ಅದು 1962. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಉದಯ್‌ಕುಮಾರ್ ಅಭಿನಯದ “ರತ್ನ ಮಂಜರಿ’ ಸಿನಿಮಾ ಬಿಡುಗಡೆಯಾಗಿತ್ತು. ಸುಮಾರು ಎರಡುವರೆ ದಶಕದ ಹಿಂದೆ ಪ್ರತಿ ಶುಕ್ರವಾರ ದೂರದರ್ಶನದಲ್ಲಿ “ಚಿತ್ರ ಮಂಜರಿ’ ಬರುತ್ತಿತ್ತು. “ರತ್ನ ಮಂಜರಿ’ ಮತ್ತು “ಚಿತ್ರಮಂಜರಿ’ ಬಗ್ಗೆ ಹೀಗೇಕೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ “ಮಂಜರಿ’. ಇದು ಬಿಡುಗಡೆಗೆ ರೆಡಿಯಾಗಿರುವ ಸಿನಿಮಾ.
ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲು ತಂಡದೊಂದಿಗೆ ಆಗಮಿಸಿದ್ದರು ನಿರ್ದೇಶಕ ವಿಶೃತ್ ನಾಯ್ಕ. ಹಾಡುಗಳ ಬಿಡುಗಡೆಗೂ ಮುನ್ನ, ಚಿತ್ರದ ಎರಡು ಹಾಡು ಮತ್ತು ಟ್ರೇಲರ್ ತೋರಿಸಲಾಯಿತು. ಅಲ್ಲಿಗೆ “ಮಂಜರಿ’ ಒಂದು ಹಾರರ್ ಟಚ್ ಇರುವ ಸಿನಿಮಾ ಅನ್ನೋದು ಖಾತ್ರಿಯಾಯಿತು. ಚಿತ್ರತಂಡದವರನ್ನೆಲ್ಲ ವೇದಿಕೆ ಮೇಲೆ ಕರೆಯಲಾಯಿತು. ಅಂದು ಆಡಿಯೋ ಸಿಡಿ ಬಿಡುಗಡೆ ಮಾಡೋಕೆ ಕೋಲಾರ ಶಾಸಕ ವರ್ತೂರು ಪ್ರಕಾಶ್ ಬಂದಿದ್ದರು. ವೇದಿಕೆ ಭರ್ತಿಯಾಗುತ್ತಿದ್ದಂತೆಯೇ, ನಿರ್ದೇಶಕ ವಿಶೃತ್ ನಾಯ್ಕ ಮಾತಿಗೆ ನಿಂತರು.
“ನಾನು “ರಿಂಗ್‌ಮಾಸ್ಟರ್’ ಮಾಡಿದಾಗ, ಮುಂದೇನು ಎಂಬ ಪ್ರಶ್ನೆ ಕಾಡಿತ್ತು. ಆಗ ನನಗೆ ಸಾಥ್ ಕೊಟ್ಟಿದ್ದು ನನ್ನ ಗೆಳೆಯರಾದ ಶಂಕರ ಮತ್ತು ಕಿರಣ. ಇಬ್ಬರೂ ಧೈರ್ಯ ತುಂಬಿ, ನಿರ್ಮಾಣ ಮಾಡುವ ಸಾಹಸಕ್ಕಿಳಿದರು. ನಾನೂ ಅದೇ ಧೈರ್ಯದಿಂದ “ಮಂಜರಿ’ ಮಾಡಿದ್ದೇನೆ. ನಾನು ಕಥೆ ಬರೆಯುತ್ತಾ ಹೋದಂತೆ, ದೊಡ್ಡದಾಗುತ್ತಾ ಹೋಯ್ತು. ಇದನ್ನು ಒಂದೇ ಪಾರ್ಟ್‌ನಲ್ಲಿ ಹೇಳ್ಳೋಕೆ ಸಾಧ್ಯವಿಲ್ಲ ಅನಿಸಿತು. ಹಾಗಾಗಿ ಅಧ್ಯಾಯ 1 ಎಂದು ಈ “ಮಂಜರಿ’ಯನ್ನು ಶುರು ಮಾಡಿದ್ದೇನೆ. ಮುಂದೆ ಅಧ್ಯಾಯ 2 ಮತ್ತು 3 ಕೂಡ ಆಗಲಿದೆ. ನಂದಿ ಹಿಲ್ಸ್, ತಿಪಟೂರು, ಕೋಲಾರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಶೀರ್ಷಿಕೆ ನೋಡಿದವರು ಇದು ಹಾರರ್ ಸಿನ್ಮಾ ಅಂತಾರೆ. ಆದರೆ, ಇಲ್ಲಿ ಯಾವುದೇ ಹಾರರ್ ಫೀಲ್ ಇಲ್ಲ, ಯಾವುದೋ ಆತ್ಮ ಅಲೆದಾಡಲ್ಲ, ಸೇಡು ತೀರಿಸಿಕೊಳ್ಳುವ ಆತ್ಮದ ಕಥೆಯೂ ಅಲ್ಲ. ಬೇರೆ ವಿಷಯ ಇಟ್ಟುಕೊಂಡು ಹೊಸ ಫೀಲ್‌ನಲ್ಲಿ ಒಂದಷ್ಟು ತಮಾಷೆ, ಪ್ರೀತಿ, ಸೆಂಟಿಮೆಂಟ್ ಇಟ್ಟುಕೊಂಡು ಮಾಡಿರುವ ಸಿನಿಮಾ ಇದು’ ಅಂದರು ವಿಶೃತ್.
ರೂಪಿಕಾಗೆ ಇದೊಂದು ಒಳ್ಳೇ ಸಿನಿಮಾ ಆಗಿ ಮೂಡಿಬರುತ್ತೆ ಎಂಬ ಅದಮ್ಯ ವಿಶ್ವಾಸ. ಅವರಿಲ್ಲಿ ಸ್ಟಂಟ್ ಕೂಡ ಮಾಡಿದ್ದಾರಂತೆ. “ಇದು ಆತ್ಮದ ಕಥೆ ಅಲ್ಲದಿದ್ದರೂ, ಒಂದಷ್ಟು ಹೊಸನುಭವ ಕೊಡುವ ಸಿನಿಮಾ. ಗ್ಯಾಪ್ ಬಳಿಕ ಬಂದರೂ ಒಳ್ಳೇ ಸಿನಿಮಾ ಮೂಲಕವೇ ಬರುತ್ತಿದ್ದೇನೆ ಎಂಬ ಖುಷಿ ಇದೆ. ಇಲ್ಲಿ ಎಲ್ಲಾ ಪಾತ್ರಗಳಿಗೂ ಆದ್ಯತೆ ಇದೆ. ನಿಮ್ಮ ಸಹಕಾರ, ಪ್ರೋತ್ಸಾಹ ಇದ್ದರೆ, “ಮಂಜರಿ’ಗೆ ಗೆಲುವು ಸಿಗುತ್ತೆ’ ಅಂದರು ರೂಪಿಕಾ.
ನಿರ್ಮಾಪಕದ್ವಯರಾದ ಶಂಕರ್ ಹಾಗೂ ಕಿರಣ್‌ಗೌಡ ಅವರಿಗೆ “ರಿಂಗ್ ಮಾಸ್ಟರ್’ ಚಿತ್ರ ನೋಡಿದಾಗ, ವಿಶೃತ್‌ಗೊಂದು ಸಿನಿಮಾ ಮಾಡಬೇಕು ಅಂತೆನಿಸಿತಂತೆ. ಸಿಕ್ಕಾಗೆಲ್ಲ ಕಥೆ, ಹಾಡಿನ ಬಗ್ಗೆ ಹೇಳುತ್ತಿದ್ದರಂತೆ ವಿಶೃತ್. ಆಗ ಅವರ ಕೈಯಲ್ಲಿ ಹಣ ಇರಲಿಲ್ಲ. ಈಗ ಹಣ ಇದೆ. ಹಾಗಾಗಿ ವಿಶೃತ್‌ಗಾಗಿ ಸಿನಿಮಾ ನಿರ್ಮಾಣ ಮಾಡಿದ್ದಾಗಿ ಹೇಳಿಕೊಂಡರು ಅವರು. “ಉಗ್ರಂ’ ಮಂಜು, ವಿಜಯ್ ಚೆಂಡೂರ್, ಪವಿತ್ರ, ನಾಗೇಶ್, ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು, ಗಾಯಕಿ ಶ್ರೀಯಾ ಇತರರು “ಮಂಜರಿ’ಯ ಗುಣಗಾನ ಮಾಡಿದರು.