Advertisement

ಈಡೇರಿದ ಮಣೂರು ಗ್ರಾಮಸ್ಥರ ಶತಮಾನದ ಕನಸು

09:32 PM Nov 10, 2019 | Sriram |

ಕೋಟ: ಕೋಟ ಸಮೀಪದ ಮಣೂರು ಗ್ರಾಮವು ವಿಶಾಲ ಕೃಷಿ ಭೂಮಿ ಹೊಂದಿದ್ದು ಇಲ್ಲಿನ ಮಣೂರು ರಾಮಪ್ರಸಾದ್‌ ಶಾಲೆ ಎದುರಿನ ರಸ್ತೆಯಿಂದ ಮಣೂರು-ಪಡುಕರೆ ನಡುವೆ ಸುಮಾರು 200 ಎಕ್ರೆ ವ್ಯಾಪ್ತಿಯಲ್ಲಿ ಈ ಭಾಗದ ರೈತರ ಕೃಷಿ ಭೂಮಿ ಇದೆ. ಆದರೆ ಈ ಪ್ರದೇಶಕ್ಕೆ ಸೂಕ್ತವಾದ ಸಂಪರ್ಕ ವ್ಯವಸ್ಥೆ ಇಲ್ಲ. ಹೀಗಾಗಿ ಇಲ್ಲಿ ರಸ್ತೆ ನಿರ್ಮಾಣವಾಗಬೇಕು ಎನ್ನುವುದು ಇಲ್ಲಿನ ರೈತರ ಶತಮಾನಗಳ ಕನಸಾಗಿತ್ತು ಮತ್ತು ಈ ಕುರಿತು ಸಾಕಷ್ಟು ಹೋರಾಟ ನಡೆದಿತ್ತು. ಇದೀಗ ರಾಜ್ಯ ಯೋಜನಾ ಅನುಷ್ಠಾನ ಘಟಕ ಮತ್ತು ಚಂಡಮಾರುತ ಉಪಶಮನ ಯೋಜನೆಯಡಿಯಲ್ಲಿ ಇಲ್ಲಿನ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕಾಗಿ 10,86,73,709ರೂ ಹಣ ಬಿಡುಗಡೆಯಾಗಿ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಈ ಮೂಲಕ ಜನರ ಶತಮಾನದ ಕನಸು ಈಡೇರುತ್ತಿದೆ.

Advertisement

5.ಕಿಮೀ. ಉಳಿತಾಯ
ಈ ರಸ್ತೆ ನಿರ್ಮಾಣವಾದಲ್ಲಿ ಮಣೂರು-ಪಡುಕರೆಯ ನಿವಾಸಿಗಳು ಮಣೂರು ರಾಮಪ್ರಸಾದ್‌ ಶಾಲೆಯ ಸಮೀಪ ರಾಷ್ಟ್ರೀಯ ಹೆದ್ದಾರಿ ಹಾಗೂ ತೆಕ್ಕಟ್ಟೆ ಸಂಪರ್ಕಿಸಲು 5.ಕಿ.ಮೀ. ಉಳಿತಾಯವಾಗಲಿದೆ ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭ ಸುರಕ್ಷಿತ ಪ್ರದೇಶಕ್ಕೆ ವಲಸೆ ಹೋಗಲು ಅನುಕೂಲವಾಗಲಿದೆ.

ಕೃಷಿಗೆ ಉತ್ತೇಜನ
ಇಲ್ಲಿನ ವಿಸ್ತಾರವಾದ ಕೃಷಿಭೂಮಿಯ ಮಧ್ಯದಲ್ಲಿ ಹೊಳೆಯೊಂದು ಹರಿಯುತ್ತದೆ ಹಾಗೂ ಕೃಷಿಕರ ಎಕ್ರೆಗಟ್ಟಲೆ ಭೂಮಿ ಹೊಳೆಯ ಆಚೆ-ಈಚೆಗೆ ಪ್ರತ್ಯೇಕಿಸಲ್ಪಡುತ್ತದೆ. ಪ್ರಸ್ತುತ ಹೊಳೆ ದಾಟಲು ಬೂಡನಗುಂಡಿ ಎನ್ನುವಲ್ಲಿ ಮರದ ಸೇತುವೆ ಇದ್ದು ಮಳೆಗಾಲ್ಲಿ ಕೃಷಿಚಟುವಟಿಕೆ ನಡೆಸುವುದು ಕಷ್ಟವಾಗಿತ್ತು. ಇದರಿಂದ ಹಲವಾರು ಎಕ್ರೆ ಕೃಷಿಭೂಮಿ ಹಡಿಲು ಬಿದ್ದಿತ್ತು. ಇದೀಗ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಕೃಷಿಚಟುವಟಿಕೆಗೆ ಒಂದಷ್ಟು ಉ¤ತೇಜನ ಸಿಗಲಿದೆ.

ಸೇತುವೆ, ರಸ್ತೆ ನಿರ್ಮಾಣ
ಮಂಜೂರಾದ ಹಣದಲ್ಲಿ 2ಕಿ.ಮೀ. ಡಾಮರೀಕೃತ ರಸ್ತೆ ಹಾಗೂ ಬೂಡನಗುಂಡಿಯಲ್ಲಿ ಕಾಂಕ್ರೀಟ್‌ ಸೇತುವೆ ನಿಮಾರ್ಣವಾಗಲಿದೆ.

ಬೀದಿ ದೀಪ, ಕೃಷಿಭೂಮಿಗೆ ಹಾನಿಯಾಗದಂತೆ ನೀರು ಹರಿದುಹೋಗಲು ಚರಂಡಿ, ಗದ್ದೆಗೆ ಇಳಿಯಲು ಸ್ಟೆಪ್‌ ವ್ಯವಸ್ಥೆ ಮಾಡಲಾಗುತ್ತದೆ.

Advertisement

ಕಟಾವು ಮುಗಿದಾಕ್ಷಣ ಕಾಮಗಾರಿ
ಟೆಂಡರ್‌ ಪ್ರಕ್ರಿಯೆ ಮುಗಿದು ಕಾಮಗಾರಿ ನಡೆಸಲು ಸರ್ವ ಸಿದ್ಧತೆಗಳಾಗಿದ್ದು ಕಟಾವು ಮುಗಿದ ತಕ್ಷಣ ಕೆಲಸ ಆರಂಭವಾಗಲಿದೆ ಹಾಗೂ ರಸ್ತೆ, ಸೇತುವೆ ಮುಂತಾದ ಸೌಲಭ್ಯಗಳು ಲಭ್ಯವಾಗಲಿವೆ.
-ಹರೀಶ್‌,ಕಿರಿಯ ಕಾರ್ಯನಿರ್ವಹಕ ಎಂಜಿನಿಯರ್‌ , ಪಿಬ್ಲೂéಡಿ

ನಮ್ಮ ಶತಮಾನದ ಕನಸು ನನಸಾಗುತ್ತಿದೆ
ಇಲ್ಲಿನ ಸಂಪರ್ಕ ರಸ್ತೆಯ ನಿರ್ಮಾಣಕ್ಕಾಗಿ ಶತಮಾನಗಳಿಂದ ಹೋರಾಟ ನಡೆಸಲಾಗುತ್ತಿದ್ದು ಇದೀಗ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿ ಟೆಂಡರ್‌ ಮುಗಿದಿರುವುದು ಸಾಕಷ್ಟು ಸಂತಸ ತಂದಿದೆ.ಕಾಮಗಾರಿ ನಡೆಯುವಾಗ ಗ್ರಾಮಸ್ಥರು ಸಹಕಾರ ನೀಡಬೇಕು ಹಾಗೂ ತಲೆತಲಾಂತರಕ್ಕೂ ಈ ರಸ್ತೆ ಉಪಯೋಗವಾಗಲಿದೆ ಎನ್ನುವುದನ್ನು ಮರೆಯಬಾರದು.
-ಜಯರಾಮ್‌ ಶೆಟ್ಟಿ,
ಸ್ಥಳೀಯ ಕೃಷಿಕರು

ಉದಯವಾಣಿ ವರದಿ
ಇಲ್ಲಿನ ಕೃಷಿಕರ ಸಮಸ್ಯೆ ಹಾಗೂ ಸೇತುವೆ, ರಸ್ತೆಯ ಅಗತ್ಯದ ಕುರಿತು ಉದಯವಾಣಿ ಹಲವು ಬಾರಿ ವರದಿ ಪ್ರಕಟಿಸಿತ್ತು ಹಾಗೂ ವರದಿಯು ಪ್ರಕಟವಾದ ಅನಂತರ ಅಂತಿಮ ಸರ್ವೆ ನಡೆದು ಕಾಮಗಾರಿಗೆ ಅನುಮೋದನೆ ದೊರೆತಿತ್ತು.

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next