Advertisement
ಇದು ಡಾ|ರಾಜ್‌ಕುಮಾರ್ ಕುಟುಂಬ ವೈದ್ಯ ಡಾ|ರಮಣರಾವ್ ಅವರ ಭಾವುಕ ನುಡಿಗಳು.. ಶುಕ್ರವಾರ ಬೆಳಗ್ಗೆ 11.20ರ ಸುಮಾರಿಗೆ ನಮ್ಮ ಚಿಕಿತ್ಸಾಲಯ(ಕ್ಲಿನಿಕ್)ಕ್ಕೆ ಪುನೀತ್ ಹಾಗೂ ಅಶ್ವಿನಿ ಬಂದಿದ್ದರು. ತಕ್ಷಣ ಒಳಗೆ ಕರೆದು, ಏನಾಯಿತು ಅಪ್ಪು ಎಂದು ವಿಚಾರಿಸಿದೆ. ಆಗ ಅಪ್ಪು, ದೇಹಕ್ಕೆ ಸ್ವಲ್ಪ ಸುಸ್ತು ಹಾಗೂ ಆಯಾಸವಾದಂತಿದೆ ಎಂದರು. ಏಕೆ ಇಷ್ಟೊಂದು ಬೆವರುತ್ತಿದ್ದೀರಿ ಎಂದು ಕೇಳಿದಾಗ, ಜಿಮ್, ಬಾಕ್ಸಿಂಗ್ ಸಹಿತವಾಗಿ ನಿತ್ಯದ ವ್ಯಾಯಾಮ ಮುಗಿಸಿ ನೇರ ಇಲ್ಲಿಗೆ ಬಂದಿದ್ದೇನೆ. ವ್ಯಾಯಾಮ ಮಾಡಿದ ನಂತರ ಬೆವರುವುದು ಸಹಜ ಎಂದು ಹೇಳಿದರು. ನಂತರ ಅವರ ಆರೋಗ್ಯ ತಪಾಸಣೆ ಮಾಡಿದಾಗ ರಕ್ತದೊತ್ತಡ, ಹೃಯದ ಬಡಿತ ಇತ್ಯಾದಿ ನಾರ್ಮಲ್ ಇತ್ತು. ತಕ್ಷಣವೇ ಇ.ಸಿ.ಜಿ.ಯನ್ನೂ ಮಾಡಿಸಿದೆವು. ಆಗ ಹೃದಯ ಬಡಿತ ಸರಿಯಿದ್ದರೂ, ಸ್ಟ್ರೈನ್ ಕಾಣಿಸಿಕೊಂಡಿತು. ಕೂಡಲೇ ಮುಂದಿನ ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು ಎಂದು ಡಾ|ರಮಣರಾವ್ ಮಾಹಿತಿ ನೀಡಿದರು.
Related Articles
Advertisement
1987ರಿಂದಲೂ ಡಾ| ರಾಜ್ ಕುಟುಂಬ ವೈದ್ಯನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಡಾ| ರಾಜ್‌ಕುಮಾರ್ ಅವರು ಚಿಕಿತ್ಸೆಗೆ ಇಲ್ಲಿಗೆ ಬರುತ್ತಿದ್ದರು. ಅಪ್ಪು ಅವರು 8 ವರ್ಷ ಇದ್ದಾಗಿನಿಂದ ಇಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದರು. ಡಾ| ರಾಜ್‌ಕುಮಾರ್ ಆರೋಗ್ಯದ ವಿಷಯವಾಗಿ ಎಲ್ಲರಿಗೂ ಮಾದರಿಯಾಗಿದ್ದರು ಎಂದು ಭಾವುಕರಾದರು.
ಅಪ್ಪುಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿಲ್ಲ. ಆಗಿಂದಾಗೆ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಜ್ವರ, ಶೀತ ಬಂದಾಗ ಕ್ಲಿನಿಕ್‌ಗೆ ಬರುತ್ತಿದ್ದರು. ಅದನ್ನು ಬಿಟ್ಟರೆ ಹೆಚ್ಚಿನ ಪ್ರವಾಸ ಮಾಡಿದಾಗ ಕ್ಲಿನಿಕ್‌ಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆ ಇರಲಿಲ್ಲ. ಇಡೀ ಕುಟುಂಬದಲ್ಲೇ ಹೆಚ್ಚು ಆರೋಗ್ಯವಾಗಿದ್ದ ವ್ಯಕ್ತಿ ಅಪ್ಪು. ಅವರಿಗೆ ಹೀಗೆ ಆಗಿದೆ ಎಂದರೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ನೋವು ಹಂಚಿಕೊಂಡರು.
ಅಪ್ಪು ಆರೋಗ್ಯವಾಗಿದ್ದುದ್ದು ಮಾತ್ರವಲ್ಲ, ಅವನ ಚಿಂತನೆ, ಯೋಚನೆಗಳು ಸಂಪೂರ್ಣ ಸಕಾರಾತ್ಮಕವಾಗಿದ್ದವು. ನಕಾರಾತ್ಮಕ ಭಾವನೆ, ಯೋಚನೆ ಅವರಲ್ಲಿ ಇರಲೇ ಇಲ್ಲ. ಡಾ|ರಾಜ್ ಅವರ ಪ್ರತಿ ಗುಣವೂ ಅವರಲ್ಲಿತ್ತು ಮತ್ತು ಅಪ್ಪುವನ್ನು ನೋಡಿದಾಗಲೆಲ್ಲ ಅಣ್ಣಾವ್ರು (ಡಾ|ರಾಜ್‌ಕುಮಾರ್) ನೆನಪಾಗುತ್ತಿತ್ತು. ಅಪ್ಪು ನನ್ನ ಮಗನಂತಿದ್ದ. ಅವನಲ್ಲಿರುವ ವಿನಯತೆ ಎಲ್ಲರಿಗೂ ಸ್ಫೂರ್ತಿ, ಪ್ರೇರಣೆಯಾಗಿತ್ತು ಎಂದು ಹೇಳಿದರು.