Advertisement

ಹೃದಯದಲಿ ಇದೇನಿದು ಒಲವೊಂದು ಮೂಡಿದೆ…

12:30 AM Feb 05, 2019 | |

ಬಹುತೇಕರ ಪ್ರೀತಿಗೆ ಮದುವೆ ಮನೆ, ಜಾತ್ರೆ, ಸ್ಕೂಲು, ಕಾಲೇಜು, ಆಫೀಸು ವೇದಿಕೆಯಾಗುತ್ತದೆ. ಆದರೆ, ನಮ್ಮಿಬ್ಬರ ಪ್ರೀತಿಗೆ ಜೀವ ಬಂದಿದ್ದು ಆಸ್ಪತ್ರೆಯಲ್ಲಿ. ಸಾವು-ಬದುಕಿನ ನಡುವೆ ಸದಾ ನಡೆಯುವ ಯುದ್ಧಕ್ಕೆ ಸಾಕ್ಷಿಯಾದ ಸ್ಥಳದಲ್ಲಿ, ಪ್ರೀತಿಯ ಮೊಗ್ಗು ಅರಳಿದ್ದು ಆಶ್ಚರ್ಯವೇ. ಹಾಗಂತ, ನಾವೇನು ಸಹೋದ್ಯೋಗಿಗಳಲ್ಲ. ನೀನು ಶುಶ್ರೂಷೆ ಮಾಡುವ ನರ್ಸು, ನಾನು ಪೇಷೆಂಟು. ಅದ್ಯಾವುದೋ ನೈಟಿಯಂಥ ಅಂಗಿ ತೊಟ್ಟು ಹಾಸಿಗೆ ಮೇಲೆ ನಾನಿದ್ದರೆ, ಬಿಳಿ ದಿರಿಸಿನಲ್ಲಿ ಥೇಟು ದೇವರಂತೆ ನನ್ಮುಂದೆ ಹಾಜರಾದವಳು ನೀನು. ನಿನ್ನ ಹಾಲಿನಂಥ ಮುದ್ದುಮೊಗವನ್ನು ಕಣ್ಣರಳಸಿ ನೋಡಿದ್ದೊಂದೇ ನೆಪ; ನನ್ನ ಹೃದಯ ಪ್ರೇಮಕಾವ್ಯ ಹಾಡಿತ್ತು. 

Advertisement

ಬಿಡುವಿಲ್ಲದ ಕೆಲಸದ ನಡುವೆಯೂ ನೀನು ವಿಶೇಷ ಕಾಳಜಿ ತೋರಿಸುತ್ತಿದ್ದೆ. ದಿನವೂ ನನ್ನನ್ನು ನೋಡದಿದ್ದರೆ ನಿನಲ್ಲೇನೋ ಚಡಪಡಿಕೆ.ಬಾಡಿದ ಮುಖ, ಕೆದರಿದ ಕೂದಲು, ನರಪೇತಲನಂಥ ನನ್ನನ್ನು ಯಾಕೆ ಇಷ್ಟಪಟ್ಟೆ? ನೂರಾರು ರೋಗಿಗಳ ನಡುವೆ ನಾನೂ ಒಬ್ಬನೆಂದುಕೊಂಡಿದ್ದೆ. ಆದರೆ, ನೀನು ನನ್ನನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದ ರೀತಿ, ಬೇರಾರಿಗೂ ತೋರದ ಕಾಳಜಿ ತೋರುತ್ತಿದ್ದ ಪರಿ, ನಮ್ಮಿಬ್ಬರ ಹೃದಯಗಳ ನಡುವೆ ಒಲವು ಮೂಡಿದೆ ಎಂದು ಸಾರಿ ಹೇಳಿದ್ದವು. ನಿನ್ನ ನೋಡಿದಾಗ, ಆಸ್ಪತ್ರೆ ತೊರೆದು ಹೋಗುವ ಮನಸ್ಸೇ ಆಗುತ್ತಿರಲಿಲ್ಲ. ಡಾಕ್ಟರ್‌ ನನ್ನನ್ನು ಡಿಸಾcರ್ಜ್‌ ಮಾಡದಿರಲಿ ಎಂದು ಆ ದೇವರಲ್ಲಿ ಬಗೆಬಗೆಯಾಗಿ ಬೇಡಿಕೊಳ್ಳುತ್ತಿದ್ದೆ. ನೀನು ಕೈಯಲ್ಲಿ ಸೂಜಿ ಹಿಡಿದು ನನ್ನೆಡೆಗೆ ಬರುತಿದ್ದರೆ, ಅದೇನೋ ಪುಳಕ. ನನ್ನ ಕಾಯಿಲೆಗೆ ಬೇಕಾಗಿದ್ದು ನೀನು ಕೊಡುವ ಔಷಧವಲ್ಲ, ನಿನ್ನ ಸ್ಪರ್ಶ ಮತ್ತು ಸಾಮೀಪ್ಯ. 

 ನಿನ್ನ ಪ್ರೀತಿ ನನಗೆ ಅರ್ಥವಾಗಿತ್ತು. ಆದರೆ, ನೀನು ಅದೆಷ್ಟು ಧೈರ್ಯ ಹೇಳಿದರೂ, ನಿನ್ನ ಬಾಳಿಸುವುದಕ್ಕೆ ನನ್ನಿಂದ ಆಗುತ್ತಾ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ನೀನು ಮನಸ್ಸು ಮಾಡಿದ್ದರೆ, ದೊಡ್ಡ ನೌಕರಿಯಲ್ಲಿ ಇರುವವನನ್ನೇ ಮದುವೆಯಾಗಬಹುದಿತ್ತು. ಹಣಕ್ಕಿಂತ ಗುಣ ಮುಖ್ಯ. ಆಸ್ತಿಗಿಂತ, ಹುಚ್ಚನಂತೆ ಪ್ರೀತಿಸುವ ನಿನ್ನ ನಿಷ್ಕಲ್ಮಶ ಹೃದಯವೇ ದೊಡ್ಡದು ಅಂದುಬಿಟ್ಟೆಯಲ್ಲ?! ಈ ಅಶಕ್ತ ದೇಹವನ್ನಿಟ್ಟುಕೊಂಡು ನಿನಗೆ ಸುಂದರ ಬದುಕು ಕಟ್ಟಿಕೊಡುತ್ತೇನೆಂದು ಹುಸಿ ಭರವಸೆ ಕೊಡುವುದು ಹಸಿ ಸುಳ್ಳಾಗುವುದಿಲ್ಲವೆ? ನನ್ನ ನ್ಯೂನತೆಯ ಅರಿವಿದ್ದರೂ ಅದನ್ನು ಲೆಕ್ಕಿಸದೆ ನೀನು ನನ್ನ ಒಪ್ಪಿಕೊಂಡಿದ್ದು ನನ್ನ ಭಾಗ್ಯವೇ ಸರಿ. ನಿನ್ನ ಪ್ರಾಮಾಣಿಕ ಪ್ರೀತಿಗೆ ಶರಣು. 

ಅಂಬಿ ಎಸ್‌. ಹೈಯ್ನಾಳ್‌

Advertisement

Udayavani is now on Telegram. Click here to join our channel and stay updated with the latest news.

Next