Advertisement

ಇದು ಬೊಮ್ಮಾಯಿ ಬಜೆಟ್ ಅಲ್ಲ,ಆರ್ ಎಸ್ ಎಸ್ ಬಜೆಟ್: ಕಲಾಪದಲ್ಲಿ ಸಿದ್ದರಾಮಯ್ಯ ಕಿಡಿ

05:06 PM Mar 07, 2022 | Team Udayavani |

ಬೆಂಗಳೂರು : ಬಜೆಟ್ ಮಂಡಿಸುವಾಗ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಅವರ ತಂದೆಗಿಂತ ಆರ್ ಎಸ್ ಎಸ್ ಪ್ರಭಾವವೇ ಹೆಚ್ಚಾಗಿ ಬೀರಿದೆ. ಇದು ಬೊಮ್ಮಾಯಿ ಬಜೆಟ್ ಅಲ್ಲ, ಆರ್ ಎಸ್ ಎಸ್ ಬಜೆಟ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ವಿಧಾನಸಭೆಯಲ್ಲಿ ಕಿಡಿಕಾರಿದ್ದಾರೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಥಮ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ನಾನು ಇಟ್ಟುಕೊಂಡಿದ್ದೆ, ಆದರೆ ಬಜೆಟ್ ನಂತರ ಆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದೆ ಎಂದು ಬಹಳ ಬೇಸರದಿಂದ ಹೇಳುತ್ತಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದರು.

ಆರ್.ಎಸ್.ಎಸ್ ನವರು ಯಾರಾದರೂ ಇಂಥಾ ಬಜೆಟ್ ಮಂಡಿಸಿದ್ದರೆ ನನಗೇನು ಬೇಸರ ಆಗುತ್ತಾ ಇರಲಿಲ್ಲ, ಆದರೆ 2008 ರ ವರೆಗೆ ಆರ್.ಎಸ್.ಎಸ್, ಬಿಜೆಪಿ ಸಂಪರ್ಕವಿಲ್ಲದೆ ಆ ನಂತರ ಬಿಜೆಪಿ ಸೇರಿದ ಬೊಮ್ಮಾಯಿ ಅವರು ಇಂಥಾ ಬಜೆಟ್ ಮಂಡನೆ ಮಾಡುತ್ತಾರೆಂಬ ನಿರೀಕ್ಷೆ ಇರಲಿಲ್ಲ. ಎಸ್.ಆರ್ ಬೊಮ್ಮಾಯಿ ಅವರ ಪ್ರಭಾವ ಬಸವರಾಜ ಬೊಮ್ಮಾಯಿ ಅವರ ಮೇಲಿದೆ ಎಂದು ನಂಬಿದ್ದೆ, ಆದರೆ ಅವರ ತಂದೆಯ ಪ್ರಭಾವಕ್ಕಿಂತ ಆರ್.ಎಸ್.ಎಸ್ ಅವರ ಪ್ರಭಾವವೇ ಹೆಚ್ಚು ಬೀರಿರುವಂತೆ ಕಾಣುತ್ತಿದೆ. ಬಜೆಟ್ ಜನರ ನಿರೀಕ್ಷೆಗಳಿಗೆ ವಿರುದ್ಧವಾಗಿದೆ.

ಇದನ್ನೂ ಓದಿ : 50 ನಿಮಿಷಗಳ ಕಾಲ ಪುಟಿನ್ ಜತೆ ಮಾತುಕತೆ; ಪ್ರಧಾನಿ ಮೋದಿ ನೀಡಿದ ಸಲಹೆ ಏನು?

