Advertisement
“ನಿಮ್ಮ ಮಕ್ಕಳನ್ನ ಯಾವ ಶಾಲೆಗೆ ಸೇರಿಸಿದ್ದೀರಿ’ ಎಂದು ಯಾರಾದರೂ ಕೇಳಿದರೆ, ಆ ಊರಿನ ಪ್ರತಿಷ್ಠಿತ ಖಾಸಗಿ ಶಾಲೆಯ ಹೆಸರು ಹೇಳಿ, “ಅಲ್ಲಿ ಸೇರಿಸಿದ್ದೇನೆ’ ಎಂದು ಜಂಭದಿಂದ ಕೊಚ್ಚಿಕೊಳ್ಳುವವರೇ ಎಲ್ಲ ಊರುಗಳಲ್ಲೂ ಹೆಚ್ಚಾಗಿ ಹೆಚ್ಚು ಕಾಣಸಿಗುತ್ತಾರೆ. ಇನ್ನು ಏನಾದರೂ ಸರ್ಕಾರಿ ಶಾಲೆಗೆ ಸೇರಿಸಿದ್ದೇನೆ ಎಂದ್ರೆ ಸಾಕು; ಹೌದಾ? ಎನ್ನುತ್ತಾ ಮೂಗು ಮುರಿಯುವವರೇ ಹೆಚ್ಚು.
Related Articles
Advertisement
ಐಮಂಗಲದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು 38 ವಿದ್ಯಾರ್ಥಿನಿಯರು, ಅದರಲ್ಲಿ 10 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್, ಉಳಿದ 28 ವಿದ್ಯಾರ್ಥಿನಿಯರು ಫಸ್ಟ್ ಕ್ಲಾಸ್‌ನಲ್ಲಿಯೇ ಪಾಸಾಗಿದ್ದಾರೆ. ಇಲ್ಲಿ ಯಾವುದೇ ಫೇಲ್, ಸೆಕೆಂಡ್ ಕ್ಲಾಸ್ ಅಥವಾ ಜಸ್ಟ್ ಪಾಸ್ ಇಲ್ಲವೇ ಇಲ್ಲ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿಯರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದವರು. ಎಲ್ಲರೂ ಬಡ ಕುಟುಂಬದಿಂದ ಬಂದವರೇ. ಇನ್ನು ದೇವರಕೋಟದ ಮೊರಾರ್ಜಿ ದೇಸಾಯಿ ಬಾಲಕರ ವಸತಿ ಶಾಲೆಯಲ್ಲಿಯೂ ಕೂಡ 44 ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದರೆ, ಉಳಿದ ಎಲ್ಲ 28 ವಿದ್ಯಾರ್ಥಿಗಳೂ ಫಸ್ಟ್ ಕ್ಲಾಸ್‌ನಲ್ಲಿಯೇ ಪಾಸಾಗಿದ್ದಾರೆ.ಈ ಯಶಸ್ಸನ ಹಿಂದಿರುವ ಗುಟ್ಟನ್ನು ಅರಸುತ್ತಾ ಹೋದರೆ ಎದುರಾಗುವುದು ಶಿಕ್ಷಕರ ಪರಿಶ್ರಮ. ಈ ಶಾಲೆಗಳಿಗೆ ಶಿಕ್ಷಕರನ್ನು ಆಯ್ಕೆ ಮಾಡಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆ ಇಡುತ್ತಾರೆ. ಅದರಲ್ಲಿ ಪ್ರತಿಭಾನ್ವಿತರನ್ನು ಮಾತ್ರ ಶಿಕ್ಷಕರನ್ನಾಗಿ ಆಯ್ಕೆ ಮಾಡುವುದರಿಂದ ಎಂಥ ದಡ್ಡ ಮಕ್ಕಳು ಶಾಲೆ ಸೇರಿದರೂ, ಇವರು ಅವರನ್ನು ಬುದ್ಧಿವಂತರನ್ನಾಗಿ ಮಾಡಿಬಿಡುವ “ಐಡಿಯಾಗಳು’ ಇಲ್ಲಿ ಶಿಕ್ಷಕರಿಗೆ ಗೊತ್ತಿವೆ. “ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾಡುವುದಷ್ಟೇ ಶಿಕ್ಷಕರ ಕೆಲಸವಲ್ಲ. ಮಕ್ಕಳನ್ನು ಭವಿಷ್ಯದ ಸ್ಪರ್ಧೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸಲು ನಾವು ಆದ್ಯತೆ ನೀಡುತ್ತಿದ್ದೇವೆ. ನಮ್ಮ ಶಾಲೆಯ ಎಲ್ಲ ಕೊಠಡಿಗಳಿಗೂ ಸಿ.ಸಿ. ಟಿವಿ. ಕ್ಯಾಮೆರಾ ಅಳವಡಿಸಿದ್ದೇವೆ. ಯಾವುದೇ ನಿರ್ದಿಷ್ಟ ಕೊಠಡಿಯ ಶಿಕ್ಷಕರು ಅಥವಾ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ರೀತಿ ಧ್ವನಿ ವರ್ಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ ಎನ್ನುತ್ತಾರೆ, ಐಮಂಗಲದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಪ್ರಾಂಶುಪಾಲ ರಮೇಶ್. ಪಾಠ ಮಾಡುವ ಕ್ರಮ ಕೂಡ ವಿಭಿನ್ನ. ಮಕ್ಕಳಿಗೆ ಗಣಿತ, ವಿಜ್ಞಾನದಂಥ ವಿಷಯಗಳನ್ನು ವಿಡಿಯೋ ಚಿತ್ರ ಸಹಿತ ಮನದಟ್ಟು ಮಾಡಿಸುವ ಸಲುವಾಗಿಯೇ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ 16 ಕಂಪ್ಯೂಟರ್, 16 ಜನ ಶಿಕ್ಷಕರು ಸಜ್ಜಾಗಿದ್ದಾರೆ. ವಸತಿ ಶಾಲೆಗೆಂದೇ ಪ್ರತ್ಯೇಕ ಶುಶ್ರೂಷಕಿಯೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದೆ.