“ಹೃದಯಗೀತೆ’… ಈ ಸೂಪರ್ ಹಿಟ್ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. ಡಾ. ವಿಷ್ಣುವರ್ಧನ್ ಅಭಿನಯದ ಎವರ್‌ಗ್ರೀನ್ ಚಿತ್ರವಿದು. ಎಲ್ಲಾ ಸರಿ, ಈಗ ಯಾಕೆ ಈ ಚಿತ್ರದ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ಇದೇ ಹೆಸರಿನ ಚಿತ್ರವೊಂದು ಈಗ ಸೆಟ್ಟೇರಲು ಸಜ್ಜಾಗುತ್ತಿದೆ. ಹೌದು, ಹೊಸಬರೇ ಸೇರಿ “ಹೃದಯಗೀತೆ’ ಹೆಸರಿನ ಚಿತ್ರ ಮಾಡಲು ಹೊರಟಿದ್ದಾರೆ.
ಈಗಾಗಲೇ ಮಂಡಳಿಯಲ್ಲಿ ಶೀರ್ಷಿಕೆ ನೋಂದಾಯಿಸಿರುವ ಚಿತ್ರತಂಡ, ಚಿತ್ರೀಕರಣಕ್ಕೆ ಹೊರಡಲು ತಯಾರಿ ನಡೆಸುತ್ತಿದೆ. ನಾಗರಾಜ್ ಡಿವಿಜಿ ಈ ಚಿತ್ರದ ನಿರ್ದೇಶಕರು. ಈ ಹಿಂದೆ “ಜ್ಯೋತಿರ್ಗಮಯ’ ಚಿತ್ರ ಸಿನಿಮಾ ಮಾಡಿದ್ದ ಇವರು, ಈಗ “ಹೃದಯಗೀತೆ’ ಚಿತ್ರಕ್ಕೆ ಕಥೆ. ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಇನ್ನು, ಪ್ರಶಾಂತ್ ಮತ್ತು ಶೈಲು ನಾಯಕಿಯರಾಗಿ ನಟಿಸುತ್ತಿದ್ದಾರೆ. ಮಣಿರಾಜ್ ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಇದು ಮೊದಲ ಅನುಭವ. ಇದೊಂದು ನೈಜ ಘಟನೆ ಚಿತ್ರ ಎಂಬುದು ನಿರ್ದೇಶಕರ ಹೇಳಿಕೆ. ಚಿಕ್ಕಮಗಳೂರು ಜಿಲ್ಲೆ ಯ ತರಿಕೆರೆ ಸಮೀಪದ ಬಾವಿಕೆರೆ ಎಂಬ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ ಹಿಡಿದು ಚಿತ್ರ ಮಾಡಲಾಗುತ್ತಿದೆ.
ಆ ಊರಿನಲ್ಲಿ ಟೆಂಟ್‌ಹೌಸ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಯುವಕನೊಬ್ಬ, ಅದೇ ಊರಲ್ಲಿದ್ದ ಹೋಟೆಲ್‌ವೊಂದಕ್ಕೆ ಊಟ, ತಿಂಡಿಗೆ ಹೋಗುತ್ತಿದ್ದ. ಆ ಹೋಟೆಲ್‌ನಲ್ಲಿ ಯುವತಿಯೊಬ್ಬಳು ಕೆಲಸ ಮಾಡುತ್ತಿದ್ದಳು. ಆ ಯುವಕ ಮತ್ತು ಆಕೆಯನ ನಡುವೆ ಪ್ರೀತಿ ಶುರುವಾಗಿ, ಅದು ಮದುವೆ ಹಂತಕ್ಕೆ ಹೋಗುತ್ತಿದ್ದಂತೆ, ಆ ಊರಿನ ಕೆಲ ಕಿಡಿಗೇಡಿಗಳು ಅವರನ್ನು ಅಟ್ಯಾಕ್ ಮಾಡಿ ಕೊಲೆ ಮಾಡಲು ಸಂಚು ರೂಪಿಸುತ್ತಿದ್ದಂತೆಯೇ ಅತ್ತ,
ವಿಧಿ ಆ ಯುವಕ, ಯುವತಿಯ ಬದುಕಿಗೊಂದು ಅಂತ್ಯ ಹಾಡುತ್ತದೆ. ಆ ವಿಧಿ ಬಗೆಯೋ ಘಟನೆ ಏನೆಂಬುದೇ ಚಿತ್ರದ ಕಥಾವಸ್ತು ಆಗಿದ್ದು, ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ತಯಾರಾಗಲಿದೆ ಎಂಬುದು ನಿರ್ದೇಶಕರ ಮಾತು. ಚಿತ್ರಕ್ಕೆ ಅರ್ಪಿತ್ ಗೌಡ ಮೂರು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಮಂಜು ಮತ್ತು ನಿರ್ದೇಶಕರು ಗೀತೆ ರಚಿಸಿದ್ದಾರೆ. ವಿಶ್ವ ಸಿರಿಗೆರೆ ಮತ್ತು ರಘು ಇಬ್ಬರು ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.
ಆದಿತ್‌ಪಾಳ್ಯ ನೃತ್ಯ ಸಂಯೋಜಿಸುತ್ತಿದ್ದಾರೆ. ಗೋಪಿ ನಿರ್ಮಾಣ ಮಾಡಿದರೆ, ವಚ್ಚಲ್ ನಾಗರಾಜ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಚಿತ್ರದುರ್ಗ, ಬೆಂಗಳೂರು, ಮಂಡ್ಯ ಸೇರಿದಂತೆ ಇತರೆಡೆ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ಮೊದಲ ವಾರ ಚಿತ್ರೀಕರಣ ನಡೆಯಲಿದೆ.