Advertisement

ಇದೇ ಕಡೇ ಚುನಾವಣೆ: ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧೆ

12:39 PM Oct 04, 2017 | |

ಮೈಸೂರು: ಮುಂಬರುವ 2018ರ ವಿಧಾನಸಭೆ ಚುನಾವಣೆಯೇ ನನ್ನ ಕಡೆಯ ಚುನಾವಣೆ. ನನಗೆ ರಾಜಕೀಯವಾಗಿ ಜನ್ಮ ನೀಡಿದ, ಉಪ ಚುನಾವಣೆಯಲ್ಲಿ ಮರುಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹೂಟಗಳ್ಳಿಯ ಸಂತೇ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Advertisement

2013ರ ಚುನಾವಣೆಯೇ ಅಂತಿಮ ಇನ್ನು ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದೆ, ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ನನ್ನ ನಾಯಕತ್ವದಲ್ಲೇ ಚುನಾವಣೆಗೆ ಹೋಗಲು ಹೇಳಿರುವುದರಿಂದ ಅನಿವಾರ್ಯವಾಗಿ 2018ರ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಇದೊಂದೇ ಚುನಾವಣೆ, ಇನ್ನು ಯಾರು ಹೇಳಿದರೂ ಚುನಾವಣೆಗೆ ನಿಲ್ಲಲ್ಲ ಎಂದರು.

1983ರಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದಾಗ ಹರಸಿ ಕಳುಹಿಸಿದ ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಕ್ಷೇತ್ರ. 2006ರಲ್ಲಿ ನಡೆದ ಉಪಚುನಾವಣೆಯಲ್ಲಿ ಇಡೀ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರವೇ ಇಲ್ಲಿ ಬಂದು ಕುಳಿತು, ನನ್ನನ್ನು ರಾಜಕೀಯವಾಗಿ ಮುಗಿಸಲೇಬೇಕು ಎಂದು ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಯಡಿಯೂರಪ್ಪ ಹರ ಸಾಹಸಪಟ್ಟರೂ ಕ್ಷೇತ್ರದ ಜನತೆ ಆರ್ಶೀವದಿಸಿ ರಾಜಕೀಯ ಮರು ಜನ್ಮ ನೀಡಿದಿರಿ ಎಂದು ನೆನೆದರು.

ಗಳಗಳನೆ ಅತ್ತಿದ್ದೆ: ಸಾಮಾನ್ಯವಾಗಿ ನನಗೆ ಅಳು ಬರುವುದಿಲ್ಲ. ನನ್ನ ತಂದೆ-ತಾಯಿ ಸತ್ತಾಗಲೂ ನಾನು ಅತ್ತಿರಲಿಲ್ಲ. ಆದರೆ, ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಹೋಗುವಾಗ ಕಾರ್ಯಕರ್ತರ ಸಭೆಯಲ್ಲಿ ಗಳಗಳನೆ ಅತ್ತಿದ್ದೆ, ಅಷ್ಟರ ಮಟ್ಟಿಗೆ ಕ್ಷೇತ್ರದ ಜತೆಗೆ ನನಗೆ ಬಾಂಧವ್ಯ ಬೆಳೆದಿತ್ತು ಎಂದರು. ಎರಡು ಬಾರಿ ನನ್ನದೇ ತಪ್ಪಿನಿಂದ ಸೋತಿದ್ದೇನೆ.

ಐದು ಬಾರಿ ಗೆಲ್ಲಿಸಿದ್ದೀರಿ, ವರುಣ ಕ್ಷೇತ್ರದಲ್ಲಿಯೂ ಎರಡು ಬಾರಿಯೂ ದೊಡ್ಡ ಅಂತರದಿಂದ ಗೆಲ್ಲಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನತೆ 2004ರ ಚುನಾವಣೆಯಲ್ಲಿ 35 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದರು, ಈಗಲೂ ಅದೇ ಪ್ರೀತಿ-ಅಭಿಮಾನ ಇಟ್ಟುಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಲು ಚಾಮುಂಡೇಶ್ವರಿ ಕ್ಷೇತ್ರದ ಜನರ ಆರ್ಶೀವಾದವೇ ಕಾರಣ ಎಂದು ನಮಿಸಿದರು.

Advertisement

ಮತ್ತೆ ನಾವೇ ಅಧಿಕಾರಕ್ಕೆ: ಅಧಿಕಾರಕ್ಕೆ ಬರುತ್ತೇವೆಂದು ಬಿಜೆಪಿ ಭ್ರಮಾಲೋಕದಲ್ಲಿದ್ದರೆ, ಜೆಡಿಎಸ್‌ ಭರವಸೆಯಲ್ಲಿದೆ. ಆದರೆ, ಮುಂಬರುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಬಗ್ಗೆ ನನಗೆ ನೂರಕ್ಕೆ ನೂರು ಭರವಸೆ ಇದೆ ಎಂದರು.

ಯಡಿಯೂರಪ್ಪಮುಂದಿನ ಮುಖ್ಯಮಂತ್ರಿ ನಾನೇ, ಮಿಷನ್‌ 150 ಅಂತಾರೆ. ಪ್ರಧಾನಿ ನರೇಂದ್ರಮೋದಿ, ಅಮಿತ್‌ ಶಾ ಅವರ ನಾಮಬಲದಿಂದ ಚುನಾವಣೆ ಗೆಲ್ಲಬಹುದು ಅಂದು ಕೊಂಡಿದ್ದಾರೆ. ಇಲ್ಲಿ ಅವರ ಆಟ ನಡೆಯುವುದಿಲ್ಲ. ಕರ್ನಾಟಕ, ಉತ್ತರಪ್ರದೇಶವಲ್ಲ ಎಂದು ತಿರುಗೇಟು ನೀಡಿದರು.

ಅವಕಾಶವಾದಿ ಪಕ್ಷ: ಜೆಡಿಎಸ್‌ ಅವಕಾಶವಾದಿ ರಾಜಕಾರಣಕ್ಕಾಗಿ ಕಾದು ಕುಳಿತಿದೆ. ಪಕ್ಷ ಬಹುಮತ ಬರದಿದ್ದರೆ ಯಾವುದಾದರೂ ಪಕ್ಷಕ್ಕೆ ಬೆಂಬಲಕೊಟ್ಟು ಮುಖ್ಯಮಂತ್ರಿ ಆಗಬಹುದು ಅಂದುಕೊಂಡಿದ್ದಾರೆ ಎಚ್‌.ಡಿ.ಕುಮಾರಸ್ವಾಮಿ, ಆದರೆ, ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳು ರಾಜ್ಯದ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯಲ್ಲಿ ತಲುಪಿರುವುದರಿಂದ ಸ್ಪಷ್ಟ ಬಹುಮತದೊಂದಿಗೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್‌, ಮಾಜಿ ಶಾಸಕ ಸತ್ಯನಾರಾಯಣ, ಜಿಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ ಮಾತನಾಡಿದರು. ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಡಾ.ಯತೀಂದ್ರ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯದರ್ಶಿ ಡಾ.ಗುರಪ್ಪನಾಯ್ಡು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಚಾಮುಂಡೇಶ್ವರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಉಮಾಶಂಕರ್‌, ಇಲವಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ದರಾಜು ಮೊದಲಾದವರು ಹಾಜರಿದ್ದರು.

ಡಿ.15ರಿಂದ ರಾಜ್ಯ ಪ್ರವಾಸ: ಸಿಎಂ
ಮುಂಬರುವ ಚುನಾವಣೆ ದೃಷ್ಟಿಯಿಂದ ಡಿಸೆಂಬರ್‌ 15ರಿಂದ ಸಂಕ್ರಾಂತಿವರೆಗೆ (ಜ.15) ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇವೆ. ಈ ಒಂದು ತಿಂಗಳ ಪ್ರವಾಸದ ಅವಧಿಯಲ್ಲಿ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next