ಮೆಲ್ಬರ್ನ್: ಭಾರತ ವಿರುದ್ಧದ 2011ರ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದ ಶ್ರೀಲಂಕಾದ ಆಟಗಾರ ಸೂರಜ್ ರಣದೀವ್ ಈಗ ಏನು ಮಾಡುತ್ತಿದ್ದಾರೆ ಎಂದು ಕೇಳಿದರೆ ಅಚ್ಚರಿಯ ಉತ್ತರ ಲಭಿಸುತ್ತದೆ. ಅವರೀಗ ಜೀವನೋಪಾಯಕ್ಕಾಗಿ ಆಸ್ಟ್ರೇಲಿಯದಲ್ಲಿ ಬಸ್ ಚಾಲಕನಾಗಿ ದುಡಿಯುತ್ತಿದ್ದಾರೆ!
ಆಫ್ ಸ್ಪಿನ್ನರ್ ಸೂರಜ್ ರಣದೀವ್ ಪ್ರತಿಭಾವಂತ ಕ್ರಿಕೆಟಿಗನಾಗಿದ್ದರು. ಆದರೆ ಆಗ ಲಂಕಾ ತಂಡದಲ್ಲಿ ಮುತ್ತಯ್ಯ ಮುರಳೀಧರನ್ ಸೇರಿದಂತೆ ಅನೇಕ ಘಟಾನುಘಟಿ ಸ್ಪಿನ್ನರಗಳಿದುದ್ದರಿಂದ ರಣದೀವ್‌ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಅತ್ತ ದೇಶಿ ಕ್ರಿಕೆಟ್‌ನಲ್ಲೂ ಮಿಂಚಲು ಸಾಧ್ಯವಾಗಲಿಲ್ಲ. ಕೊನೆಗೆ ವೀಕ್ಷಕ ವಿವರಣೆ ಸೇರಿದಂತೆ ಇತರ ಕ್ರಿಕೆಟ್ ಕಾರ್ಯದಲ್ಲಿ ತೊಡಗಿಸಿಕೊಂಡರು.
ಆಸ್ಟ್ರೇಲಿಯಕ್ಕೆ ಪಯಣ :
2020-21ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯ ನೆಟ್ ಬೌಲರ್ ಆಗಿ ರಣದೀವ್‌ಗೆ ಅವಕಾಶ ನೀಡಿತು. ಆದರೆ ಕೊರೊನಾದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಥಗಿತಗೊಂಡಿತು. ಹೀಗಾಗಿ ಬದುಕು ಕಟ್ಟಿಕೊಳ್ಳಲು ರಣದೀವ್ ಮೆಲ್ಬರ್ನ್ನಲ್ಲಿ ಫ್ರೆಂಚ್ ಮೂಲದ ಕಂಪೆನಿಯಲ್ಲಿ ಬಸ್ ಚಾಲಕರಾಗಿ ಕೆಲಸ ಆರಂಭಿಸಿದರು. ಸೂರಜ್ ಜತೆಗೆ ಲಂಕಾದ ಮತ್ತೋರ್ವ ಮಾಜಿ ಕ್ರಿಕೆಟಿಗ ಚಿಂತಕ ನಮಸ್ತೆ, ಜಿಂಬಾಬ್ವೆ ಕ್ರಿಕೆಟಿಗ ವಾಡಿಂಗ್ಟನ್ ಎಮ್‌ವಾಯೆಂಗ ಕೂಡ ಮೆಲ್ಬರ್ನ್ನಲ್ಲಿ ಬಸ್ ಚಾಲಕರಾಗಿ ದುಡಿಯುತ್ತಿದ್ದಾರೆ.
ರಣದೀವ್ ಶ್ರೀಲಂಕಾ ಪರ 12 ಟೆಸ್ಟ್ (43 ವಿಕೆಟ್), 31 ಏಕದಿನ (36 ವಿಕೆಟ್) ಮತ್ತು 7 ಟಿ20 (7 ವಿಕೆಟ್) ಪಂದ್ಯಗಳನ್ನಾಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಪರ 8 ಪಂದ್ಯಗಳನ್ನಾಡಿ 6 ವಿಕೆಟ್ ಉರುಳಿಸಿದ್ದಾರೆ.