Advertisement

ಇದು ಕಲಿಯುಗ “ರಾಮನ ಅವತಾರ’

11:21 AM Nov 11, 2018 | |

ತ್ರೇತಾಯುಗದ “ರಾಮನ ಅವತಾರ’ವನ್ನು ಇಟ್ಟುಕೊಂಡು ಅನೇಕ ಧಾರಾವಾಹಿಗಳು, ಚಿತ್ರಗಳು ಬಂದಿರುವುದನ್ನು ನೀವೆಲ್ಲ ನೋಡಿರುತ್ತೀರಿ. ಅಲ್ಲದೆ “ರಾಮನ ಅವತಾರ’ದ ಬಗ್ಗೆ ಸಾಕಷ್ಟು ಕಥೆಗಳನ್ನೂ ಕೇಳಿರುತ್ತೀರಿ. ಆದರೆ ಕಲಿಯುಗದ “ರಾಮನ ಅವತಾರ’ದ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ? ಕೇಳಿರದಿದ್ದರೆ, ಇಲ್ಲೊಂದು ತಂಡ ಅದನ್ನೂ ತೆರೆಮೇಲೆ ಹೇಳಲು ಹೊರಟಿದೆ.

Advertisement

ಈ ಹಿಂದೆ ಸಿಂಪಲ್‌ ಸುನಿ ನಿರ್ದೇಶನದಲ್ಲಿ “ಆಪರೇಷನ್‌ ಅಲಮೇಲಮ್ಮ’ ಚಿತ್ರವನ್ನು ನಿರ್ಮಿಸಿದ್ದ, ನಿರ್ಮಾಪಕ ಅಮ್ರೆಜ್‌ ಸೂರ್ಯವಂಶಿ ‘ರಾಮನ ಅವತಾರ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂದಹಾಗೆ, ಈ ಚಿತ್ರದ ಶೀರ್ಷಿಕೆ “ರಾಮನ ಅವತಾರ’ ಅಂತಿದ್ದರೂ, ಪುರಾಣ-ಪುಣ್ಯ ಕಥೆಗಳಲ್ಲಿ ಬರುವ ರಾಮನಿಗೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ! ಇದು ಪಕ್ಕಾ ಇಂದಿನ ಜಮಾನದ ಕಥೆ, ಕಲಿಯುಗದ ಕಥೆ. ಈ ಕಥೆಯೊಳಗೆ ರಾಮ ಎಂಬ ಪಾತ್ರವೊಂದು ಬರುತ್ತದೆ.

ಅದಕ್ಕಾಗಿ ಚಿತ್ರದ ಶೀರ್ಷಿಕೆಯನ್ನು “ರಾಮನ ಅವತಾರ’ ಅಂತ ಇಟ್ಟಿದ್ದೇವೆ ಎನ್ನುತ್ತದೆ ಚಿತ್ರತಂಡ. ದೀಪಾವಳಿ ಹಬ್ಬದ ನಿಮಿತ್ತ ಚಿತ್ರತಂಡ “ರಾಮನ ಅವತಾರ’ದ ಮೊದಲ ಟೈಟಲ್‌ ಟೀಸರ್‌ ಬಿಡುಗಡೆ ಮಾಡಿದ್ದು, ಈ ಮೂಲಕ ಪಾತ್ರಗಳ ಪರಿಚಯವನ್ನೂ ಮಾಡಿದೆ. ರಿಷಿ ರಾಮನಾಗಿ, “ಹಂಬಲ್‌ ಪೊಲಿಟಿಶಿಯನ್‌’ ಚಿತ್ರ ಖ್ಯಾತಿಯ ದಾನೀಶ್‌ ಸೇಠ್ ಫ್ಲೈಯಿಂಗ್‌ ಮ್ಯಾನ್‌ ಹಾಗೂ ರಾಜ್‌ ಬಿ. ಶೆಟ್ಟಿ ಜೇಮ್ಸ್ ಬಾಂಡ್‌ ಗೆಟಪ್‌ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದ್ದು, ನಾಟಿ ಫ್ಯಾಕ್ಟರಿ ಹೆಸರಿನಲ್ಲಿ ಇಂಟರ್‌ನೆಟ್‌ ಫಿಲಂ ಮೇಕಿಂಗ್‌ನಲ್ಲಿ ಕೆಲಸ ಮಾಡಿರುವ  ವಿಕಾಸ್‌ ಪಂಪಾಪತಿ ಹಾಗೂ ವಿನಯ್‌ ಪಂಪಾಪತಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ “ರಾಮನ ಅವತಾರ’ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದೆ. ಚಿತ್ರದಲ್ಲಿ ಸುಮಾರು 35ರಿಂದ 40 ಪಾತ್ರಗಳು ಬರಲಿದ್ದು, ಕಲಾವಿದರು ಮತ್ತು ಇತರೆ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. 

