ಸಾಮಾನ್ಯವಾಗಿ ಒಂದು ಚಿತ್ರದ ನಿರೂಪಣೆಗೆ ಅದರದ್ದೇ ಆದ ಶೈಲಿ ಇರುತ್ತದೆ. ಅದರ ಆಧಾರದ ಮೇಲೆ ಆ ಚಿತ್ರ ಯಾವ ಜಾನರ್‌ಗೆ ಸೇರಿದ್ದು ಎಂದು ಹೇಳಲಾಗುತ್ತದೆ. ಹಾಗಾದ್ರೆ ‘ಸೂಜಿದಾರ’ ಚಿತ್ರ ಯಾವ ಜಾನರ್‌ಗೆ ಸೇರಿದ್ದು ಎಂದರೆ, ‘ಇದು ಯಾವ ಜಾನರ್‌ಗೂ ಸಿಗದ ಸಿನಿಮಾ’ ಎನ್ನುತ್ತಾರೆ ಅದರ ನಿರ್ದೇಶಕ ಮೌನೇಶ್ ಬಡಿಗೇರ್. ಮೌನೇಶ್ ಅವರ ಈ ಮಾತಿಗೆ ಕಾರಣ ‘ಸೂಜಿದಾರ’ ಚಿತ್ರದ ಕಥಾಹಂದರ ಮತ್ತದರ ನಿರೂಪಣೆಯಂತೆ. ‘ಒಂದು ಸಿನಿಮಾ ಆರಂಭದಿಂದ ಅಂತ್ಯದವರೆಗೆ ಒಂದೇ ಥರನಾಗಿ ಸಾಗಿದರೆ, ಅದು ಯಾವ ಜಾನರ್‌ನ ಸಿನಿಮಾ ಅಂಥ ಸುಲಭವಾಗಿ ಹೇಳಬಹುದು ಆದ್ರೆ, ಫಸ್ಟ್ ಹಾಫ್ ಒಂಥರ, ಸೆಕೆಂಡ್ ಹಾಫ್ ಮತ್ತೂಂದು ಥರ ಇದ್ದರೆ, ಅದನ್ನು ಯಾವ ಜಾನರ್ ಅಂಥ ಹೇಳ್ಳೋದು ಕಷ್ಟ. ಇಲ್ಲಿ ರೊಮ್ಯಾನ್ಸ್, ಸಸ್ಪೆನ್ಸ್, ಕಾಮಿಡಿ ಎಲ್ಲವೂ ಸಮನಾಗಿ ಮೇಳೈಸಿರುವುದರಿಂದ, ಇದು ಯಾವುದೋ ಒಂದು ಜಾನರ್‌ಗೆ ಸೇರಿಸೋದು ಕಷ್ಟ. ಚಿತ್ರದ ಕಥೆ ಮತ್ತು ನಿರೂಪಣೆಯೇ ಹಾಗಿದೆ ಎನ್ನುತ್ತಾರೆ’ ಮೌನೇಶ್ ಬಡಿಗೇರ್. ‘ಸೂಜಿದಾರ’ ಚಿತ್ರದ ಟೈಟಲ್ ಕೇಳಿದವರು, ಟ್ರೇಲರ್ ನೋಡಿದ ಕೆಲವರು ಇದು ಆರ್ಟ್ ಸಿನಿಮಾ ಇರಬಹುದಾ? ಅಂದುಕೊಂಡಿದ್ದು ಇದೆಯಂತೆ. ಆದರೆ ಈ ಬಗ್ಗೆ ಮಾತನಾಡುವ ಮೌನೇಶ್ ಬಡಿಗೇರ್, ‘ಇದು ಖಂಡಿತಾ ಆರ್ಟ್ ಸಿನಿಮಾ ಅಲ್ಲ. ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಏನೇನು ಇರಬೇಕೋ, ಆ ಎಲ್ಲಾ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಈ ಸಿನಿಮಾದಲ್ಲಿದೆ. ಜೊತೆಗೆ ಆರ್ಟ್ ಸಿನಿಮಾದಲ್ಲಿ ಇರಬಹುದಾದಂಥ ಕಥೆ, ಕಂಟೆಂಟ್ ಇದೆ. ನನ್ನ ಪ್ರಕಾರ, ಇದೊಂದು ಬ್ರಿಡ್ಜ್ ಸಿನಿಮಾ ಎನ್ನಬಹುದು.
