ಮೈಸೂರು: ಇದೇ ನನ್ನ ಕಡೇ ಚುನಾವಣೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ಮತ್ತೂಮ್ಮೆ ಮುಖ್ಯಮಂತ್ರಿಯಾಗುತ್ತೇನೆ. ಇದೊಂದು ಬಾರಿ ನನ್ನ ಕೈಹಿಡಿಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಕಾಳಿಸಿದ್ಧನಹುಂಡಿ ಗ್ರಾಮದಲ್ಲಿ ರೋಡ್ ಶೋ ನಡೆಸಿದ ಬಳಿಕ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನನ್ನನ್ನು ಬೆಂಬಲಿಸಿಕೊಂಡು ಬಂದಿದ್ದೀರಾ, ನಾನು ನಿಲ್ಲದಿದ್ದಾಗ ಹೇಳಿದವರಿಗೆ ಬೆಂಬಲ ಕೊಟ್ಟಿದ್ದೀರಾ. ನಿಮ್ಮ ಋಣವನ್ನು ನಾನು ಎಂದಿಗೂ ಮರೆಯಲಾರೆ ಎಂದು ಹೇಳಿದರು.
ಮುಖ್ಯಮಂತ್ರಿಯಾದ ಮೇಲೆ ನಿಮ್ಮೂರಿಗೆ ಬರಲು ಸಾಧ್ಯವಾಗಿರಲಿಲ್ಲ. ಚುನಾವಣೆ ಘೋಷಣೆಯಾಗಿದ್ದರೂ ಈಗಲೂ ನಾನೇ ಮುಖ್ಯಮಂತ್ರಿ. ನಿಮ್ಮೂರಿಗೆ ಮುಖ್ಯಮಂತ್ರಿಯಾಗಿಯೇ ಬಂದಿದ್ದೇನೆ. ಈ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಋಣ ಮರೆಯಲಾರೆ: ಚಾಮುಂಡೇಶ್ವರಿ ಕ್ಷೇತ್ರದ ಜನರ ಋಣ ನನ್ನ ಮೇಲೆ ಬಹಳ ಇದೆ. ನಿಮ್ಮ ಋಣವನ್ನು ಎಂದಿಗೂ ಮರೆಯಲಾರೆ ಎಂದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಅವರು ಏನೇ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರಲ್ಲ.
ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದರು. ಸಣ್ಣ ಕಳಂಕವು ಇಲ್ಲದೆ, ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದೇನೆ. ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ, ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಜನರು ಮನ್ನಣೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ರು ವೋಟ್ ಹಾಕ್ಸಿ: ಚಾಮುಂಡೇಶ್ವರಿ ಕ್ಷೇತ್ರದ ಪ್ರವಾಸ ಮುಗಿಸಿ ನಾನು ಬೇರೆ ಬೇರೆ ಜಿಲ್ಲೆಗಳಿಗೆ ಹೋಗಬೇಕು. ಇನ್ನು ನಾನು ನಿಮ್ಮೂರಿಗೆ ಬಂದರೂ ಬರಬಹುದು, ಬರದೇ ಇರಬಹುದು. ಎಲ್ಲರೂ ಒಗ್ಗಟ್ಟಿನಿಂದ ನನಗೆ ವೋಟ್ ಹಾಕಿಸಬೇಕು. ಸತ್ತು ಹೋಗಿರುವವರನ್ನು ಬಿಟ್ಟು ಉಳಿದೆಲ್ಲರ ಮತಗಳು ಕಾಂಗ್ರೆಸ್‌ಗೆ ಬರಬೇಕು. ಸತ್ತು ಹೋಗಿರೋರ ವೋಟ್ ಹಾಕಿಸಿ ಬಿಟ್ಟಿàರಾ,ಅದು ತಪ್ಪಾಯ್ತದೆ ಎಂದು ಹೇಳಿದರು.