Advertisement

ನಿರ್ಭಯಾ ತೀರ್ಪಿನ ಸಂದೇಶ ಸ್ಪಷ್ಟ ನೀಚರಿಗೆ ಇದು ಕಠಿನ ಎಚ್ಚರಿಕೆ

03:45 AM May 06, 2017 | Team Udayavani |

ಬರ್ಬರ ಕೃತ್ಯ ಎಸಗಿದವರಿಗೆ ಮರಣ ದಂಡನೆ ವಿಧಿಸುವುದು ಪ್ರತೀಕಾರದಂತೆ ಕಂಡುಬಂದರೂ ನಿರ್ಭಯಾ ಪ್ರಕರಣದಲ್ಲಿ ಈ ಕಠಿನ ನಿರ್ಧಾರ ಅನಿವಾರ್ಯವಾಗಿತ್ತು ಎಂಬುದನ್ನು ಕೂಡ ಗಮನಿಸಬೇಕು.

Advertisement

ದೇಶದ ರಾಜಧಾನಿಯಲ್ಲಿ ಯುವತಿಯನ್ನು ಚಲಿಸುತ್ತಿರುವ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಬರ್ಬರವಾಗಿ ಸಾಯಿಸಿದ ನಾಲ್ವರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟು ಎತ್ತಿ ಹಿಡಿಯುವುದರೊಂದಿಗೆ ಸರಿಯಾಗಿ ನಾಲ್ಕು ವರ್ಷ, ನಾಲ್ಕು ತಿಂಗಳು ಮತ್ತು 18 ದಿನಗಳ ಹಿಂದೆ ಸಂಭವಿಸಿದ ಈ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿದೆ. ಇದು ಸಂಭವಿಸಿದ್ದು 2012 ಡಿ. 16ರಂದು ರಾತ್ರಿ. ಗೆಳೆಯನ ಜತೆಗೆ ಸಿನೇಮಾ ವೀಕ್ಷಿಸಿ ಮನೆಗೆ ಮರಳುತ್ತಿದ್ದ ಯುವತಿ ಬಸ್ಸಿನಲ್ಲಿ ಆರು ಮಂದಿ ಕಾಮುಕರ ಕೈಗೆ ಸಿಕ್ಕಿ ಬಿದ್ದು ಮನುಷ್ಯ ಮಾತ್ರರಾದವರು ಕಂಡು ಕೇಳರಿಯದ ರೀತಿಯಲ್ಲಿ ಚಿತ್ರಹಿಂಸೆ ಅನುಭವಿಸಿದ ಈ ಘಟನೆ ಇಡೀ ಮನುಕುಲದ ಅಂತಃಕರಣವನ್ನು ಕಲಕಿತ್ತು. 17 ದಿನ ಜೀವನ್ಮರಣ ಹೋರಾಟ ನಡೆಸಿದ ಯುವತಿ ಕೊನೆಗೂ ಬದುಕಿಗೆ ವಿದಾಯ ಹೇಳಿದಳು. ಆದರೆ ಈ ಪ್ರಕರಣ ದೇಶದಲ್ಲಿ ಉಂಟು ಮಾಡಿದ ಪರಿಣಾಮ ಮಾತ್ರ ಅಪಾರ. ಮಹಿಳೆಯರ ಮೇಲಾಗುವ ದೌರ್ಜನ್ಯಗಳನ್ನು ತಡೆಯಲು ಕಠಿಣ ಕಾನೂನು ರಚನೆಗೆ ಪ್ರಕರಣ ಕಾರಣವಾಯಿತು. ಅಂತೆಯೇ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಸಂತ್ರಸ್ತ ಮಹಿಳೆಯರಿಗಾಗಿ ಬೃಹತ್‌ ನಿಧಿಯೊಂದನ್ನು ನಿರ್ಭಯಾ ಹೆಸರಿನಲ್ಲಿ ಸರಕಾರ ಸ್ಥಾಪಿಸಿತು. ಜನರಲ್ಲಿ ಹೋರಾಟದ ಕಿಚ್ಚನ್ನು ಹುಟ್ಟಿಸಿದ ಘಟನೆಯಿದು. 

