Advertisement

ಹೀಗೊಂದು ಬೋರಿಂಗ್‌ ಕಥೆ!

11:21 AM Jul 02, 2018 | |

ಬೆಂಗಳೂರು: “ನಮ್ಮ ಮೆಟ್ರೋ’ ಮೊದಲ ಹಂತ ಪೂರ್ಣಗೊಂಡು ಒಂದು ವರ್ಷ ಕಳೆದಿದೆ. ಇದಕ್ಕೂ ಒಂದು ವರ್ಷ ಮುಂಚಿತವಾಗಿಯೇ 8.8 ಕಿ.ಮೀ. ಉದ್ದದ ಎರಡು ಸುರಂಗ ಮಾರ್ಗಗಳು ಸಿದ್ಧಗೊಂಡಿದ್ದವು. ಆ ಸುರಂಗಗಳನ್ನು
ಕೊರೆದಿದ್ದು “ಟನಲ್‌ ಬೋರಿಂಗ್‌ ಮಷೀನ್‌’ (ಟಿಬಿಎಂ) ಎಂಬ ಆರು ದೈತ್ಯಯಂತ್ರಗಳು. ಎರಡು ವರ್ಷಗಳ ಹಿಂದಷ್ಟೇ ಆ ದೈತ್ಯ ಯಂತ್ರಗಳು ನಗರ ನಾಗರಿಕರ ಕುತೂಹಲ ಕೆರಳಿಸಿದ್ದವು. ಆದರೆ, ಈಗ ಅವು ಎಲ್ಲಿವೆ? ಏನು ಮಾಡುತ್ತಿವೆ?
ಮತ್ತೆ ಅವು ನಗರದ ಭೂಗರ್ಭಕ್ಕಿಳಿದು ಸುರಂಗ ಕೊರೆಯಲಿವೆಯೇ? ಅಥವಾ ಕೋಟ್ಯಂತರ ರೂ. ತೆತ್ತು ತಂದ
ಯಂತ್ರಗಳು ಹೀಗೇ ಧೂಳು ತಿನ್ನಲಿವೆಯೇ? ಇದನ್ನು ಸ್ವತಃ ಟಿಬಿಎಂ ಬಾಯಲ್ಲೇ ಕೇಳಿ… ಬೆಂಗಳೂರಿಗರಿಗೆ ನಮಸ್ಕಾರ, “ನಾನು ಕಾವೇರಿ. ಈಗ ವಿವಾದದ ಕೇಂದ್ರಬಿಂದು ಆಗಿರುವ ಜೀವನದಿ ಅಲ್ಲ; ನಮ್ಮ ಮೆಟ್ರೋ ಸುರಂಗ
ಮಾರ್ಗದ ಜೀವನಾಡಿಯಾಗಿದ್ದ ಕಾವೇರಿ. ಇಂದು ನಿತ್ಯ ಲಕ್ಷಾಂತರ ಜನ ಮೆಟ್ರೋದಲ್ಲಿ ಸುಖಕರ ಪ್ರಯಾಣ ಮಾಡುತ್ತಿದ್ದಾರೆ. ಆ ಸುಖ ಸಂಚಾರಕ್ಕೆ ಅಗತ್ಯವಿರುವ ಮಾರ್ಗ ನಿರ್ಮಾಣ ಮಾಡಿದವಳು ನಾನು ಮತ್ತು ನನ್ನ ಉಳಿದ ಐವರು ಸಹೋದರಿಯರು.

Advertisement

ಇತ್ತೀಚೆಗೆ ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ಮೆಟ್ರೋದಲ್ಲಿ ಬಂದಿಳಿದ ಪ್ರಯಾಣಿಕರಿಬ್ಬರು, ಏಕಾಏಕಿ ನಮ್ಮನ್ನು ನೆನಪು ಮಾಡಿಕೊಂಡರು. “ಮೆಟ್ರೋ ಸುರಂಗ ಕೊರೆದ ಕಾವೇರಿ, ಕೃಷ್ಣ, ಮಾರ್ಗರೇಟ್‌, ಹೆಲನ್‌, ರಾಬಿನ್ಸ್‌, ಗೋದಾವರಿ ಈಗ ಎಲ್ಲಿರಬಹುದು?’ ಎಂದು ಪ್ರಶ್ನಿಸಿದರು. ಅದೇ ಪೀಣ್ಯದಲ್ಲಿ ಈಗ ನಮ್ಮ ವಾಸ.

ನೂರಾರು ಕೋಟಿ ರೂ. ಸುರಿದು ಅಮೆರಿಕ, ಜರ್ಮನಿ, ಜಪಾನ್‌, ಇಟಲಿ, ಚೀನಾದಿಂದ ನಮ್ಮನ್ನು ಕರೆತಂದರು. ಇಲ್ಲಿನ ಹೆಸರುಗಳನ್ನೂ ಕೊಟ್ಟರು. ಈಗ ಕನ್ನಡಿಗರೇ ಆಗಿಬಿಟ್ಟಿದ್ದೇವೆ. ಆರೂ ಜನ ಸಹೋದರ-ಸಹೋದರಿಯರು ನಿರಂತರ ನಾಲ್ಕು ವರ್ಷಗಳು ದಿನದ 24 ಗಂಟೆ ಭೂಮಿಯಲ್ಲಿನ ಕಲ್ಲುಬಂಡೆ ಕೊರೆದು, ಮೆಟ್ರೋ ರೈಲು ಓಡಾಡಲು ದಾರಿ ಮಾಡಿಕೊಟ್ಟೆವು. ಆಗ ನಮಗೆ ದಿನಕ್ಕೆ ಒಂದೆರಡು ತಾಸು ಮಾತ್ರ ವಿಶ್ರಾಂತಿ ಸಿಗುತ್ತಿತ್ತು. ಅಷ್ಟು ಬ್ಯುಸಿಯಾಗಿದ್ದ ನಾವು, ಈಗ ಕೆಲಸ ಇಲ್ಲದೆ ಮೂಲೆಗುಂಪಾಗಿದ್ದೇವೆ. ನಮ್ಮ ನಾಡಿಗೆ ಹಿಂತಿರುಗುವಂತೆಯೂ ಇಲ್ಲ. ಹೋಗುವ ಮನಸ್ಸಿದ್ದರೂ ಕರೆಸಿಕೊಳ್ಳುವವರೂ ಇಲ್ಲ. 

ಹಾಗಾಗಿ, ಒಂದು ರೀತಿಯ ಅನಾಥಪ್ರಜ್ಞೆ ಕಾಡುತ್ತಿದೆ! ಧೂಳು ತಿನ್ನುತ್ತಿದ್ದೇನೆ “ನಮ್ಮ ಮೆಟ್ರೋ’ ಯೋಜನೆಗೆ ಕಾಲಿಟ್ಟಾಗ ಎಲ್ಲರೂ ಕುತೂಹಲದಿಂದ ನಮ್ಮನ್ನು ಕಾಣುತ್ತಿದ್ದರು. ಕೈಗೊಬ್ಬರು- ಕಾಲಿಗೊಬ್ಬರು ನೋಡಿಕೊಳ್ಳುವವರಿದ್ದರು. ಹಾಗಾಗಿ, ನನ್ನಿಂದ 60 ಮಂದಿಗೆ ಕೆಲಸ ಸಿಗುತ್ತಿತ್ತು. ಅಂದು ನನ್ನೊಂದಿಗೆ ಕೆಲಸ ಮಾಡಿದವರು, ಈಗ ಲಂಡನ್‌, ಅರಬ್‌ ರಾಷ್ಟ್ರಗಳಲ್ಲಿದ್ದಾರೆ. ನಾನು ಮಾತ್ರ ಇಲ್ಲೇ ಧೂಳು ತಿನ್ನುತ್ತಿದ್ದೇನೆ. ಇದರ ಜತೆಗೆ “ಬೆಂಗಳೂರಿನಂತಹ ದುಬಾರಿ ನಗರದಲ್ಲಿ ಒಂದು ಎಕರೆ ಜಾಗವನ್ನು ಆಕ್ರಮಿಸಿಕೊಂಡಿದೆ’ ಎಂಬ ಹೀಯಾಳಿಕೆ ಮಾತನ್ನೂ ಕೇಳುತ್ತಿದ್ದೇನೆ.

ಅವಕಾಶಗಳ ನಿರೀಕ್ಷೆಯಲ್ಲಿ… ಪುಣೆ, ದೆಹಲಿ, ಕೊಚ್ಚಿ, ಕೊಲ್ಕತ್ತ, ಲಖನೌ ಸೇರಿದಂತೆ ದೇಶದಲ್ಲಿ ಸುಮಾರು 13 ನಗರಗಳಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಿ ಎಲ್ಲಾದರೂ ನಮಗೆ ಕೆಲಸ ಸಿಗಬಹುದು ಎಂದು ಕಾಯುತ್ತಿದ್ದೇವೆ. ಆದರೆ, ಆ 13ರ ಪೈಕಿ ಕೊಚ್ಚಿ ಮತ್ತು ಲಖನೌನಲ್ಲಿ ಸುರಂಗ ಮಾರ್ಗಗಳೇ ಇಲ್ಲ. ಆದ್ದರಿಂದ ಅದು
ನಮಗೆ ಮುಚ್ಚಿದ ಬಾಗಿಲು. ಇನ್ನು ಉಳಿದೆಡೆ ಓವರ್‌ಹೆಡ್‌ ಲೈನ್‌ ಅಂದರೆ ವಿದ್ಯುತ್‌ ಮಾರ್ಗಗಳು ರೈಲಿನ ಮೇಲೆ ಹಾದುಹೋಗುವುದರಿಂದ (“ನಮ್ಮ ಮೆಟ್ರೋ’ದಲ್ಲಿ ಹಳಿಯ ಪಕ್ಕದಲ್ಲಿದೆ) ಸುರಂಗದ ಸುತ್ತಳತೆ ಹೆಚ್ಚಿರಬೇಕು. ನಮ್ಮ ಗಾತ್ರ ಚಿಕ್ಕದು (5.6 ಮೀಟರ್‌). ಹಾಗಾಗಿ, ಅಲ್ಲಿಯೂ ಅವಕಾಶಗಳಿಲ್ಲದಂತಾಗಿದೆ. 

Advertisement

ಬೆಂಗಳೂರಿನಲ್ಲೇ 73 ಕಿ.ಮೀ. ಉದ್ದದ ಮೆಟ್ರೋ ಎರಡನೇ ಹಂತ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ ಸುರಂಗ ಮಾರ್ಗವೂ ಇರುವುದರಿಂದ ನಮ್ಮನ್ನು ಬಳಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ. ಆದರೆ, ಇಲ್ಲಿಯೂ ಒಂದು ಸಮಸ್ಯೆ ಇದೆ. ನಮ್ಮನ್ನು ಖರೀದಿ ಮಾಡಿದ್ದು ಸಿಇಸಿ ಮತ್ತು ಕೋಸ್ಟಲ್‌ ಎಂಬ ಕಂಪನಿಗಳು. ಅವರಿಬ್ಬರಲ್ಲಿ ಯಾರಾದರೂ ಒಬ್ಬರು ಗುತ್ತಿಗೆ ಪಡೆದರೂ ನಾವು ಬಚಾವ್‌. ಇಲ್ಲವಾದರೆ, ಬೇರೆ ಕಂಪನಿಯವರು ತಮಗೆ ಬೇಕಾದವರನ್ನು ಕರೆತರುತ್ತಾರೆ. ಆಗ ನಾವು ಮತ್ತೆ ಅಪ್ರಸ್ತುತ ಆಗುತ್ತೇವೆ ಎಂಬ ಆತಂಕ ಕಾಡುತ್ತಿದೆ. 

ಅಂದಹಾಗೆ, ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ (4.8 ಕಿ.ಮೀ.) ಸುರಂಗವನ್ನು ಹೆಲನ್‌, ಮಾರ್ಗರೇಟ್‌,
ರಾಬಿನ್ಸ್‌ (ಟಿಬಿಎಂಗಳು) ಸೇರಿಕೊಂಡು 2011ರಿಂದ 2014ರ ಅವಧಿಯಲ್ಲಿ ಪೂರ್ಣಗೊಳಿಸಿದ್ದರೆ, ಸಂಪಿಗೆ ರಸ್ತೆ-ನ್ಯಾಷನಲ್‌ ಕಾಲೇಜುವರೆಗಿನ (4 ಕಿ.ಮೀ.) ಸುರಂಗವನ್ನು ನಾನು (ಕಾವೇರಿ), ಕೃಷ್ಣ, ಗೋದಾವರಿ 2012-2016ರಲ್ಲಿ ಮಾಡಿ ಮುಗಿಸಿದೆವು. ಇದಕ್ಕಾಗಿ 2,500 ಕೋಟಿ ರೂ. ಖರ್ಚಾಗಿದೆ.

ನಾವು ಒಂದು ದಿನ ಖಾಲಿ ಕುಳಿತರೆ, ಒಂದೂವರೆಯಿಂದ ಎರಡು ಲಕ್ಷ ರೂ. ನಷ್ಟ ಆಗುತ್ತದೆ ಎಂದೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಆದರೆ, ಕಳೆದ ಎರಡು ಮೂರು ವರ್ಷಗಳಿಂದ ನಾವು ಖಾಲಿ ಕುಳಿತಿದ್ದೇವೆ.

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next