ಕೆ.ಆರ್.ಪುರ: ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಜಾಗತಿಕವಾಗಿ ನೆಲಕಚ್ಚುತ್ತಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಾಹಿತಿ ಡಾ.ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದರು.
ಕೆಆರ್‌ಪುರದ ವೃತ್ತದ ಬಳಿ ಡಾ.ರಾಜಕುಮಾರ ಅಭಿಮಾನಿಗಳ ಬಳಗದ ವತಿಯಿಂದ ಅಯೋಜಿಸಿದ್ದ 62ನೇ ಕನ್ನಡ ರಾಜ್ಯೋತ್ಸವ ಮತ್ತು ನುಡಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸೂರ್ಯ ಚಂದ್ರ ಇರುವರೆಗೂ ಕನ್ನಡ ಭಾಷೆ ನಮ್ಮ ನೆಲದಲ್ಲಿ ಗಟ್ಟಿಯಾಗಿರುತ್ತದೆ ಇದರಲ್ಲಿ ಯಾವುದೇ ಸಂದೇಹ ಬೇಡ, ಪರಭಾಷೆಗಳ ನಡುವೆ ಕನ್ನಡ ನಶಿಸಿ ಹೋಗುತ್ತದೆ ಎಂಬ ತಪ್ಪು ಭಾವನೆಯನ್ನು ನಮ್ಮ ಮನಸ್ಸಿನಿಂದ ತೊಡೆದುಹಾಕಬೇಕು, ಕನ್ನಡ ಭಾಷೆಗೆ ಎರಡು ಸಾವಿರ ಇತಿಹಾಸವಿತ್ತು ಎನ್ನುವುದಕ್ಕೆ ಶಾಸನಗಳಲ್ಲಿ ಇರುವ ಪದ್ಯಗಳೆ ಸಾಕ್ಷಿ ಎಂದರು.
ಕನ್ನಡ ಕಲಿಸಿ: ಕನ್ನಡ ಸಂಸ್ಕೃತಿ ವಿದೇಶಗಳಲ್ಲಿ ರಾರಾಜಿಸುತ್ತಿದೆ ಅಮೆರಿಕದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೆ ಅಲ್ಲಿನ ಕನ್ನಡಿಗರು ಕನ್ನಡದ ಮೇಲೆ ಅಪಾರ ಅಭಿಮಾನವನ್ನು ಹೊಂದಿದ್ದಾರೆ, ಕನ್ನಡರೇತರಿಗೆ ಕನ್ನಡ ಕಲಿಸುವ ಕಾರ್ಯ ಕನ್ನಡಿಗರಿಂದ ಆಗಬೇಕು, ನಮ್ಮ ಕುಟುಂಬ ಅಪ್ಪಟ ಕನ್ನಡ ಕುಟುಂಬ ನನ್ನ ಕೊನೆ ಉಸಿರು ಇರುವರೆಗೂ ನಾನು ಕನ್ನಡದಲ್ಲೇ ಕವಿತೆಗಳನ್ನು ಬರೆದು ಕನ್ನಡವನ್ನು ಸಂಪೂರ್ಣವಾಗಿ ಜಗತ್ತಿಗೆ ಕೊಡುತ್ತೇನೆ ಎಂದರು.
ಡಾ.ರಾಜ್‌ಕುಮಾರ್ ಮಾದರಿ: ನಟ ಡಾ.ರಾಜಕುಮಾರ್ ಕನ್ನಡದ ಹುಟ್ಟು ಕಲಾವಿದರಾಗಿದ್ದರು. ತಮ್ಮ ಅಭಿನಯದ ಮೂಲಕ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಮಾದರಿಯಾದರು. ತಮ್ಮ ಅಭಿನಯದ ಕೌಶಲ್ಯದಿಂದ ಸ್ಪಷ್ಟವಾದ ಭಾಷೆಯಿಂದ ಕನ್ನಡದ ಸೊಗಡನ್ನು ವಿಶ್ವಕ್ಕೆ ಪರಿಚಯಿಸಿದ ಏಕೈಕ ನಟ ಡಾ.ರಾಜಕುಮಾರ. ಕೇವಲ ಕಲಾವಿದರಾಗಿರಲಿಲ್ಲ ನೆಲಜಲ ಭಾಷೆ ವಿಷಯದಲ್ಲಿ ಅನೇಕ ಚಳುವಳಿಗಳಲ್ಲಿ ಭಾಗಿಯಾಗಿದ್ದರು ಕನ್ನಡಕ್ಕಾಗಿ ತಮ್ಮ ಜೀವನವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು ಎಂದರು.
ಮಹನೀಯರ ಶ್ಲಾಘನೆ: ಶಾಸಕ ಬಿ.ಎ.ಬಸವರಾಜ ಮಾತನಾಡಿ, ಕನ್ನಡ ಉಳಿವಿಗಾಗಿ ಪ್ರತಿಯೊಬ್ಬ ಕನ್ನಡಿಗನು ಶ್ರಮಿಸಬೇಕು, ಕನ್ನಡ ಹರಿದು ಹಂಚಿ ಹೋದ ಸಂದರ್ಭದಲ್ಲಿ ಕನ್ನಡಕ್ಕಾಗಿ ಅನೇಕ ಮಹನೀಯರು ಒಗ್ಗೂಡಿ ಕನ್ನಡದ ಪರವಾಗಿ ಕೆಲಸ ಮಾಡಿದ್ದಾರೆ ಎಂದರು. ಇದಕ್ಕೂ ಮೊದಲು ಡೊಳ್ಳುಕುಣಿತ, ವೀರಗಾಸೆ, ತಮಟೆ ವಾದ್ಯಗಳೊಂದಿಗೆ ತಾಯಿ ಭುವನೇಶ್ವರಿಯ ಅದ್ಧೂರಿ ಮೆರವಣಿಗೆ ಹಾಗೂ ಕೋಲಾರ ರಮೇಶ ತಂಡದವರಿಂದ ಶಾಸ್ತ್ರೀಯ ಸಂಗೀತ,
ಜಾನಪದ ನೃತ್ಯ, ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಜ್ಯೂನಿಯರ್ ರಾಜಕುಮಾರ ಅಶೋಕ ಬಸ್ತಿ ತಂಡದವರಿಂದ ವೈವಿಧ್ಯಮಯ ರಸಮಂಜರಿ ಕಾರ್ಯಕ್ರಮ ನಡೆಯಿತು. ಡಾ.ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ಕೆ.ಪಿ.ಕೃಷ್ಣ, ಪ್ರಧಾನ ಕಾರ್ಯದರ್ಶಿ ಎಂ.ರಮೇಶ, ಉಪಾಧ್ಯಕ್ಷ ರಾಮೇಗೌಡ, ಸಂಚಾಲಕ ಎಂ.ವೆಂಕಟೇಶ, ಖಜಾಂಚಿ ರಾಮಕೃಷ್ಣ, ಮತ್ತು ಪದಾಧಿಕಾರಿಗಳು ಇದ್ದರು.