ಕೃತ್ಯದಲ್ಲಿ ಭಾಗಿಯಾದವರು ಆರು ಮಂದಿ. ಈ ಪೈಕಿ ಒಬ್ಬ ಬಾಲಾಪರಾಧಿ. ಇದರ ಲಾಭ ಪಡೆದು ಬರೀ ಮೂರು ವರ್ಷಗಳ ಸುಧಾರಣಾ ಗೃಹವಾಸದ ಶಿಕ್ಷೆ ಪಡೆದು ಪಾರಾಗಿದ್ದಾನೆ. 2015 ನವೆಂಬರ್‌ನಲ್ಲಿ ಆತ ಬಿಡುಗಡೆಯಾದಾಗ ದೇಶದಲ್ಲಿ ಮತ್ತೂಮ್ಮೆ ರೋಷ ಭುಗಿಲೆದ್ದಿತು. ಅಪ್ರಬುದ್ಧರು ಎಂಬ ಏಕೈಕ ಕಾರಣಕ್ಕೆ ಪ್ರಬುದ್ಧರಿಗಿಂತ‌ಲೂ ಹೆಚ್ಚು ಹೀನ ಕೃತ್ಯ ಎಸಗಿದವರನ್ನು ಬಿಟ್ಟುಬಿಡುವ ದೇಶದ ಕಾನೂನು ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂಬ ಬೇಡಿಕೆ ನಿರ್ಭಯಾ ಪ್ರಕರಣದ ಬಳಿಕ ತೀವ್ರಗೊಂಡಿದೆ. ಇನ್ನೋರ್ವ ಅಪರಾಧಿ ರಾಮ್‌ ಸಿಂಗ್‌ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಕೇಶ್‌ ಸಿಂಗ್‌, ಪವನ್‌ ಗುಪ್ತ, ವಿನಯ್‌ ಶರ್ಮ ಮತ್ತು ಅಕ್ಷಯ್‌ ಠಾಕೂರ್‌ ವಿಚಾರಣೆ ಎದುರಿಸಿದವರು. 2013 ಸೆಪ್ಟೆಂಬರ್‌ನಲ್ಲಿ ಕ್ಷಿಪ್ರ ನ್ಯಾಯಾಲಯ ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ನಂತರ ದಿಲ್ಲಿ ಹೈಕೋರ್ಟ್‌ ತೀರ್ಪನ್ನು ಎತ್ತಿ ಹಿಡಿಯಿತು. ಬಳಿಕ ಅಪರಾಧಿಗಳು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದರು. ಈಗ ಸರ್ವೋಚ್ಚ ನ್ಯಾಯಾಲಯ ಶಿಕ್ಷೆಯನ್ನು ಖಾಯಂಗೊಳಿಸಿರುವುದರಿಂದ ರಾಷ್ಟ್ರಪತಿಗೆ ಪ್ರಾಣಭಿಕ್ಷೆಯ ಅರ್ಜಿ ಸಲ್ಲಿಸುವ ದಾರಿಯೊಂದು ಮಾತ್ರ ಉಳಿದಿದೆ. 

