Advertisement

ಗೂಗಲ್‌ನಲ್ಲಿ ಕಂತ್ರಿಬಾಯ್ಸ್ ಶಂಖನಾದ

01:39 PM Feb 15, 2018 | Sharanya Alva |

ಈ ವಾರ ಆರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ “ಶಂಖನಾದ’, “ಗೂಗಲ್‌’ ಮತ್ತು “ಕಂತ್ರಿ ಬಾಯ್ಸ’ ತಂಡದವರು ಮಾಧ್ಯಮದವರೆದುರು ಬಂದು ತಮ್ತಮ್ಮ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ಯಾವ ತಂಡದ ಯಾರು, ಏನು ಮಾತನಾಡಿದ್ದಾರೆ ಎಂಬ ಕುತುಹೂಲದಿಂದ ಓದುತ್ತಾ ಹೋಗಿ …

Advertisement

ಶಂಖನಾದ
“ಇಲ್ಲಿ ಕಥೆಯೇ ಹೀರೋ, ಚಿತ್ರಕಥೆಯೇ ನಾಯಕಿ… ಅಷ್ಟೇಅಲ್ಲ, ಒಂದೇ ಮನೆ, ಒಂದು ದಿನದ ಕಥೆ. ಹಾಗಂತ, ಹಾರರ್‌ ಸಿನಿಮಾವಂತೂ ಅಲ್ಲ. ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶವುಳ್ಳ ಹೊಸಬಗೆಯ ಕಥೆ ಇಲ್ಲುಂಟು …’ ನಾಯಕ ಕಮ್‌ ಸಹ ನಿರ್ಮಾಪಕ ಶಾಂತರೆಡ್ಡಿ ಪಾಟೀಲ್‌ ಅವರ ಆತ್ಮವಿಶ್ವಾಸದ ಮಾತುಗಳಿವು. ಇದು ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶ ಒಳಗೊಂಡ ಚಿತ್ರ. ಬಾಗಲಕೋಟೆ, ಗದಗ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಒಂದೇ ಮನೆಯಲ್ಲಿ ಒಂದು ದಿನದ ಕಥೆಯನ್ನು ವಿಭಿನ್ನವಾಗಿ ಹೇಳುವ ಮತ್ತು ತೋರಿಸುವ ಪ್ರಯತ್ನ ಮಾಡಿದೆ ಹೊಸಬರ ತಂಡ. ಉತ್ತರ ಕರ್ನಾಟಕದ ಮೂವರು ಮಂದಿ ಸೇರಿಕೊಂಡು, ರಾಜ್ಯದ ಪ್ರತಿಭಾವಂತರನ್ನು ಕಲೆಹಾಕಿ ಚಿತ್ರ ಮಾಡಿದ್ದಾರೆ. 

ಚಿತ್ರಕ್ಕೆ ವಿಶ್ವನಾಥ್‌ ಬಸಪ್ಪ ಕಾಳಗಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಒಂಭತ್ತು ಪ್ರಮುಖ ಪಾತ್ರಗಳಿದ್ದು, ಆ ಪಾತ್ರಗಳ ಸುತ್ತವೇ ಕಥೆ ಸಾಗಲಿದೆ. ಬದುಕು, ಸಾವಿನ ನಡುವಿನ ಆಟ ಇಲ್ಲಿ ಹೈಲೈಟ್‌. ಒಳ್ಳೆಯವರಿಗೆ ಒಳ್ಳೆಯದಾಗಬೇಕಾದರೆ ಏನಾಗಬೇಕು, ಶಂಖ ಊದಿದಾಗ ಏನೆಲ್ಲಾ ಆಗುತ್ತೆ ಅನ್ನೋದು ಇಲ್ಲಿರುವ ಗುಟ್ಟು. ಚಿತ್ರದಲ್ಲಿ ಒಂದೇ ಹಾಡಿದೆ. ವಿಜಯ ರೆಡ್ಡಿ ಚೌಧರಿ ಅವರು ಈ ಚಿತ್ರ ನಿರ್ಮಿಸಿದ್ದಾರೆ. ಹೀರೋ ಅವರ ಅಳಿಯ. ಹಾಗಾಗಿ ಅವರು ಈ ಸಿನಿಮಾ ಮಾಡೋಕೆ ಕಾರಣವಾಗಿದೆ. ಅಳಿಯನಿಗೆ ಸುಮಾರು ಒಂದು ಕೋಟಿ ರುಪಾಯಿಗೂ ಹೆಚ್ಚು ಸುರಿದಿದ್ದಾರಂತೆ ವಿಜಯ ರೆಡ್ಡಿ. ಚಿತ್ರಕ್ಕೆ ನಯನಾ ನಾಯಕಿ.

ಇಲ್ಲಿ ರಂಗಭೂಮಿ ಕಲಾವಿದ ನಮ್‌ ಶ್ರೀನಿವಾಸ್‌ ಖಳನಟರಾಗಿ ನಟಿಸಿದ್ದಾರೆ. ಶ್ರೀ ಎಂಬ ಇನ್ನೊಬ್ಬ ಹುಡುಗ ಎರಡನೇ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಸುಮಾರು 200 ವರ್ಷಗಳ ಹಳೆಯ ಮನೆಯಲ್ಲಿ ಚಿತ್ರೀಕರಣ ಮಾಡಿರುವುದು ಚಿತ್ರದ ಹೈಲೈಟ್‌. ವಿನು ಮನಸು ಸಂಗೀತ ನೀಡಿದ್ದಾರೆ. ನಕುಲ್‌ ಕ್ಯಾಮೆರಾ ಹಿಡಿದಿದ್ದಾರೆ.

ಕಂತ್ರಿ ಬಾಯ್ಸ್
“ಕಂತ್ರಿ ಬಾಯ್ಸ್ ಎಂಬ ಚಿತ್ರವೂ ಈ ವಾರ ತೆರೆಕಾಣುತ್ತಿದೆ. ಈ ಚಿತ್ರವನ್ನು ಎಸ್‌. ರಾಜು ಚಟ್ನಳ್ಳಿ ಎನ್ನುವವರು ನಿರ್ದೇಶಿಸಿದ್ದಾರೆ. ಇವರಿಗಿದು ಮೊದಲ ಚಿತ್ರ. ಈ ಹಿಂದೆ ಅನೇಕ ಕಾಮಿಡಿ ಧಾರಾವಾಹಿ ಹಾಗೂ ಶೋಗಳಿಗೆ ಬರೆಯುತ್ತಿದ್ದ ಇವರು ಈಗ “ಕಂತ್ರಿ ಬಾಯ್ಸ’ ಮೇಲೆ ನಂಬಿಕೆ ಇಟ್ಟಿದ್ದಾರೆ. ಹೇಮಂತ್‌ ಗೌಡ ಈ ಸಿನಿಮಾದ ನಿರ್ಮಾಪಕರು. “ಸಮಾಜದಲ್ಲಿ ವೇಶ್ಯೆಯೊಬ್ಬಳು ಅನುಭವಿಸುವ ಕಷ್ಟಗಳ ಬಗ್ಗೆ ಇಲ್ಲಿ ಹೇಳಲಾಗಿದೆ. ವೇಶ್ಯೆಯ ಜೀವನಕ್ಕೆ ಕೇವಲ ಆಕೆ ಮಾತ್ರ ಕಾರಣವಾಗಿರೋದಿಲ್ಲ. ಪುರುಷ ಕೂಡಾ ಕಾರಣನಾಗುತ್ತಾನೆ ಎಂಬ ಅಂಶವನ್ನು ಇಲ್ಲಿ ಹೇಳಿದ್ದೇವೆ. ಜೊತೆಗೆ ಕಂತ್ರಿಬಾಯ್ಸ ಮುಂದೆ ಹೇಗೆ ಕಂಟ್ರಿಬಾಯ್ಸ ಆಗುತ್ತಾರೆಂಬ ಅಂಶವೂ ಇಲ್ಲಿದೆ’ ಎಂದು ತಮ್ಮ ಸಿನಿಮಾದ ಬಗ್ಗೆ ವಿವರ ನೀಡುತ್ತಾರೆ ರಾಜು. 

Advertisement

ಚಿತ್ರದಲ್ಲಿ ಅರವಿಂದ್‌, ಸಂಧ್ಯಾ, ಗಡ್ಡಪ್ಪ ಸೇರಿದಂತೆ ಅನೇಕರು ನಟಿಸಿದ್ದಾರೆ. ಈಗಾಗಲೇ ಆಟೋ, ಟ್ಯಾಕ್ಸಿಗಳಲ್ಲಿ “ಕಂತ್ರಿ ಬಾಯ್ಸ’ ಪೋಸ್ಟರ್‌ ಇರುವುದರಿಂದ ಸಿನಿಮಾ ಹಿಟ್‌ ಆಗುತ್ತದೆ ಎಂಬ ವಿಶ್ವಾಸ ರಾಜು ಅವರಿಗಿದೆ.

ಗೂಗಲ್‌
ಒಂದು ದೊಡ್ಡ ಗ್ಯಾಪ್‌ನ ನಂತರ ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್‌ ನಿರ್ದೇಶನ ಮಾಡಿರುವ ಚಿತ್ರ “ಗೂಗಲ್‌’. ಚಿತ್ರ ಈ ವಾರ ತೆರೆಕಾಣುತ್ತಿದೆ. ಈ ಚಿತ್ರದ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಶುಭಾ ಪೂಂಜಾ ಈ ಚಿತ್ರದ ನಾಯಕಿ. ಇದು ನೈಜ ಘಟನೆಯನ್ನಿಟ್ಟುಕೊಂಡು ತಯಾರಾದ ಸಿನಿಮಾವಂತೆ. ಸುಮಾರು 20 ವರ್ಷಗಳ ಹಿಂದೆ ನಡೆದ ಘಟನೆಯನ್ನು ನಾಗೇಂದ್ರ ಪ್ರಸಾದ್‌ ಈಗ ಸಿನಿಮಾ ಮಾಡಿದ್ದಾರೆ.

“20 ವರ್ಷಗಳ ಹಿಂದೆ ನಡೆದ ಘಟನೆಯನ್ನು ಆಧರಿಸಿ ಸಿನಿಮಾ ಮಾಡಿದ್ದೇನೆ. ಆ ಘಟನೆ ನನಗೂ ಸಂಬಂಧಿಸಿತ್ತು. ನನಗೆ ಪದೇ ಪದೇ ಈ ಘಟನೆಯನ್ನು ಯಾಕೆ ಸಿನಿಮಾ ಮಾಡಬಾರದು ಎಂದು ಕಾಡುತಿತ್ತು. ಹಾಗಾಗಿ ಸಿನಿಮಾ ಮಾಡಿದೆ. ಈ ತರಹದ ಕಥೆಯನ್ನು ಯಾರೂ ಇಲ್ಲಿವರೆಗೆ ಸಿನಿಮಾಕ್ಕೆ ಪ್ರಯತ್ನಿಸಿಲ್ಲ. ತುಂಬಾ ಹೊಸದು ಎನಿಸಿತು. ಪ್ರತಿಯೊಬ್ಬರು ಚಿಂತಿಸಬೇಕಾದ ವಿಷಯ’ ಎಂದು
ಹೇಳಿಕೊಂಡರು ನಾಗೇಂದ್ರ ಪ್ರಸಾದ್‌. 

ಇನ್ನು ಚಿತ್ರದಲ್ಲಿ ಅವರೇ ನಾಯಕರಾಗಿ ನಟಿಸಲೂ ಒಂದು ಕಾರಣವಿದೆಯಂತೆ. ಅದೇನೆಂದರೆ ಚಿತ್ರಕ್ಕೆ ಯಾವುದೇ ಇಮೇಜ್‌ ಇಲ್ಲದ ನಾಯಕ ಬೇಕಿತ್ತಂತೆ. ಜೊತೆಗೆ ಚಿತ್ರದಲ್ಲಿ ನಟಿಸಿದ ಪ್ರತಿ ಕಲಾವಿದರನ್ನು ಹೊಸದಾಗಿ ತೋರಿಸಿದ್ದಾರಂತೆ. ಆ ಮಟ್ಟಿಗೆ ಇದೊಂದು ಕನ್ನಡ ಚಿತ್ರರಂಗಕ್ಕೆ ಹೊಸ ಬಗೆಯ ಸಿನಿಮಾ ಎಂಬುದು ನಾಗೇಂದ್ರ ಪ್ರಸಾದ್‌ ಮಾತು.

ಗೂಗಲ್‌‘ ಚಿತ್ರದ ನಿರ್ಮಾಣದಲ್ಲೂ ನಾಗೇಂದ್ರ ಪ್ರಸಾದ್‌ ತೊಡಗಿಸಿಕೊಂಡಿದ್ದು, ಇವರಿಗೆ ಶ್ರೀಧರ್‌ ಹಾಗೂ ಅಶ್ವತ್ಥ್ ನಾರಾಯಣ್‌ ಸಾತ್‌ ನೀಡಿದ್ದಾರೆ. ಶುಭಾ ಪೂಂಜಾ ಇಲ್ಲಿ ಗೃಹಿಣಿಯಾಗಿ ನಟಿಸಿದ್ದಾರೆ. ಈ ಪಾತ್ರ ಅವರಿಗೆ ತುಂಬಾ ಹೊಸದಂತೆ. ಉಳಿದಂತೆ ಅಮೃತಾ ರಾವ್‌, ದೀಪಕ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next