Advertisement

ಬೈಕ್‌ ಮೈಲೇಜ್‌ ಕಡಿಮೆಯಾಗಲು ಕಾರಣ

01:09 AM Sep 20, 2019 | mahesh |

ಬೈಕ್‌ ನಿರೀಕ್ಷಿಸಿದಷ್ಟು ಮೈಲೇಜ್‌ ಕೊಡುತ್ತಿಲ್ಲ ಎನ್ನುವ ಆರೋಪ ನಿಮ್ಮದಾಗಿರಬಹುದು. ಅದಕ್ಕೆ ಕೆಲವೊಂದು ಕಾರಣಗಳಿದ್ದು ಅದರಿಂದಾಗಿಯೂ ಸಮಸ್ಯೆ ಉಂಟಾಗಿರಬಹುದು. ಬೈಕ್‌ ಮೈಲೇಜ್‌ಗೆ ಕುಸಿತಕ್ಕೆ ಕಾರಣವಾಗುವ ಅಂಶಗಳನ್ನು ನೋಡೋಣ.

Advertisement

ಗಿಯರ್‌ ಬದಲಾವಣೆ
ನೀವು ಗಿಯರ್‌ ಬದಲಾಯಿಸುವ ವಿಧಾನದಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. ಬಹುತೇಕ ನೀವು ಓಡಿಸುವ ರೀತಿ ಹೆಚ್ಚು ಪೆಟ್ರೋಲ್‌ ಕುಡಿಯುತ್ತಿರಬಹುದು. ಉದಾಹರಣೆಗೆ 3ರಿಂದ 2ನೇ ಗಿಯರ್‌ಗೆ ಹಾಗಬೇಕೆಂದಿದ್ದರೂ ನೀವು ಹಾಕದೇ ಚಲಾಯಿಸುವುದು ಇದರಿಂದ ಬೈಕ್‌ ಜರ್ಕ್‌ಗೆ ಒಳಗಾಗಿ ಬಳಿಕ ನೀವು ಗಿಯರ್‌ ಇಳಿಸುವುದನ್ನು ಮಾಡುತ್ತಿರಬಹುದು. 4-5ನೇ ಗಿಯರ್‌ನಲ್ಲೇ ನೀವು 30 ಕಿ.ಮೀ. ವೇಗದಲ್ಲಿ ಹೋಗುತ್ತಿರಬಹುದು. ಇದರಿಂದ ಎಂಜಿನ್‌ಗೆ ಹೊರೆಯಾಗುತ್ತದೆ. ಆದ್ದರಿಂದ ವೇಗ ತಗ್ಗಿದಾಗ ತಕ್ಷಣ ಗಿಯರ್‌ ಇಳಿಸಿ, ವೇಗ ಹೆಚ್ಚಾಗುತ್ತಿದ್ದಂತೆ ದೊಡ್ಡ ಗಿಯರ್‌ಗೆ ಬದಲಾಯಿಸಿ. ಇದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

ಕೆಟ್ಟ ಪೆಟ್ರೋಲ್‌
ಪೆಟ್ರೋಲ್‌ ಪಂಪ್‌ಗ್ಳಲ್ಲಿ ವಂಚನೆಗಳು ನಡೆಯುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇದರ ಬಗ್ಗೆ ಜಾಗರೂಕರಾಗಿರಬೇಕು. ಪೆಟ್ರೋಲ್‌ನಲ್ಲಿ ಮಿಶ್ರಣ ಅಥವಾ ಪೆಟ್ರೋಲ್‌ ನಿರ್ದಿಷ್ಟ ಪ್ರಮಾಣದಲ್ಲಿ ಹಾಕದೇ ವಂಚಿಸುವುದರಿಂದಲೂ ನಿಮಗೆ ಕಡಿಮೆ ಮೈಲೇಜ್‌ನ ಅನುಭವಗಳಾಗಿರಬಹುದು. ಒಂದೊಂದು ಬಾರಿ ಒಂದೊಂದು ಪೆಟ್ರೋಲ್‌ ಪಂಪ್‌ಗೆ ಭೇಟಿ ನೀಡುವ ಬದಲು ಆದಷ್ಟೂ ಒಂದೇ ಪಂಪ್‌ಗೆ ಭೇಟಿ ನೀಡಿ. ವ್ಯತ್ಯಾಸ ಗಳಿದ್ದರೆ ತತ್‌ಕ್ಷಣ ನಿಮ್ಮ ಗಮನಕ್ಕೆ ಬರುತ್ತದೆ.

ದಪ್ಪದ ಟಯರ್‌
ಬೈಕ್‌ನಲ್ಲೇ ದಪ್ಪದ ಟಯರ್‌ ಬಂದಿದ್ದರೆ ಸರಿ, ಕೆಲವೊಮ್ಮೆ ಶೋಕಿಗಾಗಿ ನಾವು ದಪ್ಪದ ಟಯರ್‌, ಮ್ಯಾಗ್‌ವೀಲ್‌ಗ‌ಳನ್ನು ಬೈಕ್‌ಗಳಿಗೆ ಅಳವಡಿಸುವುದಿದೆ. ದಪ್ಪದ ಟಯರ್‌ ಇದ್ದರೆ ಅದರಿಂದ ಮೈಲೇಜ್‌ ತುಸು ಕಡಿಮೆ ಒಂದು ವೇಳೆ ನಿಮ್ಮ ಬೈಕ್‌ನಲ್ಲಿ ಸಪೂರದ ಟಯರ್‌ ಇದ್ದು, ನಿಗದಿತ ನಂಬರಿನ ಅಲ್ಲದೇ ಬೇರೆ ನಂಬಿರಿನ ಟಯರ್‌ ಹಾಕಿದ್ದರೆ ಇದರಿಂದ ಮೈಲೇಜ್‌ ಮೇಲೆ ಪರಿಣಾಮ ಬೀರುತ್ತದೆ.

ಟ್ಯಾಂಕ್‌ ಮುಚ್ಚಳ ದೋಷ
ಟ್ಯಾಂಕ್‌ನ ಮುಚ್ಚಳದಲ್ಲಿ ಗಾಳಿ ಹೋಗುವ ಜಾಗ ತುಕ್ಕು ಹಿಡಿದು ದೊಡ್ಡದಾಗಿದ್ದರೆ, ಅಥವಾ ಮುಚ್ಚಳದ ಒಳಗಿನ ರಬ್ಬರ್‌ ಹಾಳಾಗಿದ್ದರೆ ಪೆಟ್ರೋಲ್‌ ಬಹುಬೇಗನೆ ಆರುತ್ತದೆ. ಮಳೆಗಾಲದಲ್ಲಾದರೆ ಇದರೊಳಗೆ ನೀರು ಹೋಗಿ ಬೇರೆಯದಾದ ಸಮಸ್ಯೆಗೆ ಕಾರಣವಾಗುತ್ತದೆ. ಬೇಸಗೆಯಲ್ಲಾದರೆ ಬಿಸಿಗೆ ವೇಗವಾಗಿ ಪೆಟ್ರೋಲ್‌ ಆರುತ್ತದೆ.

Advertisement

ಶುಚಿಯಾಗಿಲ್ಲದಿರುವುದು
ವಾಹನ ಶುಚಿಯಾಗಿಡುವುದು ಮುಖ್ಯ. ಚೈನ್‌ನಲ್ಲಿ ಧೂಳು, ಕಪ್ಪುಮಡ್ಡಿ ಸಂಗ್ರಹವಾಗಿದ್ದರೆ ಸುಲಲಿತವಾಗಿ ಚಕ್ರ ತಿರುಗುವುದಕ್ಕೆ ಅಡ್ಡಿಯಾಗುತ್ತದೆ. 20 ದಿನಕ್ಕೆ ಒಂದು ಬಾರಿಯಾದರೂ ಬೈಕ್‌ ತೊಳೆದು ಕೊಳೆ ತೆಗೆಯಿರಿ. 2 ದಿನಕ್ಕೊಮ್ಮೆಯಾದರೂ ವಾಹನ ಒರೆಸುವುದು ಉತ್ತಮ. ಹಾಗೆಯೇ ಪ್ರತಿ 600 ಕಿ.ಮೀ.ಗೆ ಒಂದು ಬಾರಿಯಾದರೂ ಚೈನ್‌ಗೆ ಆಯ್ಲಿಂಗ್‌ ಮಾಡುವುದು ಉತ್ತಮ.

ಸಲಹೆಗಳು
· ಓವರ್‌ಟೇಕ್‌ ವೇಳೆ ವೇಗವಾಗಿ ಚಲಿಸಿ, ಗಕ್ಕನೆ ಬ್ರೇಕ್‌ ಹಾಕುವುದು ಮಾಡಬೇಡಿ
· ಒಂದೇ ರೀತಿಯ ವೇಗ ಕಾಯ್ದುಕೊಳ್ಳಿ, ಅಕ್ಸಲರೇಷನ್‌ ತುಂಬಾ ಬೇಡ
· ನಿಯಮಿತವಾಗಿ ಸರ್ವೀಸ್‌ ಮಾಡಿಸಿ, ನಿಗದಿತ ಗ್ರೇಡ್‌ನ‌ ಎಂಜಿನ್‌ ಆಯಿಲನ್ನೇ ಬಳಸಿ
· ಬ್ರೇಕ್‌ ಹಿಡಿದು, ಕ್ಲಚ್‌ ಹಿಡಿದು ಬೈಕ್‌ ಚಲಾಯಿಸಬೇಡಿ
· ಸಿಗ್ನಲ್‌ನಲ್ಲಿ 30 ಸೆಕೆಂಡ್‌ಗಿಂತ ಹೆಚ್ಚು ನಿಲ್ಲುವಿರಾದರೆ ಎಂಜಿನ್‌ ಆಫ್ ಮಾಡಿ
· ಬೈಕ್‌ ಅನ್ನು ತುಸು ನೆರಳಲ್ಲೇ ನಿಲ್ಲಿಸಿ, ಬಿಸಿಲಲ್ಲಿದ್ದರೆ ಪೆಟ್ರೋಲ್‌ ಆವಿಯಾಗುವ ಪ್ರಮಾಣ ಹೆಚ್ಚು

-   ಈಶ

Advertisement

Udayavani is now on Telegram. Click here to join our channel and stay updated with the latest news.

Next