ಸುಪ್ರೀಂ ಕೋರ್ಟ್‌ ತೀರ್ಪು ಸಹಜವಾಗಿಯೇ ಸಮಾಧಾನ ಕೊಟ್ಟಿದೆ. ಜನರು, ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳು, ಮಹಿಳಾವಾದಿಗಳು ತೀರ್ಪನ್ನು ಸ್ವಾಗತಿಸಿದ್ದಾರೆ. ನಿರ್ದಿಷ್ಟವಾಗಿ ಈ ತೀರ್ಪಿಗಾಗಿ ಕಾಯುತ್ತಿದ್ದ ನಿರ್ಭಯಾಳ ಹೆತ್ತವರು ಅತಿ ಸಂತುಷ್ಟರಾಗಿದ್ದಾರೆ.  ಮರಣ ದಂಡನೆಗಿಂತ ಕಡಿಮೆ ಶಿಕ್ಷೆಗೆ ಆರೋಪಿಗಳು ಅರ್ಹರಲ್ಲ ಎಂದು ತೀರ್ಪು ನೀಡಿದ ನ್ಯಾಯಾಧೀಶರೇ ಹೇಳಿದ್ದಾರೆ. ಹಾಗೆಂದು ನಾಳೆಯೇ ಅಪರಾಧಿಗಳನ್ನು ನೇಣಿಗೇರಿಸುತ್ತಾರೆ ಎಂದಲ್ಲ. ಇದಕ್ಕೆ ಇನ್ನೂ ಹಲವು ಪ್ರಕ್ರಿಯೆಗಳಿವೆ. ತೀರ್ಪನ್ನು ಮರು ಪರಿಶೀಲಿಸಲು ಆಗ್ರಹಿಸಿ ಅರ್ಜಿ ಸಲ್ಲಿಸುವ ಅವಕಾಶವಿದೆ. ಇದು ತಿರಸ್ಕೃತವಾದರೆ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಬೇಕು. ಅದೂ ತಿರಸ್ಕೃತವಾದರೆ ನೇಣಿನ ಉರುಳಿಗೆ ಕೊರಳೊಡ್ಡಲು ತಯಾರಾಗಬೇಕು. ಇಷ್ಟೆಲ್ಲ ಆಗಲು ಕೆಲವು ವರ್ಷ ಹಿಡಿಯಬಹುದು. ಅಷ್ಟರ ತನಕ ಜೈಲಿನಲ್ಲಿ ಕೊಳೆಯಬೇಕು. 

ಹಾಗೆಂದು ಈ ನಾಲ್ಕು ಅಪರಾಧಿಗಳನ್ನು ನೇಣಿಗೇರಿಸಿದ ಕೂಡಲೇ ದೇಶದಲ್ಲಿ ಅತ್ಯಾಚಾರಗಳು ಕೊನೆಯಾಗುತ್ತವೆ ಎಂದಲ್ಲ. ಆದರೆ ಈ ತೀರ್ಪು ಇಂತಹ ಪೈಶಾಚಿಕ ಕೃತ್ಯ ಎಸಗಲು ಮುಂದಾಗುವವರಿಗೆ ಒಂದು ಕಠಿಣ ಎಚ್ಚರಿಕೆಯನ್ನು ನೀಡಿದೆ. ಬರ್ಬರ ಕೃತ್ಯ ಎಸಗಿದವರಿಗೆ ಮರಣದಂಡನೆ ವಿಧಿಸುವುದು ಪ್ರತೀಕಾರದಂತೆ ಕಂಡುಬಂದರೂ ಈ ಪ್ರಕರಣದಲ್ಲಿ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂಬುದನ್ನು ಕೂಡ ಗಮನಿಸಬೇಕು. ಹಾಗೆಂದು ಮುಂದಕ್ಕೂ ಇದೇ ರೀತಿಯ ಪುನರಾವರ್ತನೆಯಾಗಬೇಕೆಂದು ಹೇಳುವುದು ಸರಿಯಲ್ಲ. ಅತ್ಯಾಚಾರದಂತಹ ಸಾಮಾಜಿಕ ಪಿಡುಗನ್ನು ನಿವಾರಿಸಲು ಕಠಿಣ ಶಿಕ್ಷೆಗಿಂತಲೂ ವ್ಯವಸ್ಥೆ ಮತ್ತು ಜನರ ಮನೋಧರ್ಮ ಸುಧಾರಣೆಯಾಗುವುದು ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next