Advertisement

ನೀನೊಂಥರ ಆ್ಯಂಟಿಬಯಾಟಿಕ್‌ ಮಾತ್ರೆಯಿದ್ದಂತೆ ಕಣೇ…

09:07 AM Jul 11, 2019 | Sriram |

” ಹಾಯ್‌ ಹುಡುಗಿ, ಹೇಗಿದ್ದೀಯಾ?’ ಎಂದು ಕೇಳ್ಳೋದು ನಮ್ಮ ವೃತ್ತಿಧರ್ಮವಾದರೂ ನಿನ್ನನ್ನು ಏಕವಚನದಲ್ಲಿ ಏಕೆ ಕರೆದು ಬಿಟ್ಟೆ ಎಂದು ಅಚ್ಚರಿಪಡಬೇಡ. ನೀನೇನೂ ನನಗೆ ಹೊಸಬಳಲ್ಲ. ಆ ಬಿರುಬೇಸಗೆಯ ಮಧ್ಯಾಹ್ನ ಬಸ್‌ಸ್ಟ್ಯಾಂಡಿನ ಪಕ್ಕದ ಗೂಡಂಗಡಿಗೆ ಹೊಕ್ಕು ಎಳನೀರು ಕುಡಿಯುವಾಗಲೇ ನಿನ್ನ ಮೇಲೆ ನನಗೊಂದು ಅಭಿಮಾನ ಮೂಡಿತ್ತು. ಈ ಕಾಲದ ಹುಡುಗಿಯರೆಲ್ಲ ತಂಪುಪಾನೀಯದ ಮೊರೆ ಹೊಕ್ಕಿರುವಾಗ ಸಾಂಪ್ರದಾಯಿಕ ಆರೋಗ್ಯಕರ ಎಳನೀರು ಕುಡಿಯುವ ನೀನು ಅಪರೂಪದಲ್ಲೇ ಅಪರೂಪಳು. ಅಂದಿನಿಂದಲೇ ನಾ ನಿನ್ನ ಅಭಿಮಾನಿಯಾದೆ.

Advertisement

ಬೆಳ್ಳಂಬೆಳಗ್ಗೆ ಸೂರ್ಯನ ಎಳೆಬಿಸಿಲಿನಲ್ಲಿ ವಿಟಮಿನ್‌ ಡಿ ಹೀರುತ್ತಾ ರಸ್ತೆಯ ಧೂಳುಗಳಿಂದ ರಕ್ಷಣೆಗೆಂದು ನೀನು ಮಾಸ್ಕ್ ಕಟ್ಟಿಕೊಳ್ಳುವ ಪರಿ ಕಂಡು ನನಗೆ ನಿನ್ನ ಮೇಲೆ ದ್ವಿಗುಣ ಪ್ರೇಮವಾಯ್ತು. ಆ ಸಂದರ್ಭದಲ್ಲಿ ಧೂಳಿನ ಅಲರ್ಜಿಯಾಗಿ ಅಪ್ಪಿತಪ್ಪಿ ನೀನೊಮ್ಮೆ ಸೀನಿದರೂ ನನ್ನ ಕಿಸೆಯಿಂದ ಮಾತ್ರೆ ನಿನಗಾಗಿ ಹೊರಬರುತ್ತದೆ. ನಮ್ಮ ವೃತ್ತಿಯೇ ಹಾಗಲ್ಲವೇ? ನಮಗೆ ಇನ್ನೊಬ್ಬರ ಆರೋಗ್ಯವೇ ಅತ್ಯಮೂಲ್ಯ. ಆದರೆ ನಿನ್ನ ನೋಡಿದ ದಿನದಿಂದ ಆಗಿಂದಾಗ್ಗೆ ಮೈ ಬಿಸಿಯಾಗುವುದು, ಸಂಜೆಗತ್ತಲಾಗುತ್ತಲೇ ಚಳಿಯಾಗುವುದು, ನಾನೇನು ಮಾಡುತ್ತಿರುವೆನೆಂದು ನನಗೇ ತಿಳಿಯದಿರುವುದು, ಏಳದೇ ಬೀಳದೆ ಇದ್ದರೂ ಕೈಕಾಲುಗಳೆಲ್ಲ ಫ್ರಾ$Âಕ್ಚರ್‌ ಆದ ಅನುಭವ. ಕಣ್ಮುಚ್ಚಿದರೂ ನಿನ್ನದೇ ಭಾವಚಿತ್ರದ ನರ್ತನ. ಇನ್ನೂ ಏನೇನೋ.