ಇದರಲ್ಲಿ ಟ್ವಿಸ್ಟ್ಸ್ ಆ್ಯಂಡ್ ಟರ್ನ್ಸ್ ಇದೆ. ಫಸ್ಟ್ ಹಾಫ್ ನೋಡುಗರನ್ನ ಒಂದು ಮೂಡ್‌ನಲ್ಲಿ ಕರೆದುಕೊಂಡು ಹೋದರೆ, ಸೆಕೆಂಡ್ ಹಾಫ್ ಮತ್ತೂಂದು ಮೂಡ್‌ಗೆ ಕರೆದುಕೊಂಡು ಹೋಗುತ್ತದೆ. ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ, ಯಾವುದೇ ಮುಜುಗರವಿಲ್ಲದೆ, ಇಡೀ ಫ್ಯಾಮಿಲಿ ಕೂತು ನೋಡಿ, ಆಸ್ವಾಧಿಸಬಹುದಾದ ಚಿತ್ರ ಇದು’ ಎನ್ನುವುದು ಮೌನೇಶ್ ಮಾತು. ಇನ್ನು ‘ಸೂಜಿದಾರ’ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ಮೌನೇಶ್ ಬಡಿಗೇರ್, ‘ಚಿತ್ರದ ಕಥೆ ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥದ್ದು. ಒಬ್ಬ ವ್ಯಕ್ತಿ ತಾನು ಮಾಡದಿರುವ ತಪ್ಪಿಗೆ ಊರು ಬಿಟ್ಟು ಅಲೆಮಾರಿ ಥರ ಬದುಕಬೇಕಾಗುತ್ತದೆ. ಅವನ ಆ ಜರ್ನಿಯಲ್ಲಿ ಏನೇನು ತಿರುವುಗಳು ಎದುರಾಗುತ್ತವೆ ಅನ್ನೋದೆ ಈ ಚಿತ್ರದ ಕಥೆಯ ಒಂದು ಎಳೆ. ‘ಸೂಜಿದಾರ’ ಮನುಷ್ಯನ ಅಸ್ತಿತ್ವದ ಬಗ್ಗೆ ಹಲವು ಆಲೋಚನೆಗಳನ್ನು ಹಚ್ಚುತ್ತದೆ. ನಮ್ಮ ಅಸ್ತಿತ್ವವನ್ನು ನಿರ್ಧರಿಸುವ ಸಮಾಜದ ಬಗ್ಗೆ, ನಮ್ಮ ಬದುಕಿನ ಬಗ್ಗೆ ಅನೇಕ ಪ್ರಶ್ನೆಗಳನ್ನು ಮೂಡಿಸುತ್ತದೆ. ಎರಡೂ ಕಾಲು ಗಂಟೆ ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿ ನಮ್ಮ ಅಸ್ವಿತ್ವವನ್ನೇ ಪ್ರಶ್ನಿಸುವ ಚಿತ್ರ’ ಎನ್ನುತ್ತಾರೆ.
ಅಂದಹಾಗೆ, ‘ಸೂಜಿದಾರ’ ಚಿತ್ರದ ಸ್ಕ್ರಿಪ್ಟ್ ಶುರುವಾಗಿದ್ದು 2017ರಲ್ಲಿ. ಆರಂಭದಲ್ಲಿ ಈ ಚಿತ್ರವನ್ನು ಗುರುದೇಶಪಾಂಡೆ ಅವರೊಂದಿಗೆ ಮಾಡುವ ಯೋಜನೆ ನಿರ್ದೇಶಕ ಮೌನೇಶ್ ಬಡಿಗೇರ್ ಮತ್ತು ತಂಡಕ್ಕಿತ್ತು. ಆದರೆ ಅದು ತಡವಾದ ಕಾರಣ, ಮೌನೇಶ್ ಬೇರೊಂದು ಬ್ಯಾನರ್‌ನಲ್ಲಿ ಚಿತ್ರವನ್ನು ಶುರು ಮಾಡಿದರು. ‘ಆರಂಭದಲ್ಲಿ ಒಂದಷ್ಟು ಪ್ರೀ-ಪ್ರೊಡಕ್ಷನ್ ಕೆಲಸಗಳು ಬಳಿಕ ಬೆಂಗಳೂರು, ಉಡುಪಿ, ಮಂಗಳೂರು, ಚಿತ್ರದುರ್ಗ, ತುಮಕೂರು ಸುತ್ತಮುತ್ತ ಸುಮಾರು 38 ದಿನಗಳ ಶೂಟಿಂಗ್. ಅದಾದ ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಆ ನಂತರ ಸಿನಿಮಾದ ಪ್ರಮೋಷನ್, ಈಗ ಬಿಡುಗಡೆ. ಹೀಗೆ ಸೂಜಿದಾರ ಎಂಬ ಸದಭಿರುಚಿ ಚಿತ್ರವನ್ನು ಪೋಣಿಸಿ ತೆರೆಮೇಲೆ ತರಲು ಸುಮಾರು ಎರಡು ವರ್ಷ ಸಮಯ ಹಿಡಿಯಿತು’ ಎನ್ನುತ್ತಾರೆ ಮೌನೇಶ್.
