Advertisement

ಕಡು ಬಡವ ಚಿಣ್ಣರಿಗೊಂದು “ಗುಬ್ಬಚ್ಚಿಗೂಡು’ಪ್ರಾಥಮಿಕ ಶಾಲೆ

07:35 AM Nov 14, 2018 | |

ಧಾರವಾಡ: ಇಂದಿನ ದಿನಗಳಲ್ಲಿ ಹೈಟೆಕ್‌ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಓದಲು ಸೇರಿಸಬೇಕಾದರೆ ಪೋಷಕರು ಕಡ್ಡಾಯವಾಗಿ ಪದವಿ ಓದಿರಬೇಕು.ನೌಕರಸ್ಥರಾಗಿರಬೇಕು. ಕನಿಷ್ಠ 50 ಸಾವಿರ ರೂ.ವರೆಗೂ ದೇಣಿಗೆ (ಡೊನೇಷನ್‌) ಕೊಡಬೇಕೆನ್ನುವ ಷರತ್ತುಗಳಿರುವುದು ಸಾಮಾನ್ಯ. ಆದರೆ, ಈ ಶಾಲೆಗೆ ಸೇರುವ ಮಕ್ಕಳ ಪಾಲಕರು ಕಡ್ಡಾಯವಾಗಿ ಅನಕ್ಷರಸ್ಥರಾಗಿರಬೇಕು ಮತ್ತು ಬಡತನ ರೇಖೆಗಿಂತ ಕೆಳಗಿರಬೇಕು. ಶುಲ್ಕ ಕಟ್ಟಲಾಗದಿದ್ದರೂ ಪರವಾಗಿಲ್ಲ, ಅಕ್ಷರ ಕಲಿಯುವ ಮತ್ತು ಕಲಿಸುವ ಆಸಕ್ತಿ ಹೊಂದಿರಬೇಕು. ಈ ಷರತ್ತುಗಳಿಗೆ ಒಳಪಟ್ಟ ಮಕ್ಕಳಿಗೆ ಮಾತ್ರ ಈ ಶಾಲೆಯಲ್ಲಿ ಪ್ರವೇಶ. ಧಾರವಾಡದ ಮಾಳಾಪುರದಲ್ಲಿರುವ “ಗುಬ್ಬಚ್ಚಿಗೂಡು’ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಕಳೆದ 8 ವರ್ಷಗಳಿಂದ ಈ ಷರತ್ತುಗಳು ಅನ್ವಯವಾಗುತ್ತಿವೆ. ಈ ಶಾಲೆಯಲ್ಲಿ ಬಡವರ ಮಕ್ಕಳು, ಚಿಂದಿ ಆಯುವವರ ಮಕ್ಕಳು, ಮೋಡಕಾ (ಗುಜರಿ) ಸಾಮಾನು ಮಾರಾಟ ಮಾಡುವವರ ಮಕ್ಕಳು, ರದ್ದಿ ಪೇಪರ್‌ ಕೊಳ್ಳುವವರ ಮಕ್ಕಳು ಅದರಲ್ಲೂ ಅನಾಥ, ಕಡುಬಡವ ಮಕ್ಕಳ ಪ್ರವೇಶಾತಿಗೆ ಪ್ರಥಮ ಆದ್ಯತೆ.

Advertisement

ದತ್ತು ಮಕ್ಕಳ ಶಾಲೆ: ಗುಬ್ಬಚ್ಚಿಗೂಡು ಶಾಲೆ ಆರಂಭವಾಗಿ 8 ವರ್ಷಗಳಾಗಿವೆ. ಎಲ್‌ಕೆಜಿಯಿಂದ 6ನೇ ತರಗತಿವರೆಗೂ ಇರುವ ಈ ಶಾಲೆಯಲ್ಲಿ ಸದ್ಯಕ್ಕೆ 10 ಶಿಕ್ಷಕರಿದ್ದು 215 ಬಡ ವಿದ್ಯಾರ್ಥಿಗಳಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಬಡ ಅನಕ್ಷರಸ್ಥ ಪೋಷಕರ ಮಕ್ಕಳೇ ಆಗಿದ್ದಾರೆ. ಶುಲ್ಕ ಭರಿಸುವ ಶಕ್ತಿ ಇಲ್ಲದೇ ಇರುವ ಮಕ್ಕಳ ಶುಲ್ಕವನ್ನು ದತ್ತು ಯೋಜನೆ ಮೂಲಕ ಭರಿಸುವ ವ್ಯವಸ್ಥೆ ಮಾಡಲಾಗಿದ್ದು, ಒಬ್ಬೊಬ್ಬ ದಾನಿಯೂ ಎರಡು ಮೂರು ವಿದ್ಯಾರ್ಥಿಗಳ ವಾರ್ಷಿಕ 5 ಸಾವಿರ ರೂ.ಶುಲ್ಕ ಭರಿಸುತ್ತಾರೆ. ಸ್ವತಃ ಈ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುವ ಹತ್ತು ಜನರು ಪ್ರತಿ ವರ್ಷ ಒಬ್ಬೊಬ್ಬ ವಿದ್ಯಾರ್ಥಿಯ ಶುಲ್ಕವನ್ನು ತಾವೇ ಭರಿಸಿ ಅವರಿಗೆ ಅಕ್ಷರ ಕಲಿಸುತ್ತಾರೆ. ಸದ್ಯಕ್ಕೆ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತಿರುವುದನ್ನು ನೋಡಿ ದಾನಿಗಳು 20 ಲಕ್ಷ ರೂ.ಗಳನ್ನು ಸಂಗ್ರಹಿಸಿಕೊಟ್ಟು ಈ ಶಾಲೆಗೆ ಸ್ವಂತ ಕಟ್ಟಡ ಕಟ್ಟುತ್ತಿದ್ದಾರೆ. ಜಾನಪದ ತಜ್ಞರು, ಇತರ ವಿಷಯ ಪರಿಣತರು, ಮಕ್ಕಳ ತಜ್ಞರು ಎಲ್ಲರೂ ಇಲ್ಲಿ ಮಕ್ಕಳಿಗೆ ಉಚಿತವಾಗಿ ತಮ್ಮ ಜ್ಞಾನಧಾರೆ ಎರೆಯುತ್ತಾರೆ.

