ಪಾಟ್ನಾ: ‘ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ನನ್ನ ಸೆಲ್ಯೂಟ್. ಹುತಾತ್ಮ ಯೋಧರ ಕುಟುಂಬದ ಜೊತೆ ದೇಶವೇ ನಿಲ್ಲುತ್ತದೆ. ಇದು ನವ ಭಾರತ. ನಮ್ಮ ಸೈನಿಕರನ್ನು ಕೊಂದರೆ ನವ ಭಾರತ ಸುಮ್ಮನೆ ಕುಳಿತುಕೊಳ್ಳುವುದಿಲ್ಲ’. ಇದು ಪ್ರಧಾನಿ ನರೇಂದ್ರ ಮೋದಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಗುಡುಗಿದ ಪರಿ.
ಪಾಟ್ನಾದಲ್ಲಿ ಎನ್ ಡಿಎ ಮೈತ್ರಿ ಕೂಟದ ‘ಸಂಕಲ್ಪ ರ‍್ಯಾಲಿ’ಯಲ್ಲಿ ಮಾತಾಡಿದ ಪ್ರಧಾನಿ, ಇತ್ತೀಚೆಗೆ ‘ಚೌಕಿದಾರ’ನನ್ನು ನಿಂದಿಸಲು ಸ್ಪರ್ಧೆ ಆರಂಭವಾಗಿದೆ. ಆದರೆ ನಿಮಗೆ ಈ ಚೌಕಿದಾರ ನಿಮ್ಮವನು ಎಂಬ ಎಚ್ಚರ ಯಾವಾಗಲೂ ಇರಲಿ ಎಂದು ವಿಪಕ್ಷಗಳ ವಿರುದ್ದ ಹರಿಹಾಯ್ದರು.
ಬಿಹಾರದ ಜನರಿಗೆ ‘ಮೇವಿನ’ ಹೆಸರಿನಲ್ಲಿ ಏನೆಲ್ಲಾ ಆಯಿತು ಎಂಬ ಬಗ್ಗೆ ಗೊತ್ತಿದೆ. ದಶಕಗಳಿಂದ ದೇಶದಲ್ಲಿ ಅಭ್ಯಾಸವಾಗಿದ್ದ ಮಧ್ಯವರ್ತಿಗಳ ಸಂಸ್ಕೃತಿ ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸಲು ನಾವು ಧೈರ್ಯ ತೋರಿದ್ದೇವೆ ಎಂದರು.
ಬಾಲಕೋಟ್ ಏರ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ ಎತ್ತುತ್ತಿರುವ ಅನುಮಾನಗಳ ಬಗ್ಗೆ ಮಾತಾನಾಡಿದ ಮೋದಿ, ‘ಈಗ ಕಾಂಗ್ರೆಸ್ ನವರು ಏರ್ ಸ್ಟ್ರೈಕ್ ನ ಪುರಾವೆ ಕೇಳುತ್ತಿದ್ದಾರೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷದವರು ಯಾಕೆ ಈ ರೀತಿ ಸೇನಾ ಪಡೆಯ ಅವಮಾನ ಮಾಡುತ್ತಿದ್ದಾರೆ. ನಮ್ಮ ವೈರಿಗಳಿಗೆ ಅನುಕೂಲವಾಗುವಂತೆ ಯಾಕೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
‘ಸಂಕಲ್ಪ ರ‍್ಯಾಲಿ’ಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಮತ್ತಿತರರು ಭಾಗವಹಿಸಿದ್ದರು.