Advertisement

ಐನೋರ್‌ ಹೋಟ್ಲಿಗೆ ತಿಂಡಿಗೆ ಹೋಗ್ಬನ್ನಿ…

09:05 AM Apr 30, 2019 | Hari Prasad |

ಕೆಲವು ಹೋಟೆಲ್‌ಗ‌ಳೇ ಹಾಗೆ. ಅವು ಆ ಪ್ರದೇಶದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತವೆ. ಅಪ್ಪ ಹಾಕಿದ ಆಲದ ಮರ ನೂರಾರು ಜನರಿಗೆ ನೆರಳು ನೀಡುವ ಹಾಗೆ, ತಾತ ಅಥವಾ ತಂದೆ ಪ್ರಾರಂಭಿಸಿದ ಹೋಟೆಲ್‌ಗ‌ಳು ಮೊಮ್ಮಕ್ಕಳಿಗೂ ಬದುಕನ್ನು ಕಟ್ಟಿಕೊಡುತ್ತಿವೆ. ಅಂಥದೊಂದು ಹೋಟೆಲ್‌ ಮಾಗಡಿ ತಾಲೂಕಿನ ಕುದೂರಿನಲ್ಲಿ ಇದೆ. ಇದು ಸ್ವಾಮಿಗಳ (ಐನೋರ್‌) ಹೋಟೆಲ್‌ ಎಂದೇ ಹೆಸರುವಾಸಿಯಾಗಿದೆ.

Advertisement

40 ವರ್ಷಗಳ ಹಿಂದೆ ಕುದೂರಿಗೆ ಬಂದ ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಗ್ರಾಮದ ಎಸ್‌.ರಾಮಚಂದ್ರಯ್ಯ, ಮೂಲತಃ ಅಡುಗೆ ಭಟ್ಟರು. ಅಷ್ಟೇ ಅಲ್ಲ, ನೇಯ್ಗೆ ಕೆಲಸದಲ್ಲೂ ಪ್ರವೀಣರು. ಜನರಿಗೆ ಪಂಚಾಂಗ, ಶಾಸ್ತ್ರ ಕೂಡ ಹೇಳುತ್ತಿದ್ದರು. ಚಿಕ್ಕವಯಸ್ಸಿನಲ್ಲೇ ಅಡುಗೆ ಕೆಲಸ ಮಾಡಿಕೊಂಡು ಆನೇಕಲ್‌ನಲ್ಲಿ ಸ್ವಲ್ಪ ದಿನ ಇದ್ದು, ನಂತರ ಕುದೂರಿಗೆ ಬಂದು ನೆಲೆಸಿದರು. ನೇಯ್ಗೆ ಕೆಲಸದ ಜೊತೆಗೆ ಮದುವೆ, ಶುಭ ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಈ ಸಂದರ್ಭದಲ್ಲಿ ಪತ್ನಿ ಕಮಲಮ್ಮ ತೀರಿಕೊಂಡಾಗ, ಐವರು ಗಂಡು ಮಕ್ಕಳನ್ನು ನೋಡಿಕೊಳ್ಳುವ ಹೊಣೆ ರಾಮಚಂದ್ರಯ್ಯರ ಮೇಲೆ ಬಿತ್ತು. ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಅಡುಗೆ ಮಾಡಿಟ್ಟು, ನಂತರ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ ಅವರು, ಸ್ವಲ್ಪ ದಿನಗಳ ನಂತರ ಪುಟ್ಟದಾಗಿ ಹೋಟೆಲ್‌ ಪ್ರಾರಂಭಿಸಿದರು. ಬೆಳಗ್ಗಿನ ವೇಳೆ ಇಡ್ಲಿ, ಚಿತ್ರಾನ್ನ ಹೀಗೆ ಎರಡು ಮೂರು ಬಗೆಯ ತಿಂಡಿ ಮಾಡಿಕೊಂಡು, ಮಧ್ಯಾಹ್ನದ ನಂತರ ಪುರೋಹಿತರ ಕೆಲಸ ಮಾಡುತ್ತಿದ್ದರು.

ಮುಂದೆ ಜಾಗತೀಕರಣದ ಪ್ರಭಾವಕ್ಕೆ ಸಿಲುಕಿ ನೇಯ್ಗೆ ಕೆಲಸ ಬಂದ್‌ ಆಯ್ತು. ನಂತರ, ತಂದೆ ಕಲಿಸಿಕೊಟ್ಟ ಅಡುಗೆ ಕೆಲಸವನ್ನೇ ಬಂಡವಾಳ ಮಾಡಿಕೊಂಡ ಮೂವರು ಮಕ್ಕಳೂ ಈಗ ಸ್ವಂತ ಹೋಟೆಲ್‌ಗ‌ಳನ್ನು ತೆರೆದು ಜೀವನ ರೂಪಿಸಿಕೊಂಡಿದ್ದಾರೆ. ಇವರಲ್ಲಿ ರಂಗಸ್ವಾಮಿ ಯಲಹಂಕ ನ್ಯೂಟೌನ್‌ನಲ್ಲಿ, ಶ್ರೀನಿವಾಸ್‌ ಕುದೂರು ಬಸ್‌ ನಿಲ್ದಾಣದಲ್ಲೇ ‘ಲಕ್ಷ್ಮೀನರಸಿಂಹ ಹೋಟೆಲ್‌ ‘ ಇಟ್ಟುಕೊಂಡಿದ್ದಾರೆ.

ಆರ್‌.ಮೋಹನ್‌ ಸದ್ಯ ಐನೋರ್‌ ಹೋಟೆಲ್‌ನ ಮಾಲಿಕರಾಗಿದ್ದಾರೆ. ಕೊನೆಯವರೆಗೂ ಇವರ ಜೊತೆಯಲ್ಲೇ ಇದ್ದರು ರಾಮಚಂದ್ರಯ್ಯ. ಮೋಹನ್‌ಗೆ ಪತ್ನಿ ಕಲಾ ಸಾಥ್‌ ನೀಡುತ್ತಿದ್ದಾರೆ. ಮೋಹನ್‌ ಸಹ ಬೆಳಗ್ಗಿನ ಹೊತ್ತು ಮಾತ್ರ ಹೋಟೆಲ್‌ ನಡೆಸುತ್ತಾರೆ. ಮಧ್ಯಾಹ್ನದ ನಂತರ ಅಡುಗೆ ಕೆಲಸಕ್ಕೆ ಹೋಗುತ್ತಾರೆ.

Advertisement

ಹೋಟೆಲ್‌ಗೆ ಬೋರ್ಡ್‌ ಇಲ್ಲ
ಕುದೂರು ಬಸ್‌ ನಿಲ್ದಾಣದಲ್ಲಿ ಇಳಿದರೆ ಸ್ವಲ್ಪ ದೂರದಲ್ಲೇ ತುಮಕೂರು ಸರ್ಕಲ್‌ ಸಿಗುತ್ತದೆ. ಅಲ್ಲಿ ಬಂದು ಶಿವಗಂಗೆ ರಸ್ತೆಗೆ ತಿರುಗಿ­ಕೊಂಡು ಐನೋರ್‌ ಹೋಟೆಲ್‌ ಎಲ್ಲಿ ಅಂತ ಕೇಳಿದ್ರೆ ತೋರಿಸುತ್ತಾರೆ. ಮೊದಲಿಗೆ ಅನ್ನಪೂರ್ಣೇಶ್ವರಿ ಹೋಟೆಲ್‌ ಎಂಬ ನಾಮಫ‌ಲಕ ಇತ್ತು. ಅದು ಕಿತ್ತು ಹೋದ ನಂತರ ಮತ್ತೆ ಬೋರ್ಡ್‌ ಹಾಕಿಲ್ಲ. ಆದರೂ ಸ್ಥಳೀಯವಾಗಿ ಐನೋರ್‌ ಹೋಟೆಲ್‌ ಎಲ್ಲಿ ಅಂತ ಕೇಳಿದ್ರೆ ತೋರಿಸುತ್ತಾರೆ. ನನಗೆ ತಂದೆಯೇ ಸ್ಫೂರ್ತಿ. ಅವರು ನಡೆಸಿಕೊಂಡು ಹೋಗುತ್ತಿದ್ದ ಹೋಟೆಲ್‌ ಅನ್ನೇ ಕೈಲಾದ ಮಟ್ಟಿಗೆ ನಡೆಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ಹೋಟೆಲ್‌ ಮಾಲಿಕ ಆರ್‌.ಮೋಹನ್‌.

ರೈಸ್‌ಬಾತ್‌ ಪ್ರಾರಂಭಿಸಿದ ಮೊದಲ ಹೋಟೆಲ್‌

ಕುದೂರು ಹಿಂದೆ ಸಾಮಾನ್ಯ ಗ್ರಾಮದಂತೆ ಇತ್ತು. ಮೊದಲು ಇಲ್ಲಿ ತಟ್ಟೆ ಇಡ್ಲಿ, ಕುಕ್ಕರ್‌ ಇಡ್ಲಿ, ಚಿತ್ರಾನ್ನ, ಮುದ್ದೆ, ಚಪಾತಿ ಊಟ ಮಾತ್ರ ಮಾರಾಟ ಮಾಡಲಾಗುತ್ತಿತ್ತಂತೆ. ಆಗ ರಾಮಚಂದ್ರಯ್ಯ ಹೋಟೆಲ್‌ ಪ್ರಾರಂಭಿಸಿ, ಇಡ್ಲಿ, ಚಿತ್ರಾನ್ನದ ಜೊತೆ ರೈಸ್‌ಬಾತ್‌ ಕೊಡಲಿಕ್ಕೆ ಶುರು ಮಾಡಿದರಂತೆ.
ಪ್ರಮುಖ ತಿಂಡಿ: ಚಿತ್ರಾನ್ನ, ಉಪ್ಪಿಟ್ಟು, ರೈಸ್‌ಬಾತ್‌, ಕುಕ್ಕರ್‌ ಇಡ್ಲಿ ಹೀಗೆ ನಾಲ್ಕೈದು ತಿಂಡಿ ಜೊತೆ ಕಾಯಿ ಅಥವಾ ಕಡ್ಲೆ ಚಟ್ನಿ ಕೊಡ್ತಾರೆ. ದರ 30 ರೂ. ಮಾತ್ರ.

ಸಮಯ: ಬೆಳಗ್ಗೆ 8.30 ರಿಂದ 11 ಗಂಟೆವರೆಗೆ ಮಾತ್ರ. ವಾರದ ಎಲ್ಲಾ ದಿನವೂ ತೆರೆದಿರುತ್ತೆ.

ವಿಳಾಸ: ತುಮಕೂರು ಸರ್ಕಲ್‌, ಶಿವಗಂಗೆ ರಸ್ತೆ, ಕುದೂರು ಗ್ರಾಮ.

— ಭೋಗೇಶ ಆರ್‌.ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next