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಯಿತು. ಈ ಮೂರು ವರ್ಷಗಳ ಸಾಧನೆ ಏನು ಎಂದು ಬಜೆಟ್ ನಲ್ಲಿ ಹೇಳಿಲ್ಲ. ಬಸವರಾಜ ಬೊಮ್ಮಾಯಿ ಅವರು ಹೊಸದಾಗಿ ಮುಖ್ಯಮಂತ್ರಿ ಆಗಿರುವುದರಿಂದ ಹೊಸ ಆಶ್ವಾಸನೆಗಳ ಪಟ್ಟಿಯಂತೆ ಈ ಬಜೆಟ್ ಇದೆ. ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಕಳೆದ ಎರಡು ವರ್ಷ ಕೊರೊನಾ ಇತ್ತು, ತೆರಿಗೆ ಸಂಗ್ರಹ ಆಗಿಲ್ಲ ಎಂಬೆಲ್ಲಾ ಕಾರಣಗಳನ್ನು ನೀಡಿ, ಇದಕ್ಕಾಗಿ ವಿತ್ತೀಯ ಹೊಣೆಗಾರಿಕೆ ನೀತಿಗೆ ತಿದ್ದುಪಡಿ ಮಾಡಬೇಕಾಯಿತು, ಸಾಲ ಹೆಚ್ಚು ಮಾಡಬೇಕಾಯಿತು ಎಂಬ ಸಬೂಬು ನೀಡುತ್ತಿದೆ. ಇದನ್ನು ನಾನು ಒಪ್ಪುವುದಿಲ್ಲ. ಬಿಜೆಪಿ ತಾನು ಅಧಿಕಾರಕ್ಕೆ ಬರುವ ಮೊದಲು ನೀಡಿದ ಭರವಸೆಗಳು ಮತ್ತು ಅಧಿಕಾರಕ್ಕೆ ಬಂದ ನಂತರದ ಸಾಧನೆಗಳನ್ನು ಬಜೆಟ್ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡಬೇಕಿತ್ತು. ಕಾರಣ ನಾವು ರಾಜ್ಯದ ಪ್ರತಿಯೊಂದು ವ್ಯಕ್ತಿಗೂ ಉತ್ತರದಾಯಿಗಳು. ಸರ್ಕಾರ ಜನರಿಂದ ಮಾಹಿತಿಯನ್ನು ಮುಚ್ಚಿಟ್ಟರೆ ಅದು ಸರ್ವಾಧಿಕಾರ , ಮಾಹಿತಿಯನ್ನು ಬಿಚ್ಚಿಟ್ಟರೆ ಮಾತ್ರ ಅದು ಪ್ರಜಾಪ್ರಭುತ್ವ ಆಗುತ್ತದೆ.

Advertisement

ನಾನು ಒಟ್ಟು 13 ಬಜೆಟ್ ಮಂಡಿಸಿದ್ದೀನಿ, ಅದರಲ್ಲಿ ಮುಖ್ಯಮಂತ್ರಿಯಾಗಿ ಆರು ಬಜೆಟ್ ಮಂಡಿಸಿದ್ದೇನೆ. ನಮ್ಮ ಸರ್ಕಾರದ ಬಜೆಟ್ ಪುಸ್ತಕದಲ್ಲಿ ಪ್ರತೀ ಇಲಾಖೆಯಲ್ಲಿ ನಾವೇನು ಭರವಸೆ ನೀಡಿದ್ದೆವು, ಏನೆಲ್ಲಾ ಕಾರ್ಯಗತಗೊಳಿಸಿದ್ದೇವೆ ಮತ್ತು ಮುಂದೆ ಏನೆಲ್ಲಾ ಮಾಡುತ್ತೇವೆ ಎಂಬ ಸಂಪೂರ್ಣ ಮಾಹಿತಿ ಇದೆ. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಮೇಲೆ ಇಲಾಖಾವಾರು ಬದಲಿಗೆ ವಲಯವಾರು ಬಜೆಟ್ ಮಂಡನೆ ಆರಂಭ ಮಾಡಿದರು. ಅಂದಿನಿಂದ ಆರು ವಲಯಗಳಿಗೆ ಸಂಬಂಧಿಸಿದಂತೆ ಮಾತ್ರ ಮಾಹಿತಿಯಿದೆ, ಇಲಾಖಾವಾರು ಮಾಹಿತಿ ಕಣ್ಮರೆಯಾಗಿದೆ. ಇದೇ ಪರಿಪಾಠವನ್ನು ಬಸವರಾಜ ಬೊಮ್ಮಾಯಿ ಅವರು ಮುಂದುವರೆಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ಹಿಂದಿನ ಎರಡು ಬಾರಿಯೂ ಆಕ್ಷೇಪ ವ್ಯಕ್ತಪಡಿಸಿದ್ದೆ, ಈಗಲೂ ಅದೇ ಮಾತು ಹೇಳುತ್ತಿದ್ದೇನೆ. ಬಿಜೆಪಿಯವರು ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಆಡಳಿತಕ್ಕೆ ಬಂದರೆ ಡಬ್ಬಲ್ ಇಂಜಿನ್ ಸರ್ಕಾರ ಬರುತ್ತೆ, ಸ್ವರ್ಗ ಸೃಷ್ಟಿಯಾಗುತ್ತೆ ಎಂದು ಬಣ್ಣದ ಮಾತುಗಳಾಡಿ ನಂಬಿಸಿದ್ದರು, ಈ ಬಜೆಟ್ ನೋಡಿದ ಮೇಲೆ ಇದು ಡಬ್ಬಲ್ ಇಂಜಿನ್ ಸರ್ಕಾರ ಅಲ್ಲ “ಡಬ್ಬಾ ಸರ್ಕಾರ” ಎಂದನಿಸುತ್ತಿದೆ.

