ಒಂದು ದಿನ ನಮ್ಮ ಅಮ್ಮನ ಜೊತೆಗೆ ಅವರ ದೂರದ ಸಂಬಂಧಿಯ ಊರಿಗೆ ಹೋಗಿದ್ದೆ. ಆ ಊರಿನ ಹೆಸರು ಆನಕ (ಭಯಾನಕ). ಅಲ್ಲಿ ಸೂರ್ಯನ ಉದಯವೇ ಆಗುತ್ತಿರಲಿಲ್ಲ. ಎಲ್ಲಿ ನೋಡಿದರಲ್ಲಿ ಕಗ್ಗತ್ತಲು. ದೀವಿಗೆಯ ಬೆಳಕಿನಲ್ಲೇ ಜನರು ವಾಸಿಸುತ್ತಿದ್ದರು. ಅಂತೂ ಆ ಊರು ತಲುಪಿದೆವು. ಎಲ್ಲಿ ನೋಡಿದರೂ ಜನರು ಕಾಣುತ್ತಿಲ್ಲ. ಸಂಚಾರಿ ವ್ಯವಸ್ಥೆಯಂತೂ ಮೊದಲೇ ಇಲ್ಲ. ಸಂಬಂಧಿಗಳ ಮನೆಯೋ ತುಂಬಾನೇ ದೂರ. ನಡೆಯಲು ಆಗುತ್ತಿಲ್ಲ. ಕಾಲು ತುಂಬಾ ನೋವು ಅಂತಾ ಅಮ್ಮನಿಗೆ ಹೇಳುತ್ತಿದ್ದೆ. ಅಮ್ಮ “ಅಗೊ! ಇಲ್ಲಿಯೇ ಇದೆ ಸ್ವಲ್ಪ ಮುಂದೆ ಹೋದರಾಯಿತು’ ಎಂದರು.
ಹೋಗುವ ರಸ್ತೆಯಲ್ಲಿ ಸ್ಮಶಾನದ ವಾತಾವರಣವಿತ್ತು. ನಾನಂತೂ ಆ ದೃಶ್ಯವನ್ನೆಲ್ಲ ನೋಡಿ, ಕಿಟಾರ್ ಎಂದು ಚೀರಿ ಅಮ್ಮನನ್ನು ತಬ್ಬಿಕೊಂಡೆ. ಅಮ್ಮ, “ಅತ್ತ ನೋಡಬೇಡ. ದೇವರ ಮಂತ್ರ ಜಪಿಸುತ್ತಾ ಹೋಗೋಣ’ ಎಂದರು. ಆಯ್ತು ಎಂದು, ದೇವರ ನಾಮ ಜಪಿಸುತ್ತಾ ಸಂಬಂಧಿಕರ ಮನೆ ತಲುಪಿದೆವು.
ಅಮ್ಮ ಠಕ್ ಠಕ್ ಎಂದು ಮನೆಯ ಬಾಗಿಲನ್ನು ತಟ್ಟಿದರು. ಆಗ ಉದ್ದನೆಯ ಕೈ ಬಂದು, ಸರಕ್ ಅಂತ ಬಾಗಿಲು ತೆಗೆದ ಸದ್ದಾಯಿತು. ಆದರೆ, ಮುಖವೇ ಕಾಣುತ್ತಿಲ್ಲ. ನನಗೋ ಮೈಯೆಲ್ಲಾ ಬೆವರು. ಅಮ್ಮ ಬಾಗಿ ನನ್ನ ಹಣೆಯ ಬೆವರು ಒರೆಸುವಾಗ ಒಂದು ಮುಖ ಬಾಗಿಲು ಹೊರಗೆ ಬಂತು. “ಅಮ್ಮಾ…’ ಎಂದು ಜೋರಾಗಿ ಕೂಗಿದೆ. ಅಮ್ಮ ನೋಡಿ ಭಯಭೀತಳಾದಳು. ಅವರನ್ನು ನೋಡಿದರೆ, ಅಷ್ಟು ಭಯಾನಕವಾಗಿದ್ದರು.
ಬಾಯಲ್ಲಿ ಹಲ್ಲುಗಳೇ ಇರಲಿಲ್ಲ. ಬಾಯಿ ತೆಗೆದರೆ ಬ್ರಹ್ಮಾಂಡವೇ ಕಾಣುತ್ತಿತ್ತು. ಮಾರುದ್ದ ಗಡ್ಡ, ಮೈಯೆಲ್ಲ ರೋಮಗಳಿಂದ ಆವೃತವಾಗಿತ್ತು. ಕಣ್ಣುಗಳೆರಡು ನಿಂಬೆ ಹಣ್ಣಿನ ಗಾತ್ರ ಹೊಂದಿದ್ದವು. ಆತನಿಗೆ ಮೂಗು, ಕಿವಿಗಳೇ ಇದ್ದಿರಲಿಲ್ಲ. ಮುಖದಲ್ಲಿ ಕಣ್ಣುಗಳೇ ಎದ್ದು ಕಾಣುತ್ತಿದ್ದವು. ಅಮ್ಮ ಮೂಛೆì ಬಿದ್ದರು. ಆ ಗಡ್ಡ ವೇಷಧಾರಿ ತನ್ನ ನಾಲಿಗೆಯನ್ನು ಹೊರ ಚಾಚಿ ನಾಲಿಗೆಯಿಂದ ನನ್ನನ್ನು ಎಳೆದ. “ಅಮ್ಮ ಅಮ್ಮ!’ ಎಂದು ಕೂಗ ತೊಡಗಿದೆ. ಅಮ್ಮನಿಗೆ ಎಚ್ಚರವಾಗುತ್ತಿಲ್ಲ. ನನಗೆ ದಿಕ್ಕೇ ತೋಚದಂತಾಯಿತು.
ಮನದಲ್ಲಿ ಇಷ್ಟ ದೇವರನ್ನು ಸ್ಮರಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಅದೆಲ್ಲಿಂದಲೋ ಒಂದು ಕಮಲದ ಹೂ ಬಂತು. ತದನಂತರ ಬೆಂಕಿ ಬರುವುದು ಕಂಡಿತು. ಕಮಲದ ಹೂ ಬಂದು, ನನ್ನನ್ನು ಮತ್ತು ಅಮ್ಮನನ್ನು ಎತ್ತಿಕೊಂಡಿತು. ಬೆಂಕಿ ಬಂದು ಗಡ್ಡದಾರಿ ಮನುಷ್ಯನ ನಾಲಿಗೆಯನ್ನು ಸೀಳಿ ಎರಡು ಹೋಳಾಗಿ ಮಾಡಿತು. ಆ ಮನುಷ್ಯ ಅಲ್ಲಿಯೇ ಭಸ್ಮವಾದ.
ನಾನು ಅಮ್ಮನನ್ನು ಎಬ್ಬಿಸಿ ನಡೆದ ಎಲ್ಲ ಘಟನೆಯನ್ನು ಹೇಳಿದೆ. ಅಮ್ಮ, “ಮಗು ಇನ್ನೂ ಬೆಳಗಾಗಿಲ್ಲ. ನೀನು ಕಂಡಿರುವುದು ಕನಸು’ ಅಂತಂದಳು. ಕನಸೇನೋ ನಿಜ… ಆದರೆ, ಇವತ್ತಿಗೂ ಆ ಗಡ್ಡದಾರಿ ಮನುಷ್ಯ ನನ್ನ ಕಲ್ಪನಾ ಲೋಕದಲ್ಲಿ ವಿಲನ್ ಆಗಿ ಕಾಡುತ್ತಲೇ ಇದ್ದಾನೆ. ಆ ಮೂರು ನಿಮಿಷದ ಮನುಷ್ಯನನ್ನು ನೆನೆದು ಪ್ರತಿಕ್ಷಣ ಬೆಚ್ಚುತ್ತೇನೆ.
– ಅಶ್ವಿನಿ ಪಿಡಶೆಟ್ಟಿ