ಮಕ್ಕಳಿಗೆ ಉತ್ತಮ ಸಂಸ್ಕಾರ, ಶೈಕ್ಷಣಿಕ ವಾತಾವರಣ ಇಲ್ಲಿದೆ. ಅವರಲ್ಲಿನ ಕಲೆ, ಕ್ರೀಡಾಸಕ್ತಿ ಬೆಳೆಸುವುದು, ಮಕ್ಕಳ ಚಲನವಲನದ ಮೇಲೆ ನಿಗಾ ಇಡುವುದಷ್ಟೇ ಅಲ್ಲ, ಮಕ್ಕಳ ಮನೆಯವರೆಗೂ ಹೋಗಿ ಅವರು ಆಟವಾಡುವ ಮತ್ತು ಮನೆಯಲ್ಲಿನ ವಾತಾವರಣ ತಿಳಿದು ಅವರಲ್ಲಿನ ಕಲೆ, ಕ್ರೀಡೆ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಪ್ರಯತ್ನವನ್ನು ಶಾಲೆಯ  ಆಡಳಿತ ಮಂಡಳಿ ಮಾಡುತ್ತಿದೆ. ವಾರದಲ್ಲಿ ಎರಡು ದಿನ ಶಾಲಾ ಬ್ಯಾಗ್‌ ಇಲ್ಲದ ದಿನ ಎಂದು ಮಾಡಲಾಗಿದ್ದು, ಮಕ್ಕಳು ಖುಷಿಯಾಗಿ ಆಟವಾಡುತ್ತ ಕಲಿಯುವ  ಪದ್ಧತಿಯಿದೆ ಎನ್ನುತ್ತಾರೆ ಶಾಲೆಯ ಸಂಸ್ಥಾಪಕರು ಮತ್ತು ಮಕ್ಕಳ ತಜ್ಞ ಶಂಕರ ಹಲಗತ್ತಿ. ಬರೀ ಮಕ್ಕಳು ಮಾತ್ರವಲ್ಲ, ಅನಕ್ಷರಸ್ಥ ತಂದೆ-ತಾಯಿ ಕೂಡ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಇಲ್ಲಿ ಯೋಜನೆ ರೂಪಿಸಲಾಗಿದೆ. ಕಳೆದ 20 ವರ್ಷಗಳ ಹಿಂದೆ ಸಂಸ್ಥೆ ಹುಟ್ಟಿಕೊಂಡಿದ್ದು, 20 ವರ್ಷಗಳಿಂದ ಗುಬ್ಬಚ್ಚಿಗೂಡು ಹೆಸರಿನ ಮಾಸಪತ್ರಿಕೆಯನ್ನು ಹೊರ ತರುತ್ತಿದೆ. 

ಬರೀ ನವೆಂಬರ್‌ 14ಕ್ಕೆ ಮಕ್ಕಳ ಹಬ್ಬ ಆಚರಿಸಿದರೆ  ಸಾಲದು. ಬಡ, ಅನಾಥ ಮಕ್ಕಳಿಗೆ ಅಕ್ಷರ ಕಲಿಸಿದಾಗ ಈ ದಿನಾಚರಣೆಗೆ ಅರ್ಥ ಬರುತ್ತದೆ. ಶಿಕ್ಷಣ ಮರೀಚಿಕೆ ಎಂದು ಕೊಂಡಿದ್ದ ಕೊಳಚೆ ಪ್ರದೇಶದ ಬಡ ಮಕ್ಕಳಿಗೆ ಗುಬ್ಬಚ್ಚಿಗೂಡು ಅಕ್ಷರ ದಾಸೋಹ ಮಾಡುತ್ತಿದೆ. ಹೀಗಾಗಿ, ಈ ಮಕ್ಕಳಿಗೆ ಪ್ರತಿದಿನವೂ ಮಕ್ಕಳ ದಿನಾಚರಣೆಯೇ ಆಗಿದೆ. 
 ●ಶಂಕರ ಹಲಗತ್ತಿ, ಗುಬ್ಬಚ್ಚಿಗೂಡು ಶಾಲೆ ಸಂಸ್ಥಾಪಕರು

 ●ಬಸವರಾಜ ಹೊಂಗಲ್‌
 

Advertisement
Advertisement

Udayavani is now on Telegram. Click here to join our channel and stay updated with the latest news.

Next