ಅದೊಂದು ಕಾಲವಿತ್ತು, ಕುಟುಂಬದ ಸದಸ್ಯರೆಲ್ಲ ಕುಳಿತು ಒಟ್ಟಿಗೆ ಊಟ ಮಾಡಿ ಸವಿಯುವುದು. ಸದಸ್ಯರಲ್ಲಿ ಒಬ್ಬರು ಇಲ್ಲ ಎಂದರೂ ಊಟ ಮಾಡದೇ ಅವರಿಗಾಗಿ ಕಾಯ್ದು ಮತ್ತೆ ಜತೆಗೆ ಕುಳಿತು ಊಟ ಮಾಡುತ್ತಿದ್ದರು. ಆದರೆ ಇಂದು ಆ ಒಗ್ಗಟ್ಟಿನ ಪ್ರೀತಿ ಮರೆ ಮಾಚಿದೆ. ಅಲ್ಪ ಸ್ವಲ್ಪ ಅಂತಹ ಪ್ರೀತಿ ಇನ್ನೂ ಉಳಿದುಕೊಂಡಿದೆ ಎನ್ನುವುದಕ್ಕೆ ಈ ದೃಶ್ಯಗಳು ಸಾಕ್ಷಿಯಾಗಿವೆ.
ಸೂರ್ಯ ನೆತ್ತಿಗೆ ಬಂದಿ ದ್ದಾನೆ. ರಾಸುಗಳು ಮಲಗಿವೆ. ರಾಸುಗಳನ್ನು ಕರೆ ತಂದ ಮಾಲಕರ ಕೈಯಲ್ಲಿ ಬಗೆ ಬಗೆ ಯ ರೊಟ್ಟಿಗಳು. ಖಡಕ್ ರೊಟ್ಟಿ, ಸಜ್ಜೆ ರೊಟ್ಟಿ, ಹಿಂಡಿ (ಶೇಂಗಾ ಚಟ್ನಿ ಪುಡಿ), ಶೇಂಗಾ ಹೋಳಿಗೆ, ಚಪಾತಿ , ಪಲ್ಯ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅವರ ಬುತ್ತಿ ಕಂಡು ಬಾಯಲ್ಲಿ ನೀರು.
ಇವೆಲ್ಲ ಕಣ್ಣಿಗೆ ಕಟ್ಟುವಂತೆ ಕಂಡದ್ದು ಬಿಸಿಲುನಾಡು ಎಂದೇ ಪ್ರಖ್ಯಾತಿ ಪಡೆದ ವಿಜಯಪುರ ಜಿಲ್ಲೆಯ ತೊರವಿಯ ದನಗಳ ಜಾತ್ರೆಯಲ್ಲಿ. ಪ್ರತೀ ಬೇಸಗೆಯ ಸಮಯದಲ್ಲಿ ಇಲ್ಲಿ ದನಗಳ ಜಾತ್ರೆ ನಡೆಯುತ್ತದೆ. ಸಾವಿರಕ್ಕೂ ಹೆಚ್ಚು ರಾಸುಗಳು ಬೇರೆ ಬೇರೆ ಜಿಲ್ಲೆ, ಹಳ್ಳಿಗಳಿಂದ ಬರುತ್ತವೆ. ಮಾರಾಟವೂ ಬಿರುಸಿನಿಂದ ನಡೆಯುತ್ತದೆ. ಕೆಲವರು ಬರ ಪರಿಸ್ಥಿ ತಿಯ ಕಾರಣ ಆಹಾರದ, ನೀರಿನ ಸಮಸ್ಯೆಯಿಂದಾಗಿ ತಮ್ಮ ತಮ್ಮ ದನಗಳೊಂದಿಗೆ ಬರುವುದು ಉಂಟು. ಒಂದು ವಾರ ಹೀಗೆ ಜಾತ್ರೆಗಳು ನಡೆಯುವ ಕಾರಣ ಜನರು ಒಂದು ವಾರಕ್ಕೆ ಆಗುವಷ್ಟು ಬುತ್ತಿಯನ್ನು ತರುತ್ತಾರೆ.
ಇವರ ವಸತಿ ನೋಡಲು ಆಸಕ್ತಿದಾಯಕ. ಅದೇ ಎತ್ತಿನ ಗಾಡಿ ಯಲ್ಲಿ ಕಬ್ಬಿನ ರೌದೆಯನ್ನು ಮನೆಯ ತರಹ ಮಾಡಿ ಅದರ ಕೆಳಗೆ ವಿಶ್ರಾಂತಿಯನ್ನು ಪಡೆದು ಕೊಳ್ಳುತ್ತಾರೆ. ಅದೇ ಪುಟ್ಟ ಮನೆಯ ಕೆಳಗೆ ತಾತನ ಜತೆ ಮೊಮ್ಮಗನ ಮುಗª ಮಾತುಗಳು, ಅವನು ಕೇಳುವ ಪ್ರಶ್ನೆ ಎಲ್ಲ ದೃಶ್ಯಗಳು ನೋಡಿದರೆ ಆ ಮನೆಗೆ ಶೋಭೆ ತರುವಂತಿತ್ತು.
ಒಂದು ಸಲ ಕಣ್ಣು ಹಾಯಿಸಿದರೆ ಸಾಕು ಪ್ರತೀ ಆ ಪುಟ್ಟ ಮನೆ ಗಳ ಕೆಳಗೆ, ಅಲ್ಲಲ್ಲಿ ಗುಂಪು ಮಾಡಿಕೊಂಡು ತಮ್ಮ ರಾಸುಗಳ ಅಂದ ಚೆಂದದ ಬಗ್ಗೆ ಮಾತಾನಾಡಿಕೊಳ್ಳುತ್ತಾರೆ. ಊಟದ ಹೊತ್ತಾದರೆ ಸಾಕು ಅಲ್ಲಲ್ಲಿ ಪಕ್ಕದ ರಾಸುವಿನ ಮಾಲಕರನ್ನು ಕರೆದು ಒಂದೇ ಮನೆಯವರು ಎಂಬ ಭಾವನೆಯಿಂದ ತಮ್ಮ ಬುತ್ತಿಗಳನ್ನು ಬಿಚ್ಚಿ ಹಂಚಿ ತಿನ್ನುತ್ತಾರೆ. ಅಂತಹ ರಣ ಬಿಸಿಲಿನಲ್ಲಿ ಮಕ್ಕಳಿಗೆ ಅಮ್ಮ ಪ್ರೀತಿಯಿಂದ ತನ್ನ ಮಕ್ಕಳಿಗೆ ಬಡಿಸುವ ರೀತಿ ಯಲ್ಲಿ ಮೊಸರು ಮಾರುವ ಮಹಿಳೆ ಮೊಸರನ್ನು ಉಣಬಡಿಸುವ ರೀತಿ ಮನ ಕಲುಕುವಂತಿತ್ತು, ಮಾತ್ರವಲ್ಲದೇ ಮಾದರಿಯಂತಿತ್ತು. ಕೆಲವರು ಅಲ್ಲೇ ಚಹಾ, ಅಡುಗೆಯನ್ನು ಕೂಡ ಮಾಡಿಕೊಳ್ಳುತ್ತಿದ್ದರು. ಒಟ್ಟಾರೆ ಈ ದೃಶ್ಯಗಳನ್ನು ನೋಡಿದಾಗ ಕೂಡಿ ಬಾಳಿದರೆ ಸ್ವರ್ಗ ಸುಖವಿದೆ ಎಂಬು ಮಾತು ಸತ್ಯ ಎನ್ನುವಂತೆ ಗೋಚರಿಸುತ್ತಿತ್ತು.
ಯಶಸ್ವಿ ದೇವಾಡಿಗ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