ಈ ಸಾಲಿನ ಬಜೆಟ್ ಗಾತ್ರ 2,65,270 ಕೋಟಿ ರೂಪಾಯಿ. 2022-23 ನೇ ಸಾಲಿಗೆ ರಾಜಸ್ವ ಕೊರತೆ ರೂ. 14,699 ಕೋಟಿ. ರಾಜ್ಯದಲ್ಲಿ ವಿತ್ತೀಯ ಹೊಣೆಗಾರಿಕೆ ನೀತಿ ಅನುಮೋದನೆ ಆದದ್ದು 2002 ರಲ್ಲಿ, ಅದರ ಪ್ರಕಾರ 2006 ರ ಮಾರ್ಚ್ ವೇಳೆಗೆ ಮೂರು ನಿಯಮಗಳನ್ನು ಸರ್ಕಾರ ತಲುಪಲೇಬೇಕು ಎಂದು ಹೇಳಲಾಗಿತ್ತು. ಮುಖ್ಯವಾಗಿ ಪಿಸ್ಕಲ್ ಡಿಫಿಸಿಟ್ 3% ಗಿಂತ ಕಡಿಮೆ ಇರಬೇಕು, ರಾಜಸ್ವ ಉಳಿಕೆ ಇರಬೇಕು ಮತ್ತು ರಾಜ್ಯದ ಸಾಲ ಜಿಎಸ್‌ಡಿಪಿ ಯ 25% ಅನ್ನು ಮೀರುವಂತಿಲ್ಲ ಎಂಬ ನಿಯಮಗಳಿವೆ. ಈ ಮೂರು ಮಾನದಂಡಗಳನ್ನು ಒಂದು ವರ್ಷ ಮೊದಲೇ ಅಂದರೆ 2005 ರ ಮಾರ್ಚ್ ಗೆ ನಾವು ತಲುಪಿದ್ದೆವು. ಈ ನಿಯಮ ಜಾರಿಯಾದ ನಂತರ ನಾನು ಎಂಟು ಬಜೆಟ್ ಮಂಡಿಸಿದ್ದೇನೆ, ನನ್ನ ಅಷ್ಟೂ ಬಜೆಟ್ ನಲ್ಲಿ ಒಮ್ಮೆಯೂ ರಾಜಸ್ವ ಕೊರತೆ ಇಲ್ಲದ ಬಜೆಟ್ ಮೂಲಕ ಆರ್ಥಿಕ ಶಿಸ್ತನ್ನು ಪಾಲನೆ ಮಾಡಿದ್ದೆ. ಈಗ ರಾಜಸ್ವ ಕೊರತೆಯ ಬಜೆಟ್ ಮಂಡಿಸಿದ್ದಾರೆ, ಈ ಕೊರತೆಯಾದ ಹಣವನ್ನು ಸಾಲದ ಮೂಲಕ ತೀರಿಸಬೇಕು. ಅಂದರೆ ಇದು ಸಾಲ ಮಾಡಿ ಹೋಳಿಗೆ ತಿಂದಂತಾಗುತ್ತೆ.

ಸ್ವಾತಂತ್ರ್ಯ ಬಂದ ನಂತರದಿಂದ 2018 ರಲ್ಲಿ ನಮ್ಮ ಸರ್ಕಾರದ ಕೊನೆಯ ಬಜೆಟ್ ಮಂಡಿಸುವ ವರೆಗೆ ಇದ್ದ ಒಟ್ಟು ಸಾಲ ರೂ. 2,42,000 ಕೋಟಿ. ಬಜೆಟ್ ಪುಸ್ತಕದಲ್ಲಿ ಹೇಳಿರುವಂತೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ರಾಜ್ಯದ ಒಟ್ಟು ಸಾಲ ರೂ. 5,18,366 ಕೋಟಿ. ಬಿಜೆಪಿ ಅಧಿಕಾರಕ್ಕೆ ಬಂದ 3 ವರ್ಷಗಳಲ್ಲಿ ಸುಮಾರು ರೂ. 2,64,368 ಕೋಟಿ ಸಾಲ ಮಾಡಿದ್ದಾರೆ. ಈ ಸಾಲಕ್ಕೆ ಬಡ್ಡಿ ರೂಪದಲ್ಲೇ ಈ ವರ್ಷ ರೂ. 27,000 ಕೋಟಿಗೂ ಅಧಿಕ ಹಣ ಪಾವತಿ ಮಾಡಬೇಕಿದೆ. ಮುಂದಿನ ವರ್ಷ ಇದು ರೂ. 29,397 ಕೋಟಿ ಆಗಲಿದೆ. ಇದರ ಜೊತೆಗೆ ರೂ. 14,000 ಕೋಟಿ ಅಸಲು ಪಾವತಿಸಬೇಕು. ವರ್ಷವೊಂದಕ್ಕೆ ಅಸಲು ಮತ್ತು ಬಡ್ಡಿ ರೂಪದಲ್ಲಿ ರೂ. 43,000 ಕೋಟಿಗೂ ಅಧಿಕ ಹಣ ಪಾವತಿಸಬೇಕು. ಇದೇ ರೀತಿ ಮುಂದುವರೆದರೆ 2025-26 ನೇ ಸಾಲಿಗೆ ಬಡ್ಡಿ ರೂಪದಲ್ಲೇ ರೂ. 42,789 ಕೋಟಿ ಪಾವತಿ ಮಾಡಬೇಕು.

ಸಾಲ ಹೆಚ್ಚಾಗಲು ಕೊರೊನಾ ಕಾರಣ ಎಂದು ಸರ್ಕಾರ ಹೇಳುತ್ತೆ. 2020-21 ರಲ್ಲಿ ಕೊವಿಡ್ ಪರಿಸ್ಥಿತಿ ನಿಭಾಯಿಸಲು ರೂ‌. 5,300 ಕೋಟಿ, 2021-22 ರಲ್ಲಿ ರೂ. 2,240 ಕೋಟಿ ಹಣ ಖರ್ಚಾಗಿದೆ ಎಂದು ಸರ್ಕಾರವೇ ಹೇಳಿದೆ. ಕೇಂದ್ರ ಸರ್ಕಾರ ತಾನು ಕೊಡಬೇಕಾಗಿರುವ ಹಣವನ್ನು ಸರಿಯಾಗಿ ಕೊಡದೆ ಇರುವ ಕಾರಣಕ್ಕೆ ರಾಜ್ಯಗಳ ಜಿಎಸ್‌ಡಿಪಿ ಯ 25% ಗಿಂತ ಎರಡು ℅ ಹೆಚ್ಚು ಸಾಲ ಮಾಡಲು ಅವಕಾಶ ಮಾಡಿಕೊಟ್ಟಿದೆ.  ಕಳೆದ ಬಾರಿ ರಾಜ್ಯ ಸರ್ಕಾರದ ಬದ್ಧತಾ ವೆಚ್ಚ 102% ಇತ್ತು, ಅದನ್ನು ನಾನು ಟೀಕಿಸಿದ್ದೆ. ಹಾಗಾಗಿ ಈ ಬಾರಿ ರಾಜಸ್ವ ಸ್ವೀಕೃತಿಗಳ ಅನುಪಾತವಾಗಿ ಯೋಜನೆ ಆಧಾರಿತ ಬದ್ಧ ವೆಚ್ಚ ಮತ್ತು ರಾಜಸ್ವ ಸ್ವೀಕೃತಿಗಳ ಅನುಪಾತವಾಗಿ ಯೋಜನೆ ಆಧಾರಿತವಲ್ಲದ ಬದ್ಧ ವೆಚ್ಚ ಎಂದು ಎರಡು ಭಾಗ ಮಾಡಿ ಲೆಕ್ಕವೇ ಸಿಗದಂತೆ ಗೊಂದಲಮಯವಾಗಿಸಿದ್ದಾರೆ ಎಂದರು.

ಈ ವರ್ಷದ ಜಿಡಿಪಿ 9.5% ಇದೆ ಎಂದು ಸರ್ಕಾರ ಹೇಳಿದೆ. ಕಳೆದ ವರ್ಷ ಕೊರೊನಾ ಸಮಯದಲ್ಲಿ ಜಿಡಿಪಿ (-6) ರಿಂದ (-7) ಇತ್ತು, ಅದಕ್ಕೆ ಹೋಲಿಕೆ ಮಾಡಿ ಈ ವರ್ಷದ ಜಿಡಿಪಿ ಲೆಕ್ಕ ಹಾಕಿದ್ದಾರೆ. ಒಂದೆಡೆ ಸಾಲ ಏರಿಕೆಯಾಗುತ್ತಿದೆ, ಇನ್ನೊಂದೆಡೆ ರಾಜ್ಯದ ಜಿಎಸ್‌ಡಿಪಿ ಕಡಿಮೆಯಾಗ್ತಿದೆ, ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? 2020-21 ರಲ್ಲಿ ಆಸ್ತಿ ಸೃಜನೆಗೆ ಖರ್ಚು ಮಾಡಿರುವ ಬಂಡವಾಳ ವೆಚ್ಚ 48,075 ಕೋಟಿ ರೂಪಾಯಿ, 2021-22 ಕ್ಕೆ ರೂ. 44,237 ಕೋಟಿ, ಇದು ಪರಿಷ್ಕೃತಗೊಂಡು ರೂ. 42,366 ಕೋಟಿ ಆಯಿತು. ಮುಂದಿನ ವರ್ಷ ರೂ. 46,955 ಕೋಟಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದಾರೆ. 2023-24ಕ್ಕೆ ರೂ. 20,729 ಕೋಟಿಗೆ ಇಳಿದಿದೆ. 2024-25 ಕ್ಕೆ ರೂ. 23,776 ಕೋಟಿ, 2025-26 ಕ್ಕೆ ರೂ. 26,847 ಕೋಟಿ ಆಗಲಿದೆ. ಅಂದರೆ ಕಳೆದ ವರ್ಷಕ್ಕೆ ಮತ್ತು 2025 ಕ್ಕೆ ಬಂಡವಾಳ ವೆಚ್ಚ ಶೇ. 50 ಕಡಿಮೆಯಾಗುತ್ತದೆ. ಸುಮಾರು ರೂ. 70,000  ಸಾಲ ತಗೊಂಡು, ರೂ. 20,000 ಕೋಟಿ ಆಸ್ತಿ ಸೃಜನೆಗೆ ಖರ್ಚು ಮಾಡಿ, ಇನ್ನುಳಿದದ್ದು ಸಾಲದ ಬಡ್ಡಿ ಮತ್ತು ಅಸಲು ಕಟ್ಟಲು, ರಾಜಸ್ವ ಕೊರತೆ ಸರಿದೂಗಿಸಲು ಬಳಕೆ ಮಾಡಿದರೆ ರಾಜ್ಯ ಬೆಳವಣಿಗೆಯ ಹಾದಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತದೋ ಅಥವಾ ಮುಂದೆ ಸಾಗುತ್ತದೋ? ಎಂದು ಪ್ರಶ್ನಿಸದರು.

2023-24 ಕ್ಕೆ ರಾಜಸ್ವ ಕೊರತೆ ರೂ. 40,568 ಕೋಟಿ ಆಗುತ್ತದೆ. ಒಂದು ವೇಳೆ ರಾಜಸ್ವ ಸ್ವೀಕೃತಿಯನ್ನು ಹೆಚ್ಚು ಮಾಡಿಕೊಳ್ಳದೆ ಹೋದರೆ ಈ ಕೊರತೆ ಸರಿದೂಗಿಸಲು ಮತ್ತೆ ಸಾಲ ಪಡೆಯಬೇಕಾಗುತ್ತದೆ. 2024-25 ಕ್ಕೆ ರೂ. 45,109 ಕೋಟಿ, 2025-26 ಕ್ಕೆ ರೂ. 50,968 ಕೋಟಿ ರಾಜಸ್ವ ಕೊರತೆ ಆಗುತ್ತದೆ. ಯಾವ ರಾಜ್ಯ ಸತತವಾಗಿ ರಾಜಸ್ವ ಉಳಿಕೆಯಲ್ಲಿತ್ತು, ಇಂದು ಅದೇ ರಾಜ್ಯ ರಾಜಸ್ವ ಕೊರತೆ ಎದುರಿಸುತ್ತಿದೆ. ಇಂಥಾ ಬಜೆಟ್ ಅನ್ನು ಅಭಿವೃದ್ಧಿ ಪೂರಕವಾದ, ಜನಪರವಾದ ಬಜೆಟ್ ಎಂದು ಹೇಗೆ ಕರೆಯಬೇಕು? ಎಂದು ಕಿಡಿ ಕಾರಿದರು.

ರಾಜ್ಯ ಸರ್ಕಾರ ಎರಡು ಕೊರೊನಾ ಅಲೆಗಳ ಸಂದರ್ಭದಲ್ಲಿ ಅದರ ನಿರ್ವಹಣೆಗೆ ಖರ್ಚು ಮಾಡಿರುವುದು ಒಟ್ಟು ರೂ. 8,000 ಕೋಟಿ ಮಾತ್ರ. ಪಕ್ಕದ ಕೇರಳ ನಮಗಿಂತ ಚಿಕ್ಕ ರಾಜ್ಯ, ಅವರ ಬಜೆಟ್ ಗಾತ್ರ ಕೂಡ ಚಿಕ್ಕದು ಆದರೂ ಅವರು ಎರಡೂ ಕೊರೊನಾ ಅಲೆಯ ವೇಳೆ ತಲಾ ರೂ. 20,000 ಕೋಟಿಯಂತೆ ಒಟ್ಟು ರೂ. 40,000 ಕೋಟಿ ಖರ್ಚು ಮಾಡಿದ್ದಾರೆ, ತಮಿಳುನಾಡು ರೂ. 30,000 ಕೋಟಿ ಖರ್ಚು ಮಾಡಿದೆ. ಲಾಕ್ ಡೌನ್ ಪರಿಣಾಮ ಜನ ಮನೆಯಲ್ಲೇ ಕೂರುವಂತಾಯಿತು. ರಾಜ್ಯದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 11 ಕೋಟಿ ಉದ್ಯೋಗಿಗಳಿದ್ದರು, ಅದರಲ್ಲಿ ಇಂದು ಶೇ. 60 ಕ್ಕೂ ಹೆಚ್ಚು ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಲಾಕ್ ಡೌನ್ ಸಮಯದಲ್ಲಿ ದುಡಿಯುವ ವರ್ಗದ ಜನರ ಕೈಗೆ ಹಣ ನೀಡಿ, ಬಡ ಕುಟುಂಬಗಳಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ತಲಾ ರೂ. 10,000 ಕೊಡಿ ಎಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರನ್ನು ಒತ್ತಾಯ ಮಾಡಿದೆ, ಅವರು ಅದನ್ನು ಮಾಡಿಲ್ಲ. ಕೊರೊನದಿಂದ ಸತ್ತವರಿಗೂ ಪರಿಹಾರ ನೀಡಿಲ್ಲ, ಕನಿಷ್ಠ ರೂ‌. 5 ಲಕ್ಷ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೂವರೆ ಲಕ್ಷ ಪರಿಹಾರ ನೀಡಿವೆ, ಅದು ಇನ್ನೂ ಹಲವರಿಗೆ ಸಿಕ್ಕಿಲ್ಲ ಎಂದರು.

ರಾಜಸ್ವ ಸ್ವೀಕೃತಿಗಳು 2020-21 ಕ್ಕೆ ರೂ. 1,69,123 ಕೋಟಿ ಬಂದಿದೆ.  2021-22 ಕ್ಕೆ ಸರ್ಕಾರ ಅಂದಾಜು ಮಾಡಿದ್ದು ರೂ. 1,74,202 ಕೋಟಿ, ಪರಿಷ್ಕೃತ ಅಂದಾಜಿನಲ್ಲಿ ರೂ. 1,89,579 ಕೋಟಿ ಎಂದು ಹೇಳಿದೆ. ಮುಂದಿನ ಸಾಲಿಗೆ ರೂ. 1,89,808 ಕೋಟಿ ರಾಜಸ್ವ ಸ್ವೀಕೃತಿಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ ಈ ಸಾಲಿಗೆ ಹಾಗೂ ಮುಂದಿನ ಸಾಲಿಗೂ ಕೇವಲ ರೂ. 309 ಕೋಟಿ ಮಾತ್ರ ಹೆಚ್ಚಾಗಲಿದೆ ಎಂದರು.

ರಾಜ್ಯದಿಂದ ಸಂಗ್ರಹವಾದ ತೆರಿಗೆಯಲ್ಲಿ ಕೇಂದ್ರ ಸರ್ಕಾರದಿಂದ ನಮಗೆ ಬಂದಿರುವ ಪಾಲು 2020-21 ಕ್ಕೆ 21,694 ಕೋಟಿ, 2021-22 ಕ್ಕೆ ರೂ. 24,273 ಕೋಟಿ ಬರುತ್ತದೆಂದು ಅಂದಾಜಿಸಲಾಗಿತ್ತು, ನಂತರದ ಪರಿಷ್ಕೃತ ಅಂದಾಜಿನಲ್ಲಿ ರೂ. 27,145 ಕೋಟಿ ಬರುತ್ತದೆ ಎಂದು ಹೇಳಿತ್ತು. ಮುಂದಿನ ವರ್ಷಕ್ಕೆ ರೂ. 29,783 ಕೋಟಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಕೇಂದ್ರದಿಂದ ಬರುವ ಸಹಾಯಧನ ಕೂಡ ಕಡಿಮೆಯಾಗುತ್ತಾ ಹೋಗುತ್ತಿದೆ ಎಂದರು.

ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲು
2012-13 ರಲ್ಲಿ ರಾಜ್ಯದ ಪಾಲು 27% ಮತ್ತು ಕೇಂದ್ರದ ಪಾಲು 73% ಇತ್ತು.
2013-14 ರಾಜ್ಯದ ಪಾಲು 25%, ಕೇಂದ್ರದ ಪಾಲು 75% ಇತ್ತು.
2014-15 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಪಾಲು 40% ಗೆ ಏರಿತು, ಕೇಂದ್ರದ ಪಾಲು 60% ಗೆ ಇಳಿಯಿತು.
2018-19 ರಲ್ಲಿ ರಾಜ್ಯದ ಪಾಲು 57% ಗೆ ಹೆಚ್ಚಾಯಿತು, ಕೇಂದ್ರದ ಪಾಲು 43% ಗೆ ಇಳಿಯಿತು.
ಕಳೆದ ಸಾಲಿನಲ್ಲಿ ರಾಜ್ಯದ ಪಾಲು 55%, ಕೇಂದ್ರದ ಪಾಲು 45% ಇತ್ತು.
ಈ ಸಾಲಿನಲ್ಲಿ ರಾಜ್ಯದ ಪಾಲು 49.85%, ಕೇಂದ್ರದ ಪಾಲು 50.15% ಇದೆ.
ಕರ್ನಾಟಕ ರಾಜ್ಯವೊಂದರಿಂದಲೇ ಕೇಂದ್ರ ಸರ್ಕಾರ ವಿವಿಧ ರೀತಿಯ ತೆರಿಗೆ ರೂಪದಲ್ಲಿ ಸುಮಾರು ರೂ. 3 ಲಕ್ಷ ಕೋಟಿ ಹಣವನ್ನು ವಾರ್ಷಿಕವಾಗಿ ಸಂಗ್ರಹಿಸುತ್ತದೆ. ನಮ್ಮ ಪಾಲಿನ ತೆರಿಗೆಯಲ್ಲಿ 42% ಪಾಲು ನಮಗೆ ಕೊಡುವುದಾದರೆ ರೂ. 1,26,000 ಕೋಟಿ ನಮ್ಮ ರಾಜ್ಯಕ್ಕೆ ಕೇಂದ್ರ ಕೊಡಬೇಕು ಆದರೆ ಅವರು ಕೊಡುತ್ತಿರುವುದು ಕೇವಲ ರೂ. 44,000 ಕೋಟಿ ಎಂದರು.

15ನೇ ಹಣಕಾಸು ಆಯೋಗದ ವರದಿಯಲ್ಲಿ ನಮ್ಮ ರಾಜ್ಯಕ್ಕಾದಷ್ಟು ಅನ್ಯಾಯ ಬೇರಾವ ರಾಜ್ಯಕ್ಕೂ ಆಗಿಲ್ಲ. ಅದೇ ಕಾರಣಕ್ಕೆ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ ರೂ. 5,495 ಕೋಟಿ ವಿಶೇಷ ಅನುದಾನ ನೀಡುವಂತೆ ಹಣಕಾಸು ಅಯೋಗ ಶಿಫಾರಸ್ಸು ಮಾಡಿತ್ತು, ಅಂತಿಮ ವರದಿಯಲ್ಲಿ ಆ ಶಿಫಾರಸ್ಸೇ ಇರಲಿಲ್ಲ. ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ, ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಶಿಫಾರಸ್ಸನ್ನು ತಿರಸ್ಕರಿಸಿದರು, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 25 ಮಂದಿ ಬಿಜೆಪಿ ಸಂಸದರು ಈ ಅನ್ಯಾಯವನ್ನು ಖಂಡಿಸುವ ಧೈರ್ಯ ತೋರಿಸಿಲ್ಲ. ಹಾಗಾಗಿ ಆ ಹಣ ನಮ್ಮ ರಾಜ್ಯಕ್ಕೆ ಬರಲೇ ಇಲ್ಲ ಎಂದರು.

14 ಮತ್ತು 15 ನೇ ಹಣಕಾಸು ಆಯೋಗದ ವರದಿಗಳ ನಡುವೆ ನಮ್ಮ ತೆರಿಗೆ ಪಾಲು ಶೇ. 1.07 ಕಡಿಮೆಯಾಯಿತು. ಕೇಂದ್ರ ಸರ್ಕಾರ ಕೂಡ ಮಿತಿಮೀರಿ ಸಾಲ ಮಾಡುತ್ತಿದೆ. ಸ್ವಾತಂತ್ರ್ಯ ಬಂದ ನಂತರದಿಂದ ಮನಮೋಹನ್ ಸಿಂಗ್ ಅವರ ಸರ್ಕಾರದ ಕೊನೆ ವರ್ಷ ದೇಶದ ಮೇಲಿದ ಒಟ್ಟು ಸಾಲ ರೂ. 53,11,000 ಕೋಟಿ, ಈ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ ದೇಶದ ಮೇಲಿನ ಸಾಲ ರೂ. 153 ಲಕ್ಷ ಕೋಟಿ. ಅಂದರೆ ಬಿಜೆಪಿ ಸರ್ಕಾರ ಕೇವಲ ಎಂಟು ವರ್ಷಗಳಲ್ಲಿ ಸುಮಾರು ರೂ. 100 ಲಕ್ಷ ಕೋಟಿ ಸಾಲ ಮಾಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next