Advertisement
ಈಗ ಈ ಗುರುಕುಲ ಮೂರು ದಶಕಗಳನ್ನು ಯಶಸ್ವಿಯಾಗಿ ಪೂರೈಸಿ ಮುಂದೆ ಸಾಗುತ್ತಿದೆ. ಶಿಕ್ಷಣ ಜತೆಗೆ ನೇಯ್ಗೆ, ತೋಟಗಾರಿಕೆ, ಕೃಷಿ, ನೂಲು, ರೇಷ್ಮೆ, ವ್ಯವಸಾಯ, ಹೈನುಗಾರಿಕೆ ಜತೆಗೆ ಕಂಪ್ಯೂಟರ್ ಶಿಕ್ಷಣವನ್ನೂ ಮಕ್ಕಳಿಗೆ ನೀಡಲಾಗುತ್ತಿದೆ. ತನ್ಮೂಲಕ ಹೊಸರಿತ್ತಿಯಲ್ಲಿರುವ ಈ ಶಾಲೆ ಗಾಂಧಿ ಕನಸನ್ನು ನನಸಾಗಿಸಿದೆ. ಗಾಂಧಿ ತತ್ವಗಳನ್ನು ಇವತ್ತಿಗೂ ಜೀವಂತವಾಗಿ ಕಾಣಲು ಸಿಗುವ ರಾಜ್ಯದ ಏಕೈಕ ಶಾಲೆ ಎಂಬ ಖ್ಯಾತಿಯೂ ಇದಕ್ಕಿದೆ.
Related Articles
Advertisement
ಸಂಪೂರ್ಣ ಖಾದಿಮಯ: ಗುರುಕುಲದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಇತರೆ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರು ಬಳಸುವ, ತೊಡುವ ಬಟ್ಟೆ ಖಾದಿಯದ್ದೇ ಆಗಿರುತ್ತದೆ. ವಿವಿಧ ಆಕಾರ, ವಿವಿಧ ಬಣ್ಣದಿಂದಾಗಿದ್ದರೂ ಅದು ಖಾದಿಯದ್ದೇ ಆಗಿರುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲಾ ಅವಧಿ ನಂತರವಾಗಲಿ ಅಥವಾ ಬಿಡುವಿನ ದಿನವಾಗಲಿ ಸಮವಸ್ತ್ರವಲ್ಲದ ಬಟ್ಟೆ ತೊಡಲೇನೂ ಅಡ್ಡಿಯಿಲ್ಲ. ಆದರೆ, ಅದೂ ಖಾದಿಯದ್ದೇ ಆಗಿರಬೇಕು ಎಂಬುದು ನಿಯಮ. ಇಲ್ಲಿನ ಪ್ರತಿಯೊಬ್ಬ ಸಿಬ್ಬಂದಿ, ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಖಾದಿ ಬಟ್ಟೆಗಳನ್ನು ಇಷ್ಟಪಟ್ಟು ತೊಡುತ್ತಿರುವುದು ರಾಷ್ಟ್ರಕ್ಕೆ ಒಂದು ಮಾದರಿಯಾಗಿದೆ.
ಗಾಂಧಿ ಗುರುಕುಲ ಹುಟ್ಟು: ಈ ಶಾಲೆಯ ಎದುರು ಹಳ್ಳಿಕೇರಿಯವರ ಸುಂದರ ಸ್ಮಾರಕವಿದೆ. ಗುದ್ಲೆಪ್ಪ ಜಿಲ್ಲೆಯ ಹಿರಿಯ ಸ್ವಾತಂತ್ರ ಹೋರಾಟಗಾರ. 1928ರಲ್ಲಿ ಸ್ಥಾಪನೆಯಾದ ಗಾಂಧಿ ಆಶ್ರಮ ರಾಜಕೀಯ ಯೋಧರ ಗರಡಿಮನೆಯಾಗಿತ್ತು. ಹಳ್ಳಿಕೇರಿಯವರಿಗೆ ತಮ್ಮ ಹುಟ್ಟೂರಾದ ಹೊಸರಿತ್ತಿ ಬಗ್ಗೆ ಅಪಾರ ಪ್ರೀತಿ. ಮಹಾತ್ಮ ಗಾಂಧಿ ಯವರ ಆದರ್ಶಗಳನ್ನು ಪ್ರತಿಬಿಂಬಿಸುವ ಗ್ರಾಮೀಣ ಮಕ್ಕಳಿಗಾಗಿ ಒಂದು ಗುರುಕುಲ ಸ್ಥಾಪಿಸಬೇಕೆಂಬುದು ಅವರ ಕನಸಾಗಿತ್ತು. ಅವರ ಕನಸಿನ ಕೂಸೇ ಈ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ. ಇದಕ್ಕಾಗಿ ಅವರು ವಿವಿಧ ವಸತಿ ಶಾಲೆಗಳಿಗೆ ಭೇಟಿ ನೀಡಿ, ತಜ್ಞರ ಜತೆ ಸಮಾಲೋಚನೆ ನಡೆಸಿ, ಶಿಕ್ಷಣ ತಜ್ಞ ಮ.ಗು. ಹಂದ್ರಾಳರ ಜತೆ ಯೋಜನೆ ರೂಪಿಸಿದರು. ಈ ಯೋಜನೆಯನ್ವಯ 1984 ಅಕ್ಟೋಬರ್ 2ರಂದು ಈ ಅಪರೂಪದ ಶಾಲೆ ಆರಂಭವಾಗಿ ಇಂದಿಗೆ 35 ವರ್ಷ. 1984ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ ಇಂದು 240ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದಾರೆ.
ಪರಿಮಿತ ಪ್ರವೇಶ: ಉಳಿದ ಶಾಲೆಗಳಿಗಿಂತಲೂ ಕೊಂಚ ಭಿನ್ನವಾಗಿರುವ ಈ ಶಾಲೆಯಯಲ್ಲಿ ಶಿಕ್ಷಣ ಪಡೆಯಲು ಸಾವಿರಾರು ವಿದ್ಯಾರ್ಥಿಗಳು ಸೀಟ್‌ಗಾಗಿ ಮುಗಿ ಬೀಳುತ್ತಾರೆ. ಆದರೆ, ಇಲ್ಲಿ ಪ್ರತಿ ವರ್ಷ 5ನೇ ತರಗತಿಗೆ 40 ವಿದ್ಯಾರ್ಥಿಗಳಿಗೆ ಮೀರಿ ಪ್ರವೇಶ ನೀಡಲ್ಲ. ಮಧ್ಯದಲ್ಲಿ ಶಾಲೆ ಬಿಡಲು, ಬೇರೆ ಶಾಲೆಗೆ ಹೋಗಲು ಅವಕಾಶವಿಲ್ಲ. 5 ರಿಂದ 10ನೇ ತರಗತಿಯವರೆಗೆ ಸರಕಾರಿ ಪಠ್ಯದಂತೆಯೇ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ.
ಇದರ ಜತೆಗೆ ಸ್ವಾವಲಂಬಿ ಬದುಕು ರೂಪಿಸುವ ಹಾಗೂ ಗಾಂಧಿಧೀಜಿಯವರ ತತ್ವಾದರ್ಶಗಳನ್ನು ಬೋಧಿ ಸಲಾಗುತ್ತದೆ. ಇಲ್ಲಿ ಪ್ರವೇಶ ಪಡೆಯಬೇಕೆಂದರೆ ರಾಜ್ಯದ ಯಾವುದೇ ಮೂಲೆಯ ಗ್ರಾಮಾಂತರ ವಿದ್ಯಾರ್ಥಿಗಳು ನಾಲ್ಕನೇ ತರಗತಿ ಪಾಸಾಗಿರಬೇಕು. ಕೃಷಿ ಬಗ್ಗೆ ಪ್ರೀತಿ ಇರುವವರಿಗೆ ಆದ್ಯತೆ. ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಪಾಸಾಗಿರಬೇಕು. ಲಿಖೀತ-ಮೌಖೀಕ ಪ್ರವೇಶ ಪರೀಕ್ಷೆ ನಡೆಸಿದ ಬಳಿಕ ಆಯ್ಕೆ ಮಾಡಲಾಗುತ್ತದೆ. ಒಟ್ಟಾರೆ ಗಾಂಧಿ ತತ್ವಾದರ್ಶನಗಳನ್ನೇ ಮಾದರಿಯಾಗಿಟ್ಟುಕೊಂಡು ಮಕ್ಕಳಿಗೆ ಶಿಕ್ಷಣ ನೀಡುವ ಈ ಗುರುಕುಲ ವಿಶೇಷ ಹಾಗೂ ವಿಶಿಷ್ಟವಾಗಿದೆ.
ಇಲ್ಲಿ ಎಲ್ಲರೂ ಸಹೋದರರಂತೆ ಸಹಕಾರ ಸಹಬಾಳ್ವೆಯಿಂದ ಕಲಿತು ನಲಿಯುತ್ತಿದ್ದಾರೆ. ಉತ್ತಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಆಟ, ಪಾಠದೊಂದಿಗೆ ನಾವು ಸ್ವಾವಲಂಬಿಗಳಾಗಿ ಹೇಗೆ ಜೀವನ ನಡೆಸಬೇಕೆಂಬ ಶಿಕ್ಷಣ ನೀಡಲಾಗುತ್ತದೆ. ಎಲ್ಲ ಕೆಲಸಗಳನ್ನು ವಿದ್ಯಾರ್ಥಿಗಳು ಪ್ರೀತಿಯಿಂದಲೇ ಮಾಡಲು ಪ್ರೇರೇಪಿಸುವ ವಾತಾವರಣ ಇದೆ. ಹಾಗಾಗಿ ಇಲ್ಲಿ ಶಿಕ್ಷಣ ವಿದ್ಯಾರ್ಥಿಗಳಿಗೆ ಖುಷಿ ಕೊಡುತ್ತದೆ. –ಎಸ್.ಎನ್. ಚಳಗೇರಿ, ಪ್ರಾಂಶುಪಾಲರು, ಗುರುಕುಲ
-ಎಚ್.ಕೆ. ನಟರಾಜ