Advertisement
ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ. ಜಿಲ್ಲೆಯ ಅತ್ಯಂತ ಸಂಪದ್ಭರಿತ ತಾಲೂಕು ಜೋಯಿಡಾ. ರಾಜ್ಯಕ್ಕೆ ವಿದ್ಯುತ್ ನೀಡಿದ ಈ ತಾಲೂಕಿನ ಅತ್ಯಂತ ಕುಗ್ರಾಮವೇ ಡಿಗ್ಗಿ. ಬ್ರಿಟಿಷರ ಕಾಲದಲ್ಲೇ ಮೈನಿಂಗ್ ವಲಯವಾಗಿದ್ದ ಡಿಗ್ಗಿ ಮ್ಯಾಂಗನೀಸ್ ಗಣಿಗಾರಿಕೆಗೆ ಹೆಸರುವಾಸಿಯಾಗಿತ್ತು. ಈಗಲೂ ಗಣಿಗಾರಿಕೆಯ ಅವಶೇಷಗಳು ಡಿಗ್ಗಿ ಗ್ರಾಮದ ಸುತ್ತಮುತ್ತ ಉಳಿದಿವೆ. ಅದಿರು ಮತ್ತು ಅರಣ್ಯ ಸಂಪತ್ತಿನ ಡಿಗ್ಗಿ ಗ್ರಾಮ ರಸ್ತೆ, ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲದ ಅತ್ಯಂತ ಬಡ ಗ್ರಾಮ. ಇಲ್ಲಿ ವೈದ್ಯರು, ಶಿಕ್ಷಕರು ಉಳಿಯಲಾರರು. ಬ್ರಿಟಿಷರ ಕಾಲದಲ್ಲಿದ್ದ ದಟ್ಟ ಅರಣ್ಯ, ಅದಿರು ಸಂಪತ್ತು, ಮೈದುಂಬಿ ಹರಿಯುವ ಕಾಳಿ ನದಿ, ಸ್ವಚ್ಛಂದವಾಗಿ ಓಡಾಡುವ ಕಾಡು ಪ್ರಾಣಿಗಳ ಕಾರಣವಾಗಿ ನಾಗರಿಕ ಜಗತ್ತಿನಿಂದ ಹೋದ ಸರ್ಕಾರಿ ನೌಕರರು ಡಿಗ್ಗಿಯಲ್ಲಂತೂ ಉಳಿಯಲಾರರು.
ಆರೋಗ್ಯ ಇಲಾಖೆ ಅಳಲು: ವೈದ್ಯರು ನೌಕರಿಯನ್ನಾದರೂ ಬಿಟ್ಟಾರು, ಸೌಕರ್ಯಗಳಿಲ್ಲದ ಡಿಗ್ಗಿಗೆ ಹೋಗಲು ಹಿಂಜರಿಯುತ್ತಾರೆ. ಜೋಯಿಡಾದಂಥ ತಾಲೂಕು ಕೇಂದ್ರಗಳಲ್ಲಿ ಸಹ ವೈದ್ಯರು ಉಳಿಯದೇ, ದಾಂಡೇಲಿಯಿಂದ ಟ್ರಾವೆಲಿಂಗ್ ಮಾಡುತ್ತಿದ್ದಾರೆ. ವೈದ್ಯರನ್ನು ಹೆಚ್ಚು ಒತ್ತಾಯ ಮಾಡುವಂತಿಲ್ಲ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯ ಅಂಬೋಣ. ಹಾಗಾಗಿ ನಾವು ಎನ್‌ಜಿಒಗಳ ಸಂಚಾರಿ ಆಸ್ಪತ್ರೆಯನ್ನು ಜೋಯಿಡಾ ತಾಲೂಕಿನ ಕುಗ್ರಾಮಗಳಿಗೆ ಕಳಿಸುತ್ತೇವೆ ಎನ್ನುತ್ತಿದ್ದಾರೆ.
ಅಂತೂ ಬಂತು ಆಸ್ಪತ್ರೆ: ಆಸ್ಪತ್ರೆ ಬೇಕು ಎಂಬ ಹೋರಾಟವನ್ನು ಜನರು ಪ್ರಾರಂಭಿಸಿದರು. ಸುದೀರ್ಘ ಹೋರಾಟದ ನಂತರ 2005ರಲ್ಲಿ 34 ಲಕ್ಷ ವೆಚ್ಚ ಮಾಡಿ ಸರ್ಕಾರ ಕಟ್ಟಿದ ಆಸ್ಪತ್ರೆ ನಡೆದದ್ದು ಮಾತ್ರ 2 ತಿಂಗಳು. ವೈದ್ಯರು ಬಾರದೇ ಆಸ್ಪತ್ರೆ ಪಾಳು ಬಿತ್ತು. ನಂತರ ಜನರ ಒತ್ತಾಯದ ಮೇರೆಗೆ ಆಸ್ಪತ್ರೆಯನ್ನು 5 ಲಕ್ಷದಲ್ಲಿ ನವೀಕರಿಸಲಾಯಿತು. ನವೀಕರಿಸಿದ ನಂತರ ಒಬ್ಬ ವೈದ್ಯರು ಎರಡು ತಿಂಗಳು ಆಸ್ಪತ್ರೆಗೆ ಬಂದರು. ಆದರೆ ಅರಣ್ಯದ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ ಅವರು ಸಹ ಕೆಲಸ ಬಿಟ್ಟು ನಡೆದರು. ಅಲ್ಲಿಂದ ಆಸ್ಪತ್ರೆ ಸ್ಥಿತಿ ಅಧೋಗತಿಯಾಯಿತು. ಸಾರ್ವಜನಿಕರ ತೆರಿಗೆ ಹಣವೂ ನೀರಲ್ಲಿ ತೊಳೆದಂತಾಯಿತು.
ಹುಲಿ ಸಂರಕ್ಷಿತ ಪ್ರದೇಶ: ಜೋಯಿಡಾ, ಅಣಶಿ, ಕುಳಗಿ ಸೇರಿದಂತೆ ಡಿಗ್ಗಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬರುವ ಕಾರಣ ಅರಣ್ಯ ಇಲಾಖೆ ಇಲ್ಲಿ ರಸ್ತೆ, ಸೇತುವೆ ಮಾಡಲು ಸಹ ಅಡ್ಡಿ ಪಡಿಸುತ್ತಿದೆ. ವಿದ್ಯುತ್ ಮಾರ್ಗ ಎಳೆಯಲು ಸಹ ಅಡ್ಡಿ ಮಾಡುತ್ತಿದೆ. ಹಾಗಾಗಿ ಇಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಲು ತೊಂದರೆಯಾಗುತ್ತಿದೆ. ಹಾಗಾಗಿ ಡಿಗ್ಗಿ ಎಂಬ ಗ್ರಾಮ, ಬಜಾರ್‌ಕೊಣಂಗ ಪಂಚಾಯತ ನಾಗರಿಕ ಪ್ರಪಂಚದಿಂದ ಹೊರಗೆ ಉಳಿದಿದೆ. ಈಗಲೂ ಇಲ್ಲಿನ ಸಾರ್ವಜನಿಕರು ಆರೋಗ್ಯ, ಶಿಕ್ಷಣ, ರಸ್ತೆ, ವಿದ್ಯುತ್ ಸೌಕರ್ಯಗಳನ್ನು ನೀಡಿ ಎಂದು ಆಗ್ರಹಿಸುತ್ತಲೇ ಇದ್ದಾರೆ.
ಮಳೆಗಾಲದಲ್ಲಿ ಡಿಗ್ಗಿ ಹಾಗೂ ಅದರ ಸುತ್ತಲ ಸಣ್ಣ ಸಣ್ಣ ಗ್ರಾಮಗಳ ಜನರ ಕಷ್ಟ ಹೇಳತೀರದ್ದು. ನಮ್ಮ ಬವಣೆ ಸ್ವಾತಂತ್ರ್ಯ ಬಂದು ಏಳು ದಶಕಗಳು ದಾಟಿದರೂ ಮುಗಿದಿಲ್ಲ. ಇನ್ನಾದರೂ ಸರ್ಕಾರ ಡಿಗ್ಗಿ ಗ್ರಾಮದತ್ತ ಕಣ್ತೆರೆದು ನೋಡಬೇಕು.•ಅಜಿತ್ ಮಿರಾಶಿ, ಉಪಾಧ್ಯಕ್ಷ, ಬಜಾರ ಕೊಣಂಗ್ ಗ್ರಾಪಂ
Related Articles
Advertisement
•ನಾಗರಾಜ ಹರಪನಹಳ್ಳಿ