Advertisement

ಇದೊಂದು ಅನಿರೀಕ್ಷಿತ ಆಟ: ಮಾರ್ಗನ್‌

11:44 PM Jun 19, 2019 | Team Udayavani |

ಮ್ಯಾಂಚೆಸ್ಟರ್‌: ಅಫ್ಘಾನಿಸ್ಥಾನ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ 17 ಸಿಕ್ಸರ್‌ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ ಬಳಿಕ ಪ್ರತಿಕ್ರಿಯಿಸಿದ ಇಂಗ್ಲೆಂಡ್‌ ನಾಯಕ ಇಯಾನ್‌ ಮಾರ್ಗನ್‌, ತಾನು ಇಂಥದೊಂದು ಬ್ಯಾಟಿಂಗಿನ ನಿರೀಕ್ಷೆಯಲ್ಲೇ ಇರಲಿಲ್ಲ ಎಂದಿದ್ದಾರೆ.

Advertisement

“ನನ್ನಿಂದ ಇಂಥದೊಂದು ಇನ್ನಿಂಗ್ಸ್‌ ಬರಲಿದೆ ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ. ಇದಕ್ಕಾಗಿ ವಿಪರೀತ ಖುಷಿಯಾಗುತ್ತಿದೆ. ಅದರಲ್ಲೂ ಸಿಕ್ಸರ್‌ ದಾಖಲೆ ನಿರ್ಮಿಸಿದ್ದಂತೂ ಅದ್ಭುತವೇ ಸರಿ. ಕಳೆದ 4 ವರ್ಷಗಳಿಂದ ನಾನು ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದೇನಾದರೂ 50-60 ಎಸೆತಗಳಲ್ಲಿ ಶತಕ ಬಾರಿಸಿರಲಿಲ್ಲ. ಇಲ್ಲಿನ ಕೆಲವು ದಾಖಲೆ ಬಹಳ ಕಾಲ ಉಳಿಯಲಿದೆ ಎಂಬ ನಂಬಿಕೆ ನನ್ನದು’ ಎಂದು ಮಾರ್ಗನ್‌ ಹೇಳಿದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಇಂಗ್ಲೆಂಡ್‌ ವಿಶ್ವಕಪ್‌ನಲ್ಲಿ ತನ್ನ ಗರಿಷ್ಠ ಮೊತ್ತ ದಾಖಲಿಸಿತು (6ಕ್ಕೆ 397). ಇದೇ ಕೂಟದಲ್ಲಿ ಬಾಂಗ್ಲಾದೇಶ ವಿರುದ್ಧ 6ಕ್ಕೆ 386 ರನ್‌ ಗಳಿಸಿದ ದಾಖಲೆ ಪತನಗೊಂಡಿತು.
– ಇಯಾನ್‌ ಮಾರ್ಗನ್‌ ನಾಯಕನಾಗಿ 138 ಸಿಕ್ಸರ್‌ ಬಾರಿಸಿ ನೂತನ ಏಕದಿನ ದಾಖಲೆ ಸ್ಥಾಪಿಸಿದರು. ಧೋನಿ ಅವರ 126 ಸಿಕ್ಸರ್‌ ದಾಖಲೆ ಪತನಗೊಂಡಿತು. ರಿಕಿ ಪಾಂಟಿಂಗ್‌ 3ನೇ ಸ್ಥಾನಕ್ಕೆ ಇಳಿದರು (123).
– ಮಾರ್ಗನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಒಟ್ಟು 185 ಸಿಕ್ಸರ್‌ ಬಾರಿಸಿ 2ನೇ ಸ್ಥಾನಕ್ಕೆ ಏರಿದರು. ರಿಕಿ ಪಾಂಟಿಂಗ್‌ (171), ಬ್ರೆಂಡನ್‌ ಮೆಕಲಮ್‌ (170) 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ. ಧೋನಿ 211 ಸಿಕ್ಸರ್‌ ಬಾರಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
– ಇಂಗ್ಲೆಂಡ್‌ ಏಕದಿನ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ 25 ಸಿಕ್ಸರ್‌ ಸಿಡಿಸಿದ ತಂಡವೆನಿಸಿತು. ಈ ಸಂದರ್ಭದಲ್ಲಿ ಅದು ತನ್ನದೇ 24 ಸಿಕ್ಸರ್‌ಗಳ ದಾಖಲೆಯನ್ನು ಮುರಿಯಿತು. ಇದೇ ವರ್ಷ ವೆಸ್ಟ್‌ ಇಂಡೀಸ್‌ ವಿರುದ್ಧ ಗ್ರೆನೆಡಾದಲ್ಲಿ ಇಂಗ್ಲೆಂಡ್‌ 24 ಸಿಕ್ಸರ್‌ ಬಾರಿಸಿತ್ತು.
– ಇಂಗ್ಲೆಂಡ್‌ ವಿಶ್ವಕಪ್‌ ಇನ್ನಿಂಗ್ಸ್‌ ಒಂದರಲ್ಲಿ ಅತೀ ಹೆಚ್ಚು ಸಿಕ್ಸರ್‌ ಬಾರಿಸಿತು. ಹಿಂದಿನ ದಾಖಲೆ ವೆಸ್ಟ್‌ ಇಂಡೀಸ್‌ ಹೆಸರಲ್ಲಿತ್ತು. 2015ರ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ವಿಂಡೀಸ್‌ 19 ಸಿಕ್ಸರ್‌ ಹೊಡೆದಿತ್ತು.
– ವಿಶ್ವಕಪ್‌ ಪಂದ್ಯವೊಂದರಲ್ಲಿ ಅತೀ ಹೆಚ್ಚು 33 ಸಿಕ್ಸರ್‌ ದಾಖಲಾಯಿತು. 2015ರ ನ್ಯೂಜಿಲ್ಯಾಂಡ್‌-ವೆಸ್ಟ್‌ ಇಂಡೀಸ್‌ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 31 ಸಿಕ್ಸರ್‌ ಸಿಡಿದದ್ದು ಹಿಂದಿನ ದಾಖಲೆ.
– ಇಂಗ್ಲೆಂಡ್‌-ಅಫ್ಘಾನಿಸ್ಥಾನ ನಡುವಿನ ಪಂದ್ಯ ಏಕದಿನದಲ್ಲಿ 3ನೇ ಅತ್ಯಧಿಕ ಸಿಕ್ಸರ್‌ ದಾಖಲೆಗೆ ಸಾಕ್ಷಿಯಾಯಿತು (33). ಇದೇ ವರ್ಷದ ವೆಸ್ಟ್‌ ಇಂಡೀಸ್‌-ಇಂಗ್ಲೆಂಡ್‌ ನಡುವಿನ ಗ್ರೆನೆಡಾ ಪಂದ್ಯದಲ್ಲಿ 46 ಸಿಕ್ಸರ್‌ ಸಿಡಿದದ್ದು ವಿಶ್ವದಾಖಲೆ. 2013ರ ಭಾರತ-ಆಸ್ಟ್ರೇಲಿಯ ನಡುವಿನ ಬೆಂಗಳೂರು ಪಂದ್ಯ 2ನೇ ಸ್ಥಾನದಲ್ಲಿದೆ. ಇಲ್ಲಿ 38 ಸಿಕ್ಸರ್‌ ದಾಖಲಾಗಿತ್ತು.
– ಇಯಾನ್‌ ಮಾರ್ಗನ್‌ 57 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಇಂಗ್ಲೆಂಡ್‌ ಕ್ರಿಕೆಟಿಗನೊಬ್ಬ ವಿಶ್ವಕಪ್‌ನಲ್ಲಿ ಬಾರಿಸಿದ ಅತೀ ವೇಗದ ಶತಕ. ಇದೇ ಕೂಟದ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಜಾಸ್‌ ಬಟ್ಲರ್‌ 75 ಎಸೆತಗಳಲ್ಲಿ ಶತಕ ಬಾರಿಸಿದ ದಾಖಲೆ ಪತನಗೊಂಡಿತು. ಒಟ್ಟಾರೆಯಾಗಿ ಮಾರ್ಗನ್‌ ಅವರದು ವಿಶ್ವಕಪ್‌ ಇತಿಹಾಸದ 4ನೇ ಅತೀ ವೇಗದ ಸೆಂಚುರಿ.
– ರಶೀದ್‌ ಖಾನ್‌ ಏಕದಿನದಲ್ಲಿ ಬಹಳ ಬೇಗ 100 ರನ್‌ ಬಿಟ್ಟುಕೊಟ್ಟ ಬೌಲರ್‌ ಎನಿಸಿದರು (8.1 ಓವರ್‌). 2012ರ ನ್ಯೂಜಿಲ್ಯಾಂಡ್‌ ಎದುರಿನ ನೇಪಿಯರ್‌ ಪಂದ್ಯದಲ್ಲಿ ಜಿಂಬಾಬ್ವೆಯ ಬ್ರಿಯಾನ್‌ ವಿಟೊರಿ 8.3 ಓವರ್‌ಗಳಲ್ಲಿ 100 ರನ್‌ ಬಿಟ್ಟುಕೊಟ್ಟದ್ದು ದಾಖಲೆಯಾಗಿತ್ತು.
– ರಶೀದ್‌ ಖಾನ್‌ ವಿಶ್ವಕಪ್‌ ಇತಿಹಾಸದ ದುಬಾರಿ ಬೌಲಿಂಗ್‌
ಸ್ಪೆಲ್‌ಗೆ ಸಾಕ್ಷಿಯಾದರು (9 ಓವರ್‌ಗಳಿಂದ 110 ರನ್‌). 1983ರ ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡಿನ ಮಾರ್ಟಿನ್‌ ಸ್ನೆಡ್ಡನ್‌ 12 ಓವರ್‌ಗಳಲ್ಲಿ 105 ರನ್‌ ನೀಡಿದ್ದು ಈವರೆಗಿನ ದುಬಾರಿ ಬೌಲಿಂಗ್‌ ಆಗಿತ್ತು. ಏಕದಿನದ ದುಬಾರಿ ಸ್ಪೆಲ್‌ ದಾಖಲೆಯನ್ನು ಆಸ್ಟ್ರೇಲಿಯದ ಮಿಕ್‌ ಲೂಯಿಸ್‌ ಹೊಂದಿದ್ದಾರೆ. 2006ರ ದಕ್ಷಿಣ ಆಫ್ರಿಕಾ ವಿರುದ್ಧದ ಜೊಹಾನ್ಸ್‌
ಬರ್ಗ್‌ ಪಂದ್ಯದಲ್ಲಿ ಅವರು 113 ರನ್‌ ನೀಡಿದ್ದರು.
– ರಶೀದ್‌ ಖಾನ್‌ ಏಕದಿನ ಪಂದ್ಯವೊಂದರಲ್ಲಿ 100 ರನ್‌ ಬಿಟ್ಟುಕೊಟ್ಟ ಮೊದಲ ಸ್ಪಿನ್ನರ್‌ ಎನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next