Advertisement
‘ಸೂಜಿದಾರ’ ಚಿತ್ರದ ಪಾತ್ರಗಳು ವಿಭಿನ್ನವಾಗಿದ್ದರಿಂದ, ಅದನ್ನು ತೋರಿಸುವ ಲೊಕೇಶನ್‌ಗಳೂ ಕೂಡ ವಿಭಿನ್ನವಾಗಿಯೇ ಇರಬೇಕಾಗಿತ್ತು. ಹಾಗಾಗಿ ಸಾಕಷ್ಟು ಸ್ಥಳಗಳನ್ನು ಜಾಲಾಡಿದ ನಂತರ ಚಿತ್ರತಂಡ ತಮಗೆ ಬೇಕಾದ ಒಂದಷ್ಟು ಲೊಕೇಷನ್‌ಗಳಲ್ಲಿ ಶೂಟಿಂಗ್ ಮಾಡಲು ಮುಂದಾಯಿತು. ಚಿತ್ರದ ಶೂಟಿಂಗ್‌ಗೆ ಎದುರಾದ ಸವಾಲುಗಳ ಬಗ್ಗೆ ಮಾತನಾಡುವ ಮೌನೇಶ್, ‘ನನಗೆ ಸಿನಿಮಾ ತೀರಾ ಹೊಸ ಮಾಧ್ಯಮವೇನಲ್ಲ. ರಂಗಭೂಮಿ ಮತ್ತು ಹೊರಗೆ ನಾನು ಅಭಿನಯ, ಸಿನಿಮಾ ಪಾಠ ಮಾಡುತ್ತಿದ್ದರಿಂದ ಸಿನಿಮಾದ ಜೊತೆ ಮೊದಲಿನಿಂದಲೂ ನನಗೆ ನಂಟಿತ್ತು. ನನ್ನ ಪ್ರಕಾರ ಲೈವ್ ಪರ್ಫಾರ್ಮೆನ್ಸ್ ಅಥವಾ ಕ್ಯಾಮರಾ ಪರ್ಫಾರ್ಮೆನ್ಸ್‌ಗೆ ಅಂಥ ವ್ಯತ್ಯಾಸವೇನಿಲ್ಲ. ಆದರೆ ಸಿನಿಮಾದ ಮೇಕಿಂಗ್‌ನಲ್ಲಿ ತುಂಬಾ ಚಾಲೆಂಜಿಂಗ್ ಆಗಿತ್ತು. ಚಿತ್ರದಲ್ಲಿ ಬರುವ ದೃಶ್ಯಕ್ಕೆ ಹಳೆಯ ವಠಾರದ ಮನೆ ಬೇಕಿತ್ತು. ಎಲ್ಲಿ ಹುಡುಕಿದರೂ, ನಮಗೆ ಬೇಕಾದಂಥ ಮನೆ ಸಿಗಲಿಲ್ಲ. ಕೊನೆಗೆ ಅದು ತುಮಕೂರಿನಲ್ಲಿ ಸಿಕ್ಕಿತು. ಕೊನೆಗೆ ಆ ವಠಾರವನ್ನು ತುಮಕೂರಿನಲ್ಲಿ, ವಠಾರದ ಮನೆಯ ಒಳಾಂಗಣ ದೃಶ್ಯಗಳನ್ನ ಬೆಂಗಳೂರಿನಲ್ಲಿ, ವಠಾರದ ಹೊರಭಾಗವನ್ನು ಚಿತ್ರದುರ್ಗದಲ್ಲಿ ಚಿತ್ರೀಕರಿಸಬೇಕಾಯಿತು. ಚಿತ್ರದ ಒಂದು ದೃಶ್ಯಕ್ಕಾಗಿ ಇಂಥ ಶ್ರಮಪಡಬೇಕಾಯಿತು. ಚಿತ್ರ ನೋಡುವಾಗ ಅದ್ಯಾವುದೂ ಗೊತ್ತಾಗುವುದಿಲ್ಲ. ಚಿತ್ರದ ಮೇಕಿಂಗ್‌ನಲ್ಲಿ ಇಂಥ ಸಾಕಷ್ಟು ಚಾಲೆಂಜಿಂಗ್ ಎನಿಸುವಂಥ ಉದಾಹರಣೆಗಳು ಸಿಗುತ್ತದೆ’ ಎನ್ನುತ್ತಾರೆ ಮೌನೇಶ್.
Related Articles
Advertisement