Advertisement
ಅಡುಗೆ ಮನೆಯಲ್ಲಿ ಹಬ್ಬದ ಸಡಗರ, ಸಂಭ್ರಮ! ರವೆ ಹದವಾಗಿ ಹುರಿದು ತುಪ್ಪದೊಂದಿಗೆ ದ್ರಾಕ್ಷಿ, ಗೋಡಂಬಿ ಚೆನ್ನಾಗಿ ಸುರಿದು ಕೇಸರಿಬಾತ್ ಮಾಡಿ ಮುಚ್ಚಿಟ್ಟು, ಕ್ಯಾಪ್ಸಿಕಂ ಶ್ಯಾವಿಗೆ ಬಾತ್ ಮಾಡತೊಡಗಿದರು ಅಮ್ಮ. ಅಕ್ಕನನ್ನು ನೋಡಲು ಗಂಡಿನ ಕಡೆಯವರು ಬರುವ ಸುದ್ದಿ ಕೇಳಿದಾಗಿನಿಂದ, ಮನೆಯ ವಾತಾವರಣವೇ ಬದಲಾಗಿ ಹೋಗಿತ್ತು. ಕಿತ್ತು ಹೋದ ಗೋಡೆಗಳೂ, ಕ್ಯಾಲೆಂಡರ್‌ಗಳ ಆಶ್ರಯದಲ್ಲಿ ನಗು ಬೀರುತ್ತಾ ಅಭ್ಯಾಗತರ ಸ್ವಾಗತಕ್ಕೆ ಮನೆಯ ಮುಂದಿನ ರಂಗೋಲಿ, ಬಾಗಿಲ ತೋರಣ, ಹೊಸ ಉಡುಪು ಸೋಫಾಗಳ ಸಮೇತ ಕಾಯುತ್ತಾ ಇದ್ದವು..
ಕಾಫಿ ಡಿಕಾಕ್ಷನ್ ಹಾಕಿ ಹೊರಬಂದ ಅಮ್ಮ, ಅಪ್ಪನ ಜೊತೆ ಸೇರಿ- “ಬನ್ನಿ ಬನ್ನಿ’ ಎನ್ನುತ್ತಾ ಗೇಟಿನ ಬಳಿ ಧಾವಿಸಿದರು. ಮದುವೆ ಗಂಡು, ಅವನ ಅಪ್ಪ-ಅಮ್ಮ, ಅವರ ಮನೆ ಪುರೋಹಿತರು, ಜೊತೆಗೆ ಹುಡುಗನ ಇಬ್ಬರು ಮಾವಂದಿರ ಗುಂಪು ಒಳಬಂದು ಸೋಫಾದ ಮೋಲೆ ವಿರಾಜಮಾನವಾಯಿತು. “ಬೇಗ ಬೇಗ ಹುಡುಗೀನ ಕರೆಸಿ, ಬೇರೆ ಇನ್ನೊಂದೆರಡು ಕಡೆ ಹೋಗಬೇಕು’- ಎಂದು ಅವಸರಿಸಿದ ಪುರೋಹಿತರ ಮಾತಿಗೆ ತಲೆಯಾಡಿಸಿದ ಅಪ್ಪ, ಅಮ್ಮನಿಗೆ ಸನ್ನೆ ಮಾಡಿದರು. ರೂಮಿನಿಂದ ಅಕ್ಕ ಬಲು ಮೆಲ್ಲಗೆ ಹೆಜ್ಜೆ ಇಡುತ್ತಾ ಹೊರಬಂದು, ಎದುರಿಗೆ ಹಾಸಿದ್ದ ಚಾಪೆ ಮೇಲೆ ಕುಳಿತಳು. ನಾಚಿಕೆಯಿಂದ ತಲೆ ಮೇಲೆತ್ತಿ ನೋಡಲೂ ಕಷ್ಟವಾಗಿ ಹಣೆ ಮೇಲೆ ಮೂಡಿದ್ದ ಬೆವರನ್ನು ಕರ್ಚಿಫ್ ತುದಿಯಲ್ಲಿ ಒರೆಸಿಕೊಳ್ಳುತ್ತಾ ಇದ್ದಳು. ಹುಡುಗನ ಅಮ್ಮ ಏನೋ ಮಾತಾಡಿಸಿದರೆಂಬ ನೆನಪು.
ಅವಳು ಉತ್ತರ ಕೊಡುವ ಮುಂಚೆಯೇ ಶ್ಯಾವಿಗೆ ಬಾತು, ಕೇಸರಿಬಾತಿನ ತಟ್ಟೆಗಳು ಟೀಪಾಯಿಯ ಮೇಲೆ ಬಂದು ಕುಳಿತು ಸಂಭಾಷಣೆಗೆ ತಡೆಯಾದವು. ತಿಂಡಿಯ ಘಮಲು ಮನೆಯ ತುಂಬೆಲ್ಲಾ ಹರಡಿತು. “ಪಾಪ, ಹುಡುಗಿಗೆ ಸಂಕೋಚವೇನೋ, ಇರಲಿ ಬಿಡೆ’ ಎಂದರು ಹುಡುಗನ ಅಪ್ಪ, ಕೇಸರಿಬಾತಿನ ಗೋಡಂಬಿ ಒಳನೂಕುತ್ತಾ. ಅವರ ಮಾತನ್ನು ಅನುಮೋದಿಸಿ ಹುಡುಗನ ತಾಯಿ “ಹೂಂ, ಆಗಲಿಂದ ನೋಡಿದ್ನಲ್ಲಾ, ಏನು ನಯ, ಏನು ವಿನಯ! ತಲೆ ಎತ್ತಿ ನೋಡಲೇ ಇಲ್ಲ! ಇದಲ್ಲವೇ ಸಂಸ್ಕಾರ…’ ಮಾತು ಮುಗಿಸೋ ಮುನ್ನವೇ ಗೇಟಿನ ಹತ್ತಿರ ಸುಬ್ಬಮ್ಮತ್ತೆ, “ನಲ್ಲೀಲಿ ನೀರು ಬಂತೂ, ನಿಮ್ಮದೇ ಫಸ್ಟೂ, ಕೊಡ ಎತ್ಕೊಂಡು ಬಾರೆ ನಳಿನಿ…’ ಎಂದು ಜೋರಾಗಿ ಕಿರುಚಿದರು. ಎರಡೇ ನಿಮಿಷದಲ್ಲಿ ಸೊಂಟದ ಮೇಲೊಂದು, ತಲೆಯ ಮೇಲೊಂದು ಹಿತ್ತಾಳೆ ಬಿಂದಿಗೆಗಳನ್ನು ಇಟ್ಟುಕೊಂಡು ಅಕ್ಕ, ನೀರು ತರಲು ಆಚೆ ಓಡಿಯೇಬಿಟ್ಟಳು.
ಬೀದಿ ಕೊನೆಯಲ್ಲಿದ್ದ ನಲ್ಲಿಯಿಂದ ಬೇಗ ಬೇಗ 25-26 ಕೊಡ ಅಡುಗೆಮನೆ, ಸ್ನಾನದ ಮನೆ, ಆಚೆಯಿದ್ದ ತೊಟ್ಟಿ ತುಂಬಿಸಿಯೇಬಿಟ್ಟಳು. ಅಮ್ಮ ಗಾಬರಿಯಿಂದ, “ಗಂಡಿನವರು ಕುಳಿತಿದ್ದಾರೆ ಬಾರೇ…’ಎಂದು ಎಷ್ಟು ಹೇಳಿದರೂ ಕೇಳದೆ, “ಗಂಡಿಗೇನಮ್ಮಾ, ಈ ಗಂಡು ಹೋದರೆ ಇನ್ನೊಂದು ಸಿಗಬಹುದು, ನಾನು ಬೇಗ ಬೇಗ ನೀರು ಹಿಡಿಯದಿದ್ದರೆ ಮುಂದಿನ ವಾರದವರೆಗೆ ಹನಿ ನೀರು ಸಿಗೋದಿಲ್ಲ..’
ಅಂದುಬಿಡೋದೇ!
Related Articles
Advertisement
(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ v.avalu@gmail.comಗೆ ಬರೆದು ಕಳಿಸಿ.)
-ಜಲಜಾ ರಾವ್