ಈಬಾರಿಯ ಬಜೆಟ್ ಬಹಳಷ್ಟು ಆಸಕ್ತಿ ಮೂಡಿಸಿದೆ. ಕೆಲವು ಪ್ರಮುಖ ಕ್ಷೇತ್ರಗಳನ್ನು ಹಿಡಿದುಕೊಂಡು ಅದರಲ್ಲಿ ಇಳಿದ ಆಳದ ಬಗ್ಗೆ ಮೆಚ್ಚಿಗೆ ಇದೆ. ಕೃಷಿ ಮತ್ತು ಗ್ರಾಮೀಣ, ಆರೋಗ್ಯ, ಮೂಲ ಸೌಕರ್ಯ, ವಿದ್ಯಾಭ್ಯಾಸ, ಹಿರಿಯ ನಾಗರಿಕರ ಕಲ್ಯಾಣ ಮುಂತಾದ ಕ್ಷೇತ್ರಗಳಲ್ಲಿ ತೀವ್ರವಾದ ನಿಗಾ ವಹಿಸಿ ಬಜೆಟ್ ಮಾಡಲಾಗಿದೆ. ಆದಾಯಕ್ಕಾಗಿ ಕಸ್ಟಮ್ಸ… ಸುಂಕ ಮತ್ತು ಶೇರುಗಟ್ಟೆ ಆದಾಯವನ್ನು ಕೇಂದ್ರೀಕರಿಸಿಕೊಂಡು ಜನ ಸಾಮಾನ್ಯರ ಹಿತಾಸಕ್ತಿಗಾಗಿ ಬಹಳಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಕೃಷಿ ಕ್ಷೇತ್ರದಲ್ಲಿ ವೆಚ್ಚದ ಒಂದೂವರೆ ಪಾಲು ಕನಿಷ್ಠ ಬೆಂಬಲ ಬೆಲೆಯಾಗಿ ನಿಗದಿ ಮಾಡಿದ್ದು, “ಆಪರೇಶನ್ ಗ್ರೀನ್’ ಮತ್ತಿತರ
ಯೋಜನೆಗಳು ರೈತರಿಗೆ ಅನುಕೂಲವಾಗಿ ಕಂಡು ಬರುತ್ತದೆ. ಏರುತ್ತಿರುವ ಅರೋಗ್ಯ ವೆಚ್ಚದನ್ನು ಗಮನದಲ್ಲಿ ಇಟ್ಟುಕೊಂಡು
ಸುಮಾರು 50 ಕೋಟಿ ಭಾರತೀಯರಿಗೆ ಅನುಕೂಲವಾಗುವಂತೆ ವಾರ್ಷಿಕ ಕೌಟುಂಬಿಕ ರೂ 5 ಲಕ್ಷದ ವಿಮಾ ಸೌಕರ್ಯ ಒಂದು
ಅಭೂತಪೂರ್ವ ಯೋಜನೆ. ಇದರಿಂದ ಬಡವರು ಲಾಭ ಪಡೆಯುವುದರಲ್ಲಿ ಸಂಶಯವಿಲ್ಲ. ರೂ 250 ಕೋಟಿಯವರೆಗಿನ
ಎಲ್ಲಾ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ 25% ಆದಾಯ ಕರವನ್ನು ವಿಸ್ತರಿಸಿರುವುದು ಉದ್ದಿಮೆ ಕ್ಷೇತ್ರಕ್ಕೆ ಒಂದು
ದೊಡ್ಡ ಉತ್ತೇಜನವಾಗಿದೆ. ಈ ಬಜೆಟ್‌ನ ಇನ್ನೊಂದು ವಿಶೇಷ ಅಂಶವೆಂದರೆ ಹಿರಿಯ ನಾಗರಿಕರಿಗೆ ನೀಡಿರುವ ಪ್ಯಾಕೇಜು.
ಬ್ಯಾಂಕು ಮತ್ತು ಅಂಚೆ ಖಾತೆಗಳಲ್ಲಿ ಕೇವಲ ಎಸ್‌ಬಿ ಖಾತೆಯಲ್ಲಿ ಬರುವ ಬಡ್ಡಿಗೆ ಇದ್ದ 10,000 ರೂ. ರಿಯಾಯಿತಿಯನ್ನು ರೂ
50,000 ಏರಿಸಲಾಗಿದೆ ಅಷ್ಟೇ ಅಲ್ಲದೆ, ಈ 50, 000 ರೂ.ಗಳಲ್ಲಿ ಎಫ್ಡಿ ಮತ್ತು ಆರ್.ಡಿಗಳ ಬಡ್ಡಿಯನ್ನೂ ಇದೀಗ
ಸೇರಿಸಬಹುದಾಗಿದೆ. ಇದು ಉತ್ತಮ ಬೆಳವಣಿಗೆ. ಅದಲ್ಲದೆ ಆರೋಗ್ಯ ವಿಮೆರ್ಚಿಗಾಗಿ 30000 ರೂ. ಇದ್ದ ರಿಯಾಯಿತಿಯನ್ನು
ಈಗ 50,000 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ತೀವ್ರ ಕಾಯಿಲೆಗಳಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಕೂಡಾ 1 ಲಕ್ಷ ರೂ.ಗೆ ಏರಿಸಲಾಗಿದೆ. ಶೇ.8 ಬಡ್ಡಿ ನೀಡುವ ಎಲ್‌ಐಸಿಯ ಯೋಜನೆಯ ಮಿತಿಯನ್ನು ರೂ 7.5 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಸಂಬಳ ಪಡೆಯುವ ಉದ್ಯೋಗಸ್ಥರಿಗೆ ಈ ಬಾರಿಯೂ ವಿಶೇಷ ವಿನಾಯಿತಿ ದೊರಕಲಿಲ್ಲ. 40,000 ರೂ. ಸ್ಟಾಂಡರ್ಡ್ ಡಿಡಕ್ಷನ್ ಪ್ರಯಾಣ ಮತ್ತು ವೈದ್ಯಕೀಯದ ರಿಯಾಯಿತಿಯ (ಒಟ್ಟು ರೂ 34200) ಬದಲಿಗಾಗಿ ಮಾತ್ರ ನೀಡಿದ್ದಾರೆ. ಇದು ಹೆಚ್ಚುವರಿ ರಿಯಾಯಿತಿ ಅಲ್ಲ. ಮೂಲಭೂತ ಸೌಕರ್ಯಕ್ಕೆ ನೀಡಿದ ಭಾರಿ ಒತ್ತು ಮತ್ತು ಇನ್ನಿತರ ಬಡವರ ಪರ ಯೋಜನೆಗಳು ಬಜೆಟ್ ದಿನ ಆಪ್ಯಾಯಮಾನವಾಗಿ ಕೇಳುತ್ತವೆ. ಆದರೆ ಅವುಗಳ ಅನುಷ್ಠಾನವಾದಾಗ ಮಾತ್ರ ಅವು ಉತ್ತಮ ಯೋಜನೆ ಅನಿಸಿಕೊಳ್ಳುತ್ತವೆ. ಇದು ಪ್ರತಿ ವರ್ಷ, ಪ್ರತಿ ಬಜೆಟ್ಟಿಗೂ ಅನ್ವಯವಾಗುವ ಮಾತು.
ಜಯದೇವ ಪ್ರಸಾದ ಮೊಳೆಯಾರ, ಆರ್ಥಿಕ ತಜ್ಞ