“ರಾಮನ ಅವತಾರ’ ಚಿತ್ರದ ಕಥೆ ಡಾರ್ಕ್‌ ಕಾಮಿಡಿ ಜಾನರ್‌ನಲ್ಲಿ ಸಾಗುತ್ತದೆ. ಚಿತ್ರದಲ್ಲಿ ಪ್ರಮುಖ ಪಾತ್ರವೊಂದು ಟ್ರಾವೆಲ್‌ ಮಾಡುತ್ತಾ ಹೋಗುತ್ತದೆ. ಉಳಿದ ಪಾತ್ರಗಳು ಅದನ್ನು ಸಂಧಿಸುತ್ತ ಹೋಗುತ್ತವೆ. ಅಂತಿಮವಾಗಿ ಏನಾಗಲಿದೆ ಅನ್ನೋದೆ ಚಿತ್ರದ ಸಸ್ಪೆನ್ಸ್‌ ಮತ್ತು ಕ್ಲೈಮ್ಯಾಕ್‌. ಡಿಸೆಂಬರ್‌ ಮೊದಲ ವಾರದಿಂದ “ರಾಮನ ಅವತಾರ’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

Advertisement

ಬೆಂಗಳೂರು, ಚಿತ್ರದುರ್ಗ, ಮಂಗಳೂರು, ಗೋವಾ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಇದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ಏಪ್ರಿಲ್‌ ವೇಳೆಗೆ ‘ರಾಮನ ಅವತಾರ’ವನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸಲಿದ್ದೇವೆ ಎನ್ನುತ್ತಾರೆ ನಿರ್ದೇಶಕ ವಿಕಾಸ್‌ ಪಂಪಾಪತಿ. ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ನಟ ರಾಜ್‌ ಬಿ. ಶೆಟ್ಟಿ, ನಾನು ಸಾಮಾನ್ಯವಾಗಿ ವಿಭಿನ್ನ ಪಾತ್ರಗಳನ್ನು ಹುಡುಕುತ್ತಿರುತ್ತೇನೆ. ಅಂತಹ ಹುಡುಕಾಟದಲ್ಲಿರುವಾಗಲೇ “ರಾಮನ ಅವತಾರ’ ಚಿತ್ರ ಸಿಕ್ಕಿದೆ.

ಈ ಚಿತ್ರದಲ್ಲಿ ಅಲೆಗ್ಸಾಂಡರ್‌ ಎಂಬ ಹೆಸರಿನ ಡಾನ್‌ ಆಗಿ, ನೆಗೆಟೀವ್‌ ಶೇಡ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದ ಕಥೆ ಮತ್ತು ಪಾತ್ರಗಳು ತುಂಬ ವಿಭಿನ್ನವಾಗಿದೆ. ಕಾಮಿಡಿ, ಆ್ಯಕ್ಷನ್‌ ಎಲ್ಲವೂ ಕಥೆಯಲ್ಲಿದೆ. ನನಗೆ ಇದೊಂದು ಹೊಸತರದ ಚಿತ್ರವಾಗಲಿದೆ ಎಂಬ ಭರವಸೆ ಇದೆ. ಸದ್ಯಕ್ಕೆ ಚಿತ್ರದ ಬಗ್ಗೆ ಇದಕ್ಕಿಂತ ಹೆಚ್ಚೇನು ಗುಟ್ಟು ಬಿಟ್ಟುಕೊಡಲಾರೆ ಎನ್ನುತ್ತಾರೆ. ಇನ್ನು “ರಾಮನ ಅವತಾರ’ ಚಿತ್ರದ ಟೈಟಲ್‌ ಟೀಸರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರದ ಶೀರ್ಷಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. 

Advertisement

Udayavani is now on Telegram. Click here to join our channel and stay updated with the latest news.

Next