ನಿನ್ನ ನ್ನು ಸನಿಹದಿಂದ ನೋಡಿದ ದಿನವೇ ನನ್ನೀ ಹೃದಯಬಡಿತ ಮೊದಲಿಗಿಂತ ವೇಗಗೊಂಡಿದೆ. ನಾಡಿಯಂತೂ ಲೆಕ್ಕಕ್ಕೇ ಸಿಗುತ್ತಿಲ್ಲ. ಆಗಾಗ ಉಗುರು ಕಚ್ಚುವ ದುರಭ್ಯಾಸ ಶುರುವಾಗಿದೆ. ನಿದ್ರಾಹೀನತೆಯಂತೂ ಔಷಧವಿಲ್ಲದ ಕಾಯಿಲೆಯಂತಾಗಿದೆ. ನಿಂತಲ್ಲಿ ಕುಂತಲ್ಲಿ ಕನಸು ಕಾಣುವ ಹೊಸ ಸಮಸ್ಯೆಯೊಂದು ಉದ್ಭವವಾಗಿದೆ.

ಆದರೆ ನೀನು ಸನಿಹವಾದ ದಿನ ನನ್ನ ಎಷ್ಟೋ ಸಮಸ್ಯೆಗಳು ಮನೆ ಔಷಧಿಯಂತೆ ಹೇಳದೆ ಕೇಳದೇ ಹೊರಟು ಹೋದದ್ದೂ ಉಂಟು. ನಿನ್ನ ಮಾತುಗಳೆಲ್ಲ ಹೋಮಿಯೋಪತಿ ಮಾತ್ರೆಗಳಂತೆ ಸಿಹಿ ಸಿಹಿ. ಒಂದೆಳೆ ಕೂದಲೂ ಉದುರದ ಆ ನಿನ್ನ ದಟ್ಟ ಕೇಶರಾಶಿಗೆ ನೀ ಹಾಕುವ ಎಣ್ಣೆ, ಶ್ಯಾಂಪೂ ಯಾವುದೆಂಬ ಪ್ರಶ್ನೆಯೂ ನನ್ನಲ್ಲಿ ಸುಳಿಯುತ್ತಿದೆ. ನಿನ್ನೊಂದು ನಗುವಿಗೆ ಪ್ರಜ್ಞೆ ತಪ್ಪಿಸುವ ಅನಸ್ತೇಶಿಯಾದಷ್ಟೇ
ಶಕ್ತಿ. ಕಣ್ಣೋಟವಂತೂ ಗ್ಲೂಕೋಸಿನಂತೆ ಎನರ್ಜಿ ಪೇಯ. ಸ್ಟೆತಾಸ್ಕೋಪಿನಲ್ಲೂ ನನಗೆ ನಿನ್ನ ದನಿಯೇ ಕೇಳುತ್ತದೆ. ನನ್ನ ನಿನ್ನ ಹೆಸರು ಮದುವೆ ಮಂಟಪದ ಡಿಜಿಟಲ್‌ ಸ್ಕಿನಿನಲ್ಲಿ ಕಾಣುವಂತೆ ಇಸೀಜಿ ಸ್ಕ್ರೀನು. ನಾ ನೋಡುವ ಮಾತ್ರೆಗಳ ಡಬ್ಬಿಗಳ ಮೇಲೆಲ್ಲ ನಿನ್ನದೇ ಹೆಸರು ಕಾಣಿಸುತ್ತದೆ. ಕೆಲವೊಮ್ಮೆ ಅನಿಸುವುದಿದೆ; ಹೃದಯದ ಎಕ್ಸರೇ ಏನಾದರೂ ತೆಗೆದರೆ ಅಲ್ಲಿ ನಿನ್ನ ಭಾವಚಿತ್ರವೇನಾದರೂ ಮೂಡೀತೋ ಎಂದು! ನಿನ್ನ ಅಗಾಧ ಜ್ಞಾನ, ಮೆಡಿಕಲ್‌ ಶಾಪಿನ ಎಲ್ಲಾ ಮಾತ್ರೆಗಳ ಪವರನ್ನೂ ಮೀರಿದ್ದು!

ನಿನಗೊಂದು ವಿಷಯ ಗೊತ್ತಿಲ್ಲ. ನಾ ನಿನಗೆ ಬರೆಯುತ್ತಿರುವ ಮೊದಲ ಪ್ರೇಮಪತ್ರವೇನೂ ಇದಲ್ಲ. ಹಲವಾರು ಬಾರಿ ನನ್ನ ಕೈಬರಹದಲ್ಲಿ ನಾನು ನಿನಗೆ ಪತ್ರಗಳನ್ನು ಕಳುಹಿಸಿದ್ದಿದೆ. ಯಾವುದಕ್ಕೂ ಉತ್ತರ ಬಾರದ್ದನ್ನು ಕಂಡು ಗೆಳೆಯನ ಬಳಿ ಹೇಳಿಕೊಂಡಾಗ ಆತನೆಂದ: ನೀವು ವೈದ್ಯರ ಕೈಬರಹ ಮೆಡಿಕಲ್‌ ಶಾಪಿನವರು ಮಾತ್ರ ಓದಲಾಗುವುದು, ಸಾಧ್ಯವಾದರೆ ಪತ್ರಿಕೆಯಲ್ಲಿ ಲೇಖನದ ರೂಪದಲ್ಲೇ ಬರೆದುಬಿಡು ಎಂದು. ಆ ನಿಮಿತ್ತ ನನ್ನ ಕೈಬರಹದ ಒಗಟು ನಿನಗೆ ತಲುಪದೇ ನನ್ನ ಹೃದಯದ ಪ್ರತಿ ಲಬ್‌ಡಬ್‌ನ ಅರ್ಥವನ್ನೂ ಇಂಚಿಂಚಾಗಿ ವಿವರಿಸಿ ಬರೆದಿದ್ದೇನೆ.

Advertisement

ನನ್ನನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕೆಂದರೂ ಚಿಂತೆಯಿಲ್ಲ, ಪರವಾಗಿಲ್ಲ, ಅಧ್ಯಯನ ಮಾಡು, ರಿಪೋರ್ಟ್‌ ಬರಲು ಸ್ವಲ್ಪ ಸಮಯ ಆದರೂ ನಾ ಕಾಯುವೆ. ನೀನೊಂಥರ ಆ್ಯಂಟಿಬಯಾಟಿಕ್‌ ಮಾತ್ರೆಯಿದ್ದ ಹಾಗೆ. ನನ್ನೊಳಗಿನ ವೈರಸ್ಸುಗಳನ್ನೆಲ್ಲ ಬದಿಗೆ ತಳ್ಳುವ ಸಾಮರ್ಥ್ಯ ನಿನಗಿದೆ. ಸಮಯ ಸಿಕ್ಕಾಗ ನಿನ್ನ ಪ್ರೀತಿಯನ್ನೆಲ್ಲ ಒಂದೆಡೆ ಸೇರಿಸಿ ಸಿರಿಂಜಿನಂತೆ ಒಂದೇ ಸಲ ಕೊಟ್ಟುನೋಡು, ಒಂದರೆಡು ಘಳಿಗೆ ಕನಸಿನ ಮಾಯಾಲೋಕದಲ್ಲಿ ಬಿಳಿಕೋಟು ಧರಿಸಿ ನಿನ್ನೊಂದಿಗೆ ಡ್ಯಾನ್ಸು ಮಾಡುವ ಕನಸನ್ನೂ ಕಾಣುವೆ. ಸಾಧ್ಯವಾದರೆ ಸನಿಹ ಬಂದು ಒಂದು ಬಿಗಿಯಪ್ಪುಗೆ ಕೊಟ್ಟುಬಿಡು ಖುದ್ದು ನಾನೇ ಐಸಿಯು ರೋಗಿಯಾಗಿಬಿಡುವೆ. ಮೆಡಿಕಲ್‌ ಶಾಪಿನ ಚೀಟಿಯಲ್ಲಾದರೂ ಚಿಂತೆಯಿಲ್ಲ, ನನ್ನೀ ಪತ್ರಕ್ಕೆ ಉತ್ತರ ಕೊಡು, ಪ್ಲೀಸ್‌…

-ಅರ್ಜುನ್‌ ಶೆಣೈ.

Advertisement

Udayavani is now on Telegram. Click here to join our channel and stay updated with the latest news.

Next