ಪುತ್ತೂರು: ದ.ಕ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಹಿಳಾ ಶಾಸಕರನ್ನು ನೀಡಿದ ಕ್ಷೇತ್ರ ಪುತ್ತೂರು. ಹದಿನೈದು ಚುನಾವಣೆಗಳಲ್ಲಿ ಮೂರು ಬಾರಿ ಮಹಿಳೆಯರೇ ಶಾಸಕಿಯರು. 1999ರ ವರೆಗೂ ಪುತ್ತೂರನ್ನು ಆಳಿದ್ದು ಪುರುಷರೇ. 2004ರಲ್ಲಿ ಪ್ರಯೋಗ ಎಂಬಂತೆ ಶಕುಂತಳಾ ಟಿ. ಶೆಟ್ಟಿ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಅವರು ಗೆದ್ದು ಪ್ರಥಮ ಮಹಿಳಾ ಶಾಸಕಿಯಾದರು. ಇದಕ್ಕೂ ಮೊದಲು ಶಕುಂತಳಾ ಶೆಟ್ಟಿ ಅವರು ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾಗಿದ್ದರೂ ಪುತ್ತೂರಿನಲ್ಲಿ ಅವರು ತಮ್ಮ ಪ್ರಥಮ ಪ್ರಯತ್ನದಲ್ಲೇ ಯಶ ಕಂಡದ್ದು ವಿಶೇಷ.
2008ರಲ್ಲಿ ಮಲ್ಲಿಕಾ ಪ್ರಸಾದ್ ಬಿಜೆಪಿ ಅಭ್ಯರ್ಥಿಯಾದರೆ, ಶಕುಂತಳಾ ಟಿ. ಶೆಟ್ಟಿ ಸ್ವಾಭಿಮಾನಿ ಆಗಿ ಸ್ವಾಭಿಮಾನಿ ವೇದಿಕೆಯಿಂದ ಅಖಾಡಕ್ಕೆ ಧುಮಿಕಿದರು. ಕಾಂಗ್ರೆಸ್ನಿಂದ ಬಂಡಾಯ ಅಭ್ಯರ್ಥಿ ಆಗಿ ನಳಿನಿ ಲೋಕಪ್ಪ ಗೌಡ ಸ್ಪರ್ಧಿಸಿದ್ದರು. ಈ ಮೂವರು ಮಹಿಳಾ ಸ್ಪರ್ಧಿಗಳ ಸೆಣಸಾಟ ಕುತೂಹಲ ಮೂಡಿಸಿತ್ತು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಳಿನ್ ಲೋಕಪ್ಪ ಗೌಡ ಅವರು ಪಕ್ಷದ ಮತಗಳನ್ನು ಸೆಳೆದ ಪರಿಣಾಮ ಕಾಂಗ್ರೆಸ್ ಸೋತು ಮಲ್ಲಿಕಾ ಪ್ರಸಾದ್ ಗೆಲುವು ದಾಖಲಿಸಿ ಕ್ಷೇತ್ರದ ಎರಡನೇ ಮಹಿಳಾ ಶಾಸಕಿಯಾದರು. 2013ರಲ್ಲಿ ಮತ್ತೆ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಟಿಕೆಟ್ನಿಂದ ಗೆದ್ದು ಕ್ಷೇತ್ರದ 3ನೇ ಮಹಿಳಾ ಶಾಸಕಿಯಾಗಿ ಆಯ್ಕೆಯಾದರು. ಹೀಗೆ ಈವರೆಗೆ ಪುತ್ತೂರು ಕ್ಷೇತ್ರ 2 ಬಾರಿ ಬಿಜೆಪಿ ಮತ್ತು 1 ಬಾರಿ ಕಾಂಗ್ರೆಸ್ ಮಹಿಳಾ ಶಾಸಕಿಯರನ್ನು ಕಂಡಿದೆ.