Advertisement

ಕಾರು ಕೊಳ್ಳಲು ಇದೇ ಸುಸಂದರ್ಭ : ಯಾವೆಲ್ಲಾ ಕಾರುಗಳು ಎಷ್ಟೆಷ್ಟು ಅಗ್ಗವಾಗಿವೆ ಗೊತ್ತಾ?

10:54 AM Sep 10, 2019 | Hari Prasad |

ನವದೆಹಲಿ: ದೇಶೀ ಅಟೋಮೊಬೈಲ್ ಕ್ಷೇತ್ರಕ್ಕಿದು ಸಂಕಷ್ಟದ ಕಾಲ. ಒಂದು ಕಡೆ ವಾಹನಗಳ ಮಾರಾಟ ಕುಸಿತ ವಾಹನ ತಯಾರಿಕಾ ಕಂಪೆನಿ ಮತ್ತು ಡೀಲರ್ ಗಳ ನಿದ್ದೆಗೆಡಿಸಿದ್ದರೆ ಇನ್ನೊಂದೆಡೆ ಸರಕಾರದ ಹೊಸ ಮಾಲಿನ್ಯ ನಿಯಂತ್ರಣ ನೀತಿ, ಡಿಸೇಲ್ ಎಂಜಿನ್ ವಾಹನಗಳ ಮೆಲಿನ ನಿಷೇಧ ಭೀತಿ ಮತ್ತು ಎಲೆಕ್ಟ್ರಾನಿಕ್ ವಾಹನಗಳತ್ತ ಜನರು ಒಲವು ತೋರುತ್ತಿರುವುದು ಇತ್ಯಾದಿ ಅಂಶಗಳು ಅಟೊಮೊಬೈಲ್ ಕ್ಷೇತ್ರವನ್ನು ಸಂಕಷ್ಟದ ಕಾಲಘಟ್ಟಕ್ಕೆ ತಂದು ನಿಲ್ಲಿಸಿದೆ.

Advertisement

ಈ ಎಲ್ಲಾ ದುರಿತಗಳ ನಡುವೆಯೂ ತಾವು ಉತ್ಪಾದಿಸಿರುವ ವಾಹನಗಳನ್ನು ಗ್ರಾಹಕರು ಖರೀದಿಸುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಕಾರು ತಯಾರಿಕಾ ಕಂಪೆನಿಗಳು ತಮ್ಮ ತಮ್ಮ ಉತ್ಪನ್ನಗಳ ಮೇಲೆ ಭರ್ಜರಿ ದರಕಡಿತದ ರಿಯಾಯಿತಿಯನ್ನು ಘೋಷಿಸಿವೆ.

ಟಾಟಾ ಮೋಟಾರ್ಸ್, ಮಾರುತಿ ಸುಝುಕಿ, ಮಹೀಂದ್ರಾ ಸೇರಿದಂತೆ ಇನ್ನೂ ಹಲವಾರು ಕಾರು ತಯಾರಿಕಾ ಕಂಪೆನಿಗಳು ತಮ್ಮ ವಿವಿಧ ಶ್ರೇಣಿಯ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿವೆ. ಹೀಗಾದರೂ ಗ್ರಾಹಕರು ಶೋರೋನತ್ತ ಬರುವಂತಾಗಲಿ ಎಂಬುದೇ ಈ ಕಂಪೆನಿಗಳ ಸದ್ಯದ ಆಶಯವಾಗಿದೆ.

ಹಾಗಾದರೆ ಯಾವಲ್ಲಾ ಪ್ರಮುಖ ಕಾರುಗಳ ಬೆಲೆಯಲ್ಲಿ ಗಣನೀಯ ಕಡಿತವಾಗಿದೆ ಎಂಬುದನ್ನು ನೋಡೋಣ ಬನ್ನಿ:

ಟಾಟಾ ಮೋಟಾರ್ಸ್ ಕಂಪೆನಿಯ ಹೆಕ್ಸಾ, ಬೋಲ್ಟ್, ಟೈಗೊರ್, ನೆಕ್ಸಾನ್, ಸಫಾರಿ ಮೊದಲಾದ ಮಾದರಿಗಳ ಮೇಲೆ ರಿಯಾಯಿತಿ ಘೋಷಿಸಿವೆ.

Advertisement

ಟೊಯೆಟೋ ಇನ್ನೋವಾ ಕಾರಿಗೆ ಸ್ಪರ್ಧಿಯಾಗಿರುವ ಡಿಸೇಲ್ ಎಂಜಿನ್ ಹೊಂದಿರುವ ಟಾಟಾ ಹೆಕ್ಸಾ ಕಾರಿನ ಮೇಲೆ 90 ಸಾವಿರ ರೂಪಾಯಿಗಳ ರಿಯಾಯಿತಿ ಘೋಷಿಸಲಾಗಿದೆ.

ಇನ್ನು ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಗಳ ಆಯ್ಕೆಗಳನ್ನು ಹೊಂದಿರುವ ಕಾರುಗಳ ಮೇಲೆ ಸರಿ ಸುಮಾರು 75 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಕಂಪೆನಿ ಘೋಷಿಸಿದೆ.

ಇನ್ನು ಆಟೋ ಗೇರ್ ಆಯ್ಕೆ ಲಭ್ಯವಿರುವ ಟಾಟಾ ಝೆಸ್ಟ್ ಮೇಲೆಯೂ 75 ಸಾವಿರ ರೂಪಾಯಿಗಳ ರಿಯಾಯಿತಿ ಗ್ರಾಹಕರಿಗೆ ಲಭ್ಯವಾಗಲಿದೆ.

ಇನ್ನು ಎಸ್.ಯು.ವಿ.ಗಳಲ್ಲಿ ಗ್ರಾಹಕರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿರುವ ಟಾಟಾ ಸಫಾರಿ ಸ್ಟಾರ್ಮ್ ಮೇಲೆಯೂ ಗ್ರಾಹಕರಿಗೆ 70 ಸಾವಿರ ರೂಪಾಯಿಗಳ ರಿಯಾಯಿತಿ ಲಭ್ಯವಿದೆ.

ಇನ್ನು ಕಿರುಗಾತ್ರದ ಸೆಡಾನ್ ಕಾರುಗಳ ಪೈಕಿ ಉಳಿದ ಕಂಪೆನಿಗಳ ಸೆಡಾನ್ ಗಳಿಗೆ ಪ್ರತಿಸ್ಪರ್ಧಿಯಾಗಿರುವ ಟಾಟಾ ಟೈಗೋರ್ ಕಾರಿನ ಮೇಲೆ ಇದೀಗ 60 ಸಾವಿರ ರೂಪಾಯಿಗಳವರೆಗೆ ರಿಯಾಯತಿ ಲಭ್ಯವಿದೆ.

ಇನ್ನು ಅತೀ ಕಡಿಮೆ ಸಮಯದಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿರುವ ನಿಕ್ಸಾನ್ ಕಾರಿನ ಮೇಲೆ ಸುಮಾರು 45 ಸಾವಿರ ರೂಪಾಯಿಗಳಿಂದ 55 ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಸಿಗುತ್ತದೆ. ಇದರಲ್ಲಿ ಹಳೇ ಕಾರುಗಳ ವಿನಿಮಯವೂ ಸೇರಿದೆ.

ಇನ್ನುಳಿದಂತೆ, ಟಾಟಾ ಟಿಯಾಗೋ ಕಾರಿನ ಮೇಲೆ 45 ಸಾವಿರ ರೂ, ಟಾಟಾ ಹ್ಯಾರಿಯರ್ ಮೇಲೆ 40 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಟಾಟಾ ಕಂಪೆನಿ ಘೋಷಿಸಿದೆ.

ದೇಶೀಯ ವಾಹನ ಉತ್ಪಾದಕ ಕಂಪೆನಿಯಾಗಿರುವ ಮಹೀಂದ್ರಾ ಸಹ ತನ್ನ ಹಲವಾರು ಮಾದರಿಯ ಕಾರುಗಳ ಮೇಲೆ ರಿಯಾಯಿತಿಯನ್ನು ಘೋಷಿಸಿದೆ. ಮಹಿಂದ್ರಾ ಟಿಯುವಿ 300 ಕಾರಿನಲ್ಲಿ ಟಿ4 ಪ್ಲಸ್ ಮತ್ತು ಟಿ 6 ಪ್ಲಸ್ ಮಾದರಿಗಳನ್ನು ಖರೀದಿಸುವ ಗ್ರಾಹಕರಿಗೆ 59 ಸಾವಿರ ರೂಪಾಯಿಗಳ ರಿಯಾಯಿತಿ ಲಭ್ಯವಿದೆ. ಟಿ8 ಹಾಗೂ ಟಿ10 ಮಾದರಿ ಕಾರುಗಳ ಮೆಲೆ 49 ಸಾವಿರ ರೂಪಾಯಿಗಳು ಹಾಗೂ ಟಿ10 ಮಾದರಿ ಮೇಲೆ 40 ಸಾವಿರ ರೂಪಾಯಿಗಳ ರಿಯಾಯಿತಿ ಗ್ರಾಹಕರಿಗೆ ಸಿಗಲಿದೆ.

ಇನ್ನು ಮಹಿಂದ್ರಾ ಕಂಪೆನಿಯ ಜನಪ್ರಿಯ ಮಾಡೆಲ್ ಸ್ಕಾರ್ಪಿಯೋ ಎಸ್5 ವೇರಿಯೆಂಟ್ ಮೇಲೆ 50 ಸಾವಿರ ರೂಪಾಯಿಗಳು, ಎಸ್7, ಎಸ್9 ಹಾಗೂ ಎಸ್11 ಮಾದರಿಗಳ ಮೇಲೆ 30 ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಗ್ರಾಹಕರಿಗೆ ಲಭ್ಯವಾಗಲಿದೆ.

ಕಚ್ಛಾ ರಸ್ತೆಗಳಿಗಾಗಿಯೇ ನಿರ್ಮಾಣಗೊಂಡಿರುವ ಮಹಿಂದ್ರಾ ಥಾರ್ ವಾಹನದ ಮೇಲೆ 46 ಸಾವಿರದವರೆಗೆ ರಿಯಾಯಿತಿ ಲಭ್ಯವಿದ್ದರೆ, ಎಬಿಎಸ್ ಮಾದರಿ ಮೇಲೆ 29 ಸಾವಿರ ರಿಯಾಯಿತಿ ಲಭ್ಯವಿದೆ. ಇನ್ನು 8 ಆಸನಗಳ ಮಹಿಂದ್ರಾ ಮೊರಾಜೋ ಕಾರಿನ ಎಂ6 ಹಾಗೂ ಎಂ8 ಮಾದರಿಗಳ ಮೇಲೆ 45 ಸಾವಿರದವರೆಗೆ ರಿಯಾಯಿತಿ ಲಭ್ಯವಿದ್ದರೆ, ಇದೇ ಕಾರಿನ ಎಂ2 ಹಾಗೂ ಎಂ4 ಮಾದರಿ ಕಾರುಗಳ ಮೇಲೆ 20 ಸಾವಿರದವರೆಗೂ ರಿಯಾಯಿತಿ ಸಿಗುತ್ತಿದೆ.

ಮಹಿಂದ್ರಾ ಎಸ್.ಯು.ವಿ 500ನ ಬೇಸ್ ಮಾದರಿಯಾದ ಡಬ್ಲ್ಯೂ3 ಹೊರತುಪಡಿಸಿ ಉಳಿದೆಲ್ಲಾ ಮಾದರಿಗಳ ಮೇಲೆ 40 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ಇಷ್ಟು ಮಾತ್ರವಲ್ಲದೇ ವಿನಿಮಯದ ಮೇಲೆ ವಿಶೇಷ ರಿಯಾಯಿತಿ ಹಾಗೂ ಕಾರಿನ ಬಿಡಿಭಾಗಗಳ ಮೇಲೆಯೂ ರಿಯಾಯಿತಿ ಲಭ್ಯವಿದೆ.

ಇನ್ನು ದೇಶದ ಜನಪ್ರಿಯ ಕಾರು ಉತ್ಪಾದಕ ಕಂಪೆನಿ ಮಾರುತಿ ಸುಝುಕಿ ಸಹ ತನ್ನ ವಿವಿಧ ಮಾದರಿಯ ಕಾರುಗಳ ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ. ಜನಪ್ರಿಯ ವಿಟೆರಾ ಬ್ರಿಝಾ ಕಾರಿನ ಮೇಲೆ ಬರೋಬ್ಬರಿ 1 ಲಕ್ಷದವರೆಗೆ ರಿಯಾಯಿತಿ ಘೋಷಿಸಿದೆ. ಇದರಲ್ಲಿ 50 ಸಾವಿರ ರೂಪಾಯಿಗಳು ನೇರ ನಗದು ರಿಯಾಯಿತಿ ಮತ್ತು 5 ವರ್ಷಗಳ ವಾರಂಟಿ ಸಹ ಗ್ರಾಹಕರಿಗೆ ಲಭ್ಯವಾಗಲಿದೆ. ಇಷ್ಟು ಮಾತ್ರವಲ್ಲದೇ ಹಳೆಯ ಕಾರಿನ ವಿನಿಮಯಕ್ಕೆ 20 ಸಾವಿರದವರೆಗೆ ಬೋನಸ್ ಮತ್ತು 10 ಸಾವಿರ ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯೂ ಗ್ರಾಹಕರಿಗೆ ಲಭ್ಯವಾಗಲಿದೆ.

ಇನ್ನು ಆಲ್ಟೋ, ಆಲ್ಟೋ ಕೆ-10 ಹಾಗೂ ಸೆಲೆರಿಯೋ ಕಾರುಗಳ ಮೇಲೆ 65 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಕಂಪೆನಿ ಗ್ರಾಹಕರಿಗಾಗಿ ಘೋಷಿಸಿದೆ. ಸ್ವಿಫ್ಟ್ ಪೆಟ್ರೋಲ್ ಮಾದರಿ ಮತ್ತು ಇಕೋ 7 ಕಾರುಗಳ ಮೇಲೆ 50 ಸಾವಿರ ರೂಪಾಯಿಗಳ ರಿಯಾಯಿತಿ ಲಭ್ಯವಿದೆ.

ಒಟ್ಟಿನಲ್ಲಿ ಹಿಂದೆಂದೂ ಕಂಡಿರದಂತಹ ಹಿನ್ನಡೆಗೆ ಒಳಗಾಗಿರುವ ದೇಸೀ ವಾಹನ ಮಾರುಕಟ್ಟೆಯಲ್ಲೀಗ ಸಂಕಷ್ಟದ ಸಮಯ. ಆದರೆ ಇದನ್ನು ಮೆಟ್ಟಿ ನಿಲ್ಲುವ ವಿಶ್ವಾಸದೊಂದಿಗೆ ಕಾರು ಉತ್ಪಾದಕರು ಮತ್ತು ಡೀಲರ್ ಗಳು ಮುಂಬರುವ ಹಬ್ಬದ ಋತುಗಳಲ್ಲಿ ಗ್ರಾಹಕರನ್ನು ಸೆಳೆಯಲು ದರ ಸಮರದ ಜೊತೆಗೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿರುವುದು ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next