Advertisement

ಅಂತೂ ಸಿಕ್ತು ಮೊದಲ ಹೈಕ ಪ್ರಮಾಣ ಪತ್ರ..!

09:38 AM Feb 10, 2019 | |

ಹರಪನಹಳ್ಳಿ: ತಾಲೂಕನ್ನು ಹೈದ್ರಾಬಾದ್‌ ಕರ್ನಾಟಕ ಪ್ರದೇಶ ವ್ಯಾಪ್ತಿಗೆ ಸೇರ್ಪಡೆಗೊಳಿಸಿ 371(ಜೆ) ಕಲಂ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ ಜನಪ್ರತಿನಿಧಿಗಳು, ಮಠಾಧೀಶರು ಸೇರಿದಂತೆ ತಾಲೂಕಿನ ಜನತೆ ನಿರಂತರ ನಡೆಸಿದ ಹೋರಾಟದ ಪ್ರತಿಫಲವಾಗಿ ಯುವಕನೊಬ್ಬನಿಗೆ ತಾಲೂಕು ಆಡಳಿತ ವತಿಯಿಂದ ಪ್ರಥಮ ಹೈಕ ಪ್ರಮಾಣ ಪತ್ರ ದೊರಕಿದೆ.

Advertisement

ಹರಪನಹಳ್ಳಿ ಬಳ್ಳಾರಿ ಜಿಲ್ಲೆಗೆ ಸೇರಿದ್ದರೂ ಹೈಕ ಪ್ರಮಾಣ ಪತ್ರ ಕೊಡಲು ಬರಲ್ಲ ಎಂದು ಕೆಲವರು ವಿಶ್ಲೇಷಿಸುತ್ತಿದ್ದರು. ಹೈಕ ಪ್ರಮಾಣ ಪತ್ರಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಅರ್ಜಿ ಸ್ವೀಕರಿಸುತ್ತಿರಲಿಲ್ಲ. ಅಲ್ಲದೆ ಆನ್‌ಲೈನ್‌ನಲ್ಲಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಹರಪನಹಳ್ಳಿ ಸೇರಿರಲಿಲ್ಲ. ಹೀಗಾಗಿ ತಾಲೂಕಿನ ಜನರಲ್ಲಿ ಗೊಂದಲ ಉಂಟಾಗಿತ್ತು. ಕಳೆದ ಜ.29ರಂದು ಬಳ್ಳಾರಿ ಜಿಲ್ಲಾಧಿಕಾರಿ ಡಾ| ರಾಮ್‌ಪ್ರಸಾತ್‌ ಮನೋಹರ್‌ ಹರಪನಹಳ್ಳಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಹೈಕ ಪ್ರಮಾಣ ಪತ್ರ ತಂತ್ರಾಂಶ ಸರಿಪಡಿಸಿದ್ದು, ಅರ್ಜಿ ಸಲ್ಲಿಸಬಹುದೆಂದು ತಿಳಿಸಿದ್ದರು. ಅರಸೀಕೆರೆ ಹೋಬಳಿಯ ಸತ್ತೂರು ಗ್ರಾಮದ ಹಳಳ್ಳಿ ಬಸವರಾಜ್‌ ಎಂಬುವರಿಗೆ ಮೊದಲ ಹೈಕ ಪ್ರಮಾಣ ಪತ್ರ(ಹೈಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ತಾಲೂಕು ಆಡಳಿತ ನೀಡುವ ಮೂಲಕ ಗೊಂದಲಗಳಿಗೆ ತೆರೆ ಬಿದ್ದಿದೆ.

ನಿರುದ್ಯೋಗಿಗಳಲ್ಲಿ ಮೂಡಿದ ಭರವಸೆ: 371(ಜೆ) ಕಲಂ ವಿಧಿಯನುಸಾರವಾಗಿ ಹೈಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೆಡಿಕಲ್‌, ಡೆಂಟಲ್‌, ಇಂಜಿನಿಯರಿಂಗ್‌ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಸೀಟು ಹಂಚಿಕೆಯಲ್ಲಿ ಶೇ.70 ಮೀಸಲಾತಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅಲ್ಲದೆ, ಕರ್ನಾಟಕದ ಇತರೆ ಭಾಗದಲ್ಲಿಯೂ ಸಹ ಶೇ.8 ಮೀಸಲಾತಿಯನ್ನು ಈ ಭಾಗದ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಅದೇ ರೀತಿ ಸರ್ಕಾರಿ ಇಲಾಖೆಗಳ ಡಿ ದರ್ಜೆ ಹುದ್ದೆಯಲ್ಲಿ ಶೇ.95, ಶಿಕ್ಷಕರ ನೇಮಕದಲ್ಲಿ ಶೇ.75, ಎ,ಬಿ ಹಾಗೂ ಸಿ ದರ್ಜೆ ಹುದ್ದೆಗಳಲ್ಲಿ ಶೇ.70 ಮೀಸಲು ಸೌಲಭ್ಯ ಸಿಗಲಿದೆ.

ದಾಖಲೆಗಳು ಏನು ಬೇಕು: ಯಾರು 10 ವರ್ಷಗಳ ಕಾಲ ಹೈ-ಕ ಪ್ರದೇಶದಲ್ಲಿ ನೆಲೆಸಿರುತ್ತಾರೆಯೋ ಅವರಿಗೆ ಹೈಕ ಪ್ರಮಾಣ ಪತ್ರ ನೀಡಲು ಅವಕಾಶವಿದೆ. ಹಾಗಾಗಿ ಪ್ರಮಾಣ ಪತ್ರ ಪಡೆಯಲು ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಜನರು ಅಲೆದಾಡುತ್ತಿದ್ದಾರೆ. ಜನನ ದಾಖಲೆ, ವಾಸ ಸ್ಥಳ ಮತ್ತು ವ್ಯಾಸಂಗ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಅಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ದಾಖಲೆ, ಇತ್ತೀಚಿನ 2 ಭಾವಚಿತ್ರ, ಸರ್ಕಾರಿ ನೌಕರರಾಗಿದ್ದಲ್ಲಿ ಅನುಬಂಧ-ಡಿ ಸ್ವಗ್ರಾಮ ಪ್ರಮಾಣ ಪತ್ರ, ಸೇವಾ ಪುಸ್ತಕ ದಾಖಲೆ, ತಾಲೂಕಿನ ವ್ಯಕ್ತಿ ಮದುವೆಯಾದ ಮಹಿಳೆಯರು ಮದುವೆ ನೋಂದಣಿ ದಾಖಲೆ ಸಲ್ಲಿಸಬೇಕು ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಹೋರಾಟದ ಪ್ರತಿಫಲ: 2015 ಡಿಸೆಂಬರ್‌ 13ರಂದು ಅಂದಿನ ಶಾಸಕ ದಿ| ಎಂ.ಪಿ.ರವೀಂದ್ರ ನೇತೃತ್ವದಲ್ಲಿ ಸರ್ವ ಪಕ್ಷದ ನಿಯೋಗ ಬೆಂಗಳೂರಿಗೆ ತೆರಳಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೌಲಭ್ಯ ಕಲ್ಪಿಸುವಂತೆ ಮನವರಿಕೆ ಮಾಡಲಾಗಿತ್ತು. ಇದಕ್ಕೆ ಸರ್ಕಾರ ಸ್ಪಂದಿಸದಿದ್ದಾಗ 2016 ಜುಲೈ 21ರಂದು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹರಪನಹಳ್ಳಿ ಬಂದ್‌ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಹೈಕ ಸೌಲಭ್ಯ ದೊರಕದ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಚುನಾವಣೆ ಬಹಿಷ್ಕರಿಸುವಂತೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಂ.ಪಿ. ರವೀಂದ್ರ ಘೋಷಿಸಿದ್ದರು. ನೀಲಗುಂದ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಜಿಲ್ಲಾಧಿಕಾರಿ ಕಚೇರಿ ಎದುರು 3 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕಳೆದ ಮಾ. 3ರಂದು ಸಿದ್ದರಾಮಯ್ಯ ಸರ್ಕಾರ ಸಚಿವ ಸಂಪುಟದಲ್ಲಿ ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಹೈಕ ಪ್ರಮಾಣ ಪತ್ರ ವಿತರಿಸುವುದರಿಂದ ಜನರ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ.

Advertisement

ತಾಲೂಕಿಗೆ 371(ಜೆ) ಕಲಂ ಸೌಲಭ್ಯ ದೊರೆಯಬೇಕೆಂದು ಡಿಸಿ ಕಚೇರಿ ಎದುರು ಉಪವಾಸ ಧರಣಿ ನಡೆಸಿದ್ದೇನೆ. ನಮ್ಮ ಹೋರಾಟ ಮತ್ತು ಸಂಘ-ಸಂಸ್ಥೆ ಹೋರಾಟಕ್ಕೆ ಜಯ ಸಿಕ್ಕಿದೆ. ಇದಕ್ಕೆ ಕಾರಣ ಎಂ.ಪಿ.ರವೀಂದ್ರ ಎಂಬುದು ಯಾರೂ ಮರೆಯುವಂತಿಲ್ಲ. ಹರಪನಹಳ್ಳಿ ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಅಶಯ. ಅಧಿಕಾರಿಗಳು ತ್ವರಿತವಾಗಿ ಪ್ರಮಾಣ ಪತ್ರ ವಿತರಿಸಬೇಕು. •ಚನ್ನಬಸವ ಶಿವಯೋಗಿ ಸ್ವಾಮೀಜಿ, ಗುಡ್ಡದ ವಿರಕ್ತಮಠ, ನೀಲಗುಂದ

ಹರಪನಹಳ್ಳಿ ಬಂದ್‌ ಸೇರಿದಂತೆ ನಿರಂತರ ಚಳವಳಿ ಹಾಗೂ ಶಾಸಕ ಎಂ.ಪಿ.ರವೀಂದ್ರ ಅವರ ಶ್ರಮದ ಫಲವಾಗಿ ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ತಾಲೂಕನ್ನು ಪುನಃ ಸರ್ಕಾರ ಸೇರಿಸಿದೆ. 371(ಜೆ) ಸೌಲಭ್ಯ ದೊರೆಯುವುದರಿಂದ ಹರಪನಹಳ್ಳಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ. ಇಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲಿದೆ. ಹೈಕ ಪ್ರಮಾಣ ಪತ್ರ ವಿತರಣೆಯಾಗಿರುವುದು ಹೋರಾಟಕ್ಕೆ ಸಿಕ್ಕ ಪ್ರತಿಫಲ. •ಕೋಡಿಹಳ್ಳಿ ಭೀಮಪ್ಪ, ಪ್ರಗತಿಪರ ಹೋರಾಟಗಾರ.

•ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next