ಮುಂಬಯಿ: “ಇದು ಛತ್ರಪತಿ ಶಿವಾಜಿ ಮಹಾರಾಜರ ನಾಡು ಮತ್ತು ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಹಕ್ಕು ಯಾರಿಗೂ ಇಲ್ಲ” ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ,ಇದು ದೇಶಭಕ್ತರ ರಾಜ್ಯ. ನಮ್ಮ ಸರಕಾರ ಪುಣೆಯಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ ಅಕ್ರಮ ವ್ಯವಹಾರ: 22 ಬಾಂಗ್ಲಾದೇಶಿ ಪ್ರಜೆಗಳ ಬಂಧನ
ವಿವಾದಿತ ಇಸ್ಲಾಮಿಕ್ ಸಂಘಟನೆಯ ಪಿಎಫ್‌ಐ ಮುಖಂಡರ ಮೇಲಿಂದ ದಾಳಿ ಮತ್ತು ಬಂಧನದ ನಂತರ ಪುಣೆಯ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದು, ಈ ಸಂದರ್ಭ ಪಾಕ್ ಪರ ಘೋಷಣೆಗಳನ್ನು ಕೂಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಪೊಲೀಸರು ಕನಿಷ್ಠ 40 ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಬಿಜೆಪಿ ನಾಯಕರು ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ
ಪುಣೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪಾಕ್ ಪರ ಘೋಷಣೆಗಳನ್ನು ಕೂಗಿರುವುದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ ಎಂದು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಅವರು ಏಕನಾಥ್ ಶಿಂಧೆ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.