Advertisement

ವಿಪಕ್ಷವಿಲ್ಲದೆ ಬಜೆಟ್‌ಗೆ ಉತ್ತರಿಸುವ ಸ್ಥಿತಿ ಇದೇ ಮೊದಲು

10:17 PM Jul 22, 2023 | Team Udayavani |

ಬೆಂಗಳೂರು: ಚುನಾವಣೆ ಮುಗಿದು ಎರಡೂವರೆ ತಿಂಗಳಾದರೂ ಹಾಗೂ ಬಜೆಟ್‌ ಅಧಿವೇಶನ ಕಳೆದರೂ ಬಿಜೆಪಿಗೆ ಪ್ರತಿಪಕ್ಷದ ನಾಯಕ ಸಿಗಲೇ ಇಲ್ಲ. ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ಈ ವಿಧಾನ ಸಭೆಯ ಮೊದಲ ಅಧಿವೇಶನ ಹಾಗೂ ಈಗತಾನೇ ಮುಗಿದ ಬಜೆಟ್‌ ಅಧಿವೇಶನ ಪ್ರತಿಪಕ್ಷದ ನಾಯಕನಿಗೆ ಮೀಸಲಾದ ಖಾಲಿ ಕುರ್ಚಿಯೊಂದಿಗೆ ಅಂತ್ಯಗೊಂಡಿದೆ.

Advertisement

ಬಜೆಟ್‌ ಅಧಿವೇಶನ ಆರಂಭಕ್ಕೂ (ಜುಲೈ 3) ಮುನ್ನವೇ ಪ್ರತಿಪಕ್ಷದ ನಾಯಕನ ಆಯ್ಕೆಯಾಗ ಬಹುದೆಂದು ಆಕಾಂಕ್ಷಿಗಳು ನಿರೀಕ್ಷಿಸಿದ್ದರು. ಆದರೆ ಬಜೆಟ್‌ ಮಂಡನೆ ಬಳಿಕ ಅಧಿವೇಶನ ಮುಗಿದರೂ ಆ ಬಗ್ಗೆ ಕಿಂಚಿತ್ತು ಸುದ್ದಿ ಇಲ್ಲದೆ ತಣ್ಣಗಾಯಿತು. ವಿಶೇಷವೆಂದರೆ ಪ್ರತಿಪಕ್ಷದ ನಾಯಕನ ವಿಚಾರ ಆಡಳಿತರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಸದನದೊಳಗೆ ಹಲವು ಬಾರಿ ಪ್ರಸ್ತಾಪವಾಗಿ ಪರಸ್ಪರ ಟೀಕೆಗಳಲ್ಲೇ ಮುಳುಗಿದರು. ಇದೊಂದು ರೀತಿ ಬಿಜೆಪಿಗೆ ಮುಜುಗರದ ಸಂಗತಿಯಾಯಿತು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಹಿರಿಯ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಸುರೇಶ್‌ಕುಮಾರ್‌ ಮತ್ತು ಅರವಿಂದ ಬೆಲ್ಲದ್‌ ಮತ್ತಿತರರ ಹೆಸರು ಚಲಾವಣೆಗೆ ಬಂದರೂ ಯಾವ ಹೆಸರಿಗೂ ಅದೃಷ್ಟ ಒಲಿಯಲಿಲ್ಲ. ವಿಧಾನಸಭೆಯಲ್ಲಿ 66 ಮಂದಿ ಶಾಸಕರನ್ನು ಹೊಂದಿರುವ ಬಿಜೆಪಿಗೆ ಸಹಜವಾಗಿಯೇ ಪ್ರತಿಪಕ್ಷದ ಸ್ಥಾನ ದೊರೆಯುತ್ತದೆ. ಆದರೆ ಆ ನಾಯಕರ ಆಯ್ಕೆಗೆ ಬಿಜೆಪಿ ವರಿಷ್ಠರು ಏಕೆ ಇಷ್ಟೊಂದು ವಿಳಂಬ ಮಾಡುತ್ತಿರುವುದು- ಮೀನಾಮೇಷ ಎಣಿಸುತ್ತಿರುವುದು ಮಾತ್ರ ರಾಜ್ಯ ಬಿಜೆಪಿ ನಾಯಕರನ್ನು ತುದಿಗಾಲ ಮೇಲೆ ನಿಲ್ಲಿಸಿದೆ.

ಬಿಜೆಪಿ ವರಿಷ್ಠರ ಧೋರಣೆಯಿಂದ ಒಳಗೊಳಗೆ ಅಸಮಾಧಾನದಲ್ಲಿರುವ ರಾಜ್ಯ ಬಿಜೆಪಿ ನಾಯಕರು ಹಾಗೂ ಪ್ರತಿಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿಗಳು ಈಗ ಯಾವುದರ ಬಗ್ಗೆಯೂ ನಿರೀಕ್ಷೆಇಟ್ಟುಕೊಳ್ಳದೇ ಮೌನಕ್ಕೆ ಶರಣಾಗಿದ್ದಾರೆ. ರಾಜ್ಯದಲ್ಲಿ ಚುನಾವಣೆಯಲ್ಲಿ ಪಕ್ಷ ಸೋತಿರಬಹುದು, ಆದರೆ ಪಕ್ಷ ದುರ್ಬಲವಾಗಿಲ್ಲ, ಸಂಘಟನೆ ವಿಷಯದಲ್ಲಿ ಸಾಕಷ್ಟು ಶಕ್ತಿಯುತವಾಗಿದೆ. ಇಷ್ಟಾದರೂ ದಿಲ್ಲಿ ವರಿಷ್ಠರಿಗೆ ರಾಜ್ಯ ಬಿಜೆಪಿ ನಾಯಕರ ಮೇಲೆ ಸಾಕಷ್ಟು ಸಿಟ್ಟಿದೆ.

ವರಿಷ್ಠರು ರಾಜ್ಯದಲ್ಲಿ ಈ ಸಲ ಬಿಜೆಪಿಗೆ ಮತ್ತೆ ಅಧಿಕಾರ ಸಿಕ್ಕೇ ಸಿಗುತ್ತದೆಂಬ ನಿರೀಕ್ಷೆಯ ಲ್ಲಿದ್ದರು. ಅದೇ ರೀತಿ ರಾಜ್ಯದ ಮುಂಚೂಣಿ ನಾಯಕರು ವರಿಷ್ಠರಿಗೆ ಪಕ್ಷದ ಗೆಲುವಿನ ಲೆಕ್ಕಾಚಾರ ಕೊಟ್ಟಿದ್ದರು. ಅಂತಿಮವಾಗಿ ಎಲ್ಲವೂ ಉಲ್ಟಾ ಆಗಿರುವುದರಿಂದ ಆ ಸಿಟ್ಟಿನಿಂದ ವರಿಷ್ಠರು ಹೊರ ಬಂದಿಲ್ಲ. ಜತೆಗೆ ರಾಜ್ಯದ ನಾಯಕರು ದಿಲ್ಲಿಗೆ ತೆರಳಿ ಭೇಟಿ ಮಾಡುವ ಧೈರ್ಯವಂತೂ ಇಲ್ಲವೇ ಇಲ್ಲ. ಹೀಗಾಗಿ ಯಾರಿಗೂ ಬೇಡವಾದ ಸ್ಥಿತಿ ರಾಜ್ಯ ಬಿಜೆಪಿ ನಾಯಕರ ಪಾಡಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಹರಿದಾಡುತ್ತಿವೆ.

Advertisement

ಪ್ರತಿಪಕ್ಷದ ನಾಯಕನಾಗಬೇಕೆಂದು ಕೊಂಡವರಿಗೆ ಆ ಜವಾಬ್ದಾರಿ ಕೊಡಲು ಇಷ್ಟವಿಲ್ಲ, ಈಗಾಗಲೇ ನೀಡಿದ್ದ ಜವಾಬ್ದಾರಿಯಿಂದ ಪಕ್ಷ ದೊಡ್ಡ ಪೆಟ್ಟು ತಿಂದಿರುವುದರಿಂದ ಅಂತಹವರ ಮೇಲೆ ಪಕ್ಷದ ಯಾವುದೇ ನಿರೀಕ್ಷೆಗಳನ್ನಿಟ್ಟುಕೊಂಡಿಲ್ಲ. ಮತ್ತೂಂದೆಡೆ ವರಿಷ್ಠರು ಜವಾಬ್ದಾರಿ ಕೊಡಲು ಬಯಸಿರುವ ಶಾಸಕರು ಸಮರ್ಥವಾಗಿ ನಿರ್ವಹಣೆ ಮಾಡುತ್ತಾರೆಯೇ ಎಂಬ ಅನುಮಾನ ಕೂಡ ಇದೆ. ಹೀಗಾಗಿ ಸೂಕ್ತ ವ್ಯಕ್ತಿಗಳು ಸಿಗದ ಹಿನ್ನೆಲೆಯಲ್ಲಿ ಬಿಜೆಪಿಗೆ ಪ್ರತಿಪಕ್ಷ ನಾಯಕರು ಬೇಕಾಗಿದ್ದಾರೆ ಎಂಬ ಸ್ಥಿತಿ ತಲುಪಿದೆ.

ಪೀಠಕ್ಕೆ ಗೌರವ ಕೊಡದಿದ್ದಾಗ ಸ್ಪೀಕರ್‌ ಅವರು ವಿವೇಚನೆ ಬಳಸಿ ತೀರ್ಮಾನಿಸಿದ್ದಾರೆ. ನಾವು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಬಜೆಟ್‌ನಲ್ಲಿಯೂ ಹಲವು ಭರವಸೆಗಳನ್ನು ಈಡೇರಿಸಲು ಹಣ ಮೀಸಲಿಟ್ಟಿ ದ್ದೇವೆ. ಇದರ ಬಗ್ಗೆ ಎಲ್ಲಾ ಚರ್ಚಿಸಬೇಕಾಗುತ್ತದೆ ಎಂಬ ಕಾರಣಕ್ಕೆ ರಾಜಕೀಯ ಲಾಭಕ್ಕಾಗಿ ವಿರೋಧಿಸುತ್ತಿದ್ದಾರೆ.
-ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next