“ಪ್ರೇಮಂ’ ಎಂಬ ಹೆಸರಿಡುತ್ತಿದ್ದಂತೆಯೇ ಇದು ಮಲಯಾಳಂ ಚಿತ್ರದ ರೀಮೇಕಾ ಎಂದು ಹಲವರು ಕೇಳಿದರಂತೆ. ಆದರೆ, ಹೆಸರಷ್ಟೇ ರೀಮೇಕು, ಮಿಕ್ಕಿದ್ದೆಲ್ಲಾ ಸ್ವಮೇಕು ಎಂಬುದು ನಿರ್ದೇಶಕ ಹರೀಶ್ ಮಾಂಡವ್ಯ ಅವರ ಅಭಿಪ್ರಾಯ. ಸಂಪೂರ್ಣ ಹೊಸಬರ ತಂಡವೊಂದನ್ನು ಕಟ್ಟಿರುವ ಅವರು, “ಪ್ರೇಮಂ’ ಎಂಬ ಪ್ರೇಮಮಯ ಚಿತ್ರವೊಂದನ್ನು ಮಾಡುವುದಕ್ಕೆ ಹೊರಟಿದ್ದಾರೆ.
ಅಂದಹಾಗೆ, “ಪ್ರೇಮಂ’ ಚಿತ್ರದ ಮುಹೂರ್ತ ಬುಧವಾರ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಮುಖ್ಯ ಅತಿಥಿಯಾಗಿ ಹಿರಿಯ ನಟಿ ತಾರಾ ಭಾಗವಹಿಸಿದ್ದಾರೆ. ಈ ತಂಡದಲ್ಲಿ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾತ್ರ ಹಳಬರು. ಮಿಕ್ಕಂತೆ ಕಥೆ ಬರೆದಿರುವ ಅನೀಶ್ ಆಗಲೀ, ನಿರ್ದೇಶಕ ಹರೀಶ್ ಮಾಂಡವ್ಯ ಆಗಲೀ, ಛಾಯಾಗ್ರಹಣ ಮಾಡುತ್ತಿರುವ ಪುಷ್ಪರಾಜ್ ಸಂತೋಷ್ ಆಗಲೀ ಎಲ್ಲರೂ ಹೊಸಬರೇ.
ಇನ್ನು ಚಿತ್ರದ ನಾಯಕ ಧನು ಗೌಡ ಮತ್ತು ನಾಯಕಿ ಮೋಕ್ಷ ಸಹ ಹೊಸಬರೇ. ಧನುಗಾದರೂ “ಹೊಂಬಣ್ಣ’ ಎನ್ನುವ ಚಿತ್ರದಲ್ಲಿ ನಟಿಸಿದ ಅನುಭವ ಇದೆ. ಆದರೆ, ಮೋಕ್ಷ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರಂತೆ. ಹರೀಶ್ ಈ ಚಿತ್ರ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ, ಇದು ನೈಜತೆಗೆ ಹತ್ತಿರವಿರುವ ಕಥೆ ಎಂಬ ಕಾರಣಕ್ಕೆ.
“ಅದೊಂದು ದಿನ ಅನೀಶ್ ಬಂದು ಕಥೆ ಹೇಳಿದರು. ನೈಜತೆಗೆ ಹತ್ತಿರವಾದ ಕಥೆ ಇದು. ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತಿಯೊಬ್ಬರೂ ತಮ್ಮಲ್ಲಿ ನಾಯಕ ಅಶೋಕ್‌ನ ಪಾತ್ರವನ್ನು ನೋಡಿಕೊಳ್ಳುತ್ತಾರೆ. ಇಲ್ಲಿ ಬರೀ ಹುಡುಗ-ಹುಡುಗಿಯ ಪ್ರೀತಿಯಷ್ಟೇ ಅಲ್ಲ, ತಂದೆ-ಮಕ್ಕಳ ನಡುವಿನ ಪ್ರೀತಿಯೂ ಇದೆ’ ಎನ್ನುತ್ತಾರೆ ಹರೀಶ್.
ಈ ಚಿತ್ರದಲ್ಲಿ ಅವರು ಐಟಿ ಕ್ಷೇತ್ರದ ಜನರ ಬದುಕು ಮತ್ತು ಬವಣೆಗಳನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಈ ಚಿತ್ರವನ್ನು ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕನಕಪುರ ಮುಂತಾದ ಕಡೆ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗುತ್ತದಂತೆ. ಈ ಚಿತ್ರವನ್ನು ಸಿ.ಎಂ.ಎಚ್ ಎಂಟರ್‌ಟೈನ್‌ಮೆಂಟ್ಸ್‌ನಡಿ ಶ್ವೇತಾ ಎನ್ನುವವರು ನಿರ್ಮಿಸುತ್ತಿದ್ದಾರೆ.