡು, ನಮ್ಮ ಮತ್ತು ನಮ್ಮ ಪ್ರೀತಿಪಾತ್ರರ ಬದುಕುಗಳಲ್ಲಿ ಬದಲಾವಣೆ ತರಲಿಲ್ಲ ಎಂದರೆ, ಆ ಭಗವಂತನಿಂದ ಕದಿಯುತ್ತಿದ್ದೇವೆ ಎಂದರ್ಥ. ಕಾನೂನಿನ ದೃಷ್ಟಿಯಲ್ಲಿ ಇದು ಕಳ್ಳತನವಲ್ಲದೇ ಇರಬಹುದು, ಆದರೆ ಇದು ಕಳ್ಳತನವಂತೂ ಹೌದು. ಆದರೆ ನಾವು ಹೀಗೆಯೇ ಇರಬೇಕಿಲ್ಲ ಅಲ್ಲವೇ? ಈ ಸತ್ಯವನ್ನು ಅರ್ಥಮಾಡಿಕೊಂಡು ನಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದರೆ ನಮ್ಮ ಪೂರ್ಣ ಸಾಮರ್ಥ್ಯದೆಡೆಗೆ ಸಾಗುತ್ತಾ ಹೋಗುತ್ತೇವೆ.

ಆಗ ನಾವು ಕನ್ನಡಿಯ ಮುಂದೆ ನಿಂತು ನಮ್ಮ ಮುಖವನ್ನು ನೋಡಿಕೊಂಡಾಗ, ಆ ಕಣ್ಣುಗಳಲ್ಲಿ ಕಾಣಿಸುವುದು ಏನು ಹೇಳಿ?

ಮಾಜಿ ಕಳ್ಳ!
ಲೇಖಕರ ಪರಿಚಯಮುಕುಂದಾನಂದ ಅವರು ಅಮೆರಿಕದ ಟೆಕ್ಸಾಸ್‌ನ‌ ‘ಜಗದ್ಗುರು ಕೃಪಾಲೂಜಿ’ ಯೋಗ ಸಂಸ್ಥೆಯ ಸ್ಥಾಪಕರು. ಯೋಗ, ಧ್ಯಾನ ಮತ್ತು ಆಧ್ಯಾತ್ಮದ ಗುರುವಾಗಿ ಪ್ರಖ್ಯಾತರಾಗಿರುವ ಅವರು, ಐಐಟಿ ದೆಹಲಿಯಿಂದ ಇಂಜಿನಿಯರಿಂಗ್‌ ಪದವಿ ಮತ್ತು ಐಐಎಂ ಕಲ್ಕತ್ತದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಲೇಖಕರ ಪರಿಚಯ
ಮುಕುಂದಾನಂದ ಅವರು ಅಮೆರಿಕದ ಟೆಕ್ಸಾಸ್‌ನ‌ “ಜಗದ್ಗುರು ಕೃಪಾಲೂಜಿ’ ಯೋಗ ಸಂಸ್ಥೆಯ ಸ್ಥಾಪಕರು. ಯೋಗ, ಧ್ಯಾನ ಮತ್ತು ಆಧ್ಯಾತ್ಮದ ಗುರುವಾಗಿ ಪ್ರಖ್ಯಾತರಾಗಿರುವ ಅವರು, ಐಐಟಿ ದೆಹಲಿಯಿಂದ ಇಂಜಿನಿಯರಿಂಗ್‌ ಪದವಿ ಮತ್ತು ಐಐಎಂ ಕಲ್ಕತ್ತದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸ್ವಾಮಿ ಮುಕುಂದಾನಂದ

Advertisement

Udayavani is now on Telegram. Click here to join our channel and stay updated with the